ಪ್ರಧಾನಿ ಮೋದಿಯ ‘ರೇಡಾರ್’ ಹೇಳಿಕೆ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ರಾವತ್ ಪ್ರತಿಕ್ರಿಯೆ

Update: 2019-05-27 08:06 GMT

ತಿರುವನಂತಪುರಂ, ಮೇ 27: ಇತ್ತೀಚೆಗೆ ಭಾರೀ ಚರ್ಚೆಯ ವಸ್ತುವಾಗಿದ್ದ ಟಿವಿ ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಲಕೋಟ್ ವಾಯುದಾಳಿಯನ್ನು ಉಲ್ಲೇಖಿಸಿ ನೀಡಿದ್ದ ‘ರೇಡಾರ್’ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, “ಕೆಲವೊಂದು ವಿಧದ ರೇಡಾರ್ ಗಳ ಕಾರ್ಯನಿರ್ವಹಣೆ ವಿಧಾನದಿಂದಾಗಿ ಅವುಗಳಿಗೆ ಮೋಡಗಳ ಮೂಲಕ ನೋಡಲು (ವಿಮಾನಗಳನ್ನು ಪತ್ತೆಹಚ್ಚಲು) ಸಾಧ್ಯವಾಗುವುದಿಲ್ಲ'' ಎಂದು ಹೇಳಿದ್ದಾರೆ.

“ವಿಭಿನ್ನ ತಂತ್ರಜ್ಞಾನಗಳ ಮೂಲಕ ಕಾರ್ಯಾಚರಿಸುವ ವಿವಿಧ ರೇಡಾರ್ ‍ಗಳಿವೆ. ಕೆಲವು ಮೋಡಗಳ ಮೂಲಕ ನೋಡುವ ಸಾಮರ್ಥ್ಯ ಹೊಂದಿದ್ದರೆ ಕೆಲವು ರೇಡಾರ್ ‍ಗಳಿಗೆ ಆ ಸಾಮರ್ಥ್ಯವಿರುವುದಿಲ್ಲ. ಕೆಲವೊಮ್ಮೆ ರೇಡಾರ್ ಗಳು ಮೋಡಗಳ ಮೂಲಕ ನೋಡಬಹುದು, ಕೆಲವೊಮ್ಮೆ ಸಾಧ್ಯವಾಗದು'' ಎಂದು ರಾವತ್ ಹೇಳಿದರು.

ಎಳಿಮಲ ಎಂಬಲ್ಲಿ ಭಾರತೀಯ ನೌಕಾಪಡೆ, ಕೋಸ್ಟ್ ಗಾರ್ಡ್ ಕೆಡೆಟ್ ಹಾಗೂ 10 ಅಂತಾರಾಷ್ಟ್ರೀಯ ಕೆಡೆಟ್ ಗಳು ಸೇರಿದಂತೆ 264 ಮಂದಿಯ ಪಾಸಿಂಗ್ ಔಟ್ ಪೆರೇಡ್ ವೀಕ್ಷಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡುತ್ತಿದ್ದರು.

ಬಾಲಕೋಟ್ ದಾಳಿಯನ್ನು ಸಮರ್ಥಿಸಿದ ಅವರು ``ಗಡಿಯಾಚೆಗೆ ತರಬೇತಿ ಪಡೆದ ಉಗ್ರರು ಭಾರತದ ವಿರುದ್ಧ ದಾಳಿ ನಡೆಸುವುದನ್ನು ತಡೆಯಲು ಹಾಗೂ ಅವರನ್ನು ಮುಗಿಸಲು ಈ  ಕಾರ್ಯಾಚರಣೆ ನಡೆದಿತ್ತು'' ಎಂದರು.

ಉಗ್ರರಿಗೆ ಯಾವುದೇ ಹಣಕಾಸು ಸಹಾಯ ದೊರೆಯದೇ ಇರುವಂತೆ ಮಾಡಲು ಎನ್‍ಐಎ  ಹಾಗೂ ಜಾರಿ ನಿರ್ದೇಶನಾಲಯ ಸಂಘಟಿತ ಯತ್ನಗಳನ್ನು ನಡೆಸುತ್ತಿದೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News