ಉದ್ವಿಗ್ನತೆ ಸೃಷ್ಟಿಸುತ್ತಿರುವ ಅಮೆರಿಕ: ಟ್ರಂಪ್ ಹೇಳಿಕೆಯನ್ನು ಖಂಡಿಸಿದ ಇರಾನ್
ಟೆಹರಾನ್, ಮೇ 28: ‘ಉದ್ವಿಗ್ನತೆಯನ್ನು ಸೃಷ್ಟಿಸುತ್ತಿರುವುದಕ್ಕಾಗಿ’ ಇರಾನ್ ಅಮೆರಿಕದ ವಿರುದ್ಧ ಸೋಮವಾರ ಕೆಂಡ ಕಾರಿದೆ.
ಟ್ರಂಪ್ ಆಡಳಿತವು ಇರಾನ್‌ನಲ್ಲಿ ಸರಕಾರ ಬದಲಾವಣೆಯನ್ನು ಬಯಸುತ್ತಿಲ್ಲ ಹಾಗೂ ಇರಾನ್ ಜೊತೆಗಿನ ಮಾತುಕತೆಯನ್ನು ನಾನು ಸ್ವಾಗತಿಸುತ್ತೇನೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಪ್ರತಿಕ್ರಿಯಿಸುತ್ತಿದ್ದರು.
‘‘ಟ್ರಂಪ್ ಆಡಳಿತವು ಇರಾನ್ ಜನತೆಗೆ ಘಾಸಿಯುಂಟು ಮಾಡುತ್ತಿದೆ ಹಾಗೂ ವಲಯದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದೆ’’ ಎಂಬುದಾಗಿ ಅವರು ತನ್ನ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ.
‘‘ಅದು ಡೊನಾಲ್ಡ್ ಟ್ರಂಪ್‌ರ ನಿಜವಾದ ಉದ್ದೇಶ ಹೌದೇ, ಅಲ್ಲವೇ ಎನ್ನುವುದನ್ನು ಮಾತುಗಳಲ್ಲ, ಕಾರ್ಯಗಳು ತೋರಿಸುತ್ತವೆ’’ ಎಂದು ಜಾವೇದ್ ಶರೀಫ್ ಬರೆದಿದ್ದಾರೆ.
ಇರಾನ್ ಪರಮಾಣು ಅಸ್ತ್ರಗಳನ್ನು ಪಡೆಯಲು ಯತ್ನಿಸುತ್ತಿಲ್ಲ
ಇರಾನ್ ಪರಮಾಣು ಅಸ್ತ್ರಗಳ ಬೆನ್ನು ಬಿದ್ದಿದೆ ಎನ್ನುವುದನ್ನೂ ಆ ದೇಶದ ವಿದೇಶ ಸಚಿವ ಜಾವೇದ್ ಶರೀಫ್ ನಿರಾಕರಿಸಿದರು.
‘‘ನಾವು ಇರಾನ್‌ನಲ್ಲಿ ಪರಮಾಣು ಅಸ್ತ್ರಗಳನ್ನು ಹುಡುಕುತ್ತಿಲ್ಲ’’ ಎಂಬ ಟ್ರಂಪ್ ಹೇಳಿಕೆಗೆ ಅವರು ಈ ರೀತಿಯಾಗಿ ಪ್ರಕ್ರಿಯಿಸುತ್ತಿದ್ದರು.
‘‘ನಾವು ಪರಮಾಣು ಅಸ್ತ್ರಗಳನ್ನು ಪಡೆಯಲು ಯತ್ನಿಸುತ್ತಿಲ್ಲ ಎನ್ನುವುದನ್ನು ಇರಾನ್‌ನ ಪರಮೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ತುಂಬಾ ಹಿಂದೆಯೇ ಹೇಳಿದ್ದಾರೆ. ಪರಮಾಣು ಅಸ್ತ್ರಗಳನ್ನು ನಿಷೇಧಿಸಿ ಅವರು ಫತ್ವಾವನ್ನೂ ಹೊರಡಿಸಿದ್ದಾರೆ’’ ಎಂದು ಜಾವೇದ್ ಶರೀಫ್ ಹೇಳಿದರು.