ಫನಿ ಚಂಡಮಾರುತವನ್ನೂ ಬೆಂಬತ್ತಿದ ಜಾತಿ ಒಳಸುಳಿ

Update: 2019-05-22 18:30 GMT

ನೈಸರ್ಗಿಕ ವಿಪತ್ತುಗಳು ಮನುಷ್ಯರ ಮೇಲೆ ಎರಗುವಾಗ ಯಾವ ತಾರತಮ್ಯವನ್ನೂ ಮಾಡುವುದಿಲ್ಲ. ಅದು ಯಾವುದೇ ತಾರತಮ್ಯ ಮಾಡದೆ ಎಲ್ಲರ ಮೇಲೂ ಒಂದೇ ಬಗೆಯ ವಿನಾಶಕಾರಿ ಶಕ್ತಿಯೊಂದಿಗೆ ಎರಗುತ್ತದೆ. ನಿಸರ್ಗದ ವಿನಾಶಕಾರಿ ಪರಿಣಾಮವೂ ಸಹ ಒಂದೇ ತೆರನಾಗಿರುತ್ತದೆ. ಆದರೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಮನುಷ್ಯರ ಪ್ರಯತ್ನಗಳು ಮಾತ್ರ ಒಂದೇ ಬಗೆಯ ನೈಸರ್ಗಿಕ ವಿಪತ್ತಿಗೆ ಭಿನ್ನಭಿನ್ನ ಪ್ರಮಾಣದ ಪರಿಣಾಮಗಳನ್ನು ಹುಟ್ಟುಹಾಕುತ್ತವೆ.

ಇತ್ತೀಚೆಗೆ ಫನಿ ಚಂಡಮಾರುತ ಅಪ್ಪಳಿಸಿದ ನಂತರದಲ್ಲಿ ಒಡಿಶಾದಲ್ಲಿ ಕಂಡುಬಂದ ಜಾತಿ ತಾರತಮ್ಯಗಳು 2001ರಲ್ಲಿ ಗುಜರಾತ್ ಭೂಕಂಪದ ಸಮಯದಲ್ಲಿ ಹಾಗೂ 2004ರ ಸುನಾಮಿ ದುರಂತದ ನಂತರ ಕಂಡುಬಂದ ಜಾತಿ ತಾರತಮ್ಯಗಳಿಗಿಂತ ಭಿನ್ನವಾಗಿದೆ. ಅದು ಭಿನ್ನವಾಗಿರುವುದು ವಿನಾಶದ ತೀವ್ರತೆಗಳಲ್ಲಿ ಅಲ್ಲ. ಬದಲಿಗೆ ಮಾನವೀಯ ಸಂಬಂಧಗಳನ್ನೇ ಸರ್ವನಾಶ ಮಾಡಬಲ್ಲ ನೈತಿಕ ಆಯಾಮಗಳಲ್ಲಿ ಅದು ಹಿಂದಿನ ನೈಸರ್ಗಿಕ ದುರಂತಗಳಿಗಿಂತ ಭಿನ್ನವಾಗಿದೆ. ಅಲ್ಲಿ ಮೂಲಭೂತ ಅಗತ್ಯವಾಗಿದ್ದ ಜೀವ ರಕ್ಷಣೆ ಮಾಡಿಕೊಳ್ಳಲು ನಿರಾಶ್ರಿತರಿಗಾಗಿ ಕಲ್ಪಿಸಲಾಗಿದ್ದ ಶಿಬಿರಗಳಲ್ಲಿ ದಲಿತರಿಗೆ ಅವಕಾಶವನ್ನೇ ನೀಡದ ಮೇಲ್ಜಾತಿ ಮನಸ್ಸುಗಳು ಸಂಪೂರ್ಣವಾಗಿ ಮಾನವೀಯತೆಯನ್ನೇ ಕಳೆದುಕೊಂಡಿದ್ದವು. ಫನಿ ಚಂಡಮಾರುತವು ಒಡಿಶಾದ ಕಡಲತೀರದ ಜಿಲ್ಲೆಗಳನ್ನು ಅಪ್ಪಳಿಸಿದಾಗ ಸಂಭವಿಸಿದ ಒಂದು ಘಟನೆಯಲ್ಲಿ ಇಂತಹ ಅಮಾನವೀಯತೆಗಳು ಪರಾಕಾಷ್ಟೆಯನ್ನು ಮುಟ್ಟಿದ್ದು ವರದಿಯಾಗಿದೆ. ಚಂಡಮಾರುತದಿಂದ ಸಂತ್ರಸ್ತರಾದ ಪುರಿ ಜಿಲ್ಲೆಯ ಒಂದು ಹಳ್ಳಿಯ ದಲಿತ ಕುಟುಂಬವನ್ನು ಸಾರ್ವಜನಿಕರಿಗಾಗಿ ಕಲ್ಪಿಸಲಾಗಿದ್ದ ನಿರಾಶ್ರಿತ ಶಿಬಿರವನ್ನು ಪ್ರವೇಶಿಸದಂತೆ ತಡೆಗಟ್ಟಲಾಯಿತಲ್ಲದೆ ಅವರು ಕಷ್ಟಪಟ್ಟು ಸೇರಿಕೊಂಡಿದ್ದ ಒಂದು ಶಿಬಿರದಿಂದಲೂ ಹೊರದಬ್ಬಲಾಯಿತೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅದೇ ವರದಿಗಳ ಪ್ರಕಾರ ಅವರನ್ನು ಒಂದು ಆಲದ ಮರದ ಕೆಳಗೆ ಆಶ್ರಯ ಪಡೆದುಕೊಳ್ಳಲು ಹೇಳಲಾಯಿತು. ಆದರೆ ಚಂಡಮಾರುತದ ರಭಸಕ್ಕೆ ಸಿಕ್ಕಿ ಆಲದ ಮರವು ನೆಲಕ್ಕುರುಳಿತು. ಹೀಗಾಗಿ ಇಡೀ ದಲಿತ ಕುಟುಂಬವು 200 ಕಿಮೀ ವೇಗದಲ್ಲಿ ಬೀಸುತ್ತಿದ್ದ ಚಂಡಮಾರುತ ಹಾಗೂ ಕುಂಭದ್ರೋಣ ಮಳೆಗೆ ಸಿಕ್ಕಿ ನಲುಗಿತು.
ದೇಶದಲ್ಲಿ ಸಂಭವಿಸಿದ ಇತರ ನೈಸರ್ಗಿಕ ಅನಾಹುತಗಳ ಸಂದರ್ಭದಲ್ಲಿ ವಿನಾಶೋತ್ತರ ಸಂದರ್ಭದಲ್ಲಿ ಅದರಲ್ಲೂ ಪರಿಹಾರಗಳ ಹಂಚಿಕೆಯ ಸಂದರ್ಭದಲ್ಲಿ ವ್ಯಕ್ತವಾಗುವ ಜಾತಿ ತಾರತಮ್ಯಗಳನ್ನು ನೋಡಿದ್ದೇವೆ. ಆದರೆ ಇಲ್ಲಿ ಸಂಭವಿಸಿದ ಜಾತಿ ತಾರತಮ್ಯ ಅದಕ್ಕಿಂತ ಭಿನ್ನ. ತಮಿಳುನಾಡಿನಲ್ಲಿ ಸುನಾಮಿ ಅಪ್ಪಳಿಸಿದ ನಂತರದಲ್ಲಿ, ಗುಜರಾತ್‌ನ ಕಛ್ ಮತ್ತು ಮಹಾರಾಷ್ಟ್ರದ ಲಾತೂರಿನಲ್ಲಿ ಭೂಕಂಪ ಸಂಭವಿಸಿದ ನಂತರ ಪರಿಹಾರ ಮತ್ತು ಸಹಾಯ ಸಲಕರಣೆಗಳನ್ನು ಹಂಚುವ ಸಂದರ್ಭದಲ್ಲಿ ಜಾತಿ ತಾರತಮ್ಯಗಳು ಸ್ಪಷ್ಟವಾಗಿ ಎದ್ದುಕಂಡಿದೆ. ಅದೇ ರೀತಿ ಬಿಹಾರದಲ್ಲಿ ಪ್ರವಾಹೋತ್ತರ ಸಂದರ್ಭದಲ್ಲಿ ಸಹಾಯ ಮತ್ತು ಸಹಕಾರಗಳು ಬಡ ದಲಿತರಿಗೆ ಸರಿಯಾಗಿ ದಕ್ಕಲಿಲ್ಲವೆಂಬುದು ವರದಿಯಾಗಿದೆ. ಶ್ರೀಮಂತರ ಬಂಗಲೆಗಳ ತಾರಸಿಗಳ ಮೇಲೆ ಆಹಾರ ಮತ್ತು ಔಷಧಿಗಳ ಪಾಕೆಟ್ಟುಗಳನ್ನು ಉದುರಿಸಲಾಗಿತ್ತು. ಸಹಜವಾಗಿಯೇ ಬಡವರು ಮತ್ತು ದಲಿತರಿಗೆ ಈ ತರಹದ ತಾರಸಿಯ ಸೌಲಭ್ಯವಿರಲಿಲ್ಲ. ಆಹಾರ ಮತ್ತು ಔಷಧಿಗಳನ್ನು ವಿತರಿಸುತ್ತಿದ್ದ ಸೈನಿಕರಿಗೆ ಜನರಿದ್ದ ತಾರಸಿಗಳ ಮೇಲೆ ಎಸೆಯುವುದು ತುಂಬಿಹರಿಯುತ್ತಿದ್ದ ಪ್ರವಾಹದೊಳಗೆ ಎಸೆಯುವುದಕ್ಕಿಂತ ಉತ್ತಮ ಎಂದು ಕಾಣಿಸಲಿರಲಿಕ್ಕೂ ಸಾಕು. ಈ ಅರ್ಥದಲ್ಲಿ ಪರಿಹಾರ ಕ್ರಮಗಳಲ್ಲಿ ತಾರತಮ್ಯಗಳು ಅಂತರ್ಗತವಾಗಿಯೇ ವ್ಯವಸ್ಥಿತವಾಗಿರುತ್ತದೆ. ಕೊಟ್ಟ ಸಹಾಯವು ಉಪಯುಕ್ತವಾಗಬೇಕು ಎಂಬ ತರ್ಕವನ್ನು ಆಧರಿಸಿ ಮನುಷ್ಯರ ಸಂವೇದನೆಗಳು ಒಂದು ಬಗೆಯಲ್ಲಿ ಪೂರ್ವಗ್ರಹಪೀಡಿತವಾಗಿರುತ್ತವೆ. ಅಂದರೆ, ಪ್ರವಾಹ ಪರಿಹಾರದಂತಹ ಕಾರ್ಯಕ್ರಮಗಳಲ್ಲಿ ಆಹಾರ ಮತ್ತು ಔಷಧಿಗಳ ಪ್ಯಾಕೆಟ್ಟುಗಳು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂಬ ಕಾಳಜಿಯು ಅದಕ್ಕೆ ಒಂದು ಉದಾಹರಣೆ. ಅದೇನೇ ಇರಲಿ ಇಲ್ಲಿ ನಾವು ಒಂದು ಮುಖ್ಯ ಪ್ರಶ್ನೆಯನ್ನೂ ಕೇಳಲೇಬೇಕು: ದಲಿತರು ನಿರಾಶ್ರಿತರ ಶಿಬಿರವನ್ನು ಪ್ರವೇಶಿಸದಂತೆ ತಡೆದ ಮತ್ತು ಅವರು ಈಗಾಗಲೇ ಇದ್ದ ಶಿಬಿರದಿಂದ ಜಾಗ ಖಾಲಿ ಮಾಡಿಸಿದ ಮೇಲ್ಜಾತಿಗಳ ಬಳಿ ಯಾವುದಾದರೂ ಸಮರ್ಥನೀಯ ಕಾರಣವಿತ್ತೇ? ಆ ಸ್ಥಳದಿಂದ ಬಂದ ವರದಿಗಳ ಪ್ರಕಾರ ದಲಿತರಿಗಿಂತ ಮುಂಚಿತವಾಗಿ ಆ ಶಿಬಿರವನ್ನು ಆಕ್ರಮಿಸಿಕೊಂಡಿದ್ದ ಮೇಲ್ಜಾತಿಗಳು, ಈಗಾಗಲೇ ಶಿಬಿರದಲ್ಲಿ ಹೆಚ್ಚು ಜನರು ಇರುವುದರಿಂದ ಇನ್ನೂ ಹೆಚ್ಚು ಜನರನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲವೆಂಬ ಕಾರಣದಿಂದ ಆ ದಲಿತರನ್ನು ಹೊರಹಾಕಿದರಂತೆ.


ಹೀಗಾಗಿ ಅಲ್ಲಿ ದಲಿತರು ಮಾತ್ರವಲ್ಲ ಹೊಸದಾಗಿ ಬೇರೆ ಯಾರೇ ಬಂದಿದ್ದರೂ ಉಳಿದವರ ಹಿತಾಸಕ್ತಿಯಿಂದ ಹೊರಹಾಕುತ್ತಿದ್ದರೆಂಬ ಸಮರ್ಥನೆಯನ್ನು ಈ ವಾದ ಒಪ್ಪಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಇದನ್ನು ಆಧರಿಸಿ ದಲಿತರಿಗೆ ಪ್ರವೇಶವನ್ನು ನಿರಾಕರಿಸಲು ಜಾತಿ ತಾರತಮ್ಯ ಕಾರಣವಾಗಿರಲಿಲ್ಲ ಎಂದು ವಾದಿಸಬಹುದು. ಮೇಲ್ನೋಟಕ್ಕೆ ತಾರ್ಕಿಕವೆಂದು ಕಾಣುವ ಈ ಗ್ರಹಿಕೆಯು ಮೇಲ್ಜಾತಿಗಳಿಗೆ ದಲಿತರಿಗಿಂತ ವೇಗವಾಗಿ ಶಿಬಿರಗಳನ್ನು ಸೇರಿಕೊಳ್ಳುವ ಅವಕಾಶವಿತ್ತೆಂಬ ಅಂಶವನ್ನು ಗೌಣಗೊಳಿಸುತ್ತದೆ. ಇದು ಮೊದಲು ಬಂದವರಿಗೆ ಮೊದಲು ಲಭ್ಯ ಎಂಬ ಸಹಜ ನ್ಯಾಯದ ತರ್ಕವನ್ನು ಶಿಬಿರದ ಸಾಮರ್ಥ್ಯದ ಮಿತಿಯನ್ನು ಮುಂದೆಮಾಡುತ್ತಾ ಮತ್ತಷ್ಟು ಮಾನ್ಯಗೊಳಿಸುತ್ತದೆ. ಆದರೆ ಮಾಧ್ಯಮದ ವರದಿಗಳ ಪ್ರಕಾರ ಮೇಲ್ಜಾತಿಗಳಿಗಿಂತ ಮೊದಲು ಶಿಬಿರವನ್ನು ಸೇರಿಕೊಂಡಿದ್ದ ದಲಿತರನ್ನು ಅಲ್ಲಿಂದ ಖಾಲಿ ಮಾಡಿಸುವಾಗ ಮಾತ್ರ ಮೇಲ್ಜಾತಿಗಳು ಈ ಮೊದಲು ಬಂದವರಿಗೆ ಮೊದಲು ತತ್ವವನ್ನು ಅನ್ವಯಿಸಲಿಲ್ಲ. ಹೀಗೆ ಜಾತಿ ಪ್ರಜ್ಞೆಯು ಮೊದಲು ಬಂದವರಿಗೆ ಮೊದಲು ತತ್ವವನ್ನು ಸಹ ಉಲ್ಲಂಘಿಸುತ್ತದೆ.
ನಿರಾಶ್ರಿತರ ಶಿಬಿರವು ಒಂದು ಖಾಸಗಿ ಶಿಬಿರವಾಗಿದ್ದಲ್ಲಿ ದಲಿತರ ಪ್ರವೇಶವನ್ನು ನಿರಾಕರಿಸಿದ ಕ್ರಮವನ್ನು ಸ್ವಲ್ಪವಾದರೂ ಅರ್ಥಮಾಡಿ ಕೊಳ್ಳಬಹುದಿತ್ತು. ಆದರೆ ಅವರು ಸಾರ್ವಜನಿಕ ಸ್ಥಳವನ್ನು ಖಾಸಗಿ ಪಾಳೆಪಟ್ಟು ಮಾಡಿಕೊಂಡಿದ್ದರಿಂದಾಗಿ ದಲಿತರಿಗೆ ಒಂದು ಸಾರ್ವಜನಿಕ ಸ್ಥಳದಲ್ಲಿ ತಮ್ಮ ಪ್ರವೇಶದ ಹಕ್ಕನ್ನು ಚಲಾಯಿಸಲು ಆಗಲಿಲ್ಲ.
ಅದೊಂದು ಸಾರ್ವಜನಿಕ ಶಾಲೆಯಾಗಿದ್ದು ದಲಿತರಿಗೆ ಅಲ್ಲಿ ಪ್ರವೇಶಿಸುವ ಹಕ್ಕು ಇದ್ದಿದ್ದರಿಂದ ಈ ನಿರಾಕರಣೆಯನ್ನು ಕೇವಲ ಮೇಲ್ಜಾತಿಗಳ ನೈತಿಕ ಔದಾರ್ಯದ ಕೊರತೆಯೆಂದು ಭಾವಿಸಲು ಸಾಧ್ಯವಿಲ್ಲ. ಆದರೆ ಮೇಲ್ಜಾತಿಗಳು ದಲಿತರಿಗೆ ಆ ಹಕ್ಕಿದೆ ಎಂದು ಯೋಚಿಸಲೇ ಇಲ್ಲ ಮತ್ತು ದಲಿತರು ಮೇಲ್ಜಾತಿಗಳ ಬಗ್ಗೆ ಇರುವ ಭೀತಿಯಿಂದಾಗಿ ಆ ಶಿಬಿರವನ್ನು ಪ್ರವೇಶಿಸುವ ತಮ್ಮ ಹಕ್ಕನ್ನು ಚಲಾಯಿಸಲೂ ಮುಂದಾಗಲಿಲ್ಲ.
 ದಲಿತರ ದಾರುಣ ಪರಿಸ್ಥಿತಿಯ ಬಗ್ಗೆ ಮೇಲ್ಜಾತಿಗಳ ಪ್ರತಿಕ್ರಿಯೆಯನ್ನು ನೋಡಿದರೆ ಅವರೊಳಗಿನ ಜಾತಿ ಪ್ರಜ್ಞೆಯು ಅವರೊಳಗಿರಬಹುದಾಗಿದ್ದ ನೈತಿಕ ಪ್ರಜ್ಞೆಯನ್ನು ಎರಡು ಹಂತದಲ್ಲಿ ಮೆಟ್ಟಿ ನಿಂತಿದೆ. ಸಾರ್ವಜನಿಕ ನಿರಾಶ್ರಿತ ಶಿಬಿರವನ್ನು ಪ್ರವೇಶಿಸಲು ತಮಗೆ ಸಹಜ ಹಕ್ಕಿದೆ ಎಂದು ಭಾವಿಸಿದ ಮೇಲ್ಜಾತಿಗಳು ಅಷ್ಟೇ ಸರಿಸಮಾನವಾದ ಹಕ್ಕು ದಲಿತರಿಗೂ ಇದೆ ಎಂಬುದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಎರಡನೆಯದಾಗಿ ದಲಿತರಿಗೂ ತಮ್ಮಷ್ಟೇ ಬದುಕಿ ಉಳಿಯುವ ಮಾನವ ಹಕ್ಕು ಇದೆ ಎಂಬ ಒಪ್ಪಿಕೊಳ್ಳಲು ನಿರಾಕರಿಸುವಲ್ಲಿ ಅವರು ತಮ್ಮೆದುರಿಗಿದ್ದ ನೈತಿಕತೆಯ ಪರೀಕ್ಷೆಯಲ್ಲಿ ಘೋರವಾಗಿ ವಿಫಲರಾಗಿದ್ದಾರೆ. ಹಕ್ಕುಗಳು ಮನುಷ್ಯರ ಜೀವಕ್ಕೆ ಸಂಬಂಧಪಟ್ಟವಾಗಿವೆ. ತಮ್ಮ ಜೀವಗಳನ್ನು ಸುರಕ್ಷಿತಗೊಳಿಸಿಕೊಳ್ಳಲು ಮೇಲ್ಜಾತಿಗಳು ತರ್ಕವನ್ನು ತಮ್ಮ ಪರವಾಗಿ ಬದಲಿಸಿಕೊಂಡುಬಿಟ್ಟರು. ಹಾಗೂ ಅವರು ತಮ್ಮ ಸಾಮಾಜಿಕ ಅಧಿಕಾರವನ್ನು ಬಳಸಿಕೊಂಡು ದಲಿತರ ಬದುಕನ್ನು ಅಪಾಯಕ್ಕೊಡ್ಡಿದರು.
ನೈಸರ್ಗಿಕ ವಿಪತ್ತುಗಳು ಮನುಷ್ಯರ ಮೇಲೆ ಎರಗುವಾಗ ಯಾವ ತಾರತಮ್ಯವನ್ನೂ ಮಾಡುವುದಿಲ್ಲ. ಅದು ಯಾವುದೇ ತಾರತಮ್ಯ ಮಾಡದೆ ಎಲ್ಲರ ಮೇಲೂ ಒಂದೇ ಬಗೆಯ ವಿನಾಶಕಾರಿ ಶಕ್ತಿಯೊಂದಿಗೆ ಎರಗುತ್ತದೆ. ನಿಸರ್ಗದ ವಿನಾಶಕಾರಿ ಪರಿಣಾಮವೂ ಸಹ ಒಂದೇ ತೆರನಾಗಿರುತ್ತದೆ. ಆದರೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಮನುಷ್ಯರ ಪ್ರಯತ್ನಗಳು ಮಾತ್ರ ಒಂದೇ ಬಗೆಯ ನೈಸರ್ಗಿಕ ವಿಪತ್ತಿಗೆ ಭಿನ್ನಭಿನ್ನ ಪ್ರಮಾಣದ ಪರಿಣಾಮಗಳನ್ನು ಹುಟ್ಟುಹಾಕುತ್ತವೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News

ಜಗದಗಲ
ಜಗ ದಗಲ