ವಾವೇ ಜೊತೆಗಿನ ಕೆಲವು ವ್ಯಾಪಾರ ನಂಟುಗಳನ್ನು ಕಳಚಿಕೊಂಡ ಗೂಗಲ್

Update: 2019-05-20 17:58 GMT

ವಾಶಿಂಗ್ಟನ್, ಮೇ 20: ಅಮೆರಿಕ ಸರಕಾರದ ಅವಕೃಪೆಗೆ ಗುರಿಯಾಗಿರುವ ಚೀನಾದ ತಂತ್ರಜ್ಞಾನ ಸಂಸ್ಥೆ ವಾವೇ ಜೊತೆಗಿನ ಕೆಲವು ವ್ಯಾಪಾರ ನಂಟುಗಳನ್ನು ಗೂಗಲ್ ಕಳಚಿಕೊಂಡಿದೆ. ಅಂದರೆ, ಇನ್ನು ಮುಂದೆ ಗೂಗಲ್‌ನಿಂದ ವಾವೇಗೆ ಯಾವುದೇ ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ತಾಂತ್ರಿಕ ಸೇವೆಗಳು ಸಿಗುವುದಿಲ್ಲ. ಆದರೆ, ಓಪನ್ ಸೋರ್ಸ್ ಲೈಸೆನ್ಸಿಂಗ್ ಮೂಲಕ ಸಾರ್ವಜನಿಕರಿಗೆ ಸಿಗುವ ತಂತ್ರಜ್ಞಾನ ಉತ್ಪನ್ನಗಳು ವಾವೇಗೂ ಲಭಿಸುತ್ತವೆ.

ಅಮೆರಿಕ ಈಗಾಗಲೇ ವಾವೇ ಮತ್ತು ಅದರ ಉಪ ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದ್ದು, ಜಗತ್ತಿನಾದ್ಯಂತದ ದೇಶಗಳು ಮತ್ತು ಕಂಪೆನಿಗಳು ಕೂಡ ಇದೇ ಮಾದರಿಯನ್ನು ಅನುಸರಿಸಬೇಕೆಂದು ಬಯಸಿದೆ.

ಆದಾಗ್ಯೂ, ಈಗಾಗಲೇ ವಾವೇ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವವರಿಗೆ ಗೂಗಲ್ ಆ್ಯಪ್‌ಗಳನ್ನು ಬಳಸುವುದನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಹಾಗೂ ಮುಂದೆ ಗೂಗಲ್‌ನಿಂದ ಬರುವ ಅಪ್‌ಡೇಟ್‌ಗಳನ್ನು ಡೌನ್‌ಲೋಡ್ ಮಾಡಲೂ ಸಾಧ್ಯವಾಗುತ್ತದೆ ಎಂದು ಗೂಗಲ್ ವಕ್ತಾರರೊಬ್ಬರು ತಿಳಿಸಿದರು.

‘‘ನಾವು ಅಮೆರಿಕ ಸರಕಾರದ ಆದೇಶಗಳನ್ನು ಪಾಲಿಸುತ್ತಿದ್ದೇವೆ ಹಾಗೂ ಅದರ ಪರಿಣಾಮಗಳ ಅಧ್ಯಯನ ಮಾಡುತ್ತಿದ್ದೇವೆ’’ ಎಂದು ಅವರು ಹೇಳಿದರು.

‘‘ಈಗಾಗಲೇ ನಮ್ಮ ಸೇವೆಗಳನ್ನು ಪಡೆಯುತ್ತಿರುವ ಬಳಕೆದಾರರಿಗೆ, ಗೂಗಲ್ ಪ್ಲೇ ಸೇವೆಗಳು ಮತ್ತು ಗೂಗಲ್ ಪ್ಲೇ ಪ್ರೊಟೆಕ್ಟ್‌ನ ಭದ್ರತಾ ರಕ್ಷಣೆಗಳು ಮುಂದುವರಿಯುತ್ತವೆ’’ ಎಂದರು.

ಭವಿಷ್ಯದ ಆ್ಯಂಡ್ರಾಯ್ಡ್  ಫೋನ್‌ಗಳ ಮೇಲೆ ಪರಿಣಾಮ

 ಗೂಗಲ್‌ನ ಈ ಕ್ರಮವು ಚೀನಾದ ಹೊರಗಿನ ವಾವೇಯ ಸ್ಮಾರ್ಟ್‌ಫೋನ್ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ. ಯಾಕೆಂದರೆ, ಗೂಗಲ್‌ನ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ಗೆ ಅಪ್‌ಡೇಟ್‌ಗಳು ದೊರೆಯುವುದು ತಕ್ಷಣದಿಂದಲೇ ನಿಲ್ಲುತ್ತದೆ. ಆ್ಯಂಡ್ರಾಯಿಡ್‌ನಲ್ಲಿ ನಡೆಯುವ ವಾವೇಯ ಭವಿಷ್ಯದ ಸ್ಮಾರ್ಟ್‌ಫೋನ್‌ಗಳಿಗೆ ಗೂಗಲ್ ಪ್ಲೇ ಸ್ಟೋರ್, ಜಿಮೇಲ್ ಮತ್ತು ಯೂಟ್ಯೂಬ್ ಮುಂತಾದ ಗೂಗಲ್‌ನ ಜನಪ್ರಿಯ ಸೇವೆಗಳು ಲಭಿಸುವುದಿಲ್ಲ.

ಟ್ರಂಪ್ ಆಡಳಿತವು ಗುರುವಾರ ವಾವೇ ಕಂಪೆನಿಯನ್ನು ವ್ಯಾಪಾರದ ಕಪ್ಪು ಪಟ್ಟಿಗೆ ಸೇರಿಸಿದೆ ಹಾಗೂ ಅದನ್ನು ತಕ್ಷಣದಿಂದ ಜಾರಿಗೊಳಿಸಿದೆ. ಹಾಗಾಗಿ, ಅಮೆರಿಕದ ಕಂಪೆನಿಗಳೊಂದಿಗೆ ವ್ಯಾಪಾರ ನಡೆಸುವುದು ವಾವೇ ಕಂಪೆನಿಗೆ ಅತ್ಯಂತ ಕಷ್ಟಕರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News