ಮೋದಿ ಅಲೆಯಲ್ಲೂ ನಾಲ್ಕು ಬಾರಿಯ ಶಿವಸೇನಾ ಸಂಸದರನ್ನು ಸೋಲಿಸಿದ ದಲಿತ-ಮುಸ್ಲಿಂ ಮೈತ್ರಿ

Update: 2019-05-24 16:17 GMT

ದೇಶದ ಹೆಚ್ಚಿನ ರಾಜ್ಯಗಳಲ್ಲಿ ಮೋದಿ ಅಲೆಯಲ್ಲಿ ಬಿಜೆಪಿ ಹಾಗು ಅದರ ಮಿತ್ರಪಕ್ಷಗಳ ಅಭ್ಯರ್ಥಿಗಳು ಲಕ್ಷ ಲಕ್ಷ ಮತಗಳ ಅಂತರದಿಂದ ಗೆದ್ದಿರುವ ಈ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಔರಂಗಾಬಾದ್ ವಿಭಿನ್ನ ಫಲಿತಾಂಶದ ಮೂಲಕ ದೇಶದ ಗಮನ ಸೆಳೆದಿದೆ. ಇಲ್ಲಿಂದ ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಅಭ್ಯರ್ಥಿ ಇಮ್ತಿಯಾಜ್ ಜಲೀಲ್ ಜಯಭೇರಿ ಬಾರಿಸಿದ್ದಾರೆ. ವಿಶೇಷವೆಂದರೆ ಇಲ್ಲಿಂದ ಸತತ ನಾಲ್ಕು ಬಾರಿ ಗೆದ್ದಿದ್ದ ಶಿವಸೇನೆಯ ಅಭ್ಯರ್ಥಿ ಹಾಲಿ ಸಂಸದರಾಗಿದ್ದ ಚಂದ್ರಕಾಂತ್ ಖೈರ್ ಅವರನ್ನು ಜಲೀಲ್ ಸೋಲಿಸುವಲ್ಲಿ ಯಶಸ್ವಿಯಾಗಿರುವುದು.

ಮಹಾರಾಷ್ಟ್ರದ 48 ಕ್ಷೇತ್ರಗಳ ಪೈಕಿ ಬಿಜೆಪಿ 23 ಕ್ಷೇತ್ರಗಳಲ್ಲಿ ಅದರ ಮಿತ್ರಪಕ್ಷ ಶಿವಸೇನೆ 18 ಕ್ಷೇತ್ರಗಳಲ್ಲಿ ಗೆದ್ದಿದೆ. ಎನ್ ಸಿ ಪಿ ನಾಲ್ಕು ಸ್ಥಾನ ಗೆದ್ದಿದ್ದರೆ ಕಾಂಗ್ರೆಸ್ ಜಯ ಗಳಿಸಿರುವುದು ಒಂದು ಸ್ಥಾನದಲ್ಲಿ ಮಾತ್ರ. ಔರಂಗಾಬಾದ್ ನಲ್ಲಿ  ಎ ಐ ಎಂ ಐ ಎಂ ಜಯಗಳಿಸಿದ್ದರೆ ಇನ್ನೊಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಇಮ್ತಿಯಾಜ್ ಜಲೀಲ್ 3,89,042 ಮತ ಗಳಿಸಿದ್ದರೆ ಚಂದ್ರಕಾಂತ್  3,84,550 ಮತ ಪಡೆದು ಸುಮಾರು ನಾಲ್ಕೂವರೆ ಸಾವಿರ ಮತಗಳಿಂದ ಸೋತಿದ್ದಾರೆ.  ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ಕೇವಲ 91,790 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕಿಳಿದಿದ್ದಾರೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೂರುವರೆ ಲಕ್ಷಕ್ಕೂ ಹೆಚ್ಚು ಮತ ಗಳಿಸಿದ್ದರು. ಇಡೀ ರಾಜ್ಯದಲ್ಲಿ ತಮ್ಮ ಮೈತ್ರಿಕೂಟದ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸುತ್ತಿರುವಾಗ ಚಂದ್ರಕಾಂತ್ ಮಾತ್ರ ನಿರಾಸೆ ಅನುಭವಿಸಿದ್ದಾರೆ. ಚಂದ್ರಕಾಂತ್ ಈ ಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಾರು ಒಂದು ಮುಕ್ಕಾಲು ಲಕ್ಷಗಳ ಭಾರೀ ಅಂತರದಿಂದ ಜಯಿಸಿದ್ದರು ಎಂಬುದು ಇಲ್ಲಿ ಗಮನಾರ್ಹ.

ಔರಂಗಾಬಾದ್ ನಲ್ಲಿ ಎ ಐ ಎಂ ಐ ಎಂ ಪಕ್ಷ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಗಾಧಿ ( ವಿಬಿಎ ) ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಈ ಮೈತ್ರಿ ಯಶಸ್ವಿಯಾಗಿದ್ದು ಸತತ ನಾಲ್ಕು ಬಾರಿ ಇಲ್ಲಿಂದ ಗೆದ್ದಿದ್ದ ಶಿವಸೇನೆ ಅಭ್ಯರ್ಥಿ ಈ ಬಾರಿ ಸೋಲುಂಡಿದ್ದಾರೆ. ಈ ಮೂಲಕ 1998 ಬಳಿಕ ಶಿವಸೇನೆಯ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ಅದರ ಕೈತಪ್ಪಿದೆ. ದಲಿತ ಮುಸ್ಲಿಂ ಮೈತ್ರಿ ಇಲ್ಲಿ ಗೆದ್ದಿದೆ.

(ಪ್ರಕಾಶ್ ಅಂಬೇಡ್ಕರ್)

ವಂಚಿತ್ ಬಹುಜನ ಅಗಾಧಿ ಹಾಗು ಅಸದುದ್ದೀನ್ ಅವರ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಈ ಬಾರಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಅದು ಗೆದ್ದಿರುವುದು ಔರಂಗಾಬಾದ್ ನಲ್ಲಿ ಮಾತ್ರ. ವಿಬಿಎ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಕಾಂಗ್ರೆಸ್ ಅದನ್ನು ನಿರ್ಲಕ್ಷಿಸಿ ಮಹಾರಾಷ್ಟ್ರದಲ್ಲಿ ದುಬಾರಿ ಬೆಲೆಯನ್ನೇ ತೆತ್ತಿದೆ. ನಾಂದೇಡ್ , ಉಸ್ಮಾನಾಬಾದ್ , ಪರ್ಬಾನಿ , ಗಡ್ ಚಿರೋಲಿ , ಅಕೋಲ, ಸೋಲಾಪುರ್ ಗಳಲ್ಲಿ ಕಾಂಗ್ರೆಸ್ ಸೋಲಲು ವಿಬಿಎ ಗಳಿಸಿದ ಮತಗಳೇ  ಕಾರಣವಾಗಿವೆ . ಅದರಲ್ಲೂ ನಾಂದೇಡ್ ನಂತಹ ಕಾಂಗ್ರೆಸ್ ಭದ್ರಕೋಟೆಯಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಸೋತಿದ್ದಾರೆ. ಅಲ್ಲಿ ಅಶೋಕ್ ಚವಾಣ್ ಬಿಜೆಪಿ ಎದುರು ಸುಮಾರು ನಲ್ವತ್ತು ಸಾವಿರ ಮತಗಳಿಂದ ಸೋತಿದ್ದರೆ, ವಿಬಿಎ ಅಭ್ಯರ್ಥಿ ಸುಮಾರು ಒಂದು ಮುಕ್ಕಾಲು ಲಕ್ಷ ಮತ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News