ಜೆಇಎಂ, ಎಲ್‌ಇಜೆಗೆ ನಿಧಿ ಸಂಗ್ರಹಣೆ ಆರೋಪ: ಪಾಕ್‌ನಲ್ಲಿ 6 ಶಂಕಿತ ಉಗ್ರರ ಬಂಧನ

Update: 2019-05-26 17:49 GMT

ಲಾಹೋರ್,ಮೇ 25: ಭಯೋತ್ಪಾದಕ ಸಂಘಟನೆಗಳಾದ ಜೈಶೆ ಮುಹಮ್ಮದ್ (ಜೆಇಎಂ) ಹಾಗೂ ಲಷ್ಕರೆಜಾಂಘ್ವಿ (ಎಲ್‌ಇಜೆ)ಗಳಿಗಾಗಿ ಪಂಜಾಬ್ ಪ್ರಾಂತದಲ್ಲಿ ನಿಧಿಗಳನ್ನು ಸಂಗ್ರಹಿಸುತ್ತಿದ್ದರೆನ್ನಲಾದ ಆರು ಮಂದಿ ಶಂಕಿತ ಉಗ್ರರನ್ನು ಪಾಕ್ ಭಯೋತ್ಪಾದಕ ನಿಗ್ರಹದಳ ಬಂಧಿಸಿದೆ.

ಪಂಜಾಬ್ ಪ್ರಾಂತದ ವಿವಿಧ ಪ್ರಾಂತಗಳಲ್ಲಿ ಈ ನಿಷೇಧಿತ ಸಂಘಟನೆಗಳ ಆರು ಮಂದಿ ಸದಸ್ಯರು ಭಯೋತ್ಪಾಕ ಕೃತ್ಯಗಳಿಗಾಗಿ ಹಣವನ್ನು ಸಂಗ್ರಹಿಸುತ್ತಿದ್ದರೆಂದು ಸಿಟಿಡಿ ವಕ್ತಾರರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. “ಪಾಕಿಸ್ತಾನದ ನೆಲದ ಕಾನೂನಿನ ಪ್ರಕಾರ ಯಾವುದೇ ನಿಷೇಧಿತ ಸಂಘಟನೆಯ ಸದಸ್ಯರು ಭಯೋತ್ಪಾದನೆ ಹಾಗೂ ತೀವ್ರವಾದದ ಚಟುವಟಿಕೆಗಳಿಗೆ ನೆರವಾಗಲು ಹಣವನ್ನು ಸಂಗ್ರಹಿಸುವಂತಿಲ್ಲ’’ ಎಂದು ಸಿಟಿಡಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಸಂಗ್ರಹಿಸುತ್ತಿದ್ದ ಆರೋಪದಲ್ಲಿ ಜೆಇಎಂ ಕಾರ್ಯಕರ್ತರಾದ ಮುಹ್ಮದ್ ಝಾಹಿದ್ ಹಾಗೂ ಇರ್ಫಾನ್ ಅವರನ್ನು ಗುಜ್ರನ್‌ವಾಲಾದಲ್ಲಿ ಮತ್ತು ಝಫರ್ ಇಕ್ಬಾಲ್‌ನನ್ನು ರಾವಲ್ಪಿಂಡಿಯಲ್ಲಿ ಬಂಧಿಸಲಾಗಿದೆ.

ಅದೇ ರೀತಿ ಲಾಹೋರ್‌ನಲ್ಲಿ ಎಲ್‌ಇಜೆ ಸದಸ್ಯರೆನ್ನಲಾದ ಮುಹಮ್ಮದ್ ಹಂಝಾಲಾ ಹಾಗೂ ಹಂಝಾ ಮತ್ತು ಮುಲ್ತಾನ್‌ನಿಂದ ಇಝಾಜ್ ಮುಹಮ್ಮದ್ ಎಂಬವರನ್ನು ಬಂಧಿಸಲಾಗಿದೆ ಎಂದು ಸಿಟಿಡಿ ತಿಳಿಸಿದೆ.

ಪಾಕಿಸ್ತಾನವು ಉಗ್ರಗಾಮಿ ಗುಂಪುಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವುದಕ್ಕಾಗಿ ಅದರ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಫ್ರಾನ್ಸ್ ಮೂಲದ ಅಂತಾರಾಷ್ಟ್ರೀಯ ಭಯೋತ್ಪಾದನಾ ನಿಧಿ ನೆರವಿನ ಮೇಲೆ ಕಣ್ಗಾವಲಿಡುವ ಸಂಘಟನೆಯಾದ ಎಫ್‌ಎಟಿಎಫ್ ಪಾಕಿಸ್ತಾನವನ್ನು ತನ್ನ ಕಣ್ಗಾವಲು ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತ್ತು.

ಇತ್ತೀಚಿನ ತಿಂಗಳುಗಳಲ್ಲಿ ಉಗ್ರಗಾಮಿ ಗುಂಪುಗಳ ಕಠಿಣ ಕ್ರಮವನ್ನು ಕೈಗೊಂಡಿರುವ ಪಾಕಿಸ್ತಾನವು ಜೆಇಎಂ ವರಿಷ್ಠ ಮಸೂದ್ ಅಝರ್‌ನ ಸಹೋದರ ಸೇರಿದಂತೆ ನಿಷೇಧಿತ ಸಂಘಟನೆಗಳ 100 ಮಂದಿ ಕಾರ್ಯಕರ್ತರನ್ನು ಬಂಧಿಸಿತ್ತು ಹಾಗೂ

ಜೆಇಎಂ, ಜೆಯುಡಿ ಹಾಗೂ ಎಫ್‌ಐಎಫ್ ಉಗ್ರಗಾಮಿ ಗುಂಪುಗಳಿಗೆ ಸೇರಿದ ಮದ್ರಸ ಮತ್ತಿತರ ಆಸ್ತಿಪಾಸ್ತಿಗಳಿಗೆ ಮುಟ್ಟುಗೋಲು ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News