ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

Update: 2019-05-20 18:39 GMT

ನಮ್ಮ ಸುತ್ತಲಿನ ನಾಗರಿಕ ಸಮಾಜ ದಲ್ಲಿ ಸಂವೇದನೆ ಕ್ಷೀಣಿಸುತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ ಸಮಾಜವನ್ನು ನೆನೆಯುವಾಗ ನಾಗರಿಕ ಎಂಬ ಪದ ಬಳಕೆ ಸರಿಯೇ ಎಂದೂ ಭಾಸವಾಗುತ್ತದೆ. ಗೌರಿ ಸತ್ತಾಗ, ಅನಂತ ಮೂರ್ತಿ ಸತ್ತಾಗ ಸಿಹಿ ಹಂಚಿದವರನ್ನು ಕಂಡಾಗ ನಾಗರಿಕ ಪ್ರಜ್ಞೆ ಪದವನ್ನು ಬಿಡಿಸಿ ನೋಡಿದರೂ ಎರಡೂ ಪದಗಳೂ ಅವಶೇಷಗಳೇನೊ ಎನಿಸಿದ್ದೂ ಉಂಟು. ಕಥುವಾದಲ್ಲಿ ಎಂಟು ವರ್ಷದ ಹಸುಳೆ ಅತ್ಯಾಚಾರಕ್ಕೊಳಗಾದಾಗ ಮಾನವೀಯತೆಯ ಅರ್ಥವನ್ನು ಹಲವು ನಿಘಂಟುಗಳಲ್ಲಿ ಹುಡುಕಾಡುವಂತಾಯಿತು. ಈಗ ಮತ್ತೊಂದು ಕಾಶ್ಮೀರ. ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ. ಆ ಮಗುವನ್ನು ಏನೆಂದು ಕರೆಯೋಣ. ಮಹಿಳೆ, ಕನ್ಯೆ, ಯುವತಿ, ಹಸುಳೆ, ಅಪ್ರಾಪ್ತೆ ಓಹ್ ಎಲ್ಲಕ್ಕೂ ಮಿಂಚಿ ಅದೊಂದು ಜೀವ. ಬಲಿಯಾಗಲೆಂದೇ ಜನಿಸಿತೇ ಅಥವಾ ಜನಿಸಿದ ತಪ್ಪಿಗಾಗಿ ಬಲಿಯಾಯಿತೇ? ಇಂತಹ ಘಟನೆಗಳನ್ನು ಕಂಡಾಗ ದಾನಮ್ಮ, ನಿರ್ಭಯಾ, ಸೌಜನ್ಯಾರಂತಹ ಎಷ್ಟೋ ಜೀವಗಳು ನೆನಪಾಗುತ್ತವೆ. ಹಾಗೆಯೇ ನೆನಪಾಗುವ ಮತ್ತೊಂದು ಪದ ಸಂವೇದನೆ. ಕಳೆದ ಮೂರು ನಾಲ್ಕು ದಶಕಗಳ ಅಧಿಕಾರ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣ ಭಾರತದ ಒಂದು ಪೀಳಿಗೆಯ ಮನಸ್ಸುಗಳಲ್ಲಿ ಬಿತ್ತಿರುವ ವಿಷಬೀಜಗಳು ಸಾಮಾಜಿಕ ಸ್ವಾಸ್ಥ್ಯದ ಜೊತೆಗೆ ಸಂವೇದನೆಯನ್ನೂ ಹಾಳುಮಾಡಿರುವುದು ಕಣ್ಣೆದುರಿನ ಸತ್ಯ.
ಜಾತಿ, ಮತಧರ್ಮ, ಭಾಷೆ ಮತ್ತು ಪ್ರಾದೇಶಿಕ ಅಸ್ಮಿತೆಗಳು ಯಾವುದೇ ಸಮಾಜಕ್ಕೂ ಹೊರತಾದುದಲ್ಲ. ಆದರೆ ಭಾರತದ ಸಂದರ್ಭದಲ್ಲಿ ಈ ಅಸ್ಮಿತೆಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಬೇರೂರಿರುವುದರಿಂದ ಈ ನೆಲೆಗಳ ಸುತ್ತಲಿನ ವಿದ್ಯಮಾನಗಳೇ ಭಾರತೀಯರ ಮನಸ್ಸುಗಳನ್ನೂ ನಿಯಂತ್ರಿಸುತ್ತವೆ. ಹಾಗಾಗಿಯೇ ಕಥುವಾದ ಹಸುಳೆ ಅತ್ಯಾಚಾರಕ್ಕೀಡಾದ ಸಂದರ್ಭದಲ್ಲಿ ಸಾಂತ್ವನದ ಮಾತುಗಳಿಗಿಂತಲೂ ಹೆಚ್ಚಾಗಿ ವ್ಯಕ್ತವಾಗಿದ್ದು ಮತ್ತೊಂದು ಮತಧರ್ಮದ ವಿಕೃತ ನೆನಪುಗಳು. ಹುಟ್ಟು ಮತ್ತು ಸಾವು ಸಹಜ ನೈಸರ್ಗಿಕ ಕ್ರಿಯೆ ಎನ್ನುವ ಸತ್ಯವನ್ನು ಅರಿತಿದ್ದೂ ನಾವು ಹುಟ್ಟಿನಲ್ಲಿ ಅಸ್ಮಿತೆಯನ್ನು ಕಂಡುಕೊಂಡರೆ ಸಾವಿನಲ್ಲಿ ಸಾಪೇಕ್ಷತೆಯನ್ನು ಕಾಣುವ ಹಂತಕ್ಕೆ ತಲುಪಿದ್ದೇವೆ. ಇದನ್ನು ನಾಗರಿಕ ಲಕ್ಷಣ ಎನ್ನುವುದಾದರೂ ಹೇಗೆ? ಹುಟ್ಟಿನೊಡನೆ ಅಂಟಿಕೊಂಡು ಬರುವ ಅಸ್ಮಿತೆ ಸಾವಿನಲ್ಲಾದರೂ ಕೊನೆಯಾಗಬೇಕಲ್ಲವೇ? ಭಾರತದಲ್ಲಿ ಹಾಗಾಗುವುದಿಲ್ಲ. ಹುತಾತ್ಮ ಯೋಧರ ಅಂತ್ಯ ಸಂಸ್ಕಾರದಲ್ಲೂ ಶವಗಳೊಡನೆ ಹುಟ್ಟಿನ ಅಸ್ಮಿತೆಯೂ ದಹನವಾದದ್ದನ್ನು ಕಂಡಿದ್ದೇವೆ. ಏಕೆ ಹೀಗೆ?
ಉತ್ತರ ಸರಳ ಆದರೆ ಅಷ್ಟೇ ಜಟಿಲವೂ ಹೌದು. ಸರಳ ಏಕೆಂದರೆ ನಾವು ಮನುಷ್ಯರನ್ನು ನೋಡುವುದೇ ಜಾತಿಯ ಮಸೂರದಿಂದ. ನಗರೀಕರಣ ಮತ್ತು ಆಧುನಿಕತೆಯ ಸೋಗಿನಲ್ಲಿ ಕೆಲವು ಸೂಕ್ಷ್ಮಗಳನ್ನು ಗ್ರಹಿಸುವುದು ಕಷ್ಟ. ಆದರೆ ಸಮಾಜದ ಕೆನೆಪದರದಲ್ಲಿ ಕಾಣುವುದನ್ನೇ ಸತ್ಯ ಎಂದೂ ಭಾವಿಸಲಾಗುವುದಿಲ್ಲ. ಆಧುನಿಕತೆ ನಮ್ಮ ಮನಸ್ಸುಗಳ ಪರಿವರ್ತನೆಗೆ ಸಹಾಯಕವಾಗಿಲ್ಲ ಆದರೆ ಬದಲಾಗಿದ್ದೇವೆ ಎಂಬ ಭ್ರಮೆಯನ್ನು ಸೃಷ್ಟಿಸಿದೆ. ‘‘ಈಗೆಲ್ಲಾ ಯಾರ್ರೀ ಜಾತಿ ನೋಡ್ತಾರೆ’’ ಎಂದು ಹೇಳುವ ಮನಸ್ಸುಗಳೇ ಆಂತರ್ಯದಲ್ಲಿ ಕೆಲವರನ್ನು ಮೂಲೆಗುಂಪು ಮಾಡುವುದು ಹೇಗೆ ಎಂದು ಯೋಚಿಸುತ್ತಿರುತ್ತವೆ. ಮೆಟ್ರೋ ನಗರಗಳಲ್ಲಿನ ವಸತಿ ಸಮುಚ್ಚಯಗಳು ನಿರ್ದಿಷ್ಟ ಜಾತಿಗಳಿಗೆ ಸೀಮಿತವಾಗಿರುವುದು ಒಂದು ನಿದರ್ಶನ. ಆದರೆ ಆ ಸಮುಚ್ಚಯದ ಚೌಕಿದಾರ ಮಾತ್ರ ಅನ್ಯ ಜಾತಿಯವನೇ ಆಗಿರಬೇಕು. ಇದು ಸಾಮಾಜಿಕ ಸತ್ಯ. ಇನ್ನು ಸುಶಿಕ್ಷಿತರ ನಡುವೆ ಇದನ್ನು ನೇರವಾಗಿ ಕಾಣಲು ಆಡಳಿತ ವ್ಯವಸ್ಥೆಯ ಕಚೇರಿಗಳಿಗೆ ಭೇಟಿ ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರೇ ಇರುವ ಬ್ಯಾಂಕ್ ಮತ್ತು ವಿಮೆ ಮುಂತಾದ ಕ್ಷೇತ್ರಗಳಲ್ಲೂ ಸಹ ‘ಕೆಟಗರಿ’ ಎಂಬ ಪದ ಒಂದು ಗುಣ ವಿಶೇಷಣವಾಗಿ ಬಳಸಲ್ಪಡುವುದನ್ನು ಕಂಡಿದ್ದೇನೆ. ಇದು ಸಾರ್ವತ್ರಿಕವಲ್ಲ ಎಲ್ಲೋ ಕೆಲವರು ಹಾಗಿರುತ್ತಾರೆ ಎಂದು ಹೇಳುವುದು ಆತ್ಮವಂಚನೆಯಾಗುತ್ತದೆ. ಏಕೆಂದರೆ ಕಾರ್ಮಿಕ ಸಂಘಟನೆಗಳ (ಎಡಪಂಥೀಯ ಇದ್ದರೂ ಸಹ) ನಾಯಕರಲ್ಲೇ ಇಂತಹ ಭಾವನೆಗಳನ್ನು ಗುರುತಿಸಬಹುದು. ಒಳಹೊಕ್ಕು ನೋಡಬೇಕಷ್ಟೇ.
ಉತ್ತರ ಜಟಿಲ ಏಕೆಂದರೆ, ಮೇಲ್ನೋಟಕ್ಕೆ ಎಲ್ಲವೂ ತಿಳಿಯಾಗಿ ಕಾಣುತ್ತವೆ. ಮಾನವ ಸಮಾಜದ ಮುನ್ನಡೆಗೆ, ನಡಿಗೆಗೆ ಮತ್ತು ಉಳಿವಿಗೆ ಪೂರಕವಾಗುವುದು ನಮ್ಮ ನಡವಳಿಕೆ ಅಥವಾ ಚಟುವಟಿಕೆಗಳಲ್ಲ. ಮೂಲತಃ ಮನುಷ್ಯನ ಮನದಾಳದಲ್ಲಿರುವ ಭಾವನೆ, ಧೋರಣೆ ಮತ್ತು ಮನೋಭಾವ ಇಲ್ಲಿ ನಿರ್ಣಾಯಕವಾಗುತ್ತವೆ. ಇದು ಬದಲಾಗದೆ ನಮ್ಮ ನಡವಳಿಕೆಯ ಮೂಲಕ ‘ನಾವು ಮನುಜರು’ ಎಂದು ಬಿಂಬಿಸಿಕೊಳ್ಳುವುದು ಠಕ್ಕುತನ ಎಂದಷ್ಟೇ ಹೇಳಬಹುದು. ಏಕೆಂದರೆ ನಾವು ಆಳದಲ್ಲಿ ಮನುಜರಾಗಿಲ್ಲ ಮೇಲ್ನೋಟಕ್ಕೆ ಉದಾತ್ತ ಮಾನವರಾಗಿ ಕಂಗೊಳಿಸುತ್ತಿದ್ದೇವೆ. ಅದಕ್ಕೇ ನಮ್ಮ ರಾಜಕೀಯ ನಾಯಕರು ತಮ್ಮ ಆತ್ಮತೃಪ್ತಿಗಾಗಿ ಅಥವಾ ಆತ್ಮರತಿಗಾಗಿ ದಲಿತರ ಮನೆಯ ಕೂಳು ಸವಿಯಲು ಮುಂದಾಗುತ್ತಾರೆ, ದಲಿತರ ಮನೆಯಲ್ಲಿ ವಾಸಿಸಲು ಹಂಬಲಿಸುತ್ತಾರೆ. ಬ್ರಾಹ್ಮಣಶಾಹಿಯ ಸಮರ್ಥಕರು, ಯತಿಗಳು ದಲಿತ ಕೇರಿಗಳಲ್ಲಿ ಪಾದಯಾತ್ರೆಗಳನ್ನು ನಡೆಸುತ್ತಾರೆ. ಸ್ವಚ್ಛತಾ ಕಾರ್ಮಿಕರ ಪಾದ ಪೂಜೆ ಮಾಡುತ್ತಾರೆ. ಅಧಿಕಾರ ಕೇಂದ್ರಗಳಲ್ಲಿ ಅಂಬೇಡ್ಕರ್ ಪಟಕ್ಕೆ ಹೂವಿನ ಹಾರ ಹಾಕಿ, ಜಯಂತಿ ಆಚರಿಸಿ ಸಂಭ್ರಮಿಸುತ್ತಾರೆ. ಈ ಸಂದರ್ಭಗಳಲ್ಲೂ ಕೆಟಗರಿ ಎನ್ನುವ ಪಿಸುಗುಟ್ಟುವ ಪದ ಜೀವಂತವಾಗಿರುತ್ತದೆ. ಕಚೇರಿಗಳಲ್ಲಿ 1980ರ ದಶಕದಲ್ಲೂ ದೇವರ ಮಕ್ಕಳು ಎಂದು ಪಿಸುಗುಡಲಾಗುತ್ತಿತ್ತು. ದಲಿತ ಪ್ರಜ್ಞೆ ಗಟ್ಟಿಯಾದ ಮೇಲೆ ಕೆಟಗರಿ ಅವತರಣ ಮನೋಭಾವಕ್ಕೆ ಮತ್ತೊಂದು ಆಯಾಮವನ್ನು ನೀಡುವುದರಲ್ಲಿ ಈ ದೇಶದ ಸಾಂಸ್ಕೃತಿಕ ರಾಯಭಾರಿಗಳು ಯಶಸ್ವಿಯಾಗಿದ್ದಾರೆ. ಬ್ರಿಟಿಷರ ಆಳ್ವಿಕೆಯಲ್ಲಿ ಕೆಲವು ಬುಡಕಟ್ಟು ಸಮುದಾಯಗಳನ್ನು ಕ್ರಿಮಿನಲ್ ಟ್ರೈಬ್ಸ್ ಎಂದು ಗುರುತಿಸಲಾಗಿತ್ತು. ಸ್ವತಂತ್ರ ಭಾರತದಲ್ಲಿ ಇದು ಇಲ್ಲವಾಗಿದೆ. ಆದರೆ ನಾಗರಿಕ ಸಮಾಜದ ಪ್ರಜ್ಞೆಯ ಒಡಲನ್ನು ಸೀಳಿ ನೋಡಿದಾಗ ಪ್ರತಿಯೊಂದು ಜಾತಿ ಮನಸ್ಸಿನಲ್ಲೂ ಮತ್ತೊಂದು ಜಾತಿ ಅಥವಾ ಸಮುದಾಯದ ಬಗ್ಗೆ ಈ ಮನೋಭಾವ ಇರುವುದನ್ನು ಗಮನಿಸಬಹುದು. ಮೇಲ್ಜಾತಿಯವರಲ್ಲಿ ಗಾಢವಾಗಿರುತ್ತದೆ. ಅಪರಾಧ, ವೈಫಲ್ಯ, ಹಿನ್ನಡೆ ಮತ್ತು ಅವ್ಯವಸ್ಥೆಯನ್ನು ಕುರಿತು ಜಾತಿ ಕರ್ಮಠರ ನಡುವೆ ನಡೆಯುವ ಸಂವಾದಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಇಲ್ಲಿ ಅಸ್ಮಿತೆಗಳ ಪಲ್ಲಟವನ್ನು ಕಾಣಬಹುದು ಆದರೆ ಅಸ್ಮಿತೆಗಳ ಜೀವಂತಿಕೆ ಕಳೆದುಹೋಗುವುದಿಲ್ಲ. ಅಂದರೆ ಮುಸ್ಲಿಮ್ ಅಥವಾ ಭಯೋತ್ಪಾದನೆಯ ವಿಚಾರ ಉದ್ಭವಿಸಿದಾಗ ಹಿಂದೂ ಅಸ್ಮಿತೆ ಎದುರಾಗುತ್ತದೆ. ಮೀಸಲಾತಿ, ಅಂಬೇಡ್ಕರ್ ಅಥವಾ ದಲಿತರ ಮೇಲಿನ ದೌರ್ಜನ್ಯ ಚರ್ಚೆಗೊಳಗಾದಾಗ ಹಿಂದೂ ಚೌಕಟ್ಟಿನಲ್ಲೇ ಮೇಲ್ಜಾತಿಯ ಮನಸ್ಸುಗಳ ಮಲಿನ ಹೊರಹೊಮ್ಮುತ್ತದೆ. ಈ ದ್ವಂದ್ವವನ್ನು ಅದ್ಭುತವಾಗಿ ಸಂರಕ್ಷಿಸಿ, ಸಂಸ್ಕರಿಸಿ ಕಾಪಿಟ್ಟುಕೊಂಡಿರುವುದು ಬಿಜೆಪಿ ಮತ್ತು ಸಂಘಪರಿವಾರ ಎನ್ನುವುದು ವಾಸ್ತವ.
1980-90ರ ಅವಧಿಯ ಅಯೋಧ್ಯಾ ಪರ್ವದಲ್ಲಿ ಬೆಸುಗೆಯಾದ ಮನಸ್ಸುಗಳು, ಸೃಷ್ಟಿಯಾದ ಮನಸ್ಥಿತಿ ಮತ್ತು ಬಿತ್ತಿದ ಬೀಜಗಳು ಈ ಸಂಸ್ಕರಿಸಿದ ದ್ವಂದ್ವದ ನೇರ ಪರಿಣಾಮ ಎಂದು ಹೇಳಬಹುದು. ಈ ದೇಶದಲ್ಲಿ ಅಪರಾಧಗಳಿಗೂ ಒಂದು ಅಸ್ಮಿತೆ ಇದೆ ಎಂದು ನಿರೂಪಿಸುವ ನಿಟ್ಟಿನಲ್ಲಿ ಸಂಘಪರಿವಾರ ಮತ್ತು ಅಡ್ವಾಣಿ ಆ್ಯಂಡ್ ಕೋ ಪಟ್ಟ ಶ್ರಮ ಸಾರ್ಥಕವಾಗಲು ಮೂರು ದಶಕಗಳೇ ಬೇಕಾದವು. ಇಂದು ಸಾಕಾರಗೊಂಡಿವೆ. ಹಾಗಾಗಿಯೇ ಸೂಕ್ಷ್ಮ ದರ್ಶಕ ಮಸೂರಗಳನ್ನು ತೊಟ್ಟ ಭಾರತೀಯ ಸಮಾಜದ ಒಂದು ವರ್ಗದ ಮನಸ್ಸುಗಳಿಗೆ ಗಡಿಯಾರ ದುರಸ್ತಿ ಮಾಡುವ ಅಮಾಯಕ, ರಮಝಾನ್ ಸಂದರ್ಭದಲ್ಲಿ ಭಿಕ್ಷೆ ಬೇಡುವ ಅಮಾಯಕರು ಭಯೋತ್ಪಾದಕರಂತೆ ಕಾಣುತ್ತಾರೆ. ಗಾಂಧೀಜಿಯ ಹತ್ಯೆ ಮಾಡಿದ ಗೋಡ್ಸೆಯನ್ನು ಭಯೋತ್ಪಾದಕ ಎಂದು ಹೇಳುವ ಕಮಲ್ ಹಾಸನ್ ದೇಶದ್ರೋಹಿಯಾಗಿ ಕಾಣುತ್ತಾರೆ. ತಲೆಯ ಮೇಲಿನ ಟೋಪಿ ಮತ್ತು ಕುರುಚಲು ಗಡ್ಡ ಇಲ್ಲಿ ಅಸ್ಮಿತೆಗಳನ್ನು ನಿರ್ಧರಿಸುತ್ತದೆ. ದುರಂತ (ವಿಚಿತ್ರವೂ ಹೌದು) ಎಂದರೆ ಮೆಟ್ರೋ ರೈಲು ನಿಲ್ದಾಣದ ಸಿಸಿಟಿವಿ ಚಿತ್ರಣಗಳನ್ನು ಬಳಸಿ ಇಂತಹ ಅಪಪ್ರಚಾರ ಮಾಡಿ ಅಮಾಯಕರನ್ನು ಹಿಂಸಿಸಲಾಗುತ್ತದೆ. ಆದ ತಪ್ಪಿಗೆ ಹೊಣೆ ಯಾರು? ಮಾಧ್ಯಮಗಳು ಒತ್ತಟ್ಟಿಗಿರಲಿ ಅವಕ್ಕೆ ನೈತಿಕತೆಯೇ ಇಲ್ಲ, ಸಾರ್ವಜನಿಕರನ್ನೂ ಬಿಡಿ ಸಂವೇದನೆ ಇಲ್ಲ, ಆದರೆ ಆಡಳಿತಾರೂಢ ಪಕ್ಷವಾದರೂ ನೈತಿಕ ಹೊಣೆ ಹೊರಬೇಕಲ್ಲವೇ? ಇದು ಆಗದು. ಏಕೆಂದರೆ ಇಬ್ಬರೂ ಮುಸ್ಲಿಮರು. ‘‘ಅವ್ರಿಗೆ ಇವೆಲ್ಲಾ ಕಾಮನ್ ಬಿಡ್ರಿ’’ ಎಂಬ ಬೀಸು ಹೇಳಿಕೆಗಳು ಎಷ್ಟು ಹರಿದುಹೋಗಿದೆಯೋ. ನಾವು ಬಿತ್ತ ಬೀಜಗಳು ವಿಷವೃಕ್ಷಗಳಾಗಿ ಬೆಳೆದು ತಮ್ಮ ಅಸ್ತಿತ್ವವನ್ನೇ ಅಲುಗಾಡಿಸುತ್ತಿದೆ ಎಂದು ಖಾತ್ರಿಯಾದ ನಂತರವೇ ಅಯೋಧ್ಯಾ ಪರ್ವದ ಕರ್ತೃಗಳು ಭಯೋತ್ಪಾದನೆಗೂ ಧರ್ಮಕ್ಕೂ ಸಂಬಂಧ ಕಲ್ಪಿಸಬಾರದು ಎಂಬ ಜ್ಞಾನೋದಯದ ಮಾತುಗಳನ್ನಾಡಿದ್ದನ್ನು ಗಮನಿಸಬೇಕು. ಈ ಜ್ಞಾನೋದಯದ ಮಾತುಗಳು ರಾಜಕೀಯ ನೆಲೆಯಲ್ಲಿ ಫಲಕಾರಿಯಾದವೇ ಹೊರತು ವ್ಯಕ್ತಿಗತ ನೆಲೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಏಕೆಂದರೆ ಸೋಮನಾಥ ರಥಯಾತ್ರೆಯ ಸಂದರ್ಭದಲ್ಲಿ ತೊಳೆಯಲ್ಪಟ್ಟ ಮಿದುಳುಗಳು ಕೂಡಲೇ ಮುಚ್ಚಿಹೋಗಿದ್ದವು. ಮತ್ತಾವುದೇ ಯುಕ್ತಿಗಳಿಗೆ ಕಿವಿ ತೆಗೆಯುವುದು ಸಾಧ್ಯವಾಗಲಿಲ್ಲ. ಈ ನಂತರ ಜನಿಸಿದ ಕೂಸುಗಳಿಗೆ ಭ್ರೂಣಾವಸ್ಥೆ ುಲ್ಲಿಯೇ ಗೀತೋಪದೇಶವಾದಂತೆ ಕಾಣುತ್ತದೆ. ಹಾಗಾಗಿಯೇ ಇಬ್ಬರು ಅಮಾಯಕರು ಇವರ ದೃಷ್ಟಿಯಲ್ಲಿ ಭಯೋತ್ಪಾದಕರಾಗಿಯೇ ಕಾಣುತ್ತಾರೆ ಏಕೆಂದರೆ ಅವರು ಮುಸ್ಲಿಮರು. ಸಾಧ್ವಿ ಪ್ರಜ್ಞಾ ಸಿಂಗ್ ಅಮಾಯಕರಂತೆಯೂ ಹಿಂದೂ ಅಸ್ಮಿತೆಯ ಸಂಕೇತವಾಗಿಯೂ ಕಾಣುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಈ ಅಭಿಪ್ರಾಯಕ್ಕೆ ಅಧಿಕೃತ ಮೊಹರು ಒತ್ತಿದ್ದಾರಲ್ಲವೇ, ಇನ್ನೇನು ಬೇಕು?
ಕುರುಚಲು ಗಡ್ಡ, ಬಿಳಿ ಟೊಪ್ಪಿಈ ರೀತಿ ಒಂದು ಅಸ್ತಿತ್ವ ಮತ್ತು ಅಸ್ಮಿತೆಯನ್ನು ಪಡೆದಿರುವುದು ಇಂತಹ ಸೂಕ್ಷ್ಮದರ್ಶಕ ಮಸೂರಗಳನ್ನು ತೊಟ್ಟ ಮನಸ್ಸುಗಳಿಂದಲೇ. ಈ ಮನಸ್ಸುಗಳನ್ನು ಶುಚಿಗೊಳಿಸುವುದು ಹೇಗೆ? ನಾಗರಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಮೂಲಕ ಮಾತ್ರ ಸಾಧಿಸಲು ಸಾಧ್ಯ. ಆದರೆ ಮತಧರ್ಮ, ಜಾತಿ ಮತ್ತು ಕೋಮು ಭಾವನೆಯ ಅಮಲು ಒಂದು ಇಡೀ ಪೀಳಿಗೆಯ ನೆತ್ತಿಗೇರಿದೆ. ಸಮಾಜದ ಒಂದು ವರ್ಗ ಉನ್ಮತ್ತ ಸ್ಥಿತಿ ತಲುಪಿದೆ. ಕೆಲವೊಮ್ಮೆ ಇಡೀ ಸಮಾಜವೇ ಸ್ಮತಿಹೀನವಾಗಿದೆಯೇನೋ ಎನಿಸುತ್ತದೆ. ದೇಶ, ದೇಶಭಕ್ತಿ, ದೇಶ ರಕ್ಷಣೆಯ ಜಪಮಾಲೆಯಲ್ಲಿ ಮಾನವ, ಮಾನವತೆ ಮತ್ತು ಸಂವೇದನೆ ಎಂಬ ಜಪಮಣಿಗಳೇ ಇಲ್ಲವಾಗಿವೆ. ಸಮೂಹ ಸನ್ನಿಗೊಳಗಾದ ಒಂದು ಸಮಾಜದಲ್ಲಿ ಸೇನೆ ಮತ್ತು ಯುದ್ಧೋನ್ಮಾದ ಎಂತಹ ಅಪಾಯ ಸೃಷ್ಟಿಸುತ್ತದೆ ಎನ್ನಲು ಭಾರತೀಯ ಸಮಾಜದ ಒಂದು ವರ್ಗ ಸ್ಪಷ್ಟ ನಿದರ್ಶನವಾಗಿ ಕಾಣುತ್ತದೆ. ಮೊದಲು ಮಸೂರಗಳನ್ನು ಬದಲಿಸಬೇಕು ನಂತರ ಮಿದುಳು ನಿಷ್ಕ್ರಿಯರಾದವರನ್ನು ಸರಿಪಡಿಸಬೇಕು ನಂತರವೇ ಉನ್ಮತ್ತರ ಮನಸ್ಥಿತಿಯನ್ನು ಸರಿಪಡಿಸಬೇಕು. ಇದು ಪ್ರಜ್ಞಾವಂತ, ಸಂವೇದನಾಶೀಲ, ಸಹೃದಯ ಸಮಾಜದ ಕರ್ತವ್ಯವೂ ಹೌದು, ಈ ಸಮಾಜದ ಮುಂದಿನ ಬೃಹತ್ ಸವಾಲೂ ಹೌದು.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News

ಜಗದಗಲ
ಜಗ ದಗಲ