ತನ್ನದೇ ಹೆಲಿಕಾಪ್ಟರ್ ಹೊಡೆದುರುಳಿಸಿದ್ದನ್ನು ಕಡೆಗೂ ಒಪ್ಪಿಕೊಂಡ ವಾಯುಪಡೆ

Update: 2019-05-22 17:24 GMT

ಹೊಸದಿಲ್ಲಿ, ಮೇ 22: ಕಳೆದ ಫೆಬ್ರವರಿ 27ರಂದು ಕಾಶ್ಮೀರದ ಬುದ್‌ಗಾಂವ್‌ನಲ್ಲಿ ಕ್ಷಿಪಣಿ ದಾಳಿಯಿಂದ ಪತನಗೊಂಡ ಹೆಲಿಕಾಪ್ಟರ್ ಹೊಡೆದುರುಳಿಸಿದ್ದು ತಾನೇ ಎಂದು ಭಾರತೀಯ ವಾಯುಪಡೆ (ಐಎಎಫ್) ಅನಧಿಕೃತವಾಗಿ ಒಪ್ಪಿಕೊಂಡಿದೆ.

ಸಾರ್ವತ್ರಿಕ ಚುನಾವಣೆಯ ಅಂತಿಮ ಹಂತ ಕೊನೆಗೊಂಡ ಬಳಿಕ ಈ ಹೇಳಿಕೆ ಹೊರಬಿದ್ದಿರುವುದು ಈಗ ಚರ್ಚೆಗೆ ಗ್ರಾಸ ಒದಗಿಸಿದ್ದು ಚುನಾವಣೆಯಲ್ಲಿ ಸರಕಾರಕ್ಕೆ ಮುಜುಗರ ತಪ್ಪಿಸಲು ಹೀಗೆ ಮಾಡಲಾಗಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪುಲ್ವಾಮಾದಲ್ಲಿ ಭಯೋತ್ಪಾದಕರ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಕೋಟ್ ಪ್ರದೇಶಕ್ಕೆ ನುಗ್ಗಿ ವಾಯದಾಳಿ ನಡೆಸಿತ್ತು. ಇದರ ಮರುದಿನ ಕಾಶ್ಮೀರದ ಗಡಿಭಾಗದಲ್ಲಿ ಪಾಕಿಸ್ತಾನ ವಾಯುದಾಳಿ ನಡೆಸಿದಾಗ ಭಾರತ ಪ್ರತ್ಯುತ್ತರ ನೀಡಿತ್ತು. ಈ ಸಂದರ್ಭ ಬುದ್‌ಗಾಂವ್‌ನಲ್ಲಿ ಭಾರತದ ಎಂಐ-17 ಹೆಲಿಕಾಪ್ಟರ್‌ಗೆ ಕ್ಷಿಪಣಿಯೊಂದು ಬಡಿದ ಕಾರಣ ಹೆಲಿಕಾಪ್ಟರ್ ಪತನಗೊಂಡು ವಾಯುಪಡೆಯ ಆರು ಸಿಬ್ಬಂದಿಗಳು ಹಾಗೂ ಓರ್ವ ನಾಗರಿಕ ಮೃತಪಟ್ಟಿದ್ದರು.

 ಈ ಘಟನೆಗೆ ಭಾರತದ ಯೋಧರೇ ಕಾರಣವಾಗಿರಬಹುದು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದರು. ಕೆಲವು ಮಾಧ್ಯಮಗಳಲ್ಲೂ ಇದೇ ರೀತಿಯ ವರದಿ ಪ್ರಸಾರವಾಗಿತ್ತು. ಆದರೆ ಇದನ್ನು ನಿರಾಕರಿಸಿದ್ದ ಸರಕಾರ ಮತ್ತು ವಾಯುಪಡೆ, ಘಟನೆಯ ಬಗ್ಗೆ ವಿಚಾರಣಾ ನ್ಯಾಯಾಲಯದ ತನಿಖೆಗೆ ಆದೇಶಿಸಿತ್ತು. ತನ್ನದೇ ಹೆಲಿಕಾಪ್ಟರ್ ಅನ್ನು ವಾಯುಪಡೆ ಉರುಳಿಸಿದ ವಿಷಯ ಸಾರ್ವತ್ರಿಕ ಚುನಾವಣೆಯ ಸಂದರ್ಭ ಹೊರಬಿದ್ದರೆ ಆಗ ಪ್ರಧಾನಿ ಮೋದಿಗೆ ಸಂದಿರುವ ಬಾಲಕೋಟ್ ವೈಮಾನಿಕ ದಾಳಿಯ ಯಶಸ್ಸಿನ ಮಹತ್ವ ಕಡಿಮೆಯಾಗಬಹುದು ಹಾಗೂ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ಉದ್ದೇಶದಿಂದ ತನಿಖಾ ವರದಿಯನ್ನು ಬಹಿರಂಗಗೊಳಿಸಿಲ್ಲ ಎಂಬ ವಾದ ಕೇಳಿಬರುತ್ತಿದೆ.

 ಎರಡು ತಿಂಗಳಿಗೂ ಅಧಿಕ ಕಾಲ ರಹಸ್ಯವಾಗಿದ್ದ ಈ ಪ್ರಕರಣ ಚುನಾವಣೆ ಕೊನೆಗೊಂಡ ಎರಡು ದಿನದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ. ಎನ್‌ಡಿ ಟಿವಿಯಲ್ಲಿ ಪ್ರಸಾರವಾದ ವರದಿಯಲ್ಲಿ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಅನ್ನು ಶತ್ರುವಿನ ಹೆಲಿಕಾಪ್ಟರ್ ಎಂದು ತಪ್ಪಾಗಿ ಭಾವಿಸಿ ಹೊಡೆದುರುಳಿಸಲಾಗಿದೆ ಎಂದು ಹೇಳಲಾಗಿದೆ. ಕ್ಷಿಪಣಿ ಹಾರಿಸಿದ ಕೃತ್ಯದ ಹೊಣೆ ಹೊತ್ತಿರುವ ಅಧಿಕಾರಿಯ ವಿರುದ್ಧ ಶಿಕ್ಷಾರ್ಹ ನರಹತ್ಯೆ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ ಎಂದು ಇಕನಾಮಿಕ್ಸ್ ಟೈಮ್ಸ್‌ನಲ್ಲಿ ವರದಿಯಾಗಿದೆ. ಭಾರತದ ವಾಯುಪಡೆಯೇ ತನ್ನ ಹೆಲಿಕಾಪ್ಟರ್ ಉರುಳಿಸಿರುವುದು ಸ್ಪಷ್ಟವಾಗಿದೆ. ಆದರೆ ಸಾರ್ವತ್ರಿಕ ಚುನಾವಣೆ ಮುಗಿದ ಬಳಿಕವಷ್ಟೇ ತನಿಖೆಯ ವರದಿ ಬಿಡುಗಡೆಯಾಗಬಹುದು.

ಯಾಕೆಂದರೆ ಬಾಲಕೋಟ್ ವಾಯುದಾಳಿಯ ವಿಷಯವನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿದ್ದ ಮೋದಿ ಸರಕಾರಕ್ಕೆ ಬುದಗಾಂವ್‌ನಲ್ಲಿ ವಾಯುಪಡೆಯೇ ತನ್ನ ಹೆಲಿಕಾಪ್ಟರ್ ಉರುಳಿಸಿರುವ ವಿಷಯ ಮುಜುಗುರಕ್ಕೆ ಕಾರಣವಾಗುತ್ತದೆ ಎಂದು ಕಳೆದ ಎಪ್ರಿಲ್ 27ರಂದೇ ಬಿಸಿನೆಸ್ ಸ್ಟಾಂಡರ್ಡ್ ಪತ್ರಿಕೆಯಲ್ಲಿ ವರದಿಯಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಆಡಳಿತಾರೂಢ ಬಿಜೆಪಿಗೆ ಮುಜುಗುರ ಉಂಟಾಗಬಾರದು ಎಂಬ ಕಾರಣಕ್ಕೆ ಚುನಾವಣೆ ಮುಗಿಯುವವರೆಗೆ ಸಶಸ್ತ್ರ ಪಡೆಗಳು ಬುದ್‌ಗಾಂವ್ ಪ್ರಕರಣದ ಬಗ್ಗೆ ವೌನ ತಳೆದಿದ್ದರೆ ಇದು ನಿಜಕ್ಕೂ ಕಳವಳಕಾರಿ ವಿಷಯವಾಗಿದೆ ಎಂದು scroll.in ವರದಿ ಮಾಡಿದೆ. ವಿಚಾರಣಾ ನ್ಯಾಯಾಲಯ ಇನ್ನೂ ತನ್ನ ಅಂತಿಮ ವರದಿ ಸಲ್ಲಿಸಿಲ್ಲ. ಆದರೆ ಕೆಲವೊಂದು ಲೋಪಗಳು ಈ ದುರಂತಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.

ವಾಯುಪಡೆಯೇ ತನ್ನ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ. ಆದರೆ ಚುನಾವಣೆ ಮುಗಿಯುವವರೆಗೆ ವರದಿ ಬಹಿರಂಗಗೊಳಿಸದಂತೆ ವಾಯುಪಡೆಗೆ ಸೂಚಿಸಲಾಗಿದೆ ಎಂದು ರಕ್ಷಣಾ ವಿಶ್ಲೇಷಕ ಅಜಯ್ ಶುಕ್ಲ ಈ ಹಿಂದೆಯೇ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News