ಮತ್ತೆ ಬಿಜೆಪಿ ಗೆದ್ದರೆ ಊರು ಬಿಟ್ಟು ತೆರಳಲು ಯೋಚಿಸುತ್ತಿದ್ದಾರೆ ಈ ಗ್ರಾಮದ ಮುಸ್ಲಿಮರು

Update: 2019-05-22 07:08 GMT
ಸಾಂದರ್ಭಿಕ ಚಿತ್ರ 

ಲಕ್ನೋ :  ಉತ್ತರ ಪ್ರದೇಶದ ಬುಲಂದ್ ಶಹರ್ ನಯಾಬನ್ಸ್ ಎಂಬ ಗ್ರಾಮದ ಮೂಲ ನಿವಾಸಿಯಾಗಿರುವ, ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ 55 ವರ್ಷದ ಜಬ್ಬಾರ್ ಆಲಿ ದಿಲ್ಲಿ ಸಮೀಪದ ಮಸೂರಿ ಎಂಬ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ತಾವು ಸೌದಿ ಅರೇಬಿಯಾದಲ್ಲಿ  ದುಡಿದು ಉಳಿತಾಯ ಮಾಡಿದ ಹಣದಿಂದ ಖರೀದಿಸಿದ ಮನೆಯಲ್ಲಿ ವಾಸವಾಗಿದ್ದಾರೆ.

ನಯಾಬನ್ಸ್ ಗ್ರಾಮದ ತಮ್ಮ ಮನೆಯನ್ನು ಹಾಗೆಯೇ ಉಳಿಸಿಕೊಂಡಿರುವ ಅವರು ಆಗಾಗ ಅಲ್ಲಿಗೆ ಭೇಟಿ ಕೊಡುತ್ತಿದ್ದರೂ ಅವರು ತಮ್ಮ ಹೊಸ ಮನೆಯಲ್ಲಿ ಹೆಚ್ಚು ಸುರಕ್ಷಿತ ಭಾವನೆ ಹೊಂದಿದ್ದಾರೆ.

''ನನಗೆ ಇಲ್ಲಿ ಭಯವಾಗುತ್ತದೆ, ಮೋದಿ ಇನ್ನೊಂದು ಅವಧಿಗೆ ಆಯ್ಕೆಯಾದರೆ ಹಾಗೂ ಆದಿತ್ಯನಾಥ್ ಸಿಎಂ ಆಗಿ ಮುಂದುವರಿದರೆ ಮುಸ್ಲಿಮರು ಇಲ್ಲಿಂದ ಜಾಗ ಖಾಲಿ ಮಾಡಬೇಕಾಗಬಹುದು'' ಎಂದು ಅವರು ತಮ್ಮ ಭೀತಿಯನ್ನು ತೋಡಿಕೊಳ್ಳುತ್ತಾರೆ. ಇಂತಹುದೇ ಭಾವನೆ ಗ್ರಾಮದ ಹಲವು ಜನರ ಮನಸ್ಸಿನಲ್ಲಿದೆ.

ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮಕ್ಕಳು ಈ ಗ್ರಾಮದಲ್ಲಿ ಜತೆಯಾಗಿ ಆಟವಾಡುತ್ತಿದ್ದ ಹಾಗೂ ಎರಡೂ ಸಮುದಾಯಗಳ ಹಿರಿಯರು ಹರಟೆ ಹೊಡೆಯುತ್ತಿದ್ದ ಗತ ದಿನಗಳನ್ನು ಇಲ್ಲಿನ  ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ, ಇಲ್ಲಿ ಎರಡೂ ಸಮುದಾಯಗಳು ಕಳೆದೆರಡು ವರ್ಷಗಳಿಂದೀಚಿಗೆ ಧ್ರುವೀಕರಣಗೊಡಿದ್ದು, ಕೆಲವರಂತೂ ಅದೆಷ್ಟು ಭಯಭೀತರಾಗಿದ್ದಾರೆಂದರೆ ಗ್ರಾಮ ಬಿಟ್ಟು ತೆರಳುವ ಯೋಚನೆ ಮಾಡಿದ್ದರೂ ಅದಕ್ಕಾಗಿ ಅವರ ಕೈಯ್ಯಲ್ಲಿ ಅಷ್ಟೊಂದು ಹಣವಿಲ್ಲ.

''ಮೋದಿ ಮತ್ತು ಆದಿತ್ಯನಾಥ್ ಎಲ್ಲವನ್ನೂ ಹಾಳುಗೆಡವಿದ್ದಾರೆ. ಅವರು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಒಡಕು ಸೃಷ್ಟಿಸಿದ್ದಾರೆ ಇದು ಅವರ ಏಕೈಕ ಅಜೆಂಡಾ ಆಗಿದೆ. ಹಿಂದೆ ಇಲ್ಲಿನ ಸ್ಥಿತಿ ಹೀಗಿರಲಿಲ್ಲ'' ಎಂದು ಗ್ರಾಮದಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುವ ಗುಲ್ಫಂ ಆಲಿ ಹೇಳುತ್ತಾರೆ.

ಕಳೆದೆರಡು ವರ್ಷಗಳ ಅವಧಿಯಲ್ಲಿ ತಮ್ಮ ಮಾವ ಸಹಿತ ಗ್ರಾಮದ  ಒಂದು ಡಜನ್ ಮುಸ್ಲಿಂ ಕುಟುಂಬಗಳು ಗ್ರಾಮವನ್ನು ತೊರೆದಿವೆ ಎಂದು ಅವರು ಹೇಳುತ್ತಾರೆ.

ಅಂದ ಹಾಗೆ ಬುಲಂದ್ ಶಹರ್ ಜಿಲ್ಲೆಯ ಇದೇ ಗ್ರಾಮದಲ್ಲಿ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಗೋ ಹತ್ಯೆ ವದಂತಿಗಳ ನಂತರ ಒಬ್ಬರು ಪೊಲೀಸ್ ಅಧಿಕಾರಿ ಸಹಿತ ಇಬ್ಬರನ್ನು ಗುಂಪೊಂದು ಗುಂಡಿಕ್ಕಿ ಸಾಯಿಸಿದ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಈ ಘಟನೆಯಿಂದುಂಟಾದ ಗಾಯ ಇನ್ನೂ ಆರಿಲ್ಲ ಎಂದು ಗ್ರಾಮದಲ್ಲಿನ ಒಟ್ಟು 4,000 ಜನಸಂಖ್ಯೆಯ ಪೈಕಿ ಸುಮಾರು 400ರಷ್ಟಿರುವ ಮುಸ್ಲಿಮರು ಹೇಳುತ್ತಾರೆ.

1977ರಲ್ಲಿ ಕೂಡ ಮಸೀದಿ ನಿರ್ಮಾಣಕ್ಕೆ ಎದುರಾದ ವಿರೋಧದಿಂದ ಭುಗಿಲೆದ್ದ ಮತೀಯ ಹಿಂಸಾಚಾರದಲ್ಲಿ ಇಬ್ಬರು ಬಲಿಯಾಗಿದ್ದರು. 2017ರಲ್ಲಿ ರಮಝಾನ್ ತಿಂಗಳಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ವಿರೋಧ ವ್ಯಕ್ತವಾಗಿದ್ದರಿಂದ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮುಸ್ಲಿಮರು ಧ್ವನಿವರ್ಧಕ ಬಳಸದೇ ಇರಲು ಒಪ್ಪಿದ್ದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಇಲ್ಲಿನ ಮುಸ್ಲಿಮರು ನೋವಿನಿಂದ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News