ನಿಮ್ಮ ನಡಿಗೆಯ ವೇಗವು ನಿಮ್ಮ ಆಯುಷ್ಯವನ್ನು ನಿರ್ಧರಿಸುತ್ತದೆ: ಅಧ್ಯಯನ ವರದಿ

Update: 2019-05-20 15:28 GMT

ನೀವು ಎಷ್ಟು ವರ್ಷ ಬದುಕಿರುತ್ತೀರಿ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ನೀವು ಹೆಚ್ಚೇನೂ ಮಾಡಬೇಕಿಲ್ಲ,ನಿಮ್ಮ ನಡಿಗೆಯ ವೇಗವನ್ನು ಗಮನಿಸಿದರೆ ಸಾಕು. ಹೌದು,ನಿಮ್ಮ ನಡಿಗೆಯ ವೇಗಕ್ಕೂ ನಿಮ್ಮ ಆಯುಷ್ಯಕ್ಕೂ ಸಂಬಂಧವಿದೆ ಎನ್ನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬೆಟ್ಟು ಮಾಡಿದೆ.

ನಡಿಗೆಯ ವೇಗವು ವ್ಯಕ್ತಿಯ ಆಯುಷ್ಯವನ್ನು ನಿರ್ಧರಿಸುತ್ತದೆ ಎನ್ನುವುದನ್ನು ಅಧ್ಯಯನದ ಫಲಿತಾಂಶಗಳು ತೋರಿಸಿವೆ ಎಂದಿರುವ ವರದಿಯು,ನಿಧಾನವಾಗಿ ನಡೆಯುವವರು ವೇಗವಾಗಿ ನಡೆಯುವವರಿಗಿಂತ ಕಡಿಮೆ ಜೀವಿತಾವಧಿಯನ್ನು ಹೊಂದಿರುತ್ತಾರೆ ಎಂದು ಹೇಳಿದೆ. ವೇಗವಾಗಿ ನಡೆಯುವವರು,ಅವರ ತೂಕವು ಏನೇ ಇದ್ದರೂ ದೀರ್ಘಾಯುಷ್ಯವನ್ನು ಹೊಂದಿರುತ್ತಾರೆ ಎಂದು ಹೇಳಿದೆ.

 ಕಡಿಮೆ ದೇಹತೂಕ ಹೊಂದಿದ್ದು,ನಿಧಾನವಾಗಿ ನಡೆಯುವವರು ಅತ್ಯಂತ ಕಡಿಮೆ,ಅಂದರೆ ಪುರುಷರು 64.8 ವರ್ಷ ಮತ್ತು ಮಹಿಳೆಯರು 72.4 ವರ್ಷಗಳ ಸರಾಸರಿ ಆಯುಷ್ಯವನು ಹೊಂದಿರುತ್ತಾರೆ ಎಂದೂ ವರದಿಯು ಉಲ್ಲೇಖಿಸಿದೆ.

 ವ್ಯಕ್ತಿಗಳ ಜೀವಿತಾವಧಿ ಕುರಿತಂತೆ ಶರೀರದ ತೂಕಕ್ಕೆ ಹೋಲಿಸಿದರೆ ಶಾರೀರಿಕ ಕ್ಷಮತೆಯ ತುಲನಾತ್ಮಕ ಮಹತ್ವವನ್ನು ಸ್ಪಷ್ಟಪಡಿಸುವಲ್ಲಿ ನಮ್ಮ ಅಧ್ಯಯನ ಫಲಿತಾಂಶಗಳು ನೆರವಾಗಲಿವೆ. ಅಂದರೆ ಬಹುಶಃ ದೈಹಿಕ ಕ್ಷಮತೆಯು ಬಾಡಿಮಾಸ್ ಇಂಡೆಕ್ಸ್(ಬಿಎಂಐ)ಗಿಂತ ಉತ್ತಮ ಆಯುಷ್ಯ ಸೂಚಕವಾಗಿದೆ ಮತ್ತು ಬಿರುಸಿನ ನಡಿಗೆಯಲ್ಲಿ ತೊಡಗಿಸಿಕೊಳ್ಳುವಂತೆ ಜನರಿಗೆ ಉತ್ತೇಜನವು ಅವರ ಬದುಕನ್ನು ಇನ್ನಷ್ಟು ವರ್ಷಗಳಷ್ಟು ಹೆಚ್ಚಿಸಬಹುದು ಎಂದು ಅಧ್ಯಯನ ವರದಿಯ ಲೇಖಕ ಹಾಗೂ ಬ್ರಿಟನ್‌ನ ಲೀಸೆಸ್ಟರ್ ವಿವಿಯ ಪ್ರೊಫೆಸರ್ ಟಾಮ್ ಯೇಟ್ಸ್ ಹೇಳಿದ್ದಾರೆ.

ಯೇಟ್ಸ್ ಮತ್ತು ಅವರ ತಂಡವು ಕಳೆದ ವರ್ಷ ನಡೆಸಿದ್ದ ಇನ್ನೊಂದು ಅಧ್ಯಯನವು ನಿಧಾನವಾಗಿ ನಡೆಯುವ ಮಧ್ಯವಯಸ್ಕರು ಇತರರಿಗೆ ಹೋಲಿಸಿದರೆ ಹೃದಯ ಸಂಬಂಧಿ ರೋಗಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ ಎನ್ನುವುದನ್ನು ಬಹಿರಂಗಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News