ಇವಿಎಂ ಮತಗಳು, ವಿವಿಪ್ಯಾಟ್ ತಾಳೆಗೆ ಸಂಬಂಧಿಸಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

Update: 2019-05-21 13:15 GMT

ಹೊಸದಿಲ್ಲಿ, ಮೇ 21: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಿಸುವ ಮೊದಲು ವಿದ್ಯುನ್ಮಾನ ಮತಯಂತ್ರಗಳ ಹಾಗೂ ಮತದಾನ ದೃಢೀಕರಣ ರಶೀದಿಗಳ (ವಿವಿ ಪ್ಯಾಟ್‌ಗಳ) ಸಂಪೂರ್ಣ ಪರಿಶೀಲನೆ ನಡೆಯಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮಂಗಳವಾರ ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ದೇಶವು ಹೊಸ ಸರಕಾರ ರಚಿಸಲು ಅನುವು ಮಾಡಿಕೊಡಬೇಕು ಎಂದು ತಿಳಿಸಿದೆ.

ಎಲ್ಲಾ ವಿವಿ ಪ್ಯಾಟ್‌ಗಳ ಪರಿಶೀಲನೆ ಕೋರಿ ಚೆನ್ನೈ ಮೂಲದ ಸಂಸ್ಥೆಯೊಂದು ಸಲ್ಲಿಸಿದ್ದ ಅರ್ಜಿಯನ್ನು ‘ಅಸಂಬದ್ಧ’ ಎಂದು ವಿಶ್ಲೇಷಿಸಿದ ನ್ಯಾ. ಅರುಣ್ ಮಿಶ್ರಾ ನೇತೃತ್ವದ ರಜಾಕಾಲದ ನ್ಯಾಯಪೀಠ ಅರ್ಜಿಯನ್ನು ತಿರಸ್ಕರಿಸಿದೆ. ಭವಿಷ್ಯದಲ್ಲಿ ದೇಶದಲ್ಲಿ ನಡೆಯುವ ಎಲ್ಲಾ ಚುನಾವಣೆಗಳಲ್ಲೂ ಇವಿಎಂ ಬದಲು ‘ಆಪ್ಟಿಕಲ್ ಬ್ಯಾಲಟ್ ಸ್ಕಾನ್ ಮೆಷೀನ್’ಗಳನ್ನು ಬಳಸಬೇಕು ಎಂದು ಅರ್ಜಿದಾರರು ಕೋರಿದ್ದರು. ಈ ವ್ಯವಸ್ಥೆಯಲ್ಲಿ ಮತದಾರ ಮತಪತ್ರಗಳಲ್ಲಿ ತನ್ನ ಮತವನ್ನು ಗುರುತಿಸಬೇಕು. ಬಳಿಕ ಇವನ್ನು ಸ್ಕಾನ್ ಮಾಡಿ ಇಲೆಕ್ಟ್ರಾನಿಕ್ ಟ್ಯಾಬುಲೇಷನ್ (ವರ್ಗೀಕರಣ) ಮಾಡಲಾಗುತ್ತದೆ. ಈ ಕೋರಿಕೆಯನ್ನೂ ನ್ಯಾಯಪೀಠ ತಿರಸ್ಕರಿಸಿದೆ. ವಿವಿಪ್ಯಾಟ್‌ಗಳ ಪರಿಶೀಲನೆ ವಿಷಯದ ಬಗ್ಗೆ ಮುಖ್ಯ ನ್ಯಾಯಾಧೀಶ (ಸಿಜೈಐ) ನ್ಯಾ. ರಂಜನ್ ಗೊಗೊಯಿ ನೇತೃತ್ವದ ವಿಸ್ತೃತ ಪೀಠ ಈಗಾಗಲೇ ಗಮನ ಹರಿಸಿ ಆದೇಶ ಜಾರಿಗೊಳಿಸಿದೆ.

ಈ ಕುರಿತು ಸಿಜೆಐ ನೇತೃತ್ವದ ನ್ಯಾಯಪೀಠ ಈಗಾಗಲೇ ನಿರ್ಧಾರ ಕೈಗೊಂಡಿದೆ. ಆದ್ದರಿಂದ ಈ ವಿಷಯವನ್ನು ಮತ್ತೊಮ್ಮೆ ರಜೆ ಕಾಲದ ಪೀಠದ ಎದುರು ಯಾಕೆ ಎತ್ತುತ್ತಿದ್ದೀರಿ. ಇದೇ ರೀತಿ ನೀವು ಮಾಡುತ್ತಿದ್ದರೆ ಅದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಇದೊಂದು ಅಸಂಬದ್ಧ ಅರ್ಜಿ ಎಂದು ನ್ಯಾ. ಮಿಶ್ರ ನೇತೃತ್ವದ ನ್ಯಾಯಪೀಠ ಹೇಳಿದೆ. ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ರಿಯ ಐದು ಮತಗಟ್ಟೆಗಳ ಇವಿಎಂ ಮತ್ತು ವಿವಿಪ್ಯಾಟ್ ಪರಿಶೀಲನೆಗೆ ಸುಪ್ರೀಂ ಸಮ್ಮತಿಸಿದೆ. ಆದರೆ ಕನಿಷ್ಟ ಶೇ.25ರಷ್ಟು ವಿವಿಪ್ಯಾಟ್‌ಗಳ ಪರಿಶೀಲನೆ ಕೋರಿ 21 ವಿಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಈಗಾಗಲೇ ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News