ಇವಿಎಂಗಳ ಸುರಕ್ಷತೆ ಚುನಾವಣಾ ಆಯೋಗದ ಜವಾಬ್ದಾರಿ: ಪ್ರಣವ್ ಮುಖರ್ಜಿ

Update: 2019-05-21 17:48 GMT

ಹೊಸದಿಲ್ಲಿ, ಮೇ 21: ಸಾಂಸ್ಥಿಕ ಸಮಗ್ರತೆಯ ಖಾತರಿ ನೀಡುವ ಬಾಧ್ಯತೆ ಚುನಾವಣಾ ಆಯೋಗಕ್ಕಿದೆ. ಆದುದರಿಂದ ಚುನಾವಣಾ ಆಯೋಗ ಅದನ್ನು ಮಾಡಬೇಕು ಹಾಗೂ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಬೇಕು ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ. ಮತದಾರರ ತೀರ್ಪನ್ನು ತಿರುಚಲಾಗುತ್ತಿದೆ ಎಂಬ ವರದಿ ಬಗ್ಗೆ ನನಗೆ ಕಳವಳ ಉಂಟಾಗಿದೆ. ಇವಿಎಂಗಳ ಸುರಕ್ಷತೆ ಚುನಾವಣಾ ಆಯೋಗದ ಜವಾಬ್ದಾರಿ ಎಂದು ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಇವಿಎಂಗಳು ಸ್ಟ್ರಾಂಗ್ ರೂಮ್‌ನಲ್ಲಿ ಸುರಕ್ಷಿತವಾಗಿವೆ: ಚುನಾವಣಾ ಆಯೋಗ

ಎಲ್ಲಾ ಇವಿಎಂ ಹಾಗೂ ವಿವಿ ಪ್ಯಾಟ್‌ಗಳನ್ನು ಭದ್ರತೆಯ ಮೂಲಕ ಗೊತ್ತುಪಡಿಸಲಾದ ಸ್ಟ್ರಾಂಗ್ ರೂಮ್‌ಗೆ ತರಲಾಗುತ್ತದೆ. ಅಭ್ಯರ್ಥಿಗಳು ಹಾಗೂ ಚುನಾವಣಾ ಆಯೋಗದ ಪರಿವೀಕ್ಷಕರ ಉಪಸ್ಥಿತಿಯಲ್ಲಿ ಈ ಸ್ಟ್ರಾಂಗ್ ರೂಮ್‌ಗೆ ಎರಡು ಬೀಗಗಳನ್ನು ಹಾಕಿ ಮೊಹರು ಮಾಡಲಾಗುತ್ತದೆ. ಪ್ರತಿ ಸ್ಟ್ರಾಂಗ್ ರೂಮ್ ಅನ್ನು 24 ಗಂಟೆಗಳ ಕಾಲ ಕೇಂದ್ರ ಶಶಸ್ತ್ರ ಪೊಲೀಸ್ ಪಡೆ ಕಾವಲು ಕಾಯುತ್ತದೆ. ಅಭ್ಯರ್ಥಿಗಳು ಅಥವಾ ಅವರಿಂದ ನಿಯೋಜಿತ ಏಜೆಂಟರು ಸ್ಟ್ರಾಂಗ್ ರೂಮ್‌ನ ಸಮೀಪ 24 ಗಂಟೆಗಳ ಕಾಲ ಇರುತ್ತಾರೆ ಎಂದು ಚುನಾವಣಾ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮತ ಎಣಿಕೆಯ ದಿನ ಅಭ್ಯಥಿಗಳು/ಏಜೆಂಟ್ ಹಾಗೂ ಪರಿವೀಕ್ಷಕರ ಉಪಸ್ಥಿತಿಯಲ್ಲಿ ಸ್ಟ್ರಾಂಗ್ ರೂಮ್ ಅನ್ನು ತೆರೆಯಲಾಗುತ್ತದೆ. ಈ ಸಂದರ್ಭ ವೀಡಿಯೋ ಮಾಡಲಾಗುತ್ತದೆ. ಇವಿಎಂಗಳ ಮತಗಳನ್ನು ಲೆಕ್ಕ ಹಾಕುವ ಮುನ್ನ ನಿಷ್ಕಪಟತೆ ಹಾಗೂ ವಿಶ್ವಾಸಾರ್ಹತೆ ಸಾಬೀತುಪಡಿಸಲು ಮತ ಎಣಿಕೆ ಮಾಡುವ ಏಜೆಂಟರು ವಿಳಾಸ ಟ್ಯಾಗ್, ಮುದ್ರೆ ಹಾಗೂ ಕ್ರಮ ಸಂಖ್ಯೆಯನ್ನು ಪ್ರದರ್ಶಿಸುತ್ತಾರೆ ಎಂದು ಆಯೋಗ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News