ಉಗ್ರರ ವಿರುದ್ಧ ಕಾರ್ಯಾಚರಣೆ: ಅಫ್ಘಾನ್‌ ಪಡೆಗಳಿಂದ 6 ನಾಗರಿಕರ ಹತ್ಯೆ

Update: 2019-05-26 17:50 GMT

 ಕಾಬೂಲ್, ಮೇ 26: ಅಫ್ಘಾನಿಸ್ತಾನದ ಪೂರ್ವ ನಂಗರ್‌ಹಾರ್ ಪ್ರಾಂತದಲ್ಲಿ ತಾಲಿಬಾನ್ ಬಂಡುಕೋರರ ನೆಲೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಫ್ಘಾನ್ ಭದ್ರತಾ ಪಡೆಗಳು ಪ್ರಮಾದವಶಾತ್ ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ನಾಗರಿಕರನ್ನು ಹತ್ಯೆಗೈದಿದ್ದಾರೆಂದು ಪ್ರಾಂತೀಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

 ಶುಕ್ರವಾರ ರಾತ್ರಿ ನಡೆದ ಈ ದಾಳಿಯಲ್ಲಿ 10 ಮಂದಿ ತಾಲಿಬಾನ್ ಬಂಡುಕೋರರು ಕೂಡಾ ಹತರಾಗಿದ್ದಾರೆಂದು ನಂಗರ್‌ಹಾರ್ ಪ್ರಾಂತದ ಗವರ್ನರ್ ಅವರ ವಕ್ತಾರ ಅತವುಲ್ಲಾ ಖೊಗ್ಯಾನಿ ತಿಳಿಸಿದ್ದಾರೆ.

 ದಾಳಿಯ ನಡೆದ ಬಳಿಕ ನಾಗರಿಕರ ವಾಹನವೊಂದು ಸ್ಥಳದಿಂದ ನಿರ್ಗಮಿಸುತ್ತಿತ್ತು. ಅದನ್ನು ಕಂಡ ಭದ್ರತಾಪಡೆಗಳು ತಾಲಿಬಾನ್ ಬಂಡುಕೋರರು ಪರಾರಿಯಾಗುತ್ತಿದ್ದಾರೆಂದು ತಪ್ಪಾಗಿ ಭಾವಿಸಿ ವಾನದ ಮೇಲೆ ಗುಂಡು ಹಾರಾಟ ನಡೆಸಿದರು. ಆಗ ಆರು ಮಂದಿ ನಾಗರಿಕರು ಸ್ಥಳದಲ್ಲೇ ಮೃತಪಟ್ಟರೆಂದು ಖೊಗ್ಯಾನಿ ತಿಳಿಸಿದ್ದಾರೆ.

 ಈ ಹತ್ಯಾಕಾಂಡದಿಂದ ಆಕ್ರೋಶಗೊಂಡ ಗ್ರಾಮಸ್ಥರು ಮೃತರ ದೇಹಗಳನ್ನು ಜಲಾಲಾಬಾದ್‌ಗೆ ಮೆರವಣಿಗೆಯಲ್ಲಿ ಕೊಂಡೊಯ್ದು, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ಪೂರ್ವ ಅಫ್ಘಾನಿಸ್ತಾನದಲ್ಲಿ ಅದರಲ್ಲೂ ವಿಶೇಷವಾಗಿ ನಂಗರ್‌ಹಾರ್‌ನಲ್ಲಿ ತಾಲಿಬಾನ್ ಹಾಗೂ ಐಸಿಸ್ ಬಂಡುಕೋರರು ಸಕ್ರಿಯರಾಗಿದ್ದಾರೆ.

 ಈ ಮಧ್ಯೆ ಪವಿತ್ರ ಮಾಸ ರಮಝಾನ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಸಂಘರ್ಷ ಭುಗಿಲೆದ್ದಿರುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ ಹಾಗೂ ನಾಗರಿಕ ಸಾವುನೋವುಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದೆ.

 ರಂಝಾನ್ ತಿಂಗಳ ಮೊದಲ ವಾರದಲ್ಲಿ ಕಾಬೂಲ್‌ನಲ್ಲಿ ಸರಕಾರೇತರ ಸಂಸ್ಥೆಯೊಂದರ ಮೇಲೆ ತಾಲಿಬಾನ್ ಬಂಡುಕೋರರು ನಡೆಸಿದ ದಾಳಿಯಲ್ಲಿ ಆರು ಮಂದಿ ನಾಗರಿಕರು ಮೃತಪಟ್ಟು, ಇತರ 28 ಮಂದಿ ಗಾಯಗೊಂಡ ಘಟನೆಯ ಬಗೆಗೂ ಅದು ಕಳವಳ ವ್ಯಕ್ತಪಡಿಸಿದೆ.

ದಕ್ಷಿಣ ಹೆಮಂಡ್ ಹಾಗೂ ಪೂರ್ವ ಕುನಾರ್ ಪ್ರಾಂತಗಳಲ್ಲಿ ಸರಕಾರ ವಿರೋಧಿ ಗುರಿಗಳ ವಿರುದ್ಧ ಇತ್ತೀಚೆಗೆ ನಡೆದ ವಾಯುದಾಳಿಗಳಲ್ಲಿ ಸುಮಾರು 14 ನಾಗರಿಕರು ಮೃತಪಟ್ಟಿರುವ ಬಗ್ಗೆಯೂ ಅದು ತನ್ನ ಹೇಳಿಕೆಯಲ್ಲಿ ಗಮನಸೆಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News