ಬ್ರೆಝಿಲ್: ಕೈದಿಗಳ ನಡುವೆ ಹೊಡೆದಾಟ; 15 ಸಾವು

Update: 2019-05-27 17:52 GMT

ಬ್ರೆಸೀಲಿಯ (ಬ್ರೆಝಿಲ್), ಮೇ 27: ಉತ್ತರ ಬ್ರೆಝಿಲ್‌ನ ಅಮೆರೆನಸ್ ರಾಜ್ಯದ ಜೈಲೊಂದರಲ್ಲಿ ರವಿವಾರ ಕೈದಿಗಳ ನಡುವೆ ನಡೆದ ಹೊಡೆದಾಟದಲ್ಲಿ 15 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಜೈಲು ಪ್ರಾಧಿಕಾರ ತಿಳಿಸಿದೆ.

ರಾಜ್ಯದ ರಾಜಧಾನಿ ಮನೌಸ್‌ನಿಂದ ಸುಮಾರು 28 ಕಿ.ಮೀ. ದೂರದಲ್ಲಿರುವ ಈ ಕಾರಾಗೃಹಕ್ಕೆ ಸಂದರ್ಶಕರು ಭೇಟಿ ನೀಡುತ್ತಿದ್ದ ಅವಧಿಯಲ್ಲಿ ಬೆಳಗ್ಗಿನ ಸುಮಾರು 11 ಗಂಟೆಗೆ ಘರ್ಷಣೆ ಆರಂಭಗೊಂಡಿದೆ.

‘‘ಅದು ಕೈದಿಗಳ ನಡುವಿನ ಹೊಡೆದಾಟವಾಗಿತ್ತು. ಸಂದರ್ಶಕರ ಭೇಟಿಯ ವೇಳೆ ಯಾವತ್ತೂ ಸಾವು ಸಂಭವಿಸಿಲ್ಲ’’ ಎಂದು ಕರ್ನಲ್ ಮಾರ್ಕೋಸ್ ವಿನಿಸಿಯಸ್ ಅಲ್ಮೇಡ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹಿಂಸಾಚಾರವನ್ನು ನಿಗ್ರಹಿಸಲು ಅಧಿಕಾರಿಗಳು ತಕ್ಷಣ ಕ್ರಮಗಳನ್ನು ತೆಗೆದುಕೊಂಡರು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಇದೇ ಜೈಲಿನಲ್ಲಿ 2017 ಜನವರಿಯಲ್ಲಿ ಕೈದಿಗಳು ಬಂಡೆದಿದ್ದರು. ಅಂದು ಸುಮಾರು 20 ನಿಮಿಷಗಳ ಕಾಲ ನಡೆದ ಗಲಭೆಯಲ್ಲಿ 56 ಮಂದಿ ಮೃತಪಟ್ಟಿದ್ದರು.

2016 ಜೂನ್ ಹೊತ್ತಿಗೆ ಬ್ರೆಝಿಲ್‌ನ ಜೈಲುಗಳಲ್ಲಿ 7,26,712 ಕೈದಿಗಳಿದ್ದರು. ಆ ದೇಶದಲ್ಲಿರುವ ಜೈಲುಗಳ ಸಾಮರ್ಥ್ಯವು ಒಟ್ಟು 3,68,049 ಎಂಬುದಾಗಿ ಅಂದಾಜಿಸಲಾಗಿದೆ. ಸಾಮರ್ಥ್ಯಕ್ಕಿಂತ ದುಪ್ಪಟ್ಟು ಪ್ರಮಾಣದ ಕೈದಿಗಳು ಜೈಲುಗಳಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News