ಆಸ್ಟ್ರೇಲಿಯಕ್ಕೆ ನಾಲ್ಕನೇ ಬಾರಿ ಕಿರೀಟ

Update: 2019-05-21 05:55 GMT

ವೆಸ್ಟ್‌ಇಂಡೀಸ್ 2007ರಲ್ಲಿ ಮೊದಲ ಬಾರಿ ವಿಶ್ವಕಪ್‌ನ ಆತಿಥ್ಯ ವಹಿಸಿಕೊಂಡಿತ್ತು. ಒಂಬತ್ತನೇ ಆವೃತ್ತಿಯ ಈ ಕೂಟದಲ್ಲಿ ಹದಿನಾರು ತಂಡಗಳು ನಾಲ್ಕು ಗುಂಪುಗಳಲ್ಲಿ ಪ್ರಶಸ್ತಿಗಾಗಿ ಹಣಾಹಣಿ ನಡೆಸಿತ್ತು. ಏಷ್ಯಾ ಖಂಡದ ಬಲಿಷ್ಠ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್ ಹಂತದಲ್ಲೇ ಏನನ್ನು ಸಾಧಿಸಲಾರದೆ ಕೂಟದಿಂದ ನಿರ್ಗಮಿಸಿದ್ದು ಈ ಕೂಟದ ವಿಶೇಷ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡ ಅಜೇಯ ಗೆಲುವಿನ ಸಾಧನೆಯನ್ನು ಈ ವಿಶ್ವಕಪ್‌ನಲ್ಲೂ ಮುಂದುವರಿಸಿತ್ತು. ಅದು ಒಟ್ಟಾರೆ ನಾಲ್ಕನೇ ಬಾರಿ ಪ್ರಶಸ್ತಿ ಜಯಿಸಿತ್ತು. 1999, 2003 ಮತ್ತು 2007ರಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿತ್ತು.

ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಮತ್ತು ಪಾಕಿಸ್ತಾನ, ಐರ್ಲೆಂಡ್ ವಿರುದ್ಧ ಸೋತು ಸೂಪರ್ 8ರ ಹಂತ ತಲುಪುವ ಅವಕಾಶ ಕಳೆದುಕೊಂಡಿತ್ತು. ಆಸ್ಟ್ರೇಲಿಯ, ಶ್ರೀಲಂಕಾ, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಐರ್ಲೆಂಡ್ ಸೂಪರ್ 8ಕ್ಕೆ ಪ್ರವೇಶ ಪಡೆದಿತ್ತು.

ಸೆಮಿಫೈನಲ್: ಮೊದಲ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ತಂಡ ನ್ಯೂಝಿಲ್ಯಾಂಡ್ ವಿರುದ್ಧ 81 ರನ್‌ಗಳ ಜಯ ಗಳಿಸಿ ಫೈನಲ್ ಪ್ರವೇಶಿಸಿತ್ತು. ಶ್ರೀಲಂಕಾ ತಂಡ ಮಹೇಲ ಜಯವರ್ಧನೆ ಅವರ ಅಜೇಯ ಶತಕದ ನೆರವಿನಲ್ಲಿ 289 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ನ್ಯೂಝಿಲ್ಯಾಂಡ್ ತಂಡ 208 ರನ್‌ಗಳಿಗೆ ಆಲೌಟಾಗಿ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತ್ತು. ಎರಡನೆ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕ 149 ರನ್‌ಗಳಿಗೆ ಆಲೌಟಾಗಿತ್ತು. 150 ರನ್‌ಗಳ ಗೆಲುವಿನ ಸವಾಲನ್ನು ಪಡೆದ ಆಸ್ಟ್ರೇಲಿಯ ತಂಡ 31.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 153 ರನ್ ಸೇರಿಸಿತ್ತು. 

ಫೈನಲ್: ಶ್ರೀಲಂಕಾ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಆಗಾಗ ಅಡ್ಡಿಪಡಿಸಿತ್ತು. ಆ್ಯಡಮ್ ಗಿಲ್‌ಕ್ರಿಸ್ಟ್ ಶತಕ (149ರನ್) ಸಹಾಯದಿಂದ ಆಸ್ಟ್ರೇಲಿಯ ತಂಡ 38 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 281 ರನ್ ಸಂಪಾದಿಸಿತ್ತು. ಮಳೆಯಿಂದಾಗಿ 36 ಓವರ್‌ಗಳಲ್ಲಿ 269 ರನ್ ಮಾಡಬೇಕಾದ ಸವಾಲನ್ನು ಪಡೆದ ಶ್ರೀಲಂಕಾ ತಂಡ 36 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 215 ರನ್ ಮಾಡಿ ವಿಶ್ವಕಪ್ ಗೆಲ್ಲುವ ಅವಕಾಶ ಕೈ ಚೆಲ್ಲಿತ್ತು.

 ವಿವಾದ: ಪಾಕಿಸ್ತಾನ ತಂಡ ಸೂಪರ್ ಎಂಟರ ಹಂತಕ್ಕೆ ತಲುಪುವ ಅವಕಾಶ ಕಳೆದುಕೊಂಡ ಬೆನ್ನಲ್ಲೆ ತಂಡದ ಕೋಚ್ ಬಾಬ್ ವೋಲ್ಮರ್ ಪಾಕ್ ತಂಡ ತಂಗಿದ್ದ ಹೊಟೇಲ್ ಕೋಣೆಯಲ್ಲಿ ಸಾವಿಗೀಡಾಗಿರುವುದರ ಹಿಂದಿನ ರಹಸ್ಯ ಇನ್ನೂ ಗೊತ್ತಾಗಿಲ್ಲ. ವೋಲ್ಮರ್ ಸಾವಿನ ಪ್ರಕರಣ ಇಂದಿಗೂ ಚಿದಂಬರ ರಹಸ್ಯವಾಗಿದೆ.

 ಗಿಬ್ಸ್ ಸ್ಫೋಟ: ಸೈಂಟ್ ಕಿಟ್ಸ್‌ನವಾರ್ನರ್ ಪಾರ್ಕ್‌ನಲ್ಲಿ ನಡೆದ ದಕ್ಷಿಣ ಆಫ್ರಿಕ ಮತ್ತು ಹಾಲೆಂಡ್ ತಂಡಗಳ ನಡುವಿನ ಲೀಗ್ ಹಂತದ ಪಂದ್ಯದಲ್ಲಿ ಆಫ್ರಿಕದ ಹರ್ಷಲ್ ಗಿಬ್ಸ್ ಹಾಲೆಂಡ್‌ನ ಲೆಗ್‌ಬ್ರೇಕ್ ಬೌಲರ್ ಡಾನ್ ವ್ಯಾನ್ ಬುಂಗೆ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿ 36 ರನ್ ಕಲೆ ಹಾಕುವ ಮೂಲಕ ವಿಶ್ವಕಪ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದರು.

ಭಾರತದ ಗರಿಷ್ಠ ರನ್ ದಾಖಲೆ: ಭಾರತ ಈ ಕೂಟದಲ್ಲಿ ಸೂಪರ್ ಸಿಕ್ಸ್ ಪ್ರವೇಶಿಸಲಿಲ್ಲ. ಲೀಗ್ ಹಂತದಲ್ಲಿ ಆಡಿದ 3 ಪಂದ್ಯಗಳ ಪೈಕಿ 1ರಲ್ಲಿ ಜಯ ಗಳಿಸಿತ್ತು. ದುರ್ಬಲ ಬರ್ಮುಡಾ ವಿರುದ್ಧ ಆಡಿದ 1ಪಂದ್ಯದಲ್ಲಿ ಭಾರತ ಭರ್ಜರಿ ಜಯ ಗಳಿಸಿತ್ತು. ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 413 ರನ್ ಗಳಿಸಿತ್ತು. ಆದರೆ ಬರ್ಮುಡಾ ತಂಡ ಇದಕ್ಕ್ಕುತ್ತರವಾಗಿ 43.1 ಓವರ್‌ಗಳಲ್ಲಿ 156 ರನ್‌ಗಳಿಗೆ ಆಲೌಟಾಗಿತ್ತು. ಭಾರತ ವಿಶ್ವಕಪ್‌ನಲ್ಲಿ ಪಂದ್ಯವೊಂದರಲ್ಲಿ ಗರಿಷ್ಠ ರನ್ ದಾಖಲಿಸಿದ ಸಾಧನೆ ಮಾಡಿದೆ.

 ಗರಿಷ್ಠ ವೈಯಕ್ತಿಕ ಸ್ಕೋರ್: ಆಸ್ಟ್ರೇಲಿಯದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆ್ಯಡಮ್ ಗಿಲ್‌ಕ್ರಿಸ್ಟ್ ಫೈನಲ್‌ನಲ್ಲಿ 104 ಎಸೆತಗಳಲ್ಲಿ 149 ರನ್ ಗಳಿಸಿರುವುದು ವಿಶ್ವಕಪ್‌ನಲ್ಲಿ ಆಟಗಾರನೊಬ್ಬ ದಾಖಲಿಸಿರುವ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. 2003ರ ಆವೃತ್ತಿಯಲ್ಲಿ ಭಾರತ ವಿರುದ್ಧದ ಫೈನಲ್‌ನಲ್ಲಿ ಆಸ್ಟ್ರೇಲಿಯದ ನಾಯಕ ರಿಕಿ ಪಾಂಟಿಂಗ್ 140 ರನ್ ಗಳಿಸಿದ್ದರು. ಈ ದಾಖಲೆಯನ್ನು ಗಿಲ್‌ಕ್ರಿಸ್ಟ್ ಹಿಂದಿಕ್ಕಿದ್ದರು.

  ಮೆಕ್‌ಗ್ರಾತ್ ಗರಿಷ್ಠ ವಿಕೆಟ್ ದಾಖಲೆ: ಆಸ್ಟ್ರೇಲಿಯ ತಂಡವನ್ನು ನಾಲ್ಕು ವಿಶ್ವಕಪ್‌ಗಳಲ್ಲಿ ಪ್ರತಿನಿಧಿಸಿದ್ದ ಗ್ಲೆನ್ ಮೆಕ್‌ಗ್ರಾತ್ ಈ ವಿಶ್ವಕಪ್‌ನಲ್ಲಿ 26 ವಿಕೆಟ್ ಉಡಾಯಿಸಿದ್ದರು. ವಿಶ್ವಕಪ್‌ಗಳಲ್ಲಿ ಪಡೆದಿರುವ ವಿಕೆಟ್‌ಗಳ ಸಂಖ್ಯೆಯನ್ನು 71ಕ್ಕೆ ಏರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News