ಸಂಸತ್ ಮೇಲೆ ಉಗ್ರರ ದಾಳಿ: ಈ ಬಾರಿ ರಕ್ಷಿಸುವವರಾರು?

Update: 2019-05-29 09:40 GMT

ಆಗಲೂ ಎನ್‌ಡಿಎ ನೇತೃತ್ವದ ಸರಕಾರವೇ ಅಸ್ತಿತ್ವದಲ್ಲಿತ್ತು. ಅಟಲ್ ಬಿಹಾರಿ ವಾಜಪೇಯಿ ಈ ದೇಶದ ಪ್ರಧಾನಿಯಾಗಿದ್ದರು. ಡಿಸೆಂಬರ್ 13, 2001ರಂದು ಈ ಪ್ರಜಾಸತ್ತೆಯ ದೇವಸ್ಥಾನವೆಂದೇ ನಂಬಲಾಗಿರುವ ಸಂಸತ್ತಿನ ಮೇಲೆ ಉಗ್ರರು ನಡೆಸಿದ ದಾಳಿ ದೇಶವನ್ನು ಬೆಚ್ಚಿ ಬೀಳಿಸಿತು. ಈ ದಾಳಿ ಅವರಿಗೆ ನೆಪ ಮಾತ್ರವಾಗಿತ್ತು. ಅವರ ನೇರ ಗುರಿ ಈ ದೇಶದ ಪ್ರಜಾಸತ್ತೆಯಾಗಿತ್ತು. ಸಂಸತ್‌ನೊಳಗೆ ಪ್ರವೇಶಿಸುವ ಅವರ ಯತ್ನವೇನಾದರೂ ಯಶಸ್ವಿಯಾಗಿದ್ದಿದ್ದರೆ ಅದು ದೇಶದ ಮೇಲೆ ಭಾರೀ ಪರಿಣಾಮಗಳನ್ನು ಉಂಟು ಮಾಡುತ್ತಿತ್ತು. ಹಲವು ನಾಯಕರು ಈ ದಾಳಿಯಲ್ಲಿ ಪ್ರಾಣ ಕಳೆದುಕೊಳ್ಳುವ ಸಂಭವವಿತ್ತು. ಆದರೆ ನಮ್ಮ ಪೊಲೀಸ್ ಪಡೆಯು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಉಗ್ರರನ್ನು ತಡೆದರು ಮತ್ತು ಗುಂಡಿಕ್ಕಿ ಕೊಂದರು. ಈ ಸಂಘರ್ಷದಲ್ಲಿ ಪೊಲೀಸ್ ಸಿಬ್ಬಂದಿಯೂ ತಮ್ಮ ಪ್ರಾಣವನ್ನು ಬಲಿಕೊಡಬೇಕಾಯಿತು. ಆದರೆ ಸಂಸತ್‌ನೊಳಗೆ ಉಗ್ರರು ಪ್ರವೇಶಿಸುವುದನ್ನು ತಡೆಯುವಲ್ಲಿ ಅವರು ಸಂಪೂರ್ಣ ಯಶಸ್ವಿಯಾದರು. ಈ ಹೋರಾಟದಲ್ಲಿ ಸುಮಾರು 14 ಮಂದಿ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡರು. ಉಗ್ರರು ಸಂಸತ್‌ನೊಳಗೆ ಪ್ರವೇಶಿಸದಂತೆ ತಡೆಯುವ ಸಂದರ್ಭದಲ್ಲಿ ಹುತಾತ್ಮರಾದ ಆ ಯೋಧರನ್ನು ನಾವಿಂದಿಗೂ ಸ್ಮರಿಸುತ್ತಿದ್ದೇವೆ.

  ಕಾಲಚಕ್ರ ಉರುಳಿದೆ. 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿತ್ತು. ಈ ಬಾರಿ ಮತ್ತೆ ಬಿಜೆಪಿ ಬಹುಮತವನ್ನು ತನ್ನದಾಗಿಸಿದೆ. ಆದರೆ ಇದೇ ಸಂದರ್ಭದಲ್ಲಿ ಸಂಸತ್ ಭವನದ ಘನತೆಯನ್ನು, ಗೌರವವನ್ನು ಉಳಿಸುವುದಕ್ಕಾಗಿ ಪ್ರಾಣತೆತ್ತ ಹುತಾತ್ಮರ ತ್ಯಾಗವನ್ನೇ ಅಣಕಿಸುವಂತೆ, ‘ಶಂಕಿತ ಭಯೋತ್ಪಾದಕಿ’ಯೊಬ್ಬರು ಸಂಸದಳಾಗಿ ಅಧಿಕೃತವಾಗಿ ಸಂಸತ್‌ನೊಳಗೆ ಪ್ರವೇಶಿಸುತ್ತಿದ್ದಾರೆ. ಈಗಾಗಲೇ ಮಾಲೆಗಾಂವ್ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ಗುರುತಿಸಿಕೊಂಡಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದಿಂದ ಭಾರೀ ಬಹುಮತದೊಂದಿಗೆ ಗೆದ್ದು ಸಂಸತ್‌ನೊಳಗೆ ಕಾಲಿರಿಸಿದ್ದಾರೆ. ಭಯೋತ್ಪಾದಕರ ಸಂಸತ್ ದಾಳಿಯನ್ನು ತಡೆದು ಪ್ರಾಣ ಅರ್ಪಿಸಿದ ಹುತಾತ್ಮರ ಆತ್ಮ ಇದನ್ನು ಅಸಹಾಯಕವಾಗಿ ನೋಡುತ್ತಿವೆ. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿರಿಸಿ ಬಾಂಬ್ ಸ್ಫೋಟ ನಡೆಸಿದ ಆರೋಪವನ್ನು ಹೊಂದಿರುವಾಕೆಗೆ ಟಿಕೆಟ್ ನೀಡಿ, ಆಕೆಯ ಗೆಲುವನ್ನು ಸಂಭ್ರಮಿಸಿದ ಪ್ರಧಾನಿಯವರು ಇದೀಗ ‘ಅಲ್ಪಸಂಖ್ಯಾತರ ವಿಶ್ವಾಸವನ್ನು ಗಳಿಸುವ’ ಮಾತನ್ನು ಆಡುತ್ತಿದ್ದಾರೆ. ಹುತಾತ್ಮರಾದ ಕರ್ಕರೆ ಮತ್ತು ಅವರ ಬಳಗದ ಸಾವನ್ನು ಅವಮಾನಿಸಿದ, ಗೋಡ್ಸೆಯನ್ನು ದೇಶಭಕ್ತ ಎಂದು ಕರೆದು ಗಾಂಧಿಯ ಕೊಲೆಯನ್ನು ಸಮರ್ಥಿಸಿದ ಪ್ರಜ್ಞಾ ಸಿಂಗ್ ಯಾವ ಸಿದ್ಧಾಂತವನ್ನು ಪ್ರತಿನಿಧಿಸುತ್ತಿದ್ದಾರೆ ಎನ್ನುವುದು ಮೋದಿಯವರಿಗೆ ತಿಳಿಯದ್ದೇನಲ್ಲ. ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಾಗ, ಮಿತ್ರ ಪಕ್ಷಗಳ ಒತ್ತಡದ ಮೇರೆಗೆ ‘‘ಪ್ರಜ್ಞಾಸಿಂಗ್ ಅವರನ್ನು ಯಾವತ್ತೂ ಕ್ಷಮಿಸುವುದಿಲ್ಲ’’ ಎಂಬ ಹೇಳಿಕೆಯನ್ನು ಮೋದಿ ನೀಡಿದ್ದರು. ಈ ಹೇಳಿಕೆಯನ್ನು ಅವರು ನೀಡಿದಾಗ, ಬಿಜೆಪಿಯಿಂದ ಪ್ರಜ್ಞಾಸಿಂಗ್ ವಜಾಗೊಳ್ಳುತ್ತಾರೆ ಎಂದು ದೇಶ ಭಾವಿಸಿತ್ತು. ಆದರೆ ಅಂತಹದೇನೂ ನಡೆದಿಲ್ಲ. ಲೋಕಸಭೆಯಲ್ಲಿ ವಿಜೇತರಾದ ಆಕೆಯನ್ನು ಇದೀಗ ಸ್ವತಃ ಅಡ್ವಾಣಿ ಕೂಡ ಯಾವ ಮುಜುಗರವಿಲ್ಲದೆ ಆಶೀರ್ವದಿಸಿದ್ದಾರೆ. ಸಂವಿಧಾನ ವಿರೋಧಿ ನಿಲುವನ್ನು ಹೊಂದಿರುವ ಪ್ರಜ್ಞಾ ಸಿಂಗ್ ಸಂಸತ್ ಪ್ರವೇಶಿಸುವುದು ಯಾವ ರೀತಿಯಲ್ಲೂ ಪ್ರಜಾಸತ್ತೆಗೆ ಪೂರಕವಲ್ಲ. ಪ್ರಜಾಸತ್ತೆಯನ್ನೇ ಬಳಸಿಕೊಂಡು ಅವರು ಪ್ರಜಾಸತ್ತೆಯನ್ನು ನಾಶ ಮಾಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಮೋದಿಯವರು ಆಡುತ್ತಿರುವ ‘ಭರವಸೆಯ ಮಾತುಗಳು’ ಈ ದೇಶದ ಪ್ರಜಾಸತ್ತೆಯ ಮೇಲೆ ಭರವಸೆಯಿಟ್ಟ ಜನರನ್ನು ಸಂತೈಸುವಲ್ಲಿ ಸಂಪೂರ್ಣ ವಿಫಲವಾಗುತ್ತಿದೆ.

ಚುನಾವಣೆಯಲ್ಲಿ ಕ್ರಿಮಿನಲ್ ಆರೋಪಗಳನ್ನು ಹೊಂದಿರುವ ಅಭ್ಯರ್ಥಿಗಳು ಸ್ಪರ್ಧಿಸುವುದು, ಆಯ್ಕೆಯಾಗಿ ಸಂಸತ್ ಪ್ರವೇಶಿಸುವುದು ಸಾಮಾನ್ಯ. ಆದರೆ ಒಬ್ಬ ಕ್ರಿಮಿನಲ್‌ಗೂ, ಸ್ಫೋಟ ಆರೋಪಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಭಯೋತ್ಪಾದನೆಯೆನ್ನುವುದು ದೇಶದ ವಿರುದ್ಧ ಯುದ್ಧ ಹೂಡುವುದಕ್ಕೆ ಸಮ. ಆಕೆಯ ಮೇಲಿರುವ ಆರೋಪ ಇನ್ನೂ ಸಾಬೀತಾಗಿಲ್ಲ ನಿಜ. ಆದರೆ ಆಕೆಗೆ ಕ್ಲೀನ್‌ಚಿಟ್ ಸಿಕ್ಕಿಲ್ಲ ಎನ್ನುವುದು ಅಷ್ಟೇ ನಿಜ. ಇದು ಕೇವಲ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಸಂಬಂಧಪಟ್ಟ ವಿಷಯವಷ್ಟೇ ಅಲ್ಲ. ಆಕೆಯೊಂದಿಗೆ ಇನ್ನೂ ಹಲವು ಕೇಸರಿ ಉಗ್ರರು ಸ್ಫೋಟ ಆರೋಪದಲ್ಲಿ ಬಂದಿಯಾಗಿದ್ದಾರೆ. ಅವರೆಲ್ಲರ ಗುರಿ ದೇಶವನ್ನು ವಿಚ್ಛಿದ್ರಗೊಳಿಸುವುದಾಗಿದೆ. ಉಗ್ರವಾದ ಮತ್ತು ಭಯೋತ್ಪಾದನೆಯ ವಿರುದ್ಧ ನರೇಂದ್ರ ಮೋದಿ ಸರಕಾರ ಪ್ರಾಮಾಣಿಕವಾಗಿ ಹೋರಾಟ ನಡೆಸುತ್ತಿರುವುದು ನಿಜವೇ ಆಗಿದ್ದರೆ, ಅದು ಖಂಡಿತವಾಗಿಯೂ ಉಗ್ರವಾದದ ಆರೋಪಿಗೆ ನ್ಯಾಯಾಲಯದಿಂದ ಕ್ಲೀನ್‌ಚಿಟ್ ಸಿಗುವ ಮೊದಲೇ ಟಿಕೆಟ್ ನೀಡುತ್ತಿರಲಿಲ್ಲ. ಮುಖ್ಯವಾಗಿ ಪ್ರಜ್ಞಾಸಿಂಗ್ ಇಲ್ಲಿ, ಕೇಸರಿ ಉಗ್ರವಾದದ ಒಬ್ಬ ಪ್ರತಿನಿಧಿ ಮಾತ್ರ. ಆಕೆಯನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲುವಂತೆ ಮಾಡಿ, ಕೇಸರಿ ಭಯೋತ್ಪಾದನೆಯನ್ನು ಪ್ರಜಾಸತ್ತಾತ್ಮಕ ಗೊಳಿಸುವ ಹುನ್ನಾರವನ್ನು ಕೆಲವು ಶಕ್ತಿಗಳು ನಡೆಸುತ್ತಿವೆ. ಜನತೆಯನ್ನು ಯಾಮಾರಿಸಿ ಪಡೆದ ಗೆಲುವು ಪ್ರಜ್ಞಾ ಸಿಂಗ್ ಮತ್ತು ಆಕೆಯ ತಂಡಕ್ಕೆ ಕ್ಲೀನ್‌ಚಿಟ್ ನೀಡಲಾರದು ಎನ್ನುವುದನ್ನು ಮೋದಿ ಸರಕಾರ ನೆನಪಿನಲ್ಲಿಡಬೇಕಾಗಿದೆ.

ಪ್ರಜ್ಞಾಸಿಂಗ್ ಚುನಾವಣೆಯಲ್ಲಿ ಗೆದ್ದ ಬೆನ್ನಿಗೇ ದಾಭೋಲ್ಕರ್ ಮತ್ತು ಗೌರಿಲಂಕೇಶ್ ಹತ್ಯೆಗೆ ಸಂಬಂಧಿಸಿ ಇನ್ನಷ್ಟು ಕೇಸರಿ ಉಗ್ರರ ಬಂಧನವಾಗುತ್ತಿದೆ. ಸಾಕ್ಷ ನಾಶದ ಹೆಸರಲ್ಲಿ ಒಬ್ಬ ವಕೀಲ ಕೂಡ ಪೊಲೀಸರ ಸೆರೆಯಾಗಿದ್ದಾನೆ. ಇವರೆಲ್ಲರೂ ಒಂದು ನಿರ್ದಿಷ್ಟ ಸಂಘಟನೆಗೆ ಸೇರಿರುವುದು ಕೂಡ ಬಯಲಾಗಿದೆ. ಪ್ರಜ್ಞಾ ಸಿಂಗ್ ಗೆಲುವು ಇವರೆಲ್ಲರ ಹೀನ ಕೃತ್ಯಗಳನ್ನು ಸಮರ್ಥಿಸುವಂತಿದೆ. ಮುಂದಿನ ದಿನಗಳಲ್ಲಿ ಈ ಉಗ್ರವಾದ ಆರೋಪವನ್ನೇ ತಮ್ಮ ಹೆಗ್ಗಳಿಕೆಯನ್ನಾಗಿಸಿ, ಇವರೆಲ್ಲರೂ ಚುನಾವಣೆಯಲ್ಲಿ ನಿಂತು ಸಂಸತ್ ಪ್ರವೇಶಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಸಾಮಾಜಿಕವಾಗಿ ಅತ್ಯುತ್ತಮ ಕಾರ್ಯಗಳನ್ನು ಮಾಡಿ, ಸಾಧಿಸಿ ಸಂಸತ್‌ಗೆ ಹೋಗುವುದಕ್ಕಿಂತ, ದೇಶದ ವಿರುದ್ಧ ಸಂಚು ನಡೆಸಿ, ಭಯೋತ್ಪಾದನೆ, ಉಗ್ರವಾದದ ಪ್ರಕರಣಗಳ ಮೂಲಕ ಗುರುತಿಸಿ ಕೊಂಡು ಸಂಸತ್‌ಗೆ ಹೋಗುವುದು ಸುಲಭ ಎನ್ನುವುದನ್ನು ಹೊಸ ತಲೆಮಾರು ಮನಗಾಣುತ್ತಿದೆ. ಇದರ ಪರಿಣಾಮ ಏನಾಗಬಹುದು? ಸಂಸತ್‌ನ ಮೇಲೆ ನಿಜವಾದ ದಾಳಿ ಆರಂಭವಾಗಿದೆ. ಇದನ್ನು ತಡೆಯುವವರಾರು ಎನ್ನುವುದೇ ನಮ್ಮ ಮುಂದಿರುವ ಉತ್ತರವಿಲ್ಲದ ಪ್ರಶ್ನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News