ಮಿಂಚಿ ಮರೆಯಾದ ಮೋಹನ್

Update: 2019-05-25 19:10 GMT

ಮೋಹನ್ ಅವರು ಯಶಸ್ಸಿನ ಅಲೆಯ ಮೇಲೆ ತೇಲುತ್ತಿದ್ದಾಗ ತಮಿಳುನಾಡಿನ ಇಬ್ಬರು ಮಹಾನ್ ತಾರೆಗಳಾದ ರಜನಿ ಮತ್ತು ಕಮಲ್ ಸಹ ಕ್ರಿಯಾಶೀಲರಾಗಿದ್ದರು. ಅವರಿಗೆ ತಮ್ಮದೇ ಆದ ಅಭಿಮಾನಿಗಳ ಗುಂಪು, ವೈಯಕ್ತಿಕ ವರ್ಚಸ್ಸಿತ್ತು. ಆದರೆ ಇದಾವುದರ ನೆರವಿಲ್ಲದೆಯೇ ಹತ್ತು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ 80 ಚಿತ್ರಗಳಲ್ಲಿ ನಟಿಸಿ, ಆ ಸೂಪರ್‌ಸ್ಟಾರ್‌ಗಳ್ಯಾರೂ ನೀಡದಷ್ಟು ಅವಧಿಯಲ್ಲಿ ಹಿಟ್‌ಚಿತ್ರಗಳನ್ನು ನೀಡಿದ ಕನ್ನಡದ ಕೋಕಿಲಾ ಮೋಹನ್, ಎಂಬತ್ತರ ದಶಕದ ಸುಮಧುರ ಹಾಡುಗಳನ್ನು, ನವಿರು ಭಾವದ ಪ್ರೀತಿಯ ಸೆಳೆತವನ್ನು ಪ್ರೇಕ್ಷಕರ ಎದೆಗೆ ದಾಟಿಸಿದ ಮಾಯಕಾರ!

ಚಲನಚಿತ್ರರಂಗದಲ್ಲಿನ ಯಶಸ್ಸು ಅದೃಷ್ಟದಾಟ ಎಂದು ಹಲವರು ನಂಬುತ್ತಾರೆ. ಯಶಸ್ಸಿಗೆ ಸರಿಯಾದ ಕಾರಣಗಳನ್ನು ತರ್ಕಿಸಲಾಗದ ಕಾರಣ ಈ ನಂಬಿಕೆ ಘನವಾಗಿದೆ. ಅಲ್ಲದೆ ಅದಕ್ಕೆ ಸಾಕಷ್ಟು ದೃಷ್ಟಾಂತಗಳು ದೊರೆಯುವುದರಿಂದ ಈ ನಂಬಿಕೆಗೆ ಮತ್ತಷ್ಟು ಬಲ ಬಂದಿದೆ. ಇಲ್ಲದಿದ್ದರೆ ಸಾಧಾರಣ ನಟನಾದ ಹಿಂದಿಯ ರಾಜೇಂದ್ರ ಕುಮಾರ್ ಅವರು ‘ಜುಬಿಲಿ ಕುಮಾರ್’ ಆಗಲು ಹೇಗೆ ಸಾಧ್ಯ. ‘ಮಾಣುಸ್’ (ಮರಾಠಿ) ಮತ್ತು ‘ಆದ್ಮಿ’ (ಹಿಂದಿ) ಚಿತ್ರದ ಪಾತ್ರದಿಂದ ದಿನ ಬೆಳಗಾಗುವುದರೊಳಗೆ ತಾರೆಯಾದ ನಟಿ ಶಾಂತಾ ಹುಬ್ಳೀಕರ್ ಮೂರ್ನಾಲ್ಕು ವರ್ಷಗಳಲ್ಲಿ ಅಜ್ಞಾತಳಾಗಿದ್ದು ಹೇಗೆ?

ಇವೆಲ್ಲವೂ ಅದೃಷ್ಟದ ಲೀಲೆಯಲ್ಲದೆ ಮತ್ತೇನು? ಅಥವಾ ಅದಕ್ಕೂ ಮೀರಿದ ವಿದ್ಯಮಾನಗಳ ಪ್ರಭಾವವೇ? ಒಂದು ಕಾಲದಲ್ಲಿ ತಮಿಳು ಚಲನಚಿತ್ರರಂಗದ ಇಬ್ಬರು ಸೂಪರ್‌ಸ್ಟಾರ್‌ಗಳಿಗೆ ನಿದ್ದೆಗೆಡಿಸಿದ ನಟ ಮೋಹನ್ ಇದ್ದಕ್ಕಿದ್ದಂತೆ ಒಂದೇ ಬಾರಿಗೆ ಅದೃಶ್ಯವಾದದ್ದು ಹೇಗೆ?

ಹೌದು! ನಾನು ಹೇಳುತ್ತಿರುವುದು ಅದೇ ಮೋಹನ್! ಬೆಂಗಳೂರಿನ ವೇದಿಕೆಗಳಲ್ಲಿ ಮೈಕ್ ಹಿಡಿದು ನಟರ ಧ್ವನಿಗಳನ್ನು ಅನುಕರಿಸುತ್ತಾ ಚಪ್ಪಾಳೆ ಗಿಟ್ಟಿಸುತ್ತಿದ್ದ ‘ಮೈಕ್’ ಮೋಹನ್! ‘ಮಿಮಿಕ್ರಿ’ ಮೋಹನ್ ಎಂದೇ ಗೆಳೆಯರ ನಡುವೆ ಪರಿಚಿತರಾಗಿ, ಬಿ.ವಿ. ಕಾರಂತರ ಬೆನಕ ರಂಗತಂಡದಲ್ಲಿ ನಟನಾಗಿ, (‘ಸತ್ತವರ ನೆರಳು’ ನಾಟಕದ ಮೇಳದಲ್ಲಿ ಒಬ್ಬ ಪಾತ್ರಧಾರಿಯಾಗಿ ಸುಂದರರಾಜ್ ಜೊತೆ ಹಾಡುತ್ತಿದ್ದದ್ದು ಈಗಲೂ ನೆನಪಿದೆ) ಬಾಲು ಮಹೇಂದ್ರ ಅವರ ಚೊಚ್ಚಲ ಪ್ರಯತ್ನ ‘ಕೋಕಿಲಾ’ ಚಿತ್ರದಲ್ಲಿ ನಾಯಕನಟ ಕಮಲಹಾಸನ್ ಜೊತೆ ಉಡಾಫೆಯ ಗೆಳೆಯನ ಪಾತ್ರದಲ್ಲಿ ಮಿಂಚಿ ‘ಕೋಕಿಲಾ ಮೋಹನ್’ ಎಂದೇ ಪರಿಚಿತರಾದ ಅದೇ ಮೋಹನ್?

ನೋಡಲು ಬಡವರ ಕಮಲ್‌ಹಾಸನ್‌ನಂತಿದ್ದ (ನಂತರ ಹಾಗೆಯೇ ಸ್ವೀಕರಿಸಲ್ಪಟ್ಟ) ಮೋಹನ್ ಅವರ ಚಿತ್ರಯಾತ್ರೆ ಯಾವುದೇ ರೋಚಕ ಕತೆಯ ಚಿತ್ರಕ್ಕೂ ಕಡಿಮೆಯಲ್ಲ. ನೋಡುನೋಡುತ್ತಿದ್ದಂತೆ ಆಕಾಶವನ್ನು ವ್ಯಾಪಿಸುವ ಧೂಮಕೇತು ಮತ್ತು ಕ್ಷಣಮಾತ್ರ ಉರಿದು ಉದುರುವ ಉಲ್ಕೆಗಳ ಆಕಾಶದ ವಿದ್ಯಮಾನಕ್ಕೆ ಮಾತ್ರ ಅವರ ವೃತ್ತಿ ಬದುಕನ್ನು ಹೋಲಿಸಬಹುದು.

ಬಾಲು ಮಹೇಂದ್ರ ಅವರ ಮೊದಲ ಚಿತ್ರ ಕನ್ನಡದ ‘ಕೋಕಿಲಾ’(1977) ಚಿತ್ರದ ನಾಯಕ ನಟ ಕಮಲ್‌ಹಾಸನ್‌ನ ಗೆಳೆಯನ ಪಾತ್ರದಲ್ಲಿ ಬಿಂದಾಸ್ ಆಗಿ ನಟಿಸಿದ ಮೋಹನ್ ಆ ಚಿತ್ರದ ಮೂಲಕ ನಾಯಕ ನಟನಷ್ಟೇ ಜನಪ್ರಿಯರಾದರು. ಆಗ ತಾನೆ ಯೌವನಕ್ಕೆ ಕಾಲಿಟ್ಟು, ಲೋಕವನ್ನು ಅಚ್ಚರಿಯ ಕಣ್ಣುಗಳಿಂದ ನೋಡುವ ಲವಲವಿಕೆಯ ಉತ್ಸಾಹಿ ತರುಣನ ಚಂಚಲ ಭಾವಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಸಾಮರ್ಥ್ಯವಿದ್ದ ಮೋಹನ್‌ಗೆ ಕನ್ನಡದಲ್ಲಿ ಒಂದೆರಡು ಅವಕಾಶಗಳು ಸಿಕ್ಕಿದರೂ, ಅದೃಷ್ಟದ ಬಾಗಿಲು ತೆರೆದದ್ದು ತಮಿಳು ಚಿತ್ರರಂಗ. ಅಪರಿಚಿತ, ಗಾಳಿಮಾತು, ಮುನಿಯನ ಮಾದರಿ ಚಿತ್ರಗಳಲ್ಲಿ ಅದೇ ಉತ್ಸಾಹಿ ತರುಣನ ಪಾತ್ರದಲ್ಲಿ ಕಳೆದುಹೋಗುತ್ತಿದ್ದ ಮೋಹನ್‌ಗೆ ಮತ್ತೆ ಬಾಲು ಮಹೇಂದ್ರ ಅವರೇ ತಮ್ಮ ‘ಮೂಡುಪನಿ’(1980) ಚಿತ್ರದಲ್ಲಿ ಸಣ್ಣ ಪಾತ್ರವೊಂದನ್ನು ನೀಡಿದರು. ಆ ಕಾಲದ ರೆಬೆಲ್ ನಿರ್ದೇಶಕ ಎಂದೇ ಹೆಸರಾದ ಜೆ. ಮಹೇಂದ್ರನ್ ಅವರ ‘ನೆಂಜತ್ತೈ ಕಿಳ್ಳಾದೆ’ (1980) ಚಿತ್ರ ಮೋಹನ್‌ಗೆ ತಾರಾಪಟ್ಟವನ್ನು ಗಳಿಸಿಕೊಟ್ಟಿತು. ಅದು ಸುಹಾಸಿನಿಯವರ ಮೊದಲ ಚಿತ್ರ. ಸಣ್ಣ ಸಂಶಯವೊಂದು ಪ್ರೇಮಿಗಳ ಬದುಕನ್ನು ಮೂರಾಬಟ್ಟೆಯಾಗಿಸುವ, ಸದಾ ತುಂಟತನ, ಲವಲವಿಕೆಯಿಂದ ಪುಟಿಯುವ ಜೀವಿಗಳಲ್ಲಿ ಜೀವನೋತ್ಸಾಹದ ಸೆಲೆ ಬತ್ತಿಹೋಗುವ ದಾರುಣವನ್ನು ಮಹೇಂದ್ರನ್ ಪರಿಣಾಮಕಾರಿಯಾಗಿ ಸೆರೆಹಿಡಿದಿದ್ದರು. ನಿರ್ದೇಶಕ ಮಹೇಂದ್ರನ್, ಕ್ಯಾಮರಾಮೆನ್ ಅಶೋಕ್‌ಕುಮಾರ್, ನಾಯಕನಟಿ ಸುಹಾಸಿನಿ ಮತ್ತು ನಾಯಕ ನಟ ಕೋಕಿಲಾ ಮೋಹನ್ ಅವರ ವೃತ್ತಿ ಬದುಕು ಹೊರಳುದಾರಿ ಹಿಡಿಯಲು ಕಾರಣವಾದ ಚಿತ್ರ ಅದು.

‘ನೆಂಜತ್ತೈ ಕಿಳ್ಳಾದೆ’ ನಂತರ ಮೋಹನ್ ತಮಿಳುನಾಡಿನ ಮನೆ ಮಾತಾದರು. ಹರೆಯದ ಪ್ರೇಕ್ಷಕರ ಎದೆಯಲ್ಲಿ ಹುಚ್ಚೆಬ್ಬಿಸಿದರು. ಅರವತ್ತರ ದಶಕದ ಕೊನೆ ಮತ್ತು ಎಪ್ಪತ್ತರ ದಶಕದ ಆರಂಭದಲ್ಲಿ ಹಿಂದಿಯ ರಾಜೇಶ್ ಖನ್ನಾ ಅವರಿಗೆ ದಕ್ಕಿದ ಯಶಸ್ಸು ಎಂಬತ್ತರ ದಶಕದಲ್ಲಿ ಮೋಹನ್ ಅವರ ಪಾಲಿಗೆ ಪುನರಾವರ್ತನೆಯಾಗಿತ್ತು. ನಗುಮೊಗದ ಈ ನಟ ನಿರ್ದೇಶಕರಿಗೆ ಪ್ರಿಯರಾಗಿದ್ದರು. ನಿರ್ಮಾಪಕರಿಗೆ ಗೆಳೆಯನಂತಿದ್ದರು. ಯಶಸ್ಸನ್ನು ತಲೆಗೇರಿಸಿಕೊಳ್ಳದೆ ಎಲ್ಲರೊಡನೆ ಬೆರೆಯುತ್ತಿದ್ದರು. ಈ ಯಶಸ್ಸು ಶಾಶ್ವತವಲ್ಲವೆಂದೇ ನಂಬಿ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಅನ್ನು ಜೊತೆಯಲ್ಲೇ ಇರಿಸಿಕೊಂಡಿರುವುದಾಗಿ ಚೆನ್ನೈನಲ್ಲಿ ಸದಾ ಹೇಳುತ್ತಿದ್ದರು. ಬಹುಕಾಲ ಪಾಮ್‌ಗ್ರೋವ್ ಹೋಟೆಲಿನ ಸಾಮಾನ್ಯ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದರು. ದೊರೈ ನಿರ್ದೇಶನದ ‘ಕಿಲಿಂಜಲ್ಗಳ್’ (1981) ಚಿತ್ರವು ‘ನೆಂಜತ್ತೈ ಕಿಳ್ಳಾದೆ’ ಯಶಸ್ಸನ್ನು ಮುನ್ನಡೆಸಿತು. ಆನಂತರ ಬಂದದ್ದೇ ‘ಪಯಣಂಗಳ್ ಮುಡಿವುದಿಲ್ಲೈ’(1982). ಈಗ ನಟನಾಗಿ ಗುರುತಿಸಿಕೊಂಡಿರುವ ಆರ್. ಸುಂದರರಾಜನ್ ಅವರ ಚೊಚ್ಚಲ ನಿರ್ದೇಶನದ ಚಿತ್ರವು ಬಾಕ್ಸ್ ಆಫೀಸಿನಲ್ಲಿ ಹೊಸ ದಾಖಲೆಯನ್ನು ಬರೆಯಿತು. ಅನೇಕ ಕೇಂದ್ರಗಳಲ್ಲಿ ವರ್ಷಕಾಲ ನಡೆಯಿತು. ಪ್ರತಿಭಾವಂತ ಗಾಯಕ ತನಗೆ ಕ್ಯಾನ್ಸರ್ ಇದೆಯೆಂದು ತಿಳಿದ ಕೂಡಲೇ ಪ್ರೀತಿಸಿದ ಹೆಣ್ಣಿನ ಬಳಿ ನಾಟಕವಾಡಿ ದೂರವಾಗುವ ಒಂದೆಳೆಯ ಕತೆಯ ಈ ಚಿತ್ರದ ನಿಜವಾದ ಹೀರೋ ಇಳಯರಾಜ. ಅವರು ಸಂಯೋಜಿಸಿದ ಮಧುರವಾದ ಹಾಡುಗಳಿಗೆ ತುಂಟತನ, ನೋವು, ನಗೆಯನ್ನು ಬೆರೆಸಿ ಅಭಿನಯಿಸಿದ ಮೋಹನ್ ರಸಿಕರ ಅರಸನಾದರು. ಒಂದು ವರದಿಯನ್ನು ಉಲ್ಲೇಖಿಸುವುದಾದರೆ, ‘ಪಯಣಂಗಳ್ ಮುಡಿವುದಿಲ್ಲೈ’ ಚಿತ್ರವು ಅದಕ್ಕೆ ಹೂಡಿದ ಬಂಡವಾಳಕ್ಕೆ ಹೋಲಿಸಿದರೆ ಬಾಚಿಕೊಂಡ ಲಾಭದ ಪ್ರಮಾಣ ‘ಶೋಲೆ’ ಚಿತ್ರವನ್ನು ಮೀರಿಸಿತ್ತು. ಅಲ್ಲಿಂದಾಚೆಗೆ ಇಳಯರಾಜ, ಮೋಹನ್ ಜೋಡಿಯಲ್ಲಿ ಸಾಲು ಸಾಲುಚಿತ್ರಗಳು ಯಶಸ್ಸನ್ನು ಒದ್ದುಕೊಂಡು ಪ್ರವಾಹದೋಪಾದಿಯಲ್ಲಿ ಹರಿದುಬಂದವು. 1983ರಲ್ಲಿ ಅವರ ಎಂಟು ಚಿತ್ರಗಳು ಬಿಡುಗಡೆಯಾದವು. ಎಲ್ಲವೂ ಸಿಲ್ವರ್ ಜುಬಿಲಿ ಹಿಟ್‌ಗಳು. 1984ರಲ್ಲಿ ಯಾರೂ ಊಹಿಸದ ಪ್ರಮಾಣದಲ್ಲಿ ಅಂದರೆ 21 ಚಿತ್ರಗಳು ಬಿಡುಗಡೆಯಾದವು. ಮೂರನೇ ವರ್ಷ ಹನ್ನೊಂದು ಚಿತ್ರಗಳು, 1986ರಲ್ಲಿ 9 ಚಿತ್ರಗಳು ಬಿಡುಗಡೆಯ ಭಾಗ್ಯ ಕಂಡರೆ 1987ರಲ್ಲಿ ಸಂಖ್ಯೆ ಎಂಟು ಚಿತ್ರಗಳಿಗೆ ಇಳಿಯಿತು. 1988ರಲ್ಲಿ ಅವರ ಚಿತ್ರಗಳ ಸಂಖ್ಯೆ ಐದಕ್ಕೆ ಇಳಿದರೆ 1989ರಲ್ಲಿ ಮತ್ತೆ ಒಂಬತ್ತು ಚಿತ್ರಗಳ ಮೂಲಕ ಮರುಜನ್ಮ ಪಡೆಯಲು ಯತ್ನಿಸಿದರು. ಆದರೆ 1990ರ ವೇಳೆಗೆ ಸೋತೇ ಹೋದರು.

ಕೋಕಿಲ ಮೋಹನ್ ಅವರ ಯಶೋಗಾಥೆ ಭಾರತದ ಯಾವುದೇ ಸೂಪರ್‌ಸ್ಟಾರ್‌ನ ಯಶಸ್ಸಿಗಿಂತ ಕಡಿಮೆಯಾದುದಾಗಿರಲಿಲ್ಲ. 1980 ರಿಂದ 1989ರವರೆಗೆ ಅವರು ಒಟ್ಟು 77 ಚಿತ್ರಗಳಲ್ಲಿ ನಟಿಸಿದರು. ಅದರಲ್ಲಿ 27 ಚಿತ್ರಗಳು 175 ದಿನಗಳಿಗಿಂತ (ಸಿಲ್ವರ್ ಜುಬಿಲಿ) ಹೆಚ್ಚು ಕಾಲ ಅನೇಕ ಕೇಂದ್ರಗಳಲ್ಲಿ ಪ್ರದರ್ಶನಗೊಂಡವು. ಅವರು ಯಶಸ್ಸಿನ ತುತ್ತತುದಿಯಲ್ಲಿದ್ದಾಗ 1984ರಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ ಮೂರು ಚಿತ್ರಗಳು- ‘ವೇಂಗಾಯಿನ್ ಮೈಂತಾನ್’, ‘ನೂರಾವುದು ನಾಳ್’ ಮತ್ತು ‘ನಾನ್ ಪಾಡುಂಪಾಡಲ್’ 200 ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನ ಭಾಗ್ಯ ಕಂಡವು. ಅದೇ ಯಶಸ್ಸು ಮರು ವರ್ಷ ಅಂದರೆ 1985ರಲ್ಲಿ ಒಂದರ ಹಿಂದೆ ಒಂದು ಬಿಡುಗಡೆಯಾದ ‘ಉದಯ ಗೀತಂ’, ‘ತೇಡ್ರಾಲೆ ಎನ್ನೈತೋಡು’, ‘ಕುಂಗುವ ಚಿಮಿಳ್’ ಮತ್ತು ‘ಇದಯ ಕೋವಿಲ್’ ರಜತ ಮಹೋತ್ಸವ ಆಚರಿಸಿಕೊಂಡವು. ಭಾರತದ ಸಂದರ್ಭದಲ್ಲಿ ಮತ್ತಾವುದೇ ನಟ ಇಂತಹ ಯಶಸ್ಸು ಕಂಡಿರಲಾರ. ಪ್ರಾಯಶಃ ಹಿಂದಿಯ ಸಿಲ್ವರ್ ಜುಬಿಲಿ ಸ್ಟಾರ್ ಎಂದೇ ಹೆಸರಾದ ರಾಜೇಂದ್ರ ಕುಮಾರ್ ಮಾತ್ರ ಇದಕ್ಕೆ ಅಪವಾದವಿರಬಹುದು. ಆದರೆ 1989ರ ನಂತರ ಮೋಹನ್ ತಮಿಳು ಚಿತ್ರರಂಗದಿಂದ ಇದ್ದಕ್ಕಿದ್ದಂತೆ ಮರೆಯಾದದ್ದು, ಆ ಅದೃಶ್ಯ ಕತೆಯನ್ನು ಪ್ರೇಕ್ಷಕರು ಸಹಜವೆಂಬಂತೆ ಸ್ವೀಕರಿಸಿದ್ದು ಒಂದು ಒಗಟಾಗಿ ಕಂಡರೂ, ಅನೇಕ ವಿಮರ್ಶಕರು ಹಲವಾರು ಕಾರಣಗಳನ್ನು ತರ್ಕಿಸುತ್ತಾರೆ.

ಕೋಕಿಲಾ ಮೋಹನ್ ಅವರ ಯಶಸ್ಸು, ಅವರು ತಮಿಳು ಚಿತ್ರಗಳಲ್ಲಿ ಆರಂಭಿಸಿದ ಹೊಸ ಬಗೆಯ ನವಿರುಭಾವದ ರೋಮಾನ್ಸ್‌ಗೆ ಸಂಬಂಧಿಸಿದ್ದಾಗಿದೆ. ಆವರೆಗಿನ ರೊಮ್ಯಾಂಟಿಕ್ ಚಿತ್ರಗಳಲ್ಲಿ ಹೆಣ್ಣನ್ನು ಗಂಡಿನ ಆಜ್ಞಾನುವರ್ತಿಯಂತೆ ಚಿತ್ರಿಸಿದ್ದರೆ, ಮೋಹನ್ ವಹಿಸಿದ ಪಾತ್ರಗಳು ಹೆಣ್ಣನ್ನು ಗೌರವಿಸುವ, ಸಹವರ್ತಿಯ ಪಾತ್ರದಂತೆ ಬಿಂಬಿತವಾದವು. ಹೆಣ್ಣಿನ ಭಾವಗಳನ್ನು ಅರ್ಥಮಾಡಿಕೊಳ್ಳುವ, ಸ್ಪಂದಿಸುವ ಮತ್ತು ಹೆಣ್ತನವನ್ನು ಗೌರವಿಸುವ, ಪ್ರೀತಿ ಮತ್ತು ತ್ಯಾಗದ ಹಿರಿಮೆಯನ್ನು ಸಾರುವ ಸಹಾನುಭೂತಿ ಪಾತ್ರಗಳನ್ನು ನಿರಾಯಾಸವಾಗಿ ನಿರ್ವಹಿಸಿ ಮೋಹನ್ ಗೆದ್ದರು. ಯಾವುದೇ ಚಿತ್ರದಲ್ಲಿಯೂ ಮೋಹನ್ ಪಾತ್ರವು ಹೆಣ್ಣನ್ನು ಅಶ್ಲೀಲವಾಗಿ ಸಂಬೋಧಿಸಿಲ್ಲ. ಅಸಭ್ಯವಾಗಿ ಮುಟ್ಟುವುದಿಲ್ಲ. ಮರ್ಯಾದೆಯ ಗೆರೆಯಲ್ಲಿ, ಮಡಿವಂತಿಕೆಯ ಚೌಕಟ್ಟಿನಲ್ಲಿ ಹೆಣ್ಣನ್ನು ಪ್ರೀತಿಸುವ ಶೈಲಿ ಅವರಿಗಾಗಿಯೇ ಹೇಳಿಮಾಡಿಸಿದಂತಿತ್ತು. ಖಳನಾಯಕನ ಪಾತ್ರವಾದರೂ ‘ನೂರಾವುದು ನಾಳ್’ ಚಿತ್ರವನ್ನು ಜನ ಮೆಚ್ಚಿದ್ದು ಅವರ ಈ ಸಾಫ್ಟ್ ರೊಮ್ಯಾಂಟಿಕ್ ಹೀರೋ ಪಾತ್ರವನ್ನೇ! ಅವರ ಈ ನವಿರು ಭಾವ ಹಾಡಿನ ದೃಶ್ಯಗಳಲ್ಲಿ ಭಾವೋತ್ಕರ್ಷವನ್ನು ಸೃಷ್ಟಿಸುತ್ತಿತ್ತು. ಹೆಂಗಳೆಯರು ಅವರ ಚಿತ್ರಗಳಿಗೆ ಮುಗಿ ಬಿದ್ದದ್ದು ಈ ಕಾರಣಕ್ಕಾಗಿಯೇ.

ಮೋಹನ್ ಅವರ ಚಿತ್ರಗಳ ಯಶಸ್ಸಿನಲ್ಲಿ ಇಳಯರಾಜ ಅವರ ಸಂಗೀತದ ಕಾಣಿಕೆ ಕಡಿಮೆಯಾದುದಲ್ಲ. ‘ಪಯಣಂಗಳ್ ಮುಡಿವುದಿಲ್ಲೈ’ ಚಿತ್ರದ ವಾಲ್‌ಪೋಸ್ಟರ್ ಮತ್ತು ಪ್ರದರ್ಶನ ಕಂಡ ಚಿತ್ರಮಂದಿರಗಳಲ್ಲಿ ರಾರಾಜಿಸಿದ್ದು ನಾಯಕನಟನ ಬಿಂಬಕ್ಕಿಂತ ಇಳಯರಾಜ ಅವರ ಭಾವಚಿತ್ರ ಮತ್ತು ಕಟ್‌ಔಟ್‌ಗಳು. ಒಂದೆಡೆ ಲವಲವಿಕೆಯ ಪ್ರಣಯಿ, ದುರಂತದ ನಾಯಕನಾಗಿ ನಟಿಸಿದ ಮೋಹನ್ ಅವರ ಚಿತ್ರಗಳು ಗೆಲ್ಲುತ್ತಿದ್ದರೆ, ಆ ಗೆಲುವಿಗೆ ಇಳಯರಾಜ ಅವರ ಸಂಯೋಜನೆಯಿಂದ ಹೊರಬಂದ ನವನವೀನ ಹಾಡುಗಳು ಯಶಸ್ಸಿಗೆ ನೆರವಾದವು. ಮೋಹನ್ ಅವರು ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾಗ ತಮಿಳುನಾಡಿನ ಯುವನಟಿಯರು, ಯುವ ನಿರ್ದೇಶಕರು, ಪೋಷಕ ನಟರು, ಅವರ ಚಿತ್ರಗಳಲ್ಲಿ ನಟಿಸಲು ಹಾತೊರೆಯುತ್ತಿದ್ದರು. ಸುಹಾಸಿನಿ, ರೇವತಿ, ಪೂರ್ಣಿಮಾ ಜಯರಾಂ, ನಳಿನಿ, ರಾಧಾ, ಅಂಬಿಕಾ, ಇಳವರಸಿ, ಜಯಶ್ರೀ ಮೊದಲಾದವರು ಹಿರಿಯ ನಿರ್ದೇಶಕರಾದ ಸಿ.ವಿ. ಶ್ರೀಧರ್ ಅವರಿಂದ ಹಿಡಿದು ಮಣಿರತ್ನಂ, ಮನಿವಣ್ಣನ್, ಸುಂದರ್‌ರಾಜನ್ ಮುಂತಾದವರು ಮೋಹನ್‌ರವರೊಡನೆ ಸಹಭಾಗಿಯಾಗಲು ಇಚ್ಛಿಸುತ್ತಿದ್ದರು.

ಆದರೆ ಇಂಥ ಬೇಡಿಕೆಯಿದ್ದ ನಟ 1990ರಲ್ಲಿ ಇದ್ದಕ್ಕಿದ್ದಂತೆ ಅದೃಶ್ಯವಾದರು. ಅದಕ್ಕೆ ಅನೇಕ ಕಾರಣಗಳನ್ನು ತರ್ಕಿಸುತ್ತಾರೆ. ಮೋಹನ್ ಅವರ ಕಂಠಕ್ಕೆ ಆರ್. ಸುರೇಂದರ್ ಎಂಬ ಕಲಾವಿದನ ಧ್ವನಿ ಸರಿಯಾಗಿ ಒಪ್ಪುತ್ತಿತ್ತು. (ಈತ ಈಗಿನ ಯಶಸ್ವಿ ತಾರೆ ವಿಜಯ್ ಅವರ ಸೋದರ ಮಾವ) ಅವರ ನಡುವೆ ಮನಸ್ತಾಪವಾಗಿ ಮೋಹನ್ ತಮ್ಮದೇ ಧ್ವನಿಯನ್ನು ನೀಡಲಾರಂಭಿಸಿದ ನಂತರ ಅವರ ಚಿತ್ರಗಳು ಸೋತವು ಎಂಬುದು ಒಂದು ವಾದ. ಆದರೆ ರಜನಿಕಾಂತ್ ಅವರಷ್ಟೆ ಚೆನ್ನಾಗಿ ಮೋಹನ್ ತಮಿಳು ಮಾತನಾಡುವ ಸಾಮರ್ಥ್ಯವಿದ್ದವರು. ಆದರೆ ಸುಮ್ಮನೆ ಅಪಪ್ರಚಾರಕ್ಕೊಳಗಾದರು. ‘ಮೌನರಾಗಂ’ ಚಿತ್ರದಲ್ಲಿ ಮಣಿರತ್ನಂ ಅವರು ನಟ ಕಾರ್ತಿಕ್‌ನ ಪಾತ್ರವನ್ನು ಚೆನ್ನಾಗಿ ಬೆಳೆಸಿದ್ದರು. ಆ ಕಾರಣಕ್ಕಾಗಿ ಮಣಿರತ್ನಂ, ತಮ್ಮ ‘ಅಂಜಲಿ’ ಚಿತ್ರದಲ್ಲಿ ನಟಿಸಲು ಆಹ್ವಾನಿಸಿದಾಗ ಮೋಹನ್ ನಿರಾಕರಿಸಿದರೆಂಬುದು ಮತ್ತೊಂದು ಆರೋಪ. ಅದರಿಂದಾಗಿ ನಿರ್ದೇಶಕರ ಕೆಂಗಣ್ಣಿಗೆ ಗುರಿಯಾದರೆಂಬುದು ಅವರು ಮಾಯವಾಗಲು ಕಾರಣ. ಆದರೆ ಈಗಾಗಲೇ ರೊಮ್ಯಾಂಟಿಕ್ ಇಮೇಜಿನಲ್ಲಿ ಭದ್ರವಾಗಿ ಕುಳಿತಿದ್ದ ಮೋಹನ್, ಮೂರು ಮಕ್ಕಳ ತಂದೆಯ ಪಾತ್ರ ವಹಿಸಿದರೆ ವೃತ್ತಿಗೆ ಅಪಾಯವೆಂದು ಭಾವಿಸಿ ನಟಿಸಲಿಲ್ಲವೆನ್ನುವುದು ಸಮರ್ಥನೆ. ಮುಂದೆ ಆ ಪಾತ್ರವನ್ನು ರಘುವರನ್ ನಟಿಸಿ ಗೆದ್ದರು.

ಆದರೆ ಈ ಕಾರಣಗಳೇನೇ ಇರಲಿ, ಮೋಹನ್ ಅವರು ಆರಂಭಿಸಿದ ಸಾಫ್ಟ್ ರೊಮ್ಯಾಂಟಿಕ್ ಹೀರೋ ಬಿಂಬವನ್ನು ಮುಂದುವರಿಸುವ ತಾರೆಯರ ದಂಡು ಉಗಮಿಸಿದ್ದು, ಅವರ ಬೇಡಿಕೆ ಕುಸಿಯಲು ಒಂದು ಕಾರಣ. ಅವರ ಬಿಂಬವೇ ಅವರಿಗೆ ಎದುರಾಳಿಯಾದ ವಿಚಿತ್ರ ಸನ್ನಿವೇಶಕ್ಕೆ ಗುರಿಯಾದರು. ಹೊಸದಾಗಿ ಆಗಮಿಸಿದ ಕಾರ್ತಿಕ್, ರಾಮರಾಜನ್, ಮುರಳಿ, ಅರವಿಂದಸ್ವಾಮಿ ಮುಂತಾದವರ ಸ್ಪರ್ಧೆಯಲ್ಲಿ ಮೋಹನ್ ಅವರ ಓಟ ಕುಂಠಿತವಾಯಿತು. ಇಳಯರಾಜ ಅವರ ಸಂಗೀತ ಶೈಲಿಗೆ ಎ. ಆರ್. ರೆಹಮಾನ್ ಸವಾಲೊಡ್ಡಿ ಗೆದ್ದದ್ದು ಮತ್ತೊಂದು ಕಾರಣ. ಕಡಿಮೆ ಅವಧಿಯಲ್ಲಿ ವರ್ಷಕ್ಕೆ ಸರಾಸರಿ ಎಂಟು ಚಿತ್ರಗಳಲ್ಲಿ ನಟಿಸಿದ್ದ ಮೋಹನ್ ಅವರು ಓವರ್ ಎಕ್ಸ್‌ಪೋಸರ್‌ನಿಂದಾಗಿ ಯಶಸ್ಸಿನ ಹಾದಿಯಲ್ಲಿ ಮುಗ್ಗರಿಸಲು ಕಾರಣ ಎಂಬುದು ಮತ್ತೊಂದು ತರ್ಕ.

ಆದರೆ ಒಂದಂತೂ ನಿಜ. ಮೋಹನ್ ಅವರು ಯಶಸ್ಸಿನ ಅಲೆಯ ಮೇಲೆ ತೇಲುತ್ತಿದ್ದಾಗ ತಮಿಳುನಾಡಿನ ಇಬ್ಬರು ಮಹಾನ್ ತಾರೆಗಳಾದ ರಜನಿ ಮತ್ತು ಕಮಲ್ ಸಹ ಕ್ರಿಯಾಶೀಲರಾಗಿದ್ದರು. ಅವರಿಗೆ ತಮ್ಮದೇ ಆದ ಅಭಿಮಾನಿಗಳ ಗುಂಪು, ವೈಯಕ್ತಿಕ ವರ್ಚಸ್ಸಿತ್ತು. ಆದರೆ ಇದಾವುದರ ನೆರವಿಲ್ಲದೆಯೇ ಹತ್ತು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ 80 ಚಿತ್ರಗಳಲ್ಲಿ ನಟಿಸಿ, ಆ ಸೂಪರ್‌ಸ್ಟಾರ್‌ಗಳ್ಯಾರೂ ನೀಡದಷ್ಟು ಅವಧಿಯಲ್ಲಿ ಹಿಟ್‌ಚಿತ್ರಗಳನ್ನು ನೀಡಿದ ಕನ್ನಡದ ಕೋಕಿಲಾ ಮೋಹನ್ ಸಾಧನೆ ಪವಾಡವೆಂದೇ ಹೇಳಬೇಕು.

ತೊಂಬತ್ತರ ದಶಕದ ನಂತರ ಐದಾರು ಸೋತ ಚಿತ್ರಗಳಲ್ಲಿ ನಟಿಸಿದ ಮೋಹನ್ ಅವರು ಮತ್ತೆ ಎದ್ದು ಬರಲು ಹಲವು ಬಾರಿ ವಿಫಲ ಯತ್ನ ನಡೆಸಿದರು. ಯಶೋಲಕ್ಷ್ಮಿ ಶಾಶ್ವತವಾಗಿ ಅವರಿಂದ ದೂರಾದಳು. ವಿಚಿತ್ರವೆಂದರೆ ಯಶಸ್ಸಿನ ಕಿರೀಟ ಹೊತ್ತು ಮೆರೆದ ಮೋಹನ್ ಅವರ ಬಗ್ಗೆ ಚಿತ್ರರಸಿಕರು, ಸುದ್ದಿ ಮಾಧ್ಯಮಗಳು ಅವರು ಅಸ್ತಿತ್ವದಲ್ಲಿ ಇರಲಿಲ್ಲವೆನ್ನುವ ರೀತಿಯಲ್ಲಿ ಮರೆತುಹೋದದ್ದು! ತಮ್ಮ ಸೋಲಿಗೆ ಎಂದೂ ಯಾರನ್ನೂ ಹೊಣೆ ಮಾಡದೆ, ಬಂದದ್ದನ್ನು ಸಹಜವಾಗಿ ಸ್ವೀಕರಿಸಿ ಬದುಕುತ್ತಿರುವ ನಟ ಕೋಕಿಲಾ ಮೋಹನ್ ಎಂಬತ್ತರ ದಶಕದ ಸುಮಧುರ ಹಾಡುಗಳನ್ನು, ನವಿರು ಭಾವದ ಪ್ರೀತಿಯ ಸೆಳೆತವನ್ನು ಪ್ರೇಕ್ಷಕರ ಎದೆಗೆ ದಾಟಿಸಿದ ಮಾಯಕಾರ!

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News