2020ರ ನವೆಂಬರ್ ವೇಳೆಗೆ ರಾಜ್ಯಸಭೆಯಲ್ಲಿ ಎನ್‍ ಡಿಎಗೆ ಬಹುಮತ ಸಾಧ್ಯತೆ

Update: 2019-05-28 07:45 GMT

ಹೊಸದಿಲ್ಲಿ, ಮೇ 28: ಸದ್ಯ ರಾಜ್ಯಸಭೆಯಲ್ಲಿ 102 ಸದಸ್ಯರ ಬಲ ಹೊಂದಿರುವ ಬಿಜೆಪಿ ನೇತೃತ್ವದ ಎನ್‍ ಡಿಎ ಮುಂದಿನ ವರ್ಷದ ನವೆಂಬರ್ ಒಳಗಾಗಿ ಮೇಲ್ಮನೆಯಲ್ಲಿ ಬಹುಮತ ಪಡೆಯುವ ಸಾಧ್ಯತೆಯಿದ್ದು, ಇದು ಮೋದಿ ಸರಕಾರಕ್ಕೆ ಕೆಲ ಪ್ರಮುಖ ಮಸೂದೆಗಳನ್ನು ಜಾರಿಗೊಳಿಸಲು ಅನುಕೂಲ ಕಲ್ಪಿಸಲಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಬಳಿ ಈಗ ಮೇಲ್ಮನೆಯಲ್ಲಿ 65 ಸದಸ್ಯರ ಬಲವಿದ್ದು, ಎರಡೂ ಮೈತ್ರಿ ಕೂಟಗಳ ಭಾಗವಾಗಿಲ್ಲದ ಪಕ್ಷಗಳ ಸದಸ್ಯರ ಸಂಖ್ಯೆ 73 ಆಗಿದೆ. ರಾಜ್ಯಸಭೆಯಲ್ಲಿ ಬಹುಮತಕ್ಕಾಗಿ 123 ಮಂದಿಯ ಬೆಂಬಲ ಅಗತ್ಯವಿದೆ.

ರಾಜ್ಯಸಭೆಯ 10 ಸ್ಥಾನಗಳು ಈ ವರ್ಷ ಹಾಗೂ 72 ಸ್ಥಾನಗಳು 2020ರಲ್ಲಿ ತೆರವಾಗಲಿವೆ. ಮುಂದಿನ ವರ್ಷ ತೆರವಾಗಲಿರುವ 72 ಸ್ಥಾನಗಳ ಪೈಕಿ 55 ಸ್ಥಾನಗಳು ಎಪ್ರಿಲ್ ನಲ್ಲಿ, ಜೂನ್ ತಿಂಗಳಲ್ಲಿ ಐದು, ಜುಲೈನಲ್ಲಿ ಒಂದು ಹಾಗೂ ಮುಂದಿನ ವರ್ಷದ ನವೆಂಬರ್ ನಲ್ಲಿ 11 (ಉತ್ತರ ಪ್ರದೇಶದ 10 ಸಹಿತ) ಖಾಲಿ ಬೀಳಲಿವೆ.

ಆಡಳಿತ ಎನ್‍ ಡಿಎಗೆ ರಾಜ್ಯಸಭೆಯಲ್ಲಿ ಬಹುಮತ ಸಿಗಬೇಕಾದರೆ ಅದು ಈ ವರ್ಷ ನಡೆಯಲಿರುವ ಮಹಾರಾಷ್ಟ್ರ, ಹರ್ಯಾಣ ಮತ್ತು ಜಾರ್ಖಂಡ್ ವಿಧಾನಸಭಾ  ಚುಣಾವಣೆಗಳನ್ನು ಗೆಲ್ಲಬೇಕಿದೆ.  ಈಗಾಗಲೇ ಪಕ್ಷ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸಗಢ, ಒಡಿಶಾ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ  ಸೋತಿರುವುದರಿಂದ ಅದು ರಾಜ್ಯಸಭೆಯಲ್ಲಿ ಬಹುಮತಕ್ಕೆ ಮುಂದಿನ ವರ್ಷದ ನವೆಂಬರ್ ತನಕ ಕಾಯಬೇಕಿದೆ.

ರಾಜ್ಯಸಭೆಯಲ್ಲಿ ಬಹುಮತದ ಕೊರತೆಯಿಂದ ಎನ್‍ ಡಿಎ ಸರಕಾರಕ್ಕೆ ಈ ಹಿಂದಿನ ಅವಧಿಯಲ್ಲಿ ತ್ರಿವಳಿ ತಲಾಖ್ ಮಸೂದೆ ಹಾಗೂ ಪೌರತ್ವ ಕಾಯಿದೆ ತಿದ್ದುಪಡಿಗೆ ಅನುಮೋದನೆ ಪಡೆಯುವುದು ಸಾಧ್ಯವಾಗಿಲ್ಲ.

ಸಂಸತ್ತಿನಲ್ಲಿ ಈ ಹಿಂದೆ  ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ ಹಾಗೂ ಮನಮೋಹನ್ ಸಿಂಗ್ ಅವರ ಉಪಸ್ಥಿತಿಯಿದ್ದರೆ ಈ ಬಾರಿ ದೇವೇಗೌಡ ತುಮಕೂರಿನಿಂದ ಸೋತಿದ್ದರೆ, ಮನಮೋಹನ್ ಸಿಂಗ್  ರಾಜ್ಯಸಭೆಯಿಂದ ಮುಂದಿನ ತಿಂಗಳು ನಿವೃತ್ತರಾಗಲಿದ್ದಾರೆ. ಸಿಂಗ್ ಅವರು  ಮೇಲ್ಮನೆಗೆ ಅಸ್ಸಾಂನಿಂದ ಆಯ್ಕೆಯಾದವರಾಗಿದ್ದಾರೆ. ಜೂನ್ 7ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಆ ಸ್ಥಾನವನ್ನು ಉಳಿಸಲು ಸಾಧ್ಯವಾಗದು. ಸಂತಿಯೂಸ್ ಕುಜುರ್ ಅವರು ಪ್ರತಿನಿಧಿಸುತ್ತಿರುವ ಇನ್ನೊಂದು ಕಾಂಗ್ರೆಸ್ ರಾಜ್ಯಸಭಾ ಸ್ಥಾನ  ಕೂಡ ತೆರವಾಗಲಿದ್ದರೂ ಹಾಗೂ ಚುನಾವಣೆ ಜೂನ್ 14ರಂದು ನಡೆಯಲಿದೆ. ಆದರೆ   ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಸದಸ್ಯರ ಬಲವಿಲ್ಲದೇ ಇರುವುದರಿಂದ ಈ ಎರಡು ಸ್ಥಾನಗಳನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಅಸಾಧ್ಯ.

ಮನಮೋಹನ್ ಸಿಂಗ್ ಅವರನ್ನು ತಮಿಳುನಾಡಿನಿಂದ ರಾಜ್ಯಸಭೆಗೆ ಕಳುಹಿಸಲು ಕಾಂಗ್ರೆಸ್ ಪಕ್ಷ ಡಿಎಂಕೆ ಬೆಂಬಲ ಪಡೆದಲ್ಲಿ ಮಾತ್ರ ಈ ವರ್ಷ ಅವರನ್ನು ರಾಜ್ಯಸಭೆಗೆ ಕಳುಹಿಸಬಹುದಾಗಿದೆ. ತಮಿಳುನಾಡಿನ 6 ಸ್ಥಾನಗಳು ಜುಲೈ ತಿಂಗಳಲ್ಲಿ ತೆರವಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News