ಮನೆಯವರೇ ಆತ್ಮಹತ್ಯೆ ಎಂದರೂ ‘ಗೋರಕ್ಷಕ ಯುವಕನ ಕೊಲೆ’ ಎಂದು ಸುಳ್ಳು ಹರಡಿದ ಶೋಭಾ ಕರಂದ್ಲಾಜೆ!

Update: 2019-05-28 08:32 GMT

“19 ವರ್ಷದ ಶಿವು ಉಪ್ಪಾರ್ ಎಂಬ ಬಾಲಕನನ್ನು ಕೊಲೆಗೈದು , ಬೆಳಗಾವಿಯ ಬಾಗೇವಾಡಿ ಬಸ್ ನಿಲ್ದಾಣದಲ್ಲಿ ನೇಣು ಹಾಕಲಾಗಿದೆ. ಗೋಕಳ್ಳಸಾಗಣಿಕೆದಾರರಿಂದ ಗೋವುಗಳನ್ನು ರಕ್ಷಿಸಿದ್ದಕ್ಕಾಗಿ ಆತನನ್ನು ಕೊಲ್ಲಲಾಗಿದೆ. ಆತ ಮಾಡಿದ ಏಕೈಕ ತಪ್ಪಿದು. ಇದನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳನ್ನು ಬಂಧಿಸಬೇಕು” ಎಂದು ಶಿವು ಉಪ್ಪಾರ್ ಎಂಬ ಯುವಕನ ಸಾವಿಗೆ ಸಂಬಂಧಿಸಿ ಸಂಸದೆ ಶೋಭಾ ಕರಂದ್ಲಾಜೆ ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದರು.

ಸಂಸದೆಯ ಈ ಟ್ವೀಟ್ 2,300 ಬಾರಿ ರಿಟ್ವೀಟ್ ಆಗಿದೆ. ಶೋಭಾ ಕರಂದ್ಲಾಜೆ ಮಾತ್ರವಲ್ಲದೆ ಹಲವರು ಸಾಮಾಜಿಕ ಜಾಲತಾಣ ಫೇಸ್ಬುಕ್, ಟ್ವಿಟರ್, ವಾಟ್ಸ್ಯಾಪ್ ನಲ್ಲಿ ಶಿವು ಉಪ್ಪಾರ್ ಸಾವಿನ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಗೋರಕ್ಷಣೆ ಮಾಡಿದ ಕಾರಣಕ್ಕಾಗಿ ಶಿವು ಉಪ್ಪಾರ್ ನನ್ನು ಹತ್ಯೆಗೈದು ನೇಣಿಗೆ ಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ದ್ವೇಷ ಹರಡಲಾಗಿತ್ತು. ‘ಜಸ್ಟಿಸ್ ಫಾರ್ ಹಿಂದೂಸ್’ ಎಂಬ ಫೇಸ್ ಬುಕ್ ಪೇಜ್ ಕೂಡ ಗೋರಕ್ಷಕರಿಂದ ಶಿವು ಉಪ್ಪಾರ್ ಹತ್ಯೆ ಎಂದು ಪೋಸ್ಟ್ ಮಾಡಿತ್ತು.

ಕೊಲೆಯಲ್ಲ, ಆತ್ಮಹತ್ಯೆ

ಯುವಕ ಶಿವು ಉಪ್ಪಾರ್ ನನ್ನು ಕೊಲೆಗೈಯಲಾಗಿದೆ ಎನ್ನುವುದು ಅಪ್ಪಟ ಸುಳ್ಳು. ಇದನ್ನು ಬೆಳಗಾಂ ಕಮಿಷನರ್ ಬಿ.ಎಸ್. ಲೋಕೇಶ್ ಕುಮಾರ್ ಖಚಿತಪಡಿಸಿದ್ದಾರೆ ಎಂದು altnews.in ವರದಿ ಮಾಡಿದೆ. “ಇದು ಆತ್ಮಹತ್ಯೆ ಪ್ರಕರಣ. ನಮಗೆ ಮರಣೋತ್ತರ ಪರೀಕ್ಷೆಯ ವರದಿ ಲಭಿಸಿದೆ. ಆತ್ಮಹತ್ಯೆ ಎಂಬುದು ವರದಿಯಿಂದ ಖಚಿತಗೊಂಡಿದೆ. ಮೃತ ಯುವಕನ ದೇಹದಲ್ಲಿ ಯಾವುದೇ ಗಾಯಗಳ ಗುರುತಿಲ್ಲ” ಎಂದವರು ಹೇಳಿದ್ದಾರೆ.

“ಯುವಕ ಮನೆಯವರಲ್ಲಿ ಜಗಳವಾಡಿದ್ದ. ಶಿವು ಉಪ್ಪಾರ್ ನದ್ದು ಆತ್ಮಹತ್ಯೆ ಎಂದು ಮನೆಯವರೇ ದೂರು ನೀಡಿದ್ದಾರೆ. ಅನಗತ್ಯವಾಗಿ ಜನರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ” ಎಂದು ಅವರು ಸ್ಪಷ್ಟಪಡಿಸಿದರು ಎಂದು altnews.in ವರದಿ ಮಾಡಿದೆ.

ಇಬ್ಬರ ಬಂಧನ

ಶಿವು ಉಪ್ಪಾರ್ ಸಾವಿಗೆ ಸಂಬಂಧಿಸಿ ಸುಳ್ಳು ಹರಡಿ ಕೋಮುದ್ವೇಷ ಸೃಷ್ಟಿಸಲು ಯತ್ನಿಸಿದ ಇಬ್ಬರನ್ನು ಬಂಧಿಸಲಾಗಿದೆ.

“ತನಿಖೆ ಆರಂಭಗೊಳ್ಳುವ ಮೊದಲೇ ಆತನನ್ನು ಕೊಲೆಗೈದು ನೇಣು ಹಾಕಲಾಗಿದೆ ಎನ್ನುವ ಸುಳ್ಳು ಹರಡತೊಡಗಿತು” ಎಂದು ಬೆಳಗಾವಿ ಎಸ್ ಪಿ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ ಎಂದು news18.com ವರದಿ ಮಾಡಿದೆ. ಸುಳ್ಳು ಹರಡಿದ್ದಕ್ಕಾಗಿ ಅರ್ಜುನ್ ಮುತ್ತಪ್ಪ ಬಸರಾಗಿ (31) ಮತ್ತು ಫಕೀರಪ್ಪ ರಮೇಶ್ ತಲವಾರ್ (28) ಎಂಬವರನ್ನು ಬಂಧಿಸಲಾಗಿದೆ. ಇವರು ಫೇಸ್ ಬುಕ್ ಮತ್ತು ವಾಟ್ಸ್ಯಾಪ್ ನಲ್ಲಿ ಸುಳ್ಳು ಹರಡಿದ್ದರು.

ಶೋಭಾ ಸ್ಪಷ್ಟನೆ

ಸುಳ್ಳು ಹರಡಿದ್ದಕ್ಕಾಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಂಸದೆ ಶೋಭಾ ಕರಂದ್ಲಾಜೆ ಮತ್ತೊಂದು ಟ್ವೀಟ್ ಮಾಡಿದ್ದು, “ಸುರೇಶ್ ಅಂಗಡಿಯವರು ಕಮಿಷನರ್ ಜೊತೆ ಮಾತನಾಡಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆಯಲ್ಲ ಆತ್ಮಹತ್ಯೆ ಎಂಬುದು ಖಚಿತಗೊಂಡಿದೆ ಎಂದು ಹೇಳಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಈ ಸುದ್ದಿ ಸುಳ್ಳು ಎಂದು ಸಾಬೀತಾದ ನಂತರವೂ ಶೋಭಾ ತನ್ನ ಹಳೆಯ ಟ್ವೀಟನ್ನು ಡಿಲಿಟ್ ಮಾಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News