​ಎಡಪಕ್ಷಗಳಿಗೆ ತಮಿಳುನಾಡು ಇದೀಗ ಹೊಸ ಕೇರಳ

Update: 2019-05-25 04:13 GMT

ಚೆನ್ನೈ: 17ನೇ ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷಗಳಿಗೆ ಆಘಾತಕಾರಿ ಸೋಲು ಉಂಟಾಗಿದ್ದರೂ, ದಟ್ಟ ಕಾರ್ಮೋಡದ ನಡುವೆ ತಮಿಳುನಾಡು ಹೊಸ ಆಶಾಕಿರಣವಾಗಿ ಹೊರಹೊಮ್ಮಿದೆ.

ಹೊಸ ಲೋಕಸಭೆಯಲ್ಲಿ ಎಡಪಕ್ಷಗಳ ಐದು ಮಂದಿ ಸದಸ್ಯರು ಮಾತ್ರ ಇದ್ದು, ಸಿಪಿಎಂನ ಮೂರು ಹಾಗೂ ಸಿಪಿಐನ ಇಬ್ಬರು ಸಂಸದರಿದ್ದಾರೆ.

ಈ ಪೈಕಿ ನಾಲ್ಕು ಮಂದಿ ತಮಿಳುನಾಡಿನಿಂದ ಆಯ್ಕೆಯಾಗಿದ್ದರೆ, ಕೇರಳದ ಎ.ಎಂ.ಆರೀಫ್, ರಾಜ್ಯದಲ್ಲಿ ಯುಡಿಎಫ್‌ನ ಕ್ಲೀನ್‌ಸ್ವೀಪ್ ತಪ್ಪಿಸಿದ ಏಕೈಕ ಎಲ್‌ಡಿಎಫ್ ಸಂಸದ. ಸಿಪಿಎಂನ ಆರೀಫ್ ಅಳಪ್ಪುರ ಕ್ಷೇತ್ರದಿಂದ ಕೇವಲ 10 ಸಾವಿರ ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕೂಡಾ ಕಾಂಗ್ರೆಸ್ ಅಭ್ಯರ್ಥಿ ಶನಿಮೋಲ್ ಉಸ್ಮಾನ್ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮುನ್ನಡೆ ಹೊಂದಿದ್ದಾರೆ. ಕೇವಲ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಆರೀಫ್ ಗೆಲುವಿನ ದಡ ಸೇರುವುದು ಸಾಧ್ಯವಾಯಿತು.

ಹಾಗೆಂದ ಮಾತ್ರಕ್ಕೆ ತಮಿಳುನಾಡಿನಲ್ಲಿ ಎಡಪಕ್ಷಗಳಿಗೆ ಗುಪ್ತ ಬೆಂಬಲ ದಿಢೀರನೇ ಸಿಕ್ಕಿದೆ ಎಂಬ ಅರ್ಥವಲ್ಲ; ಅಥವಾ ಅಧಿಕಾರ ವಿರೋಧಿ ಅಲೆ ಮತ್ತು ಶಬರಿಮಲೆ ಹೋರಾಟದ ಚಳವಳಿಯ ಕಾರಣದಿಂದ ಸೋಲು ಅನುಭವಿಸಿದ ಕೇರಳದಲ್ಲಿ ಎಡಪಕ್ಷಗಳು ನಾಮಾವಶೇಷವಾಗಿವೆ ಎಂಬ ಅರ್ಥವಲ್ಲ. ತಮಿಳುನಾಡಿನಲ್ಲಿ ಡಿಎಂಕೆ, ಎಡಪಕ್ಷಗಳಿಗೆ ಸೀಟು ಬಿಟ್ಟುಕೊಟ್ಟದ್ದನ್ನು ವಶಪಡಿಸಿಕೊಳ್ಳುವಲ್ಲಿ ಎಡಪಕ್ಷಗಳು ಯಶಸ್ವಿಯಾಗಿವೆ.

ತಮಿಳುನಾಡಿನಲ್ಲಿ ಪಕ್ಷ ದಿಢೀರ್ ಲಾಭ ಗಳಿಸಿರುವುದು ಅಚ್ಚರಿಯೇನೂ ಅಲ್ಲ ಎಂದು ಕೇರಳದ ಮಾಜಿ ಸಚಿವ ಹಾಗೂ ಸಿಪಿಎಂ ಪಾಲಿಟ್‌ ಬ್ಯೂರೊ ಸದಸ್ಯ ಎಂ.ಎ.ಬೇಬಿ ಹೇಳಿದ್ದಾರೆ. ತಮಿಳುನಾಡು ಪ್ರಗತಿಪರ ಹಾಗೂ ಜಾತ್ಯತೀತ ರಾಜ್ಯ. ಜೀವಾ, ಎಸ್.ಪಿ.ಚಿಥಾನ್ ಅವರಂಥ ಮೇರು ನಾಯಕರು ರಾಜ್ಯದಿಂದ ಹೊರಹೊಮ್ಮಿದವರು. ಪೆರಿಯಾರ್ ಚಿಂತನೆಗಳನ್ನು ಜನ ಅನುಸರಿಸುವವರೆಗೂ ಕಮ್ಯುನಿಸಂ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಡಿಎಂಕೆ ಎಡಪಕ್ಷಗಳನ್ನು ಗೌರವಿಸಿ, ಮೈತ್ರಿಗೆ ಕಾರಣವಾಯಿತು. ಆರಂಭದಿಂದಲೇ ಅದು ಗೆಲುವಿನ ಕೂಟವಾಯಿತು ಎಂದು ತಮಿಳುನಾಡು ಸಿಪಿಎಂ ನಾಯಕ ಜಿ.ರಾಮಕೃಷ್ಣನ್ ಹೇಳಿದ್ದಾರೆ. ಆದರೆ ಯಶಸ್ಸಿಗೆ ದ್ರಾವಿಡ ಪಕ್ಷಗಳನ್ನು ಅವಲಂಬಿಸಬೇಕಾದ್ದು ಅನಿವಾರ್ಯ ಎನ್ನುವುದು ಅವರ ಅಭಿಪ್ರಾಯ. 2014ರ ಚುನಾವಣೆಯಲ್ಲಿ ಡಿಎಂಕೆ ಅಥವಾ ಎಐಎಡಿಎಂ ಹೀಗೆ ಯಾವ ಪ್ರಾದೇಶಿಕ ಪಕ್ಷದ ಜತೆಗೂ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಸ್ಪರ್ಧಿಸಿದ್ದರಿಂದ ಎಡಪಕ್ಷಗಳ ಸಾಧನೆ ಇಲ್ಲಿ ಶೂನ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News