ಅಮೆರಿಕ,ಇರಾನ್ ನಡುವೆ ಸಂಧಾನ ಏರ್ಪಡಿಸಲು ಮುಂದಾದ ಇರಾಕ್

Update: 2019-05-27 18:05 GMT

ಬಗ್ದಾದ್, ಮೇ 27: ತನ್ನ ಎರಡು ಪ್ರಮುಖ ಮಿತ್ರದೇಶಗಳಾದ ಅಮೆರಿಕ ಮತ್ತು ಇರಾನ್‌ಗಳ ನಡುವೆ ಸಂಧಾನ ಏರ್ಪಡಿಸಲು ಇರಾಕ್ ಮುಂದಾಗಿದೆ.

ಇರಾಕ್ ಪ್ರವಾಸದಲ್ಲಿರುವ ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಜೊತೆ ರವಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇರಾಕ್ ವಿದೇಶ ಸಚಿವ ಮುಹಮ್ಮದ್ ಅಲ್-ಹಕೀಮ್ ಈ ಕೊಡುಗೆಯನ್ನು ನೀಡಿದರು.

‘‘ನಾವು ಸಹಾಯ ಮಾಡಲು ಹಾಗೂ ಸಂಧಾನಕಾರರಾಗಲು ಪ್ರಯತ್ನಿಸುತ್ತಿದ್ದೇವೆ’’ ಎಂದು ಅಲ್-ಹಕೀಮ್ ನುಡಿದರು. ‘‘ತೃಪ್ತಿದಾಯಕ ಪರಿಹಾರಕ್ಕಾಗಿ ಬಗ್ದಾದ್ ಪ್ರಯತ್ನಿಸುತ್ತಿದೆ’’ ಎಂದರು.

ಅದೇ ವೇಳೆ, ಅಮೆರಿಕ ತೆಗೆದುಕೊಂಡಿರುವ ಏಕಪಕ್ಷೀಯ ಕ್ರಮಗಳಿಗೆ ಇರಾಕ್ ವಿರುದ್ಧವಾಗಿದೆ ಎಂದು ಅವರು ನುಡಿದರು.

ಅಮೆರಿಕ ಇತ್ತೀಚೆಗೆ ಅರೇಬಿಯನ್ ಕೊಲ್ಲಿಯಲ್ಲಿ ವಿಮಾನವಾಹಕ ಯುದ್ಧನೌಕೆ ಯುಎಸ್‌ಎಸ್ ಅಬ್ರಹಾಮ್ ಲಿಂಕನ್, ಬಿ-52 ಬಾಂಬರ್ ವಿಮಾನಗಳು ಮತ್ತು 1,500 ಸೈನಿಕರನ್ನು ನಿಯೋಜಿಸಿದ ಬಳಿಕ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News