ಲಂಕಾ ಸ್ಫೋಟಗಳಲ್ಲಿ ‘ಮದರ್ ಆಫ್ ಸಾಟನ್’ ಬಾಂಬ್‌ಗಳ ಬಳಕೆ

Update: 2019-05-21 18:25 GMT

ಕೊಲಂಬೊ, ಮೇ 21: ಒಂದು ತಿಂಗಳ ಹಿಂದೆ ಶ್ರೀಲಂಕಾದಲ್ಲಿ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಿದ ಭಯೋತ್ಪಾದಕರು ‘ಮದರ್ ಆಫ್ ಸಾಟನ್’ ಸ್ಫೋಟಕಗಳನ್ನು ಬಳಸಿದ್ದಾರೆ ಎಂದು ತನಿಖಾಧಿಕಾರಿಗಳು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

 ಈ ಮಾದರಿಯ ಸ್ಫೋಟಕಗಳನ್ನು ಅಂತರ್‌ರಾಷ್ಟ್ರೀಯ ಭಯೋತ್ಪಾದಕ ಗುಂಪು ಐಸಿಸ್ ಹೆಚ್ಚಾಗಿ ಬಳಸುತ್ತಿದೆ. ಭಯೋತ್ಪಾದಕ ದಾಳಿಯಲ್ಲಿ ವಿದೇಶಿ ಕೈವಾಡವಿದೆ ಎನ್ನುವುದನ್ನು ಸೂಚಿಸಲು ಇದು ಇನ್ನೊಂದು ಪುರಾವೆಯಾಗಿದೆ.

ಎಪ್ರಿಲ್ 21ರಂದು ಮೂರು ಚರ್ಚ್‌ಗಳು ಮತ್ತು ಮೂರು ಹೊಟೇಲ್‌ಗಳನ್ನು ಉಡಾಯಿಸಲು ಬಳಸಲಾದ ಬಾಂಬ್‌ಗಳನ್ನು ಸ್ಥಳೀಯ ಭಯೋತ್ಪಾದಕರು ಐಸಿಸ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಇದೇ ಮಾದರಿಯ ಬಾಂಬ್‌ಗಳನ್ನು 2015ರಲ್ಲಿ ಪ್ಯಾರಿಸ್‌ನಲ್ಲೂ ಓರ್ವ ಆತ್ಮಹತ್ಯಾ ಬಾಂಬರ್ ಬಳಸಿದ್ದನು. 2017ರಲ್ಲಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಅರೀನಾದಲ್ಲಿ ಮತ್ತು 2018ರಲ್ಲಿ ಇಂಡೋನೇಶ್ಯದ ಚರ್ಚ್‌ಗಳಲ್ಲಿ ನಡೆದ ಸ್ಫೋಟಗಳಲ್ಲೂ ಇದೇ ಬಾಂಬ್‌ಗಳನ್ನು ಬಳಸಲಾಗಿತ್ತು.

ಈಸ್ಟರ್ ರವಿವಾರ ನಡೆದ ಸರಣಿ ಆತ್ಮಹತ್ಯಾ ಸ್ಫೋಟಗಳಲ್ಲಿ 258 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 500 ಮಂದಿ ಗಾಯಗೊಂಡಿದ್ದಾರೆ.

ಸೇಂಟ್ ಆ್ಯಂಟನೀಸ್ ಚರ್ಚ್ ಹೊರಗೆ ಸಾಮೂಹಿಕ ಪ್ರಾರ್ಥನೆ:

ಈಸ್ಟರ್ ರವಿವಾರದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗಳಿಗೆ ಒಂದು ತಿಂಗಳು ತುಂಬಿದ ಸಂದರ್ಭದಲ್ಲಿ, ಮಂಗಳವಾರ ನೂರಾರು ಕ್ರೈಸ್ತರು ಬಾಂಬ್ ದಾಳಿಗೆ ಈಡಾದ ಕೊಲಂಬೋದ ಸೇಂಟ್ ಆ್ಯಂಟನೀಸ್ ಚರ್ಚ್‌ನ ಹೊರಗಡೆ ಪ್ರಾರ್ಥನೆ ನಡೆಸಿದರು.

ಎಪ್ರಿಲ್ 21ರ ಭೀಕರ ಸ್ಫೋಟದ ಹಿನ್ನೆಲೆಯಲ್ಲಿ, 1740ರಲ್ಲಿ ನಿರ್ಮಾಣಗೊಂಡ ಈ ಚರ್ಚ್‌ನ್ನು ಈಗ ನವೀಕರಿಸಲಾಗುತ್ತಿದೆ. ಭಕ್ತರು ಹೊರಗಡೆ ಮೇಣದಬತ್ತಿಗಳನ್ನು ಹಚ್ಚಿ ಪ್ರಾರ್ಥಿಸಿದರು.

ತಿಂಗಳು ಪೂರ್ಣಗೊಂಡ ಸಂದರ್ಭದಲ್ಲಿ ಸೈನಿಕರು ಮತ್ತು ಪೊಲೀಸರು ದೇಶಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ತಿಂಗಳ ಬಳಿಕ ಕ್ರೈಸ್ತ ಶಾಲೆಗಳ ಪುನರಾರಂಭ:

ಈಸ್ಟರ್ ರವಿವಾರದ ದಾಳಿಯ ಬಳಿಕ, ಮಂಗಳವಾರ ಕೆಲವು ಕ್ರೈಸ್ತ ಶಾಲೆಗಳು ಮೊದಲ ಬಾರಿಗೆ ತೆರೆದಿವೆ ಹಾಗೂ ಶ್ರೀಲಂಕಾದಾದ್ಯಂತ ಸೈನಿಕರು ಮತ್ತು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಐಸಿಸ್ ಭಯೋತ್ಪಾದಕ ಗುಂಪು ಶಾಲೆಗಳ ಮೇಲೆ ದಾಳಿ ನಡೆಸದಂತೆ ಭದ್ರತಾ ಪಡೆಗಳು ನಿಗಾ ಇಟ್ಟಿವೆ ಎಂದು ಶ್ರೀಲಂಕಾ ಸೇನೆಯ ಲೆಫ್ಟಿನೆಂಟ್ ಜನರಲ್ ಮಹೇಶ್ ಸೇನಾನಾಯಕೆ ಹೇಳಿದರು.

 ‘‘ಪಾತಕಿಗಳ ಮೇಲೆ ನಿಗಾ ಇಡಲು ಸೇನೆ ಮತ್ತು ಇತರ ಪಡೆಗಳು ಪೂರ್ಣ ಪ್ರಮಾಣದಲ್ಲಿ ಕಾನೂನು ಅನುಷ್ಠಾನ ಪ್ರಾಧಿಕಾರಗಳಿಗೆ ನೆರವು ನೀಡುತ್ತಿವೆ’’ ಎಂದು ಅವರು ಸೋಮವಾರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News