ಇಂದು ಭಾರತಕ್ಕೆ ನ್ಯೂಝಿಲ್ಯಾಂಡ್ ಎದುರಾಳಿ

Update: 2019-05-25 07:01 GMT

ಲಂಡನ್, ಮೇ 24: ಪ್ರಶಸ್ತಿ ಜಯಿಸುವ ನೆಚ್ಚಿನ ತಂಡವಾಗಿ ಹೊರಹೊಮ್ಮಿರುವ ಭಾರತ ಶನಿವಾರ ನಡೆಯಲಿರುವ ವಿಶ್ವಕಪ್‌ನ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ.

ಆದಾಗ್ಯೂ ಭಾರತ ನಾಲ್ಕನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕೆಂಬ ಗೊಂದಲಕ್ಕೆ ಇನ್ನೂ ತೆರೆ ಎಳೆದಿಲ್ಲ. ಕೆ.ಎಲ್.ರಾಹುಲ್ ಹಾಗೂ ವಿಜಯ ಶಂಕರ್ ನಾಲ್ಕನೇ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿದ್ದಾರೆ.

ಈ ಬಾರಿಯ ವಿಶ್ವಕಪ್ ಮಾದರಿ ಅತ್ಯಂತ ಸವಾಲಿನಿಂದ ಕೂಡಿದ್ದು, ವಿರಾಟ್ ಕೊಹ್ಲಿ ಪಡೆ ಮೂರನೇ ಬಾರಿ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವ ವಿಶ್ವಾಸದೊಂದಿಗೆ ಆಂಗ್ಲರ ನಾಡಿಗೆ ಬಂದಿದೆ. ಭಾರತ ಈ ಹಿಂದೆ 1983 ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಜಯಿಸಿತ್ತು.

ಕೊಹ್ಲಿ ಪಡೆ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ಬಳಿಕ 2ನೇ ಸ್ಥಾನದಲ್ಲಿದೆ. ಆತಿಥೇಯ ಇಂಗ್ಲೆಂಡ್ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯವಲ್ಲದೆ ಭಾರತ ಕೂಡ ವಿಶ್ವಕಪ್ ಜಯಿಸುವ ಸ್ಪರ್ಧೆಯಲ್ಲಿದೆ. ಭಾರತ ಜೂ.5 ರಂದು ಸೌಥಾಂಪ್ಟನ್‌ನಲ್ಲಿ ದಕ್ಷಿಣ ಆಫ್ರಿಕವನ್ನು ಎದುರಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್, ವಿಶ್ವದ ನಂ.ಏಕದಿನ ದಾಂಡಿಗ ಕೊಹ್ಲಿ ಅಗ್ರ-3ರಲ್ಲಿ ಭಾರತಕ್ಕೆ ಬಲ ಒದಗಿಸಲಿದ್ದಾರೆ. ಹಿರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ಆಲ್‌ರೌಂಡರ್ ಕೇದಾರ್ ಜಾಧವ್ ಹಾಗೂ ಬಿಗ್ ಹಿಟ್ಟರ್ ಹಾರ್ದಿಕ್ ಪಾಂಡ್ಯ ಭಾರತದ ಬ್ಯಾಟಿಂಗ್ ಸರದಿಯಲ್ಲಿದ್ದಾರೆ. ವಿಶ್ವದ ನಂ.1 ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಭಾರತದ ವೇಗದ ವಿಭಾಗವನ್ನು ಮುನ್ನಡೆಸಲಿದ್ದು, ಮುಹಮ್ಮದ್ ಶಮಿ, ಭುವನೇಶ್ವರ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಅವರು ಬುಮ್ರಾಗೆ ಸಾಥ್ ನೀಡಲಿದ್ದಾರೆ. ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಭಾರತದ ದಾಳಿಗೆ ವೈವಿದ್ಯ ಒದಗಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News