ಊಟದ ಮಧ್ಯೆ ನೀರು ಕುಡಿಯುವುದು ಒಳ್ಳೆಯದೇ ಕೆಟ್ಟದ್ದೇ...?

Update: 2019-05-21 12:07 GMT

ಹೆಚ್ಚಿನವರಿಗೆ ಊಟದ ಮಧ್ಯೆ ಕನಿಷ್ಠ ಒಂದು ಗ್ಲಾಸ್ ನೀರನ್ನಾದರೂ ಸೇವಿಸದಿದ್ದರೆ ಊಟ ಸೇರುವುದೇ ಇಲ್ಲ. ಊಟದ ಮಧ್ಯೆ ಕೆಲವು ಗುಟುಕು ನೀರನ್ನು ಸೇವಿಸಿದರೆ ಒಳ್ಳೆಯದು,ಆದರೆ ಅತಿಯಾಗಿ ನೀರಿನ ಸೇವನೆ ಒಳ್ಳೆಯದಲ್ಲ ಎನ್ನುವುದು ಸಾಮಾನ್ಯ ನಂಬಿಕೆ. ಊಟಕ್ಕೆ 30 ನಿಮಿಷಗಳ ಮೊದಲು ಅಥವಾ 30 ನಿಮಿಷಗಳ ನಂತರ ಒಂದೆರಡು ಗ್ಲಾಸ್ ನೀರನ್ನು ಸೇವಿಸುವುದು ಒಳ್ಳೆಯದು ಎಂದು ಅಧ್ಯಯನಗಳು ತೋರಿಸಿವೆ. ಆದರೆ ಊಟದ ಮಧ್ಯೆ ನೀರು ಕುಡಿಯುವುದು ಒಳ್ಳೆಯದೇ ಕೆಟ್ಟದ್ದೇ ಎನ್ನುವುದು ಪ್ರಶ್ನೆ. ಈ ಕುರಿತು ನೀವು ಅಗತ್ಯವಾಗಿ ತಿಳಿದುಕೊಳ್ಳಬೇಕಾದ ಕೆಲವು ಮಾಹಿತಿಗಳಿವೆ.

ನಮ್ಮ ಚರ್ಮದ ಆರೋಗ್ಯ,ಕರುಳಿನ ಚಲನವಲನ,ಜೀರ್ಣಕ್ರಿಯೆ ಮತ್ತು ಒಟ್ಟಾರೆ ಆರೋಗ್ಯದಲ್ಲಿ ನೀರು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ನೀವು ದಿನಕ್ಕೆ ಕನಿಷ್ಠ ಎರಡು ಲೀಟರ್ ನೀರನ್ನು ಸೇವಿಸಬೇಕು ಮತ್ತು ಧಗೆ ಹೆಚ್ಚಿರುವ ಊರು ನಿಮ್ಮದಾಗಿದ್ದರೆ 3-4 ಲೀ.ನೀರನ್ನು ಕಡ್ಡಾಯವಾಗಿ ಸೇವಿಸಬೇಕು. ಆದರೆ ಕೆಲವು ತಪ್ಪುಗ್ರಹಿಕೆಗಳಿಂದಾಗಿ ಊಟದ ಮಧ್ಯೆ ನೀರನ್ನು ಸೇವಿಸುವುದು ಒಳ್ಳೆಯದಲ್ಲ ಎಂಬ ಭಾವನೆ ಸಾಮಾನ್ಯವಾಗಿದೆ. ಜನರ ಇಂತಹ ನಂಬಿಕೆಗಳಿಗೆ ಕಾರಣಗಳು ಮತ್ತು ಅವುಗಳ ಹಿಂದಿನ ಸತ್ಯ ಇಲ್ಲಿವೆ.

 ಜೀರ್ಣಕ್ರಿಯೆ ವ್ಯತ್ಯಯಗೊಳ್ಳಬಹುದು

ಊಟದ ಮಧ್ಯೆ ನೀರಿನ ಸೇವನೆಯು ಬಾಯಿಯಲ್ಲಿಯ ಜೊಲ್ಲಿನ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಆರಂಭಿಸಿ ಜೀರ್ಣ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವುದು ಜನರಲ್ಲಿರುವ ನಂಬಿಕೆ. ಜೊಲ್ಲು ಕಡಿಮೆಯಾದಾಗ ಅದು ನಿಮ್ಮ ಜಠರಕ್ಕೆ ದುರ್ಬಲ ಸಂಕೇತಗಳನ್ನು ರವಾನಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ಆಮ್ಲಗಳು ಹಾಗೂ ಕಿಣ್ವಗಳ ಬಿಡುಗಡೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ಊಟದ ಮಧ್ಯೆ ನೀರನ್ನು ಗುಟುಕರಿಸಿದ ಕ್ಷಣದಿಂದಲೇ ಆಹಾರದ ಹೀರುವಿಕೆ ಮತ್ತು ವಿಭಜನೆಗೆ ಅಡಚಣೆಯಾಗುತ್ತದೆ ಎನ್ನುವುದು ಈ ನಂಬಿಕೆಯ ಹಿಂದಿನ ಕಾರಣವಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅಧ್ಯಯನಗಳು ಊಟದ ವೇಳೆಯಲ್ಲಿ ಮತ್ತು ಊಟದ ನಂತರ ಆಹಾರದ ಮೇಲೆ ನೀರು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತೋರಿಸಿವೆ.

 ಪೋಷಕಾಂಶಗಳ ಹೀರುವಿಕೆಯನ್ನು ನಿಧಾನಗೊಳಿಸಬಹುದು.

ಊಟದ ಮಧ್ಯೆ ನೀರು ಸೇವಿಸುವುದರಿಂದ ಸೋಂಕುಕಾರಕಗಳ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ಹೊಂದಿರುವ ಗ್ಯಾಸ್ಟ್ರಿಕ್ ರಸಗಳು ದುರ್ಬಲಗೊಳ್ಳುತ್ತವೆ ಮತ್ತು ಆಹಾರವು ಸೂಕ್ತವಾಗಿ ವಿಭಜನೆಗೊಳ್ಳಲೂ ತಡೆಯಾಗುತ್ತದೆ. ಜಠರದಲ್ಲಿ ಜೀರ್ಣ ಕಿಣ್ವಗಳು ದುರ್ಬಲಗೊಂಡಾಗ ಆಹಾರವು ದೀರ್ಘಕಾಲ ಅಲ್ಲಿಯೇ ಉಳಿದುಕೊಳ್ಳುತ್ತದೆ. ಅದು ನಿಧಾನವಾಗಿ ಸಣ್ಣಕರುಳಿನ ಮೂಲಕ ಸಾಗಬಹುದು ಮತ್ತು ಕೆಲವೇ ಪೋಷಕಾಂಶಗಳು ಹೀರಲ್ಪಡುತ್ತವೆ ಎನ್ನುವುದು ಇಂತಹ ಇನ್ನೊಂದು ನಂಬಿಕೆಯಾಗಿದೆ. ಆದರೆ ಇದು ಕೇವಲ ನಂಬಿಕೆ ಮಾತ್ರ ಆಗಿದೆ ಮತ್ತು ಯಾವುದೇ ಸಂಶೋಧನೆಯಿಂದ ಸಿದ್ಧಗೊಂಡಿಲ್ಲ. ಹೀಗಾಗಿ ಪೋಷಕಾಂಶಗಳ ಹೀರುವಿಕೆಯನ್ನು ಕಡಿಮೆ ಮಾಡುವಲ್ಲಿ ನೀರಿನ ಪಾತ್ರದ ಬಗ್ಗೆ ಇನ್ನೂ ಸರಿಯಾಗಿ ತಿಳಿದಿಲ್ಲ.

 ಆಮ್ಲತೆಗೆ ಕಾರಣವಾಗುತ್ತದೆ

ನೀವು ಊಟ ಮಾಡುತ್ತಿರುವಾಗ ನೀರನ್ನು ಕುಡಿಯುತ್ತಿದ್ದರೆ ಜಠರವೂ ತನಗೆ ಸಾಧ್ಯವಾದಷ್ಟು ನೀರನ್ನು ಹೀರಿಕೊಳ್ಳುತ್ತದೆಯಾದ್ದರಿಂದ ಆಮ್ಲತೆಗೆ ಕಾರಣವಾಗುತ್ತದೆ. ಇದು ಗ್ಯಾಸ್ಟ್ರಿಕ್ ರಸಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ನಿಧಾನವಾಗಿಸುತ್ತದೆ. ಜೀರ್ಣಾಂಗದಲ್ಲಿ ಆಹಾರ ಜೀರ್ಣಗೊಳ್ಳದೆ ಉಳಿದುಕೊಳ್ಳುವುದರಿಂದ ಆಮ್ಲವು ಹಿಮ್ಮುಖವಾಗಿ ಹರಿಯುತ್ತದೆ ಮತ್ತು ಎದೆಯುರಿ ಇತ್ಯಾದಿ ಕಾಣಿಸಿಕೊಳ್ಳುತ್ತವೆ ಎನ್ನುವುದು ಇನ್ನೊಂದು ನಂಬಿಕೆಯಾಗಿದೆ. ಆದರೆ ಇದನ್ನು ಸಂಶೋಧನೆಗಳು ಈವರೆಗೂ ಸಾಬೀತುಗೊಳಿಸಿಲ್ಲ. ಹೀಗಾಗಿ ಊಟದ ಮಧ್ಯೆ ನೀರು ಸೇವಿಸುತ್ತಿದ್ದರೆ ಅದು ಆಮ್ಲತೆಯನ್ನುಂಟು ಮಾಡುತ್ತದೆ ಎನ್ನುವುದನ್ನು ನಂಬಬೇಕಿಲ್ಲ.

ದೇಹತೂಕ ಹೆಚ್ಚುತ್ತದೆ

ಊಟದ ಮಧ್ಯೆ ನೀರು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಆಮ್ಲಗಳು ದುರ್ಬಲಗೊಳ್ಳುತ್ತವೆ ಮತ್ತು ಅದು ಶರೀರದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ತನ್ಮೂಲಕ ದೇಹತೂಕ ಹೆಚ್ಚಲು ಕಾರಣವಾಗುತ್ತದೆ ಎನ್ನುವುದು ಜನಪ್ರಿಯ ನಂಬಿಕೆಯಾಗಿದೆ. ನಮ್ಮ ಶರೀರಕ್ಕೆ ಆಹಾರವನ್ನು ಸರಿಯಾಗಿ ಜೀರ್ಣಿಸಲು ಸಾಧ್ಯವಾಗದಿದ್ದಾಗ ಅದು ಕೊಬ್ಬಿಗೆ ಪರಿವರ್ತನೆಗೊಳ್ಳುತ್ತದೆ ಮತ್ತು ಶರೀರದಲ್ಲಿ ಸಂಗ್ರಹವಾಗುತ್ತದೆ. ಅಲ್ಲದೆ ದುರ್ಬಲ ಗ್ಯಾಸ್ಟ್ರಿಕ್ ಆಮ್ಲಗಳು ಆಹಾರದ ಹೀರುವಿಕೆಯನ್ನು ನಿಧಾನಗೊಳಿಸುತ್ತವೆ ಮತ್ತು ಅದು ಕೊಬ್ಬಿಗೆ ಪರಿವರ್ತನೆಗೊಂಡು ದೇಹತೂಕವನ್ನು ಹೆಚ್ಚಿಸುತ್ತದೆ ಎನ್ನ್ನುವುದು ಈ ನಂಬಿಕೆಗೆ ನೀಡುವ ಕಾರಣವಾಗಿದೆ. ಆದರೆ ಇದಿನ್ನೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ.

ವಾಸ್ತವದಲ್ಲಿ ಊಟದ ಮಧ್ಯೆ ನೀರಿನ ಸೇವನೆ ಒಳ್ಳೆಯದಲ್ಲ ಎಂದು ಯಾವುದೇ ಸಂಶೋಧನೆಗಳಲ್ಲಿ ಕಂಡುಬಂದಿಲ್ಲ. ನೀರು ಪಚನಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ,ಜಠರಾಮ್ಲವನ್ನು ಮತ್ತು ಕಿಣ್ವಗಳನ್ನು ದುರ್ಬಲಗೊಳಿಸುತ್ತದೆ ಹಾಗೂ ದೇಹತೂಕವನ್ನು ಹೆಚ್ಚಿಸುತ್ತದೆ ಎಂದು ಯಾವ ಸಂಶೋಧನೆಯೂ ಹೇಳಿಲ್ಲ. ಆದರೆ ಗ್ಯಾಸ್ಟ್ರೋಎಸೋಫೇಜಿಯಲ್ ರಿಫ್ಲಕ್ಸ್ ಕಾಯಿಲೆ(ಜಿಇಆರ್‌ಡಿ) ಅಂದರೆ ತಿಂದ ಆಹಾರವು ಹಿಮ್ಮುಖವಾಗಿ ಹರಿದು ಅನ್ನನಾಳವನ್ನು ಸೇರುವ ಸಮಸ್ಯೆ ಇರುವವರು ಖಂಡಿತವಾಗಿಯೂ ಊಟದ ಮಧ್ಯೆ ನೀರನ್ನು ಸೇವಿಸಬಾರದು ಎಂದು ಅಧ್ಯಯನಗಳು ಸೂಚಿಸಿವೆ.

ದೇಹತೂಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ,ಊಟದ ಜೊತೆಗೆ ಸಕ್ಕರೆ ಮಿಶ್ರಿತ ಪಾನೀಯಗಳು,ಹಾಲು ಅಥವಾ ಜ್ಯೂಸ್ ಸೇವನೆಯು ಒಟ್ಟಾರೆ ಕ್ಯಾಲರಿ ಸೇವನೆಯನ್ನು ಹೆಚ್ಚಿಸುತ್ತದೆ ಮತ್ತು ದೇಹತೂಕ ಹೆಚ್ಚುವ ಅಪಾಯಕ್ಕೆ ತಳ್ಳುತ್ತದೆ ಎಂದು ಅಧ್ಯಯನಗಳು ಹೇಳಿವೆ. ಆದರೆ ಊಟದೊಂದಿಗೆ ನೀರಿನ ಸೇವನೆಯು ಇಂತಹ ಯಾವುದೇ ಪರಿಣಾಮವನ್ನು ತೋರಿಸಿಲ್ಲ. 2015ರಲ್ಲಿ ನಡೆಸಲಾದ ಅಧ್ಯಯನವೊದು ಊಟಕ್ಕೆ 30ನಿಮಿಷಗಳ ಮೊದಲು ಕನಿಷ್ಠ ಅರ್ಧ ಲೀ.ನೀರನ್ನು ಸೇವಿಸಿದರೆ ದೇಹತೂಕವನ್ನು ಕಡಿಮೆಗೊಳಿಸಲು ನೆರವಾಗುತ್ತದೆ ಎನ್ನುವುದನ್ನು ತೋರಿಸಿದೆ.

ಜೀರ್ಣ ಕ್ರಿಯೆ ಮತ್ತು ದೇಹತೂಕಕ್ಕೆ ಸಂಬಂಧಿಸಿದಂತೆ ನೀರಿನ ಸೇವನೆಯ ನಕಾರಾತ್ಮಕ ಪರಿಣಾಮದ ಕುರಿತು ಮಹತ್ವದ ಸಂಶೋಧನೆ/ಅಧ್ಯಯನಗಳು ನಡೆದಿಲ್ಲವಾದ್ದರಿಂದ ಊಟದ ಮಧ್ಯೆ ನೀರನ್ನು ಸೇವಿಸಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸುವುದು ನಿಮಗೇ ಬಿಟ್ಟಿದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News