ಪಕ್ಷ ವಿರೋಧಿ ಹೇಳಿಕೆ: ಮುಕುಲ್ ರಾಯ್ ಪುತ್ರನ ಅಮಾನತುಗೊಳಿಸಿದ ಟಿಎಂಸಿ

Update: 2019-05-25 05:26 GMT

ಕೋಲ್ಕತಾ, ಮೇ 25: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮಬಂಗಾಳದಲ್ಲಿ 18 ಕ್ಷೇತ್ರಗಳಲ್ಲಿ ಜಯ ಸಾಧಿಸಲು ರಣತಂತ್ರ ರೂಪಿಸಿದ್ದ, ಒಂದು ಕಾಲದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಬಲಗೈ ಬಂಟನಾಗಿದ್ದ ಮುಕುಲ್ ರಾಯ್ ಅವರ ಪುತ್ರ, ಟಿಎಂಸಿ ಶಾಸಕ ಸುಬ್ರಾಂಶು ರಾಯ್ ಅವರನ್ನು ಪಕ್ಷ ವಿರೋಧಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿದೆ.

 ಪ್ರಧಾನಿ ನರೇಂದ್ರ ಮೋದಿ ಪಶ್ಚಿಮಬಂಗಾಳದಲ್ಲಿ ನಡೆಸಿದ ಚುನಾವಣಾ ಪ್ರಚಾರದ ವೇಳೆ ಟಿಎಂಸಿಯ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು. ಆ ಸಂಖ್ಯೆ ಈಗ ಮತ್ತಷ್ಟು ಹೆಚ್ಚಾಗಿದೆ ಎಂದು ಬಿಜೆಪಿ ನಾಯಕರು ಹೇಳತೊಡಗಿದ್ದಾರೆ. ಇದರಿಂದ ಭೀತಿಗೊಳಗಾಗಿರುವ ಟಿಎಂಸಿ ಮೊದಲ ಹೆಜ್ಜೆಯಾಗಿ ರಾಯ್ ಅವರನ್ನು ಪಕ್ಷದಿಂದ ಹೊರ ಹಾಕಿದೆ.

 ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಭಾಂಶು ರಾಯ್, ‘‘ನನ್ನ ತಂದೆಯ ಬಗ್ಗೆ ಹೆಮ್ಮೆಯಾಗುತ್ತಿದೆ. ಅವರು ತೃಣಮೂಲ ಕಾಂಗ್ರೆಸ್ ತೊರೆದಾಗ ಮುಕುಲ್ ರಾಯ್‌ರಂತಹ ಲಕ್ಷಾಂತರ ಜನರನ್ನು ಸೃಷ್ಟಿಸಲಾಗುವುದು ಎಂದು ಹಲವು ಹೇಳಿದ್ದರು. ಅವರು ತನ್ನ ಸ್ವಂತಶ್ರಮದಿಂದ ಟಿಎಂಸಿ ಕಟ್ಟಿದ್ದರು. ಆದರೆ ಅವರನ್ನು ಪಕ್ಷದಿಂದ ಹೊರ ಹಾಕಲಾಗಿತ್ತು. ಇದೀಗ ಅವರು ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿ ಚಾಣಕ್ಯನಾಗಿ ಹೊರಹೊಮ್ಮಿದ್ದಾರೆ. ಈಗ ನನ್ನ ಮುಂದಿರುವ ಆಯ್ಕೆ ಬಿಜೆಪಿ’’ ಎಂದು ಹೇಳಿದ್ದರು.

‘‘ಮಮತಾ ಬ್ಯಾನರ್ಜಿಯ ಸೂಚನೆಯ ಬಳಿಕ ಶಿಸ್ತು ಸಮಿತಿ ಸಭೆ ಸೇರಿತ್ತು. ಪಕ್ಷದ ವಿರುದ್ಧ ಹೇಳಿಕೆ ನೀಡಿರುವ ಸುಬ್ರಾಂಶು ರಾಯ್ ಅವರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲು ಪಕ್ಷದ ನಿರ್ಧರಿಸಿದೆ’’ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News