ನಿರ್ಜಲೀಕರಣದ ಸಮಸ್ಯೆಗೆ ಸರಳ ಮನೆಮದ್ದುಗಳಿವು…

Update: 2019-05-25 14:10 GMT

ಶರೀರವು ದ್ರವಗಳನ್ನು ಹಿಡಿದಿಟ್ಟುಕೊಳ್ಳಲು ವಿಫಲವಾದಾಗ ಮತ್ತು ಅದರ ಪರಿಣಾಮವಾಗಿ ಇಲೆಕ್ಟ್ರೋಲೈಟ್ ಅಥವಾ ವಿದ್ಯುದ್ವಿಚ್ಛೇದ್ಯಗಳು ಶರೀರದ ಸೂಕ್ತ ಕಾರ್ಯ ನಿರ್ವಹಣೆಗೆ ವ್ಯತ್ಯಯವನ್ನುಂಟು ಮಾಡಿದಾಗ ನಿರ್ಜಲೀಕರಣವುಂಟಾ ಗುತ್ತದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರನ್ನೂ ನಿರ್ಜಲೀಕರಣವು ಬಾಧಿಸುತ್ತದೆ. ಬೇಸಿಗೆಯಲ್ಲಿ ಹೊರಗಿನ ಬಿಸಿ ವಾತಾವರಣದಿಂದಾಗಿ ನಿರ್ಜಲೀಕರಣವು ಸಾಮಾನ್ಯವಾಗಿದ್ದರೂ ಅದು ವರ್ಷದ ಯಾವುದೇ ಸಮಯ ದಲ್ಲಿಯೂ ಉಂಟಾಗಬಹುದು. ವಾಂತಿ,ಜ್ವರ,ಅತಿಯಾಗಿ ಬೆವರುವಿಕೆ, ಮತ್ತು ಮಧುಮೇಹದಂತಹ ದೀರ್ಘಕಾಲಿಕ ರೋಗಗಳು ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ.

ಬಾಯಿ ಒಣಗುವುದು,ಅತಿಯಾದ ಬಾಯಾರಿಕೆ,ದಣಿವು,ಗಾಢವರ್ಣದ ಮೂತ್ರ ಮತ್ತು ಮೂತ್ರವಿಸರ್ಜನೆಯ ಕಡಿಮೆ ಆವರ್ತನ ಇತ್ಯಾದಿಗಳು ನಿರ್ಜಲೀಕರಣದ ಲಕ್ಷಣಗಳಾಗಿವೆ. ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅದು ತಲೆನೋವು,ಕೆಟ್ಟ ಉಸಿರು,ಒಣಚರ್ಮ ಮತ್ತು ಅಪರೂಪದ ಪ್ರಕರಣಗಳಲ್ಲಿ ವೈದ್ಯಕೀಯ ತುರ್ತು ಸ್ಥಿತಿಗೂ ಕಾರಣ ವಾಗುತ್ತದೆ. ಹೀಗಾಗಿ ನಿರ್ಜಲೀಕರಣವುಂಟಾದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಇದರ ಜೊತೆಗೆ ಶರೀರದಲ್ಲಿ ಖನಿಜಗಳು ಮತ್ತು ದ್ರವ ಸಮತೋಲನವನ್ನು ಕಾಯ್ದುಕೊಳ್ಳಲು ಕೆಲವು ಸರಳ ಮನೆಮದ್ದುಗಳನ್ನೂ ಪ್ರಯತ್ನಿಸಬಹುದು.

ಯಥೇಚ್ಛ ನೀರು ಮತ್ತು ಸಮೃದ್ಧ ಪೋಷಕಾಂಶಗಳ ಸೇವನೆ ಸೇರಿದಂತೆ ಆಹಾರದಲ್ಲಿ ಕೆಲವು ಸರಳ ಬದಲಾವಣೆಗಳ ಮೂಲಕ ನಿರ್ಜಲೀಕರಣವನ್ನು ನಿಭಾಯಿಸಬಹುದಾಗಿದೆ. ಅಂತಹ ಕೆಲವು ಆಹಾರಗಳು ಇಲ್ಲಿವೆ...

ಬಾಳೆಹಣ್ಣು

ಬಾಳೆಹಣ್ಣು ಸುಮಾರು ಶೇ.70ರಿಂದ ಶೇ.79ರಷ್ಟು ನೀರನ್ನು ಒಳಗೊಂಡಿರುತ್ತದೆ. ನಿರ್ಜಲೀಕರಣವು ಶರೀರದಲ್ಲಿ ಪೊಟ್ಯಾಷಿಯಮ್‌ನಂತಹ ಖನಿಜಗಳ ಕೊರತೆಗೂ ಕಾರಣವಾಗುತ್ತದೆ. ಹೀಗಾಗಿ ನೀರು ಮತ್ತು ಪೊಟ್ಯಾಷಿಯಂ ಎರಡೂ ಸಮೃದ್ಧವಾಗಿರುವ ಬಾಳೆಹಣ್ಣು ಶರೀರದಲ್ಲಿ ಪೊಟ್ಯಾಷಿಯಂ ಮಟ್ಟವನ್ನು ಮರುಭರ್ತಿ ಮಾಡುವ ಜೊತೆಗೆ ನಿರ್ಜಲೀಕರಣವನ್ನೂ ತಡೆಯುತ್ತದೆ.

ಬಾರ್ಲಿ ನೀರು

ಬಾರ್ಲಿ ನೀರನ್ನು ಬೇಸಿಗೆಯ ದಿನಗಳಲ್ಲಿ ಆರೋಗ್ಯಕರ ಪಾನೀಯವೆಂದು ಪರಿಗಣಿಸಲಾಗಿದೆ. ಬಿಸಲಿನ ಝಳವನ್ನು ಎದುರಿಸಲು ನೆರವಾಗುವ ಜೊತೆಗೆ ಶರೀರದಲ್ಲಿ ದ್ರವ ಮತ್ತು ವಿದ್ಯುದ್ವಿಚ್ಛೇದ್ಯಗಳ ಸಮತೋಲನವನ್ನು ಕಾಯ್ದುಕೊಳ್ಳಲೂ ಅದು ನೆರವಾಗುತ್ತದೆ. ಬಾರ್ಲಿಯಲ್ಲಿ ಉತ್ಕರ್ಷಣ ನಿರೋಧಕಗಳು,ವಿಟಾಮಿನ್‌ಗಳು ಮತ್ತು ಖನಿಜಗಳಿದ್ದು,ಇವು ಬಾರ್ಲಿ ನೀರನ್ನು ಸೇವಿಸಿದಾಗ ಶರೀರದಲ್ಲಿ ಖನಿಜಗಳು ಮತ್ತು ನೀರನ್ನು ಮರುಭರ್ತಿ ಮಾಡಲು ನೆರವಾಗುತ್ತವೆ.

ಮಜ್ಜಿಗೆ

ಮಜ್ಜಿಗೆಯಲ್ಲಿ ಮ್ಯಾಗ್ನೀಷಿಯಮ್‌ನಂತಹ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿದ್ದು,ಯಥೇಚ್ಛ ನೀರನ್ನು ಒಳಗೊಂಡಿರುತ್ತದೆ. ಮಜ್ಜಿಗೆಯನ್ನು ಅರಗಿಸಿಕೊಳ್ಳಲು ಹೊಟ್ಟೆಗೂ ಸುಲಭವಾಗಿದ್ದು,ಜೊತೆಗೆ ನೈಸರ್ಗಿಕ ಪ್ರೊಬಯಾಟಿಕ್(ಉಪಯುಕ್ತ ಬ್ಯಾಕ್ಟೀರಿಯಾ)ನಂತೆಯೂ ಕೆಲಸ ಮಾಡುವ ಮೂಲಕ ನಿರ್ಜಲೀಕರಣಕ್ಕೆ ಕಾರಣವಾಗಬಹುದಾದ ಅತಿಸಾರ ಮತ್ತು ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ.

ಎಳನೀರು

ಅತಿಸಾರದಿಂದುಂಟಾಗುವ ನಿರ್ಜಲೀಕರಣಕ್ಕೆ ಎಳನೀರು ಸಾಂಪ್ರದಾಯಿಕ ಮನೆಮದ್ದುಗಳಲ್ಲಿ ಒಂದಾಗಿದೆ. ಅದು ಸಾಮಾನ್ಯ ಕರ್ಷಣ ಸ್ವರೂಪದ್ದಾಗಿದೆ,ಅಂದರೆ ಎಳನೀರಿನಲ್ಲಿಯ ವಿದ್ಯುದ್ವಿಚ್ಛೇದ್ಯಗಳ ಮಟ್ಟ ಮತ್ತು ಶರೀರದಲ್ಲಿಯ ವಿದ್ಯುದ್ವಿಚ್ಛೇದ್ಯಗಳ ಮಟ್ಟ ಒಂದೇ ಆಗಿದೆ. ಹೀಗಾಗಿ ಶರೀರದಲ್ಲಿ ವಿದ್ಯುದ್ವಿಚ್ಛೇದ್ಯಗಳ ಮತ್ತು ನೀರಿನ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಅದರಲ್ಲಿ ಕ್ಲೋರೈಡ್ ಮತ್ತು ಸೋಡಿಯಂ ಜೊತೆಗೆ ಪೊಟ್ಯಾಷಿಯಂ ಮತ್ತು ಗ್ಲುಕೋಸ್ ಸಾಕಷ್ಟು ಪ್ರಮಾಣದಲ್ಲಿರುವುದರಿಂದ ಅದು ನಿರ್ಜಲೀಕರಣ ಮತ್ತು ಅತಿಸಾರ ಸಂದರ್ಭಗಳಲ್ಲಿ ಪರಿಪೂರ್ಣ ಅರೋಗ್ಯಯುತ ಪಾನೀಯವಾಗಿದೆ.

ಲಿಂಬು ಶರಬತ್

ನಿಂಬು ಪಾನಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಲಿಂಬು ಶರಬತ್ ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ನಮ್ಮನ್ನು ತಾಜಾ ಆಗಿಸುವ ಪಾನೀಯವಾಗಿದೆ. ಅದು ನೀರಿನ ಸೇವನೆಯನ್ನು ಹೆಚ್ಚಿಸುವ ಜೊತೆಗೆ ಶರೀರದಲ್ಲಿ ನಿರ್ಜಲೀಕರಣವುಂಟಾಗದಂತೆ ತಡೆಯುತ್ತದೆ. ಉಪ್ಪು ಮತ್ತು ಸಕ್ಕರೆಯನ್ನು ಸೇರಿಸುವುದರಿಂದ ಶರೀರದಲ್ಲಿ ನಷ್ಟವಾಗಿರುವ ಲವಣಗಳ ಮರುಭರ್ತಿಯ ಜೊತೆಗೆ ವಿಟಾಮಿನ್‌ಗಳು ಮತ್ತು ಖನಿಜಗಳ ಮಟ್ಟವನ್ನೂ ಹೆಚ್ಚಿಸುತ್ತದೆ.

ಕಿತ್ತಳೆ ರಸ

ಪೋಷಕಾಂಶಗಳು ಮತ್ತು ನೀರನ್ನು ಒಳಗೊಂಡಿರುವ ಕಿತ್ತಳೆ ನಿರ್ಜಲೀಕರಣ ಚಿಕಿತ್ಸೆಗೆ ಮತ್ತು ಅದನ್ನು ತಡೆಯಲು ಪರಿಪೂರ್ಣ ಮನೆಮದ್ದಾಗಿದೆ. ಅದರಲ್ಲಿರುವ ವಿಟಾಮಿನ್ ಸಿ ವಿಷಯಕ್ತ ವಸ್ತುಗಳನ್ನು ಶರೀರದಿಂದ ಹೊರಕ್ಕೆ ಹಾಕುತ್ತದೆ ಮತ್ತು ಸೋಡಿಯಂ ಹಾಗೂ ಪೊಟ್ಯಾಷಿಯಮ್‌ನಂತಹ ವಿದ್ಯುದ್ವಿಚ್ಛೇದ್ಯಗಳು ಶರೀರದಲ್ಲಿ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News