5ಜಿ ತರಂಗಾಂತರದ ಕಥೆಯೇನು?

Update: 2019-05-28 18:32 GMT

ಒಂದೆಡೆ ಚೀನಾ ಸೈಬರ್ ಸ್ವಾಯತ್ತತೆಯನ್ನೂ ಮತ್ತು ದೇಶದೇಶಗಳ ನಡುವಿನ ದತ್ತಾಂಶಗಳ ಹರಿವಿನ ಮೇಲೆ ಪ್ರಭುತ್ವದ ಬಹಿರಂಗ ನಿಯಂತ್ರಣವು ಇರಬೇಕೆಂದು ಪ್ರತಿಪಾದಿಸಿದರೆ, ಮತ್ತೊಂದೆಡೆ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟಗಳೂ ಕೂಡಾ ಅದನ್ನೇ ಗುಪ್ತವಾಗಿ ಪ್ರತಿಪಾದಿಸುತ್ತಿವೆ. ಹಾಗಿದ್ದರೆ ಅವುಗಳ ನಡುವಿರುವ ನೈಜ ರಾಜಕೀಯ ಸಂಬಂಧಗಳೇನು?; ದೀರ್ಘಕಾಲದ ವೈಷಮ್ಯದ್ದೋ ಅಥವಾ ವ್ಯೆಹಾತ್ಮಕ ಸ್ಪರ್ಧೆಯದ್ದೋ?

ನಲವತ್ತು ವರ್ಷಗಳ ಆರ್ಥಿಕ ಏಕೀಕರಣದ ನಂತರ ಇದೀಗ ಅಮೆರಿಕ ಮತ್ತು ಚೀನಾಗಳು ಎಂತಹ ಆರ್ಥಿಕ ಸಂಘರ್ಷದ ತುತ್ತತುದಿಯನ್ನು ಮುಟ್ಟಿದೆ ಎಂದರೆ ಅದನ್ನು ಕಡಿಮೆಮಾಡಿಕೊಳ್ಳುವ ಬಗ್ಗೆ ಯೋಚಿಸಲು ಹಾಗೂ ಕಿಂಚಿತ್ತೂ ತಾಳ್ಮೆಯಿಂದ ವ್ಯವಹರಿಸಲೂ ಸಹ ಆ ದೇಶಗಳ ರಾಜಕೀಯ ನಾಯಕತ್ವ ಸಿದ್ಧವಿಲ್ಲ. ವಾಸ್ತವವಾಗಿ ಎರಡೂ ದೇಶಗಳ ನಾಯಕರೂ ಪರಸ್ಪರರ ನಡುವೆ ಸರಕು, ಬಂಡವಾಳ, ಜನತೆ ಮತ್ತು ತಂತ್ರಜ್ಞಾನ ವಿನಿಮಯಗಳ ಬಗ್ಗೆ ಇದ್ದ ಎಲ್ಲಾ ಸಂಬಂಧಗಳನ್ನು ಹರಿದುಕೊಳ್ಳಲು ಸಿದ್ಧವೆಂದು ಹೇಳುತ್ತಿದ್ದಾರೆ. ಈ ಎರಡೂ ದೇಶಗಳ ನಡುವೆ ಸರಕುಗಳ ವಿನಿಮಯ ಸಂಬಂಧಗಳು ಹರಿದುಕೊಳ್ಳುವುದು ಜಾಗತಿಕ ಸರಕು ಸರಣಿಯ ಮೇಲೆ ಅದರಲ್ಲೂ ಮತ್ತಷ್ಟು ಸಂವೇದನಾಶಿಲ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಕ್ಷೇತ್ರದ ಮೇಲೆ ವಿಶೇಷವಾದ ಪರಿಣಾಮವನ್ನು ಬೀರುತ್ತದೆ. ಅಮೆರಿಕದ ಆರ್ಥಿಕತೆಯ ದೊಡ್ಡ ಕ್ಷೇತ್ರಗಳ ಮೇಲೆ ಚೀನಾ ಹಿಡಿತವನ್ನು ಸಾಧಿಸದಂತೆ ಅಮೆರಿಕ ಹೇರುತ್ತಿರುವ ನಿರ್ಬಂಧವು ದೇಶ-ದೇಶಗಳ ನಡುವಿನ ಬಂಡವಾಳದ ಹರಿವಿನ ಮೇಲೆ ತೀವ್ರವಾದ ಪರಿಣಾಮ ಬೀರಲಿದೆ. ಆದರೆ ಅಮೆರಿಕವು ಇತ್ತೀಚೆಗೆ ಜಾರಿಮಾಡಿರುವ ನೀತಿಗಳಿಂದಾಗಿ ಚೀನಾದ ಜನರ ವಿನಿಮಯವನ್ನು ಅದರಲ್ಲೂ ನಿರ್ದಿಷ್ಟ ವೈಜ್ಞಾನಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಅಧ್ಯಯನಕ್ಕೆ ಅನುಮತಿ ನೀಡದಂತೆ ಚೀನಾದ ವಿದ್ಯಾರ್ಥಿಗಳನ್ನು ಅಮೆರಿಕ ನಿಷೇಧಿಸಬಲ್ಲದು. ಹೀಗೆ ಅಮೆರಿಕ ಮತ್ತು ಚೀನಾಗಳು ಪರಸ್ಪರರನ್ನು ನಿಷೇಧಿಸುತ್ತಿರುವುದರಿಂದ ಒಂದು ಸಮಗ್ರವಾದ ಜಾಗತಿಕ ವೈಜ್ಞಾನಿಕ ಅನ್ವೇಷಣಾ ಪರಿಸರವನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನಕ್ಕೆ ದೊಡ್ಡ ಧಕ್ಕೆಯುಂಟಾಗಿದೆ. ಇತ್ತೀಚೆಗೆ ಚೀನಾದ ಟೆಲಿಕಾಂ ದೈತ್ಯನಾದ ವಾವೇ ಕಂಪೆನಿಯ ಮೇಲೆ ಹಾಗೂ ಅದರ ಸಹಭಾಗಿ ಕಂಪೆನಿಗಳ ಮೇಲೆ ಅಮೆರಿಕ ಹೇರಿರುವ ನಿಷೇಧ/ನಿರ್ಬಂಧಗಳು ಜಾಗತಿಕ ತಂತ್ರಜ್ಞಾನ ಸಂಬಂಧಗಳು ಕಳಚಿಕೊಳ್ಳುತ್ತಿರುವುದಕ್ಕೆ ಒಂದು ಸಂಕೇತವಾಗಿದೆ.

 1987ರಲ್ಲಿ ಹಾಂಗ್‌ಕಾಂಗ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದ ಟೆಲಿಫೋನ್ ಸ್ವಿಚಿಂಗ್ ಗೇರುಗಳನ್ನು ಮರುಮಾರಾಟ ಮಾಡುವ ಉದ್ದಿಮೆಯಾಗಿ ಮಾತ್ರ ಪ್ರಾರಂಭವಾದ ವಾವೇ ಕಂಪೆನಿಯು 1990ರ ಕೊನೆಯ ವೇಳೆಗೆ ನೊಕಿಯಾ ಮತ್ತು ಎರಿಕ್‌ಸನ್ ಅಂಥ ಕಂಪೆನಿಗಳ ಸರಿಸಾಟಿಯಾಗಿದೆ ಮತ್ತು ಇಂದು ಜಗತ್ತಿನಲ್ಲಿ ಮೊಬೈಲ್ ಫೋನುಗಳಿಗೆ ಬೇಕಾದ ಅತ್ಯಾಧುನಿಕ ನೆಟ್‌ವರ್ಕ್ ತಂತ್ರಜ್ಞಾನವನ್ನು ಒದಗಿಸುವ ಪ್ರಮುಖ ಉದ್ದಿಮೆಯಾಗಿ ಬೆಳೆದುನಿಂತಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಐದನೇ ಪೀಳಿಗೆ- 5-ಜಿ ತಂತ್ರಜ್ಞಾನದ ತಾಂತ್ರಿಕ ಮಾದರಿಗಳನ್ನು ರೂಪಿಸುವಲ್ಲಿ ತೋರುತ್ತಿರುವ ಕ್ರೀಯಾಶೀಲತೆಯಿಂದಾಗಿ ಅದು ಈಗ ಪ್ರಪಂಚದ ಮನೆಮಾತಾಗಿದೆ. ಆದ್ದರಿಂದಲೇ 2025ರ ವೇಳೆಗೆ ಜಗತ್ತಿನಾದ್ಯಂತ ಸ್ಥಾಪಿಸಲ್ಪಡುವ 5-ಜಿ ಸಂಪರ್ಕಗಳಲ್ಲಿ ಶೇ.33ರಷ್ಟನ್ನು ಚೀನಾವೇ ಮಾಡಲಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಹಾಗೂ ಯುರೋಪುಗಳು ಒಟ್ಟಾಗಿಯೂ ಸಹ ಶೇ.25ಕ್ಕಿಂತ ಹೆಚ್ಚು ಪಾಲನ್ನು ಪಡೆಯಲಾರರು ಎಂದು ಅಂದಾಜಿಸಲಾಗಿದೆ. ಇದರ ಅರ್ಥವೇನು? 2018ರಲ್ಲಿ ಚೀನಾವು ಈ ಕ್ಷೇತ್ರಕ್ಕೆ ಸಂಬಂಧಪಟ್ಟ 53,345 ತಾಂತ್ರಿಕ ಪೇಟೆಂಟುಗಳನ್ನು (ಅದರ ಶೇ.10ರಷ್ಟು ಪೇಟೆಂಟುಗಳು ಕೇವಲ ವಾವೇ ಕಂಪೆನಿಯದ್ದೇ ಆಗಿದೆ)ಪಡೆದುಕೊಂಡಿದೆ. ಇಂದು ತಮ್ಮ ತಮ್ಮ ರಾಷ್ಟ್ರೀಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಾಧಿಸಲು ಅತ್ಯಗತ್ಯವೆಂದು ಭಾವಿಸುವ ತಂತ್ರಜ್ಞಾನಗಳಲ್ಲಿ ಇವು ಅತಿಮುಖ್ಯವಾಗಿವೆಯೆಂದು ಜಗತ್ತಿನ ಎಲ್ಲಾ ಸರಕಾರಗಳೂ ಭಾವಿಸುತ್ತಿವೆ. ಡಿಲೋಯಿಟ್ ಸಂಸ್ಥೆಯ ಅಧ್ಯಯನದ ಪ್ರಕಾರ 2015-18ರ ನಡುವೆ ಚೀನಾವು ಅಮೆರಿಕಕ್ಕಿಂತ 12 ಪಟ್ಟು ಹೆಚ್ಚು ಸೆಲ್‌ಸೈಟುಗಳನ್ನು (ಟವರುಗಳನ್ನು)ಹೊಂದಿತ್ತು ಹಾಗೂ 5-ಜಿ ತಂತ್ರಜ್ಞಾನದ ಮೇಲೆ 24 ಬಿಲಿಯನ್ ಡಾಲರ್‌ಗಳಿಗೂ ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡಿಯಾಗಿತ್ತು.
5-ಜಿ ತಂತ್ರಜ್ಞಾನವು ಇದೇ ಮಾದರಿಯ ಈ ಹಿಂದಿನ ತಂತ್ರಜ್ಞಾನಗಳಿಗಿಂತ ಹೆಚ್ಚು ಸುಧಾರಿತವಾದ ತಂತ್ರಜ್ಞಾನವಾಗಿದೆ. ಅದು ಹೆಚ್ಚೆಚ್ಚು ದತ್ತಾಂಶಗಳನ್ನು ಹೆಚ್ಚೆಚ್ಚು ಸಂಪರ್ಕ ಸಾಧನಗಳಿಗೆ ಅತ್ಯಂತ ಕಡಿಮೆ ಸಂವಹನ ವಿಳಂಬಗಳಲ್ಲಿ (ಲೇಟೆನ್ಸಿ) ವರ್ಗಾಯಿಸುತ್ತದೆ. ಆದರೆ ಸಂವಹನ ವಿಳಂಬವನ್ನು ಕಡಿತಗೊಳಿಸುವುದು ದುಬಾರಿಯಾದ ಕೆಲಸವಾಗಿದೆ. ಉದಾಹರಣೆಗೆ ಲಂಡನ್ ಮತ್ತು ನ್ಯೂಯಾರ್ಕ್ ನಡುವೆ ಅಟ್ಲಾಂಟಿಕ ಸಾಗರದಗುಂಟ 3,000 ಮೈಲುಗಳುದ್ದದ ಫೈಬರ್ ಆಫ್ಟಿಕ್ ಸಂಪರ್ಕವನ್ನು ಕಲ್ಪಿಸುವ ಹಿಬರ್ನಿಯಾ ಎಕ್ಸ್‌ಪ್ರೆಸ್ ಯೋಜನೆಯನ್ನು ವಾವೇ ಕಂಪೆನಿಯು ಹಿಬರ್ನಿಯಾ ಅಟ್ಲಾಂಟಿಕ್ ಕಂಪೆನಿಯ ಸಹಯೋಗದೊಂದಿಗೆ 2011ರಲ್ಲಿ ಕೈಗೆತ್ತಿಕೊಂಡಿತು. ಇದರ ಮೂಲಕ ಸಂವಹನದಲ್ಲಿ ಆಗುತ್ತಿದ್ದ 5 ಮಿಲಿ ಸೆಕೆಂಡುಗಳಷ್ಟು ವಿಳಂಬವನ್ನು ತಡೆಗಟ್ಟಬಹುದು. ಆದರೆ ಅದಕ್ಕಾಗಿ ವಾವೇ ವೆಚ್ಚ ಮಾಡುತ್ತಿರುವುದು ಕನಿಷ್ಠ ಪಕ್ಷ 400 ಮಿಲಿಯನ್ ಡಾಲರ್‌ಗಳು. ಅಂದರೆ ಪ್ರತಿ ಮಿಲಿ ಸೆಕೆಂಡುಗಳಷ್ಟು ವಿಳಂಬವನ್ನು ತಡೆಗಟ್ಟಲು ವಾವೇ ಕಂಪೆನಿ 80 ಮಿಲಿಯನ್ ಡಾಲರ್‌ಗಳನ್ನು ವ್ಯಯಿಸುತ್ತಿದೆ. ಈ ಹಿಂದಿನ ಟೆಲಿಕಾಂ ತಂತ್ರಜ್ಞಾನಗಳ ಸಂಪರ್ಕ ಯೋಜನೆಗಳಲ್ಲಿ ಕಂಡುಬಂದಿರುವಂತೆ 5-ಜಿ ಸಂಪರ್ಕ ಸ್ಥಾವರಗಳ ಪ್ರಾರಂಭಿಕ ತಂತ್ರಜ್ಞಾನಗಳ ಸ್ಥಾಪನೆಯ ಘಟ್ಟದಲ್ಲಿ ದೊಡ್ಡಮಟ್ಟದ ಬಂಡವಾಳದ ಹೂಡಿಕೆಯ ಅಗತ್ಯವಿರುತ್ತದೆ. ಅದೇ ಸಮಯದಲ್ಲಿ 5-ಜಿ ತಂತ್ರಜ್ಞಾನವು ಲಭ್ಯವಾದ ಮೇಲೆ ಬಹಳಷ್ಟು ಸೈಬರ್ ಸರಕು ಮತ್ತು ಸೇವೆಗಳು ಅದನ್ನೇ ಆಧರಿಸುವುದರಿಂದ ಮತ್ತು ವಿಸ್ತಾರಗೊಳ್ಳುವುದರಿಂದ ದೊಡ್ಡ ಮಟ್ಟದ ಆದಾಯದ ರಹದಾರಿ ತೆರೆದುಕೊಳ್ಳುತ್ತದೆಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ಆ ಆದಾಯಗಳೆಲ್ಲವೂ ಈ ಮೂಲ ಸಂಪರ್ಕವನ್ನು ನೀಡುವವರಿಗೆ ದಕ್ಕುತ್ತದೆಂದೂ ಯಾವ ಖಾತರಿಯೂ ಇಲ್ಲ.


ವಾಸ್ತವವಾಗಿ ಕಳೆದ ದಶಕದಲ್ಲಿ 4-ಜಿ ತಂತ್ರಜ್ಞಾನವನ್ನು ಒದಗಿಸಲು ಸಂಪರ್ಕಜಾಲದ ಮೇಲೆ ಪ್ರಾರಂಭಿಕ ಹೂಡಿಕೆ ಮಾಡಿದ ಅಮೆರಿಕ ಕಂಪೆನಿಗಳು ಲಾಭ ಮಾಡಿಕೊಂಡಿದ್ದು ಅಷ್ಟಕ್ಕಷ್ಟೆ. ಅವು ನಿರೀಕ್ಷಿತ ಆದಾಯವನ್ನು ಒದಗಿಸುವುದಿರಲಿ ಅದರ ಮೇಲೆ ಅವಲಂಬಿತರಾದವರ ಸಂಖ್ಯೆ ಹೆಚ್ಚಾಗಿ ಬೆಳೆಯುತ್ತಾ ಹೋಗಿ ಆ ಸಂದಣಿಯನ್ನು ನಿಯಂತ್ರಿಸಲು ಜಾಲಕರ್ತೃಗಳು ಜಾಲ ಸುಧಾರಣೆಯ ಮೇಲೆ ಹೆಚ್ಚು ವೆಚ್ಚ ಮಾಡಬೇಕಾಯಿತು ಮತ್ತು ತೀವ್ರ ಸ್ಪರ್ಧೆಯಿಂದಾಗಿ ಬಳಕೆ ಶುಲ್ಕವೂ ಕಡಿಮೆಯಾಗುತ್ತಾ ಹೋಯಿತು.
 ಇಂತಹ ಸಂದರ್ಭದಲ್ಲಿ ಜಾಲನಿರ್ಮಾಣದಲ್ಲಿ ಪಾಲುಪಡೆಯುವ ಮೂಲಕ ಒಟ್ಟಾರೆ ನಿರ್ಮಾಣ ವೆಚ್ಚವನ್ನು ಕಡಿಮೆಗೊಳಿಸಬಹುದಿತ್ತು ಮತ್ತು 5-ಜಿ ಸ್ಥಾಪನೆಯು ಇನ್ನಷ್ಟು ವೇಗವಾಗಿ ಆಗುವಂತೆ ಮಾಡಬಹುದಿತ್ತು. ಆದರೆ ಅಮೆರಿಕ ಹಾಗೂ ಅದರ ಮಿತ್ರರು ಅಂತಹ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳುವ ಬಗ್ಗೆ ಸಿನಿಕತನವನ್ನು ಪ್ರದರ್ಶಿಸುತ್ತಿದ್ದಾರೆ. ಇದಕ್ಕೆ ಏಶ್ಯಾದ ಆರ್ಥಿಕತೆಗಳು ಈ ಬಗೆಯ ಸೇವೆಯನ್ನು ಆಯ್ಕೆಮಾಡಿಕೊಳ್ಳುವಾಗ ಸಂಪರ್ಕ ಸಾಮರ್ಥ್ಯ ಮತ್ತು ವೇಗವನ್ನು ಮೂಲಾಧಾರವಾಗಿ ಮಾಡಿಕೊಂಡಿರುವುದು ಕಾರಣವೇ? ಆರ್ಥಿಕ ನಾಯಕತ್ವದ ಬುನಾದಿಯು ದತ್ತಾಂಶಗಳ ಹೊಸ ಬಳಕೆಗಳನ್ನು ಮತ್ತು ಮೌಲ್ಯ ಸೇರ್ಪಡೆಗಳನ್ನು ಆಧರಿಸಿರುತ್ತದೆ ಎಂಬುದು ಈಗ ಸರ್ವಮಾನ್ಯ ಸಂಗತಿಯೇ ಆಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಚೀನಾದ 5-ಜಿ ಜಾಲವು ಪ್ರತಿ ಹತ್ತು ಚದರಮೈಲುಗಳಿಗೆ 5.3 ಟವರುಗಳನ್ನೂ ಮತ್ತು ಪ್ರತಿ ಹತ್ತುಸಾವಿರ ಜನರಿಗೆ 14.1 ಟವರುಗಳನ್ನೂ ಕೊಡಲಿದೆ. ಆದರೆ ಅಮೆರಿಕವು ಪ್ರತಿ ಹತ್ತು ಚದರ ಮೈಲುಗಳಿಗೆ 0.4 ಟವರುಗಳನ್ನೂ ಮತ್ತು ಪ್ರತಿ ಹತ್ತು ಸಾವಿರ ಜನರಿಗೆ 4.7 ಟವರುಗಳನ್ನು ಕೊಡುತ್ತಿದೆ. ಹೀಗಾಗಿ ಚೀನಾದ ಈ ಆಕರ್ಷಕ ಸೌಕರ್ಯಗಳು ಅದರ ಸ್ಪರ್ಧಿಗಳಿಗೆ ಹೆಚ್ಚು ಕಳವಳ ಹುಟ್ಟಿಸುತ್ತಿದೆ.
ಜಾಲಸ್ಥಾಪನೆಯ ಪ್ರಕ್ರಿಯೆಯಲ್ಲಿ ಉದ್ಭವಿಸಿರುವ ಈ ಘರ್ಷಣೆಗಳನ್ನು ಜೀವಂತವಾಗಿಟ್ಟುಕೊಳ್ಳುವ ಮೂಲಕ ಅಮೆರಿಕ ಹಾಗೂ ಅದರ ಮಿತ್ರರು ಡಿಜಿಟಲ್ ವಲಯದಲ್ಲಿ ಪ್ರಭುತ್ವ ಮಧ್ಯಪ್ರವೇಶ ಮಾಡಬೇಕೆಂಬ ವಾದಕ್ಕೆ ಗುಪ್ತ ಸಮರ್ಥನೆಗಳನ್ನು ಹರಿಬಿಡುತ್ತಿದ್ದಾರೆ. ಒಂದು ಕಡೆ ತಮ್ಮ ಕಂಪೆನಿಗಳಿಗೆ ರಿಯಾಯಿತಿಗಳನ್ನು ಒದಗಿಸುವ ಜಾಗತಿಕ ಮಾರುಕಟ್ಟೆಯ ಸೇವಾದರದ ಸ್ಪರ್ಧೆಯಲ್ಲಿ ಹೆಚ್ಚು ಅನುಕೂಲ ಕಲ್ಪಿಸಿಕೊಡುವುದು. ಆದರೆ ಒಮ್ಮೆ ಡಿಜಿಟಲ್ ಮೂಲಭೂತ ಸೌಕರ್ಯಗಳ ಮೇಲಿನ ಪ್ರಭುತ್ವದ ನಿಯಂತ್ರಣಕ್ಕೆ ಸಾಂಸ್ಥಿಕ ಸಮ್ಮತಿ ದೊರೆತೊಡನೆ ಅದು ಬಹಿರಂಗವಾಗಿ ತನ್ನ ಬಳಕೆದಾರರ ಮೇಲೆ ಬೇಹುಗಾರಿಕೆ ಮಾಡುವ ಶಕ್ತಿಯನ್ನು ಗಳಿಸಿಕೊಳ್ಳುತ್ತದೆ. ಇದು ಎಲ್ಲಕ್ಕಿಂತ ಹೆಚ್ಚಿನ ಕಳವಳಕಾರಿಯಾದ ಸಂಗತಿಯಾಗಿದೆ. ಅಂಥ ನಿಯಂತ್ರಣಗಳು ಇಂದು ಸಮಕಾಲೀನ ರಾಜಕೀಯ ವ್ಯವಸ್ಥೆಗಳ ನಡುವೆ ಇರುವ ಸೈದ್ಧಾಂತಿಕ ಬಿಕ್ಕಟ್ಟುಗಳನ್ನು ಮರೆಸಿಬಿಡುತ್ತದೆ. ಒಂದೆಡೆ ಚೀನಾ ಸೈಬರ್ ಸ್ವಾಯತ್ತತೆಯನ್ನೂ ಮತ್ತು ದೇಶದೇಶಗಳ ನಡುವಿನ ದತ್ತಾಂಶಗಳ ಹರಿವಿನ ಮೇಲೆ ಪ್ರಭುತ್ವದ ಬಹಿರಂಗ ನಿಯಂತ್ರಣವು ಇರಬೇಕೆಂದು ಪ್ರತಿಪಾದಿಸಿದರೆ, ಮತ್ತೊಂದೆಡೆ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟಗಳೂ ಕೂಡಾ ಅದನ್ನೇ ಗುಪ್ತವಾಗಿ ಪ್ರತಿಪಾದಿಸುತ್ತಿವೆ. ಹಾಗಿದ್ದರೆ ಅವುಗಳ ನಡುವಿರುವ ನೈಜ ರಾಜಕೀಯ ಸಂಬಂಧಗಳೇನು?; ದೀರ್ಘಕಾಲದ ವೈಷಮ್ಯದ್ದೋ ಅಥವಾ ವ್ಯೆಹಾತ್ಮಕ ಸ್ಪರ್ಧೆಯದ್ದೋ

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News

ಜಗದಗಲ
ಜಗ ದಗಲ