ಮೌಂಟ್ ಎವರೆಸ್ಟ್ ದುರಂತ ತಪ್ಪಿಸಲು ಆರೋಹಿಗಳಿಗೆ ಕಠಿಣ ನಿಯಮಗಳು ಅಗತ್ಯ

Update: 2019-05-28 17:43 GMT

ಕಠ್ಮಂಡು (ನೇಪಾಳ), ಮೇ 28: ಮೌಂಟ್ ಎವರೆಸ್ಟ್‌ನಲ್ಲಿ ಈ ವರ್ಷ ಸಂಭವಿಸಿರುವ ದುರಂತಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದರೆ, ಪ್ರಾಥಮಿಕ ಕೌಶಲಗಳನ್ನು ಹೊಂದಿರದ ಆರೋಹಿಗಳಿಗೆ ಶಿಖರ ಏರಲು ಅವಕಾಶ ನೀಡಬಾರದು ಎಂಬುದಾಗಿ ಎವರೆಸ್ಟ್ ‘ಟ್ರಾಫಿಕ್ ಜಾಮ್’ ಎಂಬ ಸಾವಿನ ದವಡೆಯಿಂದ ಪಾರಾಗಿ ಬಂದಿರುವ ಅಮೀಶಾ ಚೌಹಾನ್ ಹೇಳುತ್ತಾರೆ.

ಚೌಹಾನ್ ಈಗ ಹಿಮಹುಣ್ಣು (ಫ್ರಾಸ್ಟ್ ಬೈಟ್)ವಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎವರೆಸ್ಟ್‌ನಲ್ಲಿ ಎರಡು ವಾರಗಳ ಅವಧಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಅವರ ಪೈಕಿ ಹೆಚ್ಚಿನವರು ಶಿಖರ ತಲುಪಿದ ಬಳಿಕ ಕ್ಷಿಪ್ರವಾಗಿ ಇಳಿಯಲು ಸಾಧ್ಯವಾಗದೆ ಬಳಲಿಕೆ ಮತ್ತು ಕೊರೆಯುವ ಹಿಮ ಹುಣ್ಣುವಿನಿಂದಾಗಿ ಮೃತಪಟ್ಟಿದ್ದಾರೆ.

ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಆರೋಹಣ ಋತುವಿನ ಅವಧಿಯನ್ನು ಕಡಿಮೆ ಮಾಡಿದ ಬಳಿಕ, ಆರೋಹಿಗಳು ಒಮ್ಮೆಲೇ ಹೆಚ್ಚಿನ ಸಂಖ್ಯೆಯಲ್ಲಿ ಆರೋಹಣಕ್ಕೆ ಮುಂದಾದ ಹಿನ್ನೆಲೆಯಲ್ಲಿ ಅಲ್ಲಿ ದೊಡ್ಡ ಸರತಿ ಸಾಲು ಏರ್ಪಟ್ಟಿತ್ತು.

ಪ್ರಸಕ್ತ ಆರೋಹಣ ಋತುವಿನಲ್ಲಿ ನೇಪಾಳವು ದಾಖಲೆಯ 381 ಪರವಾನಿಗೆಗಳನ್ನು ನೀಡಿರುವುದನ್ನು ಸ್ಮರಿಸಬಹುದಾಗಿದೆ. ‘‘ಈ ಪೈಕಿ ಹಲವು ನೂರು ಆರೋಹಿಗಳು ಸರಿಯಾದ ತರಬೇತಿಯನ್ನೇ ಪಡೆದಿಲ್ಲ, ಅವರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಮೂಲಕ ಅವರು ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಈಡು ಮಾಡುವುದರ ಜೊತೆಗೆ ತಮ್ಮ ಶೆರ್ಪಾ ಗೈಡ್‌ಗಳ ಪ್ರಾಣಗಳನ್ನೂ ಅಪಾಯಕ್ಕೆ ಸಿಲುಕಿಸುತ್ತಾರೆ’’ ಎಂದು ಆಕೆ ಹೇಳಿದರು.

ಆರೋಹಿಗಳ ಉದ್ದನೆ ಸಾಲಿನಿಂದಾಗಿ, ಚೌಹಾನ್ ಎವರೆಸ್ಟ್ ತುದಿಯನ್ನು ತಲುಪಿದ ಬಳಿಕ ಕೆಳಗೆ ಬರಲು 20 ನಿಮಿಷಗಳು ಕಾಯಬೇಕಾಯಿತು. ಆದರೆ, ಇತರರು ಗಂಟೆಗಟ್ಟಳೆ ಬಾಕಿಯಾಗಿದ್ದರು.

‘‘ಪ್ರಾಥಮಿಕ ಕೌಶಲಗಳಿಲ್ಲದೆ ಎಲ್ಲದಕ್ಕೂ ತಮ್ಮ ಶೆರ್ಪಾ ಗೈಡ್‌ಗಳನ್ನೇ ಅವಲಂಬಿಸಿರುವ ಕೆಲವು ಆರೋಹಿಗಳನ್ನು ನಾನು ನೋಡಿದ್ದೇನೆ. ಸರಕಾರವು ಅರ್ಹತಾ ಮಾನದಂಡಗಳನ್ನು ವಿಧಿಸಬೇಕು’’ ಎಂದು ಕಠ್ಮಂಡುವಿನ ಸರಕಾರಿ ಆಸ್ಪತ್ರೆಯಲ್ಲಿ ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ 29 ವರ್ಷದ ಭಾರತೀಯ ಮಹಿಳೆ ಹೇಳಿದರು.

ಇಳಿಯುತ್ತಿರುವಾಗ ಅಮೆರಿಕನ್ ಆರೋಹಿ ಸಾವು

ವೌಂಟ್ ಎವರೆಸ್ಟ್‌ನಿಂದ ಇಳಿಯುತ್ತಿರುವ ವೇಳೆ ಸೋಮವಾರ ಅಮೆರಿಕದ ಆರೋಹಿಯೊಬ್ಬರು ಮೃತಪಟ್ಟಿದ್ದಾರೆ ಎಂದು ನೇಪಾಳಿ ಅಧಿಕಾರಿಗಳು ಹೇಳಿದ್ದಾರೆ.

ಇದರೊಂದಿಗೆ ಈ ವರ್ಷದ ಆರೋಹಣ ಋತುವಿನಲ್ಲಿ ನೇಪಾಳದ ಬದಿಯಲ್ಲಿ ಮೃತಪಟ್ಟ ಹಾಗೂ ನಾಪತ್ತೆಯಾದವರ ಸಂಖ್ಯೆ 11ಕ್ಕೇರಿದೆ.

61 ವರ್ಷದ ಕ್ರಿಸ್ಟೋಫರ್ ಜಾನ್ ಕುಲಿಶ್ ಸಾಮಾನ್ಯವಾಗಿರುವ ಆಗ್ನೇಯ ಅಂಚಿನ ಮಾರ್ಗದಿಂದ ಸೋಮವಾರ ಬೆಳಗ್ಗೆ 8,850 ಮೀಟರ್ ಎತ್ತರದ ಶಿಖರವನ್ನು ತಲುಪಿದರು. ಆದರೆ, ಇಳಿದ ಬಳಿಕ, ಸೌತ್ ಕಾಲ್‌ನಲ್ಲಿ ಹಠಾತ್ ಮೃತಪಟ್ಟರು ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಮೀರಾ ಆಚಾರ್ಯ ಹೇಳಿದರು.

ಅವರು ಇಳಿಯುತ್ತಿದ್ದಾಗ ಒಮ್ಮೆಲೆ ಹೃದಯದ ಸಮಸ್ಯೆಯನ್ನು ಎದುರಿಸಿದರು ಹಾಗೂ ತಕ್ಷಣ ಕೊನೆಯುಸಿರೆಳೆದರು ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News