ಮುಸ್ಲಿಂ ವ್ಯಕ್ತಿಯ ಹೆಸರು ಕೇಳಿ ಗುಂಡಿಕ್ಕಿದ ದುಷ್ಕರ್ಮಿ

Update: 2019-05-27 07:49 GMT

ಬಿಹಾರ, ಮೇ 27: ಮುಸ್ಲಿಂ ವ್ಯಕ್ತಿಯ ಹೆಸರು ಕೇಳಿ ವಿನಾಕಾರಣ ಆತನಿಗೆ ಗುಂಡಿಕ್ಕಿರುವ ಆಘಾತಕಾರಿ ಘಟನೆ ಬೇಗುಸರಾಯ್ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಚೆರಿಯಾ-ಬರಿಯಾರ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಗೊಂಡಿರುವ ಕಾಸಿಮ್ ಎಂಬವರು ಘಟನೆಯ ಬಗ್ಗೆ ವಿವರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ಇಲ್ಲಿನ ಕುಂಭಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥನಾದ ರಾಜೀವ್ ಯಾದವ್ ಎಂಬಾತ ಕಾಸಿಮ್ ರಿಗೆ ಗುಂಡಿಕ್ಕಿದ್ದಾನೆ ಎಂದು ಆರೋಪಿಸಲಾಗಿದೆ.

ಕಾಸಿಮ್ ಅವರು ಡಿಟರ್ಜೆಂಟ್ ಮಾರಾಟಗಾರನಾಗಿದ್ದು, ಕೆಲಸದ ನಿಮಿತ್ತ ಕುಂಭಿ ಗ್ರಾಮಕ್ಕೆ ಬೈಕ್ ನಲ್ಲಿ ತೆರಳಿದ್ದರು. “ನನ್ನ ರಾಜೀವ್ ಯಾದವ್ ತಡೆದ ಮತ್ತು ನನ್ನ ಹೆಸರನ್ನು ಕೇಳಿದ.. ನಾನು ಹೆಸರನ್ನು ಹೇಳಿದಾಗ ನನಗೆ ಗುಂಡಿಕ್ಕಿ ನೀನು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿದ. ರಾಜೀವ್ ಯಾದವ್ ಮದ್ಯದ ಅಮಲಿನಲ್ಲಿದ್ದ. ಆತ ಮತ್ತೊಮ್ಮೆ ಗುಂಡಿಕ್ಕಲು ಮುಂದಾದಾಗ ನಾನು ಆತನನ್ನು ದೂಡಿ ಅಲ್ಲಿಂದ ಓಡಿಬಂದೆ. ಸ್ಥಳದಲ್ಲಿದ್ದ ಯಾರೂ ನನ್ನ ನೆರವಿಗೆ ಬರಲಿಲ್ಲ” ಎಂದು ಕಾಸಿಂ ಹೇಳಿದ್ದಾರೆ.

ಕಾಸಿಂ ನಂತರ ಪೊಲೀಸ್ ಠಾಣೆಗೆ ತೆರಳಿದ್ದು, ಪೊಲೀಸರು ಅವರನ್ನು ಸದಾರ್ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯ ಬಗ್ಗೆ ಎಫ್ ಐಆರ್ ದಾಖಲಿಸಲಾಗಿದೆ. ಆದರೆ ಇನ್ನೂ ಆರೋಪಿಯನ್ನು ಬಂಧಿಸಿಲ್ಲ ಎಂದು ತಿಳಿದುಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News