ಪಶ್ಚಿಮ ಉತ್ತರ ಪ್ರದೇಶ: ಠೇವಣಿ ಕಳೆದುಕೊಂಡ ಕಾಂಗ್ರೆಸ್ ಅಭ್ಯರ್ಥಿಗಳೆಷ್ಟು ಗೊತ್ತೇ ?

Update: 2019-05-25 04:03 GMT

ಆಗ್ರಾ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಉಸ್ತುವಾರಿ ವಹಿಸಿದ್ದ ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಕಣಕ್ಕೆ ಇಳಿಸಿದ್ದ 22 ಅಭ್ಯರ್ಥಿಗಳ ಪೈಕಿ ಇಡಿಗಂಟು ದಕ್ಕಿದ್ದು ಒಬ್ಬರಿಗೆ ಮಾತ್ರ ! ಉಳಿದ 21 ಮಂದಿ ಕಾಂಗ್ರೆಸ್ ಹುರಿಯಾಳುಗಳು ಠೇವಣಿ ಕಳೆದುಕೊಂಡಿದ್ದಾರೆ. 

ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್, ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಕೂಡಾ ಠೇವಣಿ ಕಳೆದುಕೊಂಡವರ ಪಟ್ಟಿಯಲ್ಲಿದ್ದಾರೆ.

ಕಳಪೆ ಸಾಧನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಾಜ್ ಬಬ್ಬರ್ ಈಗಾಗಲೇ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ವಕ್ತಾರ ರಾಜೀವ್ ಬಕ್ಷಿ ಸ್ಪಷ್ಟಪಡಿಸಿದ್ದಾರೆ. ಸುಲ್ತಾನ್‌ಪುರದಲ್ಲಿ ಮೇನಕಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಇಮ್ರಾನ್ ಮಸೂದ್ ಮಾತ್ರ ಶೇಕಡ 16.81 ಮತಗಳನ್ನು ಪಡೆದು ಠೇವಣಿ ಉಳಿಸಿಕೊಂಡಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಮುಜಾಫರ್‌ನಗರ, ಬಾಗ್‌ಪತ್, ಮೈನ್‌ಪುರಿ ಮತ್ತು ಫಿರೋಝಾಬಾದ್ ಕ್ಷೇತ್ರಗಳಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟಕ್ಕೆ ಪರೋಕ್ಷ ಬೆಂಬಲ ಘೋಷಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಫಿಲಿಬಿಟ್ ಮತ್ತು ಎಥ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಕೂಡಾ ಠೇವಣಿ ಕಳೆದುಕೊಂಡಿದ್ದಾರೆ.

ಫತೇಪುರ ಸಿಕ್ರಿ ಕ್ಷೇತ್ರದಲ್ಲಿ 1.72 ಲಕ್ಷ ಮತಗಳನ್ನು ಪಡೆದ ರಾಜ್ ಬಬ್ಬರ್ ಒಟ್ಟು ಚಲಾವಣೆಯಾದ ಮತಗಳ ಪೈಕಿ ಶೇಕಡ 16.56 ಮತಗಳನ್ನಷ್ಟೇ ಪಡೆದಿದ್ದಾರೆ. ಠೇವಣಿ ಉಳಿಸಿಕೊಳ್ಳಲು ಶೇಕಡ 16.66 ಮತಗಳು ಸಿಗಬೇಕಿತ್ತು. ಸಲ್ಮಾನ್ ಖುರ್ಷಿದ್ ಗಳಿಸಿದ ಮತಗಳ ಪ್ರಮಾಣ ಕೇವಲ ಶೇ. 5.51.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News