ಭಾರತದ ಪೊಲೀಸ್ ಅಧಿಕಾರಿಗೆ ವಿಶ್ವಸಂಸ್ಥೆಯಿಂದ ಮರಣೋತ್ತರ ಗೌರವ

Update: 2019-05-26 17:22 GMT

ನ್ಯೂಯಾರ್ಕ್,ಮೇ 26: ಯುದ್ಧಪೀಡಿತ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಯೋಧನಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ವೀರಮರಣವನ್ನಪ್ಪಿದ ಭಾರತೀಯ ಪೊಲೀಸ್ ಅಧಿಕಾರಿ ಜಿತೇಂದ್ರ ಕುಮಾರ್ ಅವರಿಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪದಕವನ್ನು ಮರಣೋತ್ತರವಾಗಿ ನೀಡಲಾಗಿದೆ.

 ಅಂತಾರಾಷ್ಟ್ರೀಯ ವಿಶ್ವಸಂಸ್ಥೆ ಶಾಂತಿಪಾಲಕರ ದಿನಾಚರಣೆಯ ಅಂಗವಾಗಿ ಶುಕ್ರವಾರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯಾಲಯದಲ್ಲಿ ಭಾರತೀಯ ದೂತವಾಸ ಕಚೇರಿಯು ಆಯೋಜಿಸಿದ ವಿಶೇಷ ಸತ್ಕಾರಕೂಟದಲ್ಲಿ ಜಿತೇಂದ್ರ ಕುಮಾರ್ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ‘ಡ್ಯಾಗ್ ಹ್ಯಾಮರ್ಸ್ಕ್‌ಜೊಲ್ಡ್’ ಪುರಸ್ಕಾರವನ್ನು ನೀಡಲಾಯಿತು.

ಜಿತೇಂದ್ರ ಕುಮಾರ್ ಅವರ ಪರವಾಗಿ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಸೈಯದ್ ಅಕ್ಬರುದ್ದೀನ್ ಸ್ವೀಕರಿಸಿದರು.

 ಮಧ್ಯ ಆಫ್ರಿಕದ ರಾಷ್ಟ್ರವಾದ ಕಾಂಗೊದಲ್ಲಿ ಕರ್ತವ್ಯನಿರ್ವಹಣೆಯ ವೇಳೆ ತೋರಿದ ಧೈರ್ಯ ಹಾಗೂ ಬಲಿದಾನಕ್ಕಾಗಿ ಜಿತೇಂದ್ರ ಕುಮಾರ್ ಸೇರಿದಂತೆ 119 ಮಂದಿ ಪುರುಷ ಹಾಗೂ ಮಹಿಳಾ ಯೋಧರಿಗೆ ಪುರಸ್ಕಾರವನ್ನು ನೀಡಲಾಗಿದೆ.

 1948ರಿಂದೀಚೆಗೆ ವಿಶ್ವಸಂಸ್ಥೆ ಜಗತ್ತಿನ ವಿವಿಧೆಡೆ ನಡೆಸಿದ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ 38 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆಂದು ವಿಶ್ವಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News