ಮಧ್ಯಪ್ರಾಚ್ಯಕ್ಕೆ ಹೆಚ್ಚು ಸೈನಿಕರ ರವಾನೆ: ಅಮೆರಿಕ ರಕ್ಷಣಾ ಕಾರ್ಯದರ್ಶಿ ಇಂಗಿತ

Update: 2019-05-24 17:23 GMT

ವಾಶಿಂಗ್ಟನ್, ಮೇ 24: ಇರಾನ್ ಜೊತೆಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಸೈನಿಕರನ್ನು ನಿಯೋಜಿಸುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಅಮೆರಿಕ ಗುರುವಾರ ಹೇಳಿದೆ. ಪ್ರಕ್ಷುಬ್ಧ ಪ್ರದೇಶದಲ್ಲಿ ಇರುವ ತನ್ನ ಪಡೆಗಳ ರಕ್ಷಣೆಯನ್ನು ಹೆಚ್ಚಿಸುವ ವಿಧಾನಗಳ ಬಗ್ಗೆ ತಾನು ಗಮನಹರಿಸಬೇಕಾಗಿದೆ ಎಂದು ಅದು ಹೇಳಿದೆ.

ಆದರೆ, ಅಮೆರಿಕವು ಇನ್ನೂ 10,000 ಸೈನಿಕರನ್ನು ಮಧ್ಯಪ್ರಾಚ್ಯದಲ್ಲಿ ನಿಯೋಜಿಸಲು ಉದ್ದೇಶಿಸಿದೆ ಎಂಬ ವರದಿಗಳನ್ನು ಅಮೆರಿಕದ ಉಸ್ತುವಾರಿ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನಹನ್ ನಿರಾಕರಿಸಿದರು.

‘‘ಮಧ್ಯಪ್ರಾಚ್ಯದಲ್ಲಿರುವ ನಮ್ಮ ಸೈನಿಕರ ರಕ್ಷಣೆಯನ್ನು ಹೆಚ್ಚಿಸಲು ನಾವು ಏನಾದರೂ ಮಾಡಬಹುದೆ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾನಹನ್ ನುಡಿದರು.

‘‘ಅಲ್ಲಿಗೆ ಹೆಚ್ಚು ಸೈನಿಕರನ್ನು ಕಳುಹಿಸುವುದು ಒಂದು ಆಯ್ಕೆಯಾಗಬಹುದಾಗಿದೆ’’ ಎಂದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶದಂತೆ, ಮಧ್ಯಪ್ರಾಚ್ಯ ಕೊಲ್ಲಿಯಲ್ಲಿ ಈಗಾಗಲೇ ವಿಮಾನವಾಹಕ ನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್, ಉಭಯಚರ ಯುದ್ಧನೌಕೆ, ಬಿ-52 ಬಾಂಬರ್ ವಿಮಾನಗಳು ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ.

ಮಧ್ಯಪ್ರಾಚ್ಯದಲ್ಲಿನ ತನ್ನ ಹಿತಾಸಕ್ತಿಗಳು ಅಥವಾ ಮಿತ್ರರಾಷ್ಟ್ರಗಳ ಮೇಲೆ ಇರಾನ್‌ನಿಂದ ದಾಳಿ ನಡೆಯುವ ಗರಿಷ್ಠ ಬೆದರಿಕೆಯನ್ನು ಸೂಚಿಸುವ ಗುಪ್ತಚರ ಎಚ್ಚರಿಕೆಗಳ ಹಿನ್ನೆಲೆಯಲ್ಲಿ ಕೊಲ್ಲಿ ವಲಯದಲ್ಲಿ ಯುದ್ಧನೌಕೆಗಳು ಮತ್ತು ಯುದ್ಧ ವಿಮಾನಗಳನ್ನು ನಿಯೋಜಿಸಲಾಗಿದೆ ಎಂದು ಅಮೆರಿಕ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News