ಮಂಗನ ಮೆದುಳಿಗೆ ಮಾನವ ಮೆದುಳಿನ ವಂಶವಾಹಿ ಕಸಿ

Update: 2019-05-21 18:19 GMT

ಬೀಜಿಂಗ್, ಮೇ 21: ಚೀನಾದ ವಿಜ್ಞಾನಿಗಳು ಮಾನವ ಮೆದುಳಿನ ವಂಶವಾಹಿನಿಗಳನ್ನು ಮಂಗನ ಮೆದುಳಿಗೆ ಕಸಿ ಮಾಡಿ ನೂತನ ಮಾದರಿಯ ಮಂಗವೊಂದನ್ನು ಸೃಷ್ಟಿಸಿದ್ದಾರೆ. ಮಾನವ ಮೆದುಳುಗಳು ಹೇಗೆ ಬೆಳವಣಿಗೆ ಹೊಂದುತ್ತವೆ ಎನ್ನುವುದನ್ನು ಅಧ್ಯಯನ ಮಾಡುವುದಕ್ಕಾಗಿ ವಿಜ್ಞಾನಿಗಳು ಈ ಕಸರತ್ತಿಗೆ ಕೈಹಾಕಿದ್ದಾರೆ.

ವಿಜ್ಞಾನಿಗಳು ಮಾನವ ಮೆದುಳಿನ ಎಂಸಿಪಿಎಚ್1 ವಂಶವಾಹಿಗಳನ್ನು ಮಂಗನ ಭ್ರೂಣಗಳಿಗೆ ವೈರಸ್ ಒಂದರ ಸಹಾಯದಿಂದ ಕಳುಹಿಸಿದರು ಎಂದು ಕಳೆದ ತಿಂಗಳು ಬೀಜಿಂಗ್‌ನ ‘ನ್ಯಾಶನಲ್ ಸಯನ್ಸ್ ರಿವ್ಯೂ’ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನವೊಂದು ತಿಳಿಸಿದೆ. ಈ ವಂಶವಾಹಿಯು ಮಾನವ ಮೆದುಳಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದಾಗಿ ಭಾವಿಸಲಾಗಿದೆ.

ಈ ವಿಧಾನದ ಮೂಲಕ ವಿಜ್ಞಾನಿಗಳು ಸೃಷ್ಟಿಸಿದ 11 ಮಕಾಕ್ ಮಂಗಗಳ ಪೈಕಿ ಆರು ಮೃತಪಟ್ಟಿವೆ. ಬದುಕುಳಿದ ಐದು ಮಂಗಗಳು ಬಣ್ಣಗಳು ಮತ್ತು ಬ್ಲಾಕ್‌ಗಳಿಗೆ ಸಂಬಂಧಿಸಿದ ಅಲ್ಪಾವಧಿ ಜ್ಞಾಪಕ ಶಕ್ತಿಯಲ್ಲಿ ಉತ್ತಮ ನಿರ್ವಹಣೆ ನೀಡುತ್ತಿರುವುದು ಕಂಡುಬಂದಿದೆ. ಅವುಗಳ ಮೆದುಳುಗಳು, ಮಾನವ ಶಿಶುಗಳಂತೆ ದೀರ್ಘ ಕಾಲಾವಧಿಯಲ್ಲಿ ಬೆಳವಣಿಗೆ ಹೊಂದಿರುವುದೂ ಪತ್ತೆಯಾಗಿದೆ. ಆದರೆ, ಯಾವುದೇ ಮಂಗಗಳಲ್ಲಿ ದೊಡ್ಡ ಗಾತ್ರದ ಮೆದುಳು ಬೆಳೆದಿಲ್ಲ.

‘‘ಇದು ಪರಿವರ್ತಿತ ಮಂಗ ಮಾದರಿಯನ್ನು ಬಳಸಿ ಮಾನವ ಮೆದುಳಿನ ವಿಕಾಸವನ್ನು ಅಧ್ಯಯನ ಮಾಡಲು ನಡೆಸಿದ ಪ್ರಥಮ ಪ್ರಯತ್ನವಾಗಿತ್ತು’’ ಎಂದು ಸಂಶೋಧನೆಯ ನೇತೃತ್ವ ವಹಿಸಿದ ಕುನ್ಮಿಂಗ್ ಇನ್‌ಸ್ಟಿಟ್ಯೂಟ್ ಆಫ್ ಝೂಲಜಿಯ ವಂಶವಾಹಿ ತಜ್ಞ ಬಿನ್ ಸು ಹೇಳುತ್ತಾರೆ.

ನೈತಿಕತೆಯ ಪ್ರಶ್ನೆ ಮತ್ತೆ ಮುನ್ನೆಲೆಗೆ:

ಚೀನಿ ವಿಜ್ಞಾನಿಗಳು ತಮ್ಮ ಪ್ರಯೋಗವನ್ನು ಸಂಭ್ರಮಿಸುತ್ತಿರುವಂತೆಯೇ, ಇತರ ವಿಜ್ಞಾನಿಗಳು ನೈತಿಕತೆಯ ಪ್ರಶ್ನೆಯನ್ನು ಎತ್ತಿದ್ದಾರೆ.

‘‘ಮಾನವ ಮೆದುಳಿನ ವಿಕಾಸವನ್ನು ಅಧ್ಯಯನ ಮಾಡುವುದಕ್ಕಾಗಿ ಪರಿವರ್ತಿತ ಮಂಗಗಳ ಬಳಕೆಯು ಅತ್ಯಂತ ಅಪಾಯಕರ ಹಾಗೂ ಬೇಜವಾಬ್ದಾರಿಯುತ ಕೆಲಸವಾಗಿದೆ’’ ಎಂದು ಕೊಲರಾಡೊ ವಿಶ್ವವಿದ್ಯಾನಿಲಯದ ವಂಶವಾಹಿ ತಜ್ಞ ಜೇಮ್ಸ್ ಸೈಕೆಲ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News