ಮೋದಿ ಮ್ಯಾಜಿಕ್, ಲೆಕ್ಕ ಮೀರಿದ ಲಾಜಿಕ್

Update: 2019-05-28 18:37 GMT

ಜ್ಯೋತಿಷಿ ಮತ್ತು ರಾಜಕಾರಣಿ -ಇಬ್ಬರೂ ಮಾತಿನ ಮೂಲಕವೇ ತಮ್ಮ ಗುರಿ ಸಾಧಿಸುತ್ತಾರೆ. ಇಬ್ಬರಿಗೂ ಮಾತೇ ಬಂಡವಾಳ, ಮಾತು ಸಂವಹನ ಕಲೆಯ ಆತ್ಮ. ಎದುರಾಳಿಯ ಮನಸ್ಸನ್ನು ಗೆಲ್ಲುವ ಕಲೆ ಮೋದಿಗೆ ಅದ್ಭುತವಾಗಿ ಸಿದ್ಧಿಸಿದೆ. ಎದುರಾಳಿ ಒಬ್ಬನಿರಲಿ, ಒಂದು ಕೋಟಿ ಇರಲಿ; ನಾಯಕನ ಮಾತನ್ನು ಅನುಯಾಯಿಗಳು ನಂಬುವಂತೆ ಮಾಡುವುದೇ ಮಾತಿನ ಮೂಲಕ, ಮನಸ್ಸನ್ನು ಗೆಲ್ಲುವ ಮೂಲಕ. ಪ್ರಭುತ್ವ ಮತ್ತು ಮತದಾರರ ಮಧ್ಯೆ ಮತಗಳಿಗಾಗಿ ನಡೆದ ಮಾನಸಿಕ ಯುದ್ಧದಲ್ಲಿ ಮೋದಿ ಗೆದ್ದಿದ್ದಾರೆ, ಸೋಲರಿಯದ ಸರದಾರನಾಗಿ ಮಿಂಚಿದ್ದಾರೆ.

ಪೃಚ್ಛಾಮಿ ತ್ವಾ ಪರಂ ಅಂತಂ ಪೃಥಿವ್ಯಾಃ

ಪೃಚ್ಛಾಮಿ ಯತ್ರ ಭುವನಸ್ಯನಾಭಿಃ/

ಪೃಚ್ಛಾಮಿ ವಾಚಃ ಪರಮಂ ವ್ಯೋಮ//

(ಪ್ರಶ್ನೆ ಕೇಳುತ್ತೇನೆ. ಪೃಥ್ವಿಯ ಅಂತಿಮ ಎಲ್ಲೆ ಎಲ್ಲಿದೆ? ಕೇಳುತ್ತೇನೆ, ಪೃಥ್ವಿಯ ಕೇಂದ್ರ ಬಿಂದು ಎಲ್ಲಿದೆ? ಕೇಳುತ್ತೇನೆ, ಮಾತು(ವಾಕ್) ಎಂಬುದರ ಪರಮಾರ್ಥ ಎಲ್ಲಿದೆ?)

-ಋಗ್ವೇದ

ಮೋದಿ ಮ್ಯಾಜಿಕ್ ಮತ್ತೆ ಕೆಲಸ ಮಾಡಿದೆ. 2014ರಲ್ಲಿ ಮಾಡಿದ್ದಕ್ಕಿಂತ ಹೆಚ್ಚು ವ್ಯವಸ್ಥಿತವಾಗಿ, ಹೆಚ್ಚು ತೀವ್ರವಾಗಿ, ಹೆಚ್ಚು ದಕ್ಷವಾಗಿ ಮತ್ತು ಹೆಚ್ಚು ಆಘಾತಕಾರಿಯಾಗಿ ಕೆಲಸ ಮಾಡಿದೆ. ಮತದಾರರನ್ನು ಸಂಪೂರ್ಣವಾಗಿ ಸಮ್ಮೋಹಗೊಳಿಸಿದೆ. ಮಾತಿನ ಮಹಿಮೆ ಮತ್ತೆ ವಿಜೃಂಭಿಸಿದೆ.

ಯುದ್ಧ ಮತ್ತು ಪ್ರೇಮದಲ್ಲಿ ಎಲ್ಲವೂ ಸರಿ ಎಂಬ ಮಾತೊಂದಿದೆ. ಎಲ್ಲವೂ ಎಂದರೆ ಎಲ್ಲ ಮಾತು, ಎಲ್ಲ ಕಥಾನಕ, ಎಲ್ಲ ಮಿಥ್ಯೆ, ಎಲ್ಲ ಭರವಸೆ, ಎಲ್ಲ ಆಶ್ವಾಸನೆ. ಆಶ್ವಾಸನೆಗಳನ್ನು ನಂಬಿಯೇ ಪ್ರೇಮಿಗಳು ಪರಸ್ಪರ ಹತ್ತಿರವಾಗುತ್ತಾರೆ. ಆಶ್ವಾಸನೆಗಳ ಘಟಶ್ರಾದ್ಧವಾದಾಗ ಸಂಬಂಧಗಳಲ್ಲಿ ಯುದ್ಧ ಆರಂಭವಾಗುತ್ತದೆ, ವಿಚ್ಛೇದನಗಳು ಮಾಮೂಲಿಯಾಗುತ್ತವೆ. ಆದರೆ 2014ರ ನಂತರದ ಭಾರತದ ರಾಜಕಾರಣದಲ್ಲಿ ಹೀಗಾಗಲಿಲ್ಲ. ಮತದಾರರು ಪ್ರಭುತ್ವ ನೀಡಿದ ಎಲ್ಲ ಆಶ್ವಾಸನೆಗಳ ಹೂಮಳೆಗಾಗಿ ಕಾಯುತ್ತ, ಮತಗಟ್ಟೆಗಳಲ್ಲಿ ಕಾಯುತ್ತಾ ಕಾಯುತ್ತಾ ಮತ್ತೆ ಅದೇ ಪ್ರಭುತ್ವಕ್ಕೆ ಮತ ನೀಡಿದರು. ಯಾಕೆಂದರೆ ಅವರು ಪ್ರಭುತ್ವದ ಮಾತನ್ನು ಅಕ್ಷರಶಃ ನಂಬಿದ್ದರು.

ಪುನಃ ಆಶ್ವಾಸನೆಗಳ ಹೂಮಳೆ ಆರಂಭವಾಗುತ್ತಿದೆ. ಎಲ್ಲರಿಗೂ ಪಕ್ಕಾ ಮನೆ, ಸಮೃದ್ಧ ಭಾರತಕ್ಕಾಗಿ ಸಮರ, ದೇಶಕ್ಕಾಗಿ ನನ್ನ ದೇಹದ ಕಣ ಕಣ, ನನಗಾಗಿ ಏನೂ ಇಲ್ಲ, ಎಲ್ಲ ದೇಶಕ್ಕಾಗಿ ಎಲ್ಲಾ, ಎಲ್ಲರನ್ನೂ ಜತೆಗೆ ಒಯ್ಯುವ ಜೈತ್ರಯಾತ್ರೆ ಇತ್ಯಾದಿ ಮನಮೋಹಕ ಮಾತುಗಳು ಕೇಳಿ ಬರುತ್ತಿವೆ.

 ನಿಜ, ಇದರಲ್ಲಿ ತಪ್ಪಿಲ್ಲ; ಅಸಹಜವಾದದ್ದು ಏನಿಲ್ಲ. ಯಾಕೆಂದರೆ ಸಂಘಟಿತ ಧರ್ಮ ಮತ್ತು ಅಧಿಕಾರ ರಾಜಕಾರಣ ಎರಡಕ್ಕೂ ಮಾತೇ ಪ್ರಧಾನ; ಸಿಹಿಯಾದ, ಹಿತವಾದ, ನಂಬಿಕೆ ಹುಟ್ಟಿಸುವ ಮಾತು. ಎರಡೂ ಕೂಡಾ ಮನಸ್ಸನ್ನು ಗೆಲ್ಲುವ ಮೂಲಕವೇ ನಡೆಯುವ ವ್ಯವಹಾರಗಳು. ಮೋದಿ ಮಾತುಗಳು ಮತ ಗೆದ್ದಿವೆ, ಮತವಾಗಿ ಪರಿವರ್ತಿತವಾಗಿವೆ. ಅವರ ಶಾಬ್ದಿಕ ಶಸ್ತ್ರಗಳು ವಿಪಕ್ಷಗಳನ್ನು, ಅವುಗಳ ಎಲ್ಲ ಆಪಾದನೆಗಳನ್ನು ಪುನಃ ಸುಲಭವಾಗಿ ಮೇಲಕ್ಕೆ ಏಳದಂತೆ ಅಡ್ಡ ಮಲಗಿಸಿವೆ. ಆಶ್ವಾಸನೆಗಳ ಸುರಿಮಳೆ ಈ ದೇಶಕ್ಕೆ ಹೊಸತೇನೂ ಅಲ್ಲ. ಜೈ ಜವಾನ್ ಜೈ ಕಿಸಾನ್, ಗರೀಬಿ ಹಠಾವೋ, ಎಲ್ಲ ರೈತರಿಗೆ ಭತ್ತದ ತೆನೆ, ಎಲ್ಲ ಮಕ್ಕಳಿಗೆ ಹಾಲಿನ ಕೆನೆ, ಎಲ್ಲರಿಗೂ ಮನೆ ಮನೆ ಇತ್ಯಾದಿ ಆಶ್ವಾಸನೆಗಳ, ಘೋಷಣೆಗಳ ಗದ್ದಲದಲ್ಲೇ ದಶಕಗಳಿಂದ ಸಾಗಿ ಬಂದ ದೇಶ ಇದು. ಆದರೆ ಬಡತನದ ಹಠಾವ್ ಆಗಿಲ್ಲ, ಸಾವಿರಾರು ರೈತರ ಸರಣಿ ಆತ್ಮಹತ್ಯೆ ನಿಂತಿಲ್ಲ.

ಧ್ಯಾನಿಸಿದರೆ ಮನನವಾದೀತು. ಜ್ಯೋತಿಷಿ ಮತ್ತು ರಾಜಕಾರಣಿ -ಇಬ್ಬರೂ ಮಾತಿನ ಮೂಲಕವೇ ತಮ್ಮ ಗುರಿ ಸಾಧಿಸುತ್ತಾರೆ. ಇಬ್ಬರಿಗೂ ಮಾತೇ ಬಂಡವಾಳ, ಮಾತು ಸಂವಹನ ಕಲೆಯ ಆತ್ಮ. ಎದುರಾಳಿಯ ಮನಸ್ಸನ್ನು ಗೆಲ್ಲುವ ಕಲೆ ಮೋದಿಗೆ ಅದ್ಭುತವಾಗಿ ಸಿದ್ಧಿಸಿದೆ. ಎದುರಾಳಿ ಒಬ್ಬನಿರಲಿ, ಒಂದು ಕೋಟಿ ಇರಲಿ; ನಾಯಕನ ಮಾತನ್ನು ಅನುಯಾಯಿಗಳು ನಂಬುವಂತೆ ಮಾಡುವುದೇ ಮಾತಿನ ಮೂಲಕ, ಮನಸ್ಸನ್ನು ಗೆಲ್ಲುವ ಮೂಲಕ. ಪ್ರಭುತ್ವ ಮತ್ತು ಮತದಾರರ ಮಧ್ಯೆ ಮತಗಳಿಗಾಗಿ ನಡೆದ ಮಾನಸಿಕ ಯುದ್ಧದಲ್ಲಿ ಮೋದಿ ಗೆದ್ದಿದ್ದಾರೆ, ಸೋಲರಿಯದ ಸರದಾರನಾಗಿ ಮಿಂಚಿದ್ದಾರೆ.

ಅವರ ಗೆಲುವಿನ ಒಳಗು ತಿಳಿಯಬೇಕಾದರೆ ಅವರ ಸಂವಹನ ಕಲೆಯ ಸೂಕ್ಷ್ಮಗಳನ್ನು ಗಮನಿಸಬೇಕು. ವೃತ್ತಿಪರ ಸಂವಹನದ (ಪ್ರೊಪೆಶನಲ್ ಕಮ್ಯನಿಕೇಶನ್) ಹಾಗೂ ಕಾರ್ಪೋರೇಟ್ ಕಮ್ಯುನಿಕೇಶನ್ ಓರ್ವ ಪ್ರಾಧ್ಯಾಪಕನಾಗಿ ಗಳಿಸಿದ ಅನುಭವದ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಬರೆಯುತ್ತಿದ್ದೇನೆ.

ಮೋದಿಯವರ ಭಾಷಣದಲ್ಲಿ ಅರ್ಥಪೂರ್ಣವಾಗಿ ಅಲ್ಲಲ್ಲಿ ನಿಂತು, ಮುಂದೆ ಸಾಗುವ ‘ಬ್ರೆತ್ ಗ್ರೂಪ್’ ಅಥವಾ ‘ಟೋನ್ ಗ್ರೂಪ್’ ಗಳಿರುತ್ತವೆ. ವಿಪಕ್ಷಗಳನ್ನು, ವಿಪಕ್ಷನಾಯಕರನ್ನು ಚುಚ್ಚುವ, ಕೆಣಕುವ, ಮೃದು ಲೇವಡಿ ಮಾಡುವ ಮಾತುಗಳ ಕೊನೆಯಲ್ಲಿ ಮುಖದ ಮೇಲೆ ಕೇಳುಗರನ್ನು ಮೋಡಿ ಮಾಡುವ, ಒಂದು ವ್ಯಂಗ್ಯದ ನಗು ಇರುತ್ತದೆ. ಆವೇಶಭರಿತ ಮಾತುಗಳು ಬಂದಾಗ ಧ್ವನಿಯ ಏರು ಮತ್ತು ಪಿಚ್ ತಾರಕಕ್ಕೇರಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಶಾಬ್ದಿಕ ಘಟಕಗಳೊಂದಿಗೆ ಹೊಂದಿಕೊಳ್ಳುವ ಆಂಗಿಕ ಭಾಷೆ (ಬಾಡಿಲಾಂಗ್ವೇಜ್), ಜೆಶ್ಚರ್‌ಗಳು ಅಲ್ಲಿ ಎದ್ದು ಕಾಣುತ್ತವೆ. ಶಬ್ದೇತರ (ನಾನ್ ವರ್ಬಲ್) ಸಂವಹನದ ಪ್ರಬಲ ಜೆಶ್ಚರ್ ಆಗಿ ತನ್ನ ಬಲ ಕೈಯನ್ನು ಪೂರ್ಣವಾಗಿ ಮುಂದಕ್ಕೆ ಚಾಚಿ ಮಾಡುವ ತೋಳಿನ 180 ಡಿಗ್ರಿಯ ಬೀಸು ಅರ್ಧ ಜಗತ್ತನ್ನೇ ವ್ಯಾಪಿಸಿದಂತೆ ಕಾಣುತ್ತದೆ.

ಅಲ್ಲದೆ ಯಾವುದೇ ಸಾರ್ವಜನಿಕ ಭಾಷಣಕಾರನ ಮಾತುಗಳ ಪರಿಣಾಮ (impact)ವನ್ನು ನಿರ್ಧರಿಸುವ ಬಹಳ ಮುಖ್ಯವಾದ ಅಂಶವೆಂದರೆ ಒಂದು ವಾಕ್ಯ ಪೂರ್ಣಗೊಂಡ ಬಳಿಕ ಭಾಷಣಕಾರ ನೀಡುವ ಕೆಲವು ಕ್ಷಣಗಳ (short(long)ಹಾಗೂ ಹಲವಾರು ಕ್ಷಣಗಳ ) ಧ್ವನಿ ವಿರಾಮ (pause)ಗಳು. ಮೋದಿಯವರು ಈ ವಿರಾಮಗಳನ್ನು ಅತ್ಯಂತ ಉಪಯೋಗಕಾರಿಯಾಗಿ ಬಳಸಿಕೊಳ್ಳುತ್ತಾರೆ. ಉದಾಹರಣೆಗೆ, ‘‘ಫಿರ್ ಏಕ್ ಬಾರ್’’ ಎಂದು ಮೂರು ಬಾರಿ ಹೇಳುವಾಗ ಪ್ರತಿ ಬಾರಿಯೂ ಒಂದು ವಿರಾಮ ಕೊಟ್ಟು, ಸಭಿಕರಿಂದ ತಾನು ನಿರೀಕ್ಷಿಸುವ ಉತ್ತರ (ಮೋದಿ ಸರಕಾರ್) ಬರುವಂತೆ ನೋಡಿಕೊಳ್ಳುತ್ತಾರೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆ ಉತ್ತರ ಬರುವಾಗ ಅಲ್ಲೊಂದು ಹೊಸ ಶಾಬ್ದಿಕ ಜಗತ್ತು ಸೃಷ್ಟಿಯಾಗಿರುತ್ತದೆ.

ಆದ್ದರಿಂದಲೇ ಐದು ವಾರಗಳ ಮೋದಿ ಮಾತಿನ ಅಭಿಯಾನದ ಮುಂದೆ ಐದು ವರ್ಷಗಳ ಹಿಂದೆ ಅವರು ನೀಡಿದ್ದ ವಿದೇಶದಲ್ಲಿರುವ ಕಪ್ಪು ಹಣವನ್ನು ಸ್ವದೇಶಕ್ಕೆ ತರಿಸಿ ಪ್ರತಿಯೊಬ್ಬರ ಖಾತೆಗೂ ಹಾಕುತ್ತೇವೆ ಎಂದ ಹದಿನೈದು ಲಕ್ಷ, ನೋಟುರದ್ದತಿ, ಕೋಟಿಗಟ್ಟಲೆ ಉದ್ಯೋಗಗಳ ಸೃಷ್ಟಿ, ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ಭೋರ್ಗರೆದ ಮಂದಿರ ನಿರ್ಮಾಣ, ಶಬರಿಮಲೆ ವಿವಾದ, ಗುಂಪು ಥಳಿತ, ದಲಿತರ ಮೇಲಿನ ದೌರ್ಜನ್ಯ, ರಫೇಲ್ ಹಗರಣ, ಭ್ರಷ್ಟಾಚಾರ, ನಮ್ಮ ನಾಯಕನಿಗೆ ಮತ ಹಾಕದವರು ‘ತಾಯಿ ಗಂಡ’ ಎಂದ ಅತ್ಯಂತ ಆಕ್ಷೇಪಾರ್ಹ ಹೇಳಿಕ, ಗಾಂಧಿ-ಗೋಡ್ಸೆ ವಿವಾದ, ಗೋಡ್ಸೆ ದೇಶಭಕ್ತ ಎಂಬ ಎಂದಿಗೂ ಸ್ವೀಕಾರಾರ್ಹವಲ್ಲದ ಮಾತು ಇತ್ಯಾದಿ ಯಾವುದೂ ಮತದಾರರಿಗೆ ಮುಖ್ಯವಾಗಲೇ ಇಲ್ಲ. ದೇಶದ ಭದ್ರತೆ, ನೆರೆಯ ಶತ್ರುವಿನಿಂದ ರಕ್ಷಣೆ, ಪುಲ್ವಾಮ, ಬಾಲಕೋಟ್ ಮತ್ತು ಯುದ್ಧದ ಕಲ್ಪಿತ ಕಾರ್ಮೋಡದ ಮುಂದೆ ಆಶ್ವಾಸನೆಗಳ ಸುರಿಮಳೆಯಾಯಿತು. ಈ ಮಳೆ ಮತದಾರರ ಮನಸ್ಸನ್ನು ತಂಪಾಗಿಸಿತು. ವಿಪಕ್ಷಗಳ ಎಲ್ಲ ಲೆಕ್ಕ ಹಾಗೂ ಲೆಕ್ಕಾಚಾರಗಳನ್ನು ಮೀರಿದ ಒಂದು ರಾಜಕೀಯ ತರ್ಕ, ಲಾಜಿಕ್ ಗುಪ್ತವಾಗಿ ಕೆಲಸ ಮಾಡಿತು.

ಇವೆಲ್ಲದರ ಹಿಂದೆ ಮೀಡಿಯಾದ ಬಹುರೂಪಗಳು ತಮ್ಮ ಕೈಚಳಕ ತೋರಿದ್ದವು. ಇದು ಅಕ್ಷರ ಶತ್ರುತ್ವ ಮತ್ತು ದೃಶ್ಯಮಿತ್ರತ್ವದ ಕಾಲ. ಜನರು ತಾವು ಟಿವಿಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸತತವಾಗಿ ನೋಡಿದ್ದನ್ನು ಮತ್ತು ಆ ದೃಶ್ಯಗಳ ಜತೆ ಆಲಿಸಿದ್ದನ್ನು ನಂಬುವ ಅಪಾಯಕಾರಿ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ದೃಶ್ಯಮಿತ್ರತ್ವ ಜನ ಸಮುದಾಯಗಳ ನಡುವೆ ವದಂತಿಗಳ ಮೂಲಕ ಶತ್ರುತ್ವ ಸೃಷ್ಟಿಸುವ ಒಂದು ಕಾಲಘಟ್ಟದಲ್ಲಿ ನಾವಿದ್ದೇವೆ. ಇದು ತುಸು ಎಡವಿದರೂ ಶಾಂತಿಪ್ರಿಯರನ್ನು, ಬಹುಮುಖಿ ಸಂಸ್ಕೃತಿಯನ್ನು ಪ್ರಪಾತಕ್ಕೆ ತಳ್ಳಬಹುದು. ದೃಶ್ಯಮಾಧ್ಯಮದ ಪವಾಡ ಮತ್ತು ಪ್ರಭಾವ ಇದು.

ಎರಡು ದಶಕಗಳ ಹಿಂದೆ 1997ರ ಒಂದು ದಿನ ‘ತರಂಗ’ ವಾರಪತ್ರಿಕೆಯ ಅಂದಿನ ಸಂಪಾದಕ ಸಂತೋಷಕುಮಾರ ಗುಲ್ವಾಡಿಯವರು ನನಗೆ ದೂರವಾಣಿ ಕರೆ ಮಾಡಿ, ‘‘ಗುಜರಾತಿನಿಂದ ಒಬ್ಬರು ರಾಜಕೀಯ ನಾಯಕರು ಬಂದಿದ್ದಾರೆ. ಅವರನ್ನು ಭೇಟಿಯಾಗಿ ಅವರ ಒಂದು ಸಂದರ್ಶನ ಮಾಡೋಣ ಬನ್ನಿ’’ ಎಂದರು. ನಾವು ಬಿಜೆಪಿ ನಾಯಕ ಡಾ. ವಿ. ಎಸ್. ಆಚಾರ್ಯರ ಮನೆಗೆ ಹೋದೆವು. ನಮಗೆ ಇಬ್ಬರಿಗೂ ಆ ನಾಯಕರು ಯಾರೆಂದು ಗೊತ್ತಿರಲಿಲ್ಲ. ಅಲ್ಲಿಗೆ ಹೋದಾಗ ಡಾ. ಆಚಾರ್ಯರು ಆ ನಾಯಕರನ್ನು ‘‘ಇವರು ಶ್ರೀ ನರೇಂದ್ರ ಮೋದಿ ಅಂತ’’ ಎಂದು ನಮಗೆ ಅವರನ್ನು ಪರಿಚಯಿಸಿದರು. ನಾವು ಸುಮಾರು ಅರ್ಧ ಗಂಟೆ ಮೋದಿಯವರ ಜೊತೆ ಮಾತನಾಡಿದೆವು. ಆ ಸಂದರ್ಶನ ಇತ್ತೀಚೆಗೆ ಟಿವಿ ಚಾನೆಲ್ ಒಂದರಲ್ಲಿ ಸುದ್ದಿಯಾಯಿತು.

  ಈಗ ಗುಲ್ವಾಡಿಯವರು ನಮ್ಮಾಂದಿಗೆ ಇಲ್ಲ. ಡಾ. ಆಚಾರ್ಯರೂ ಇಲ್ಲ. ಆದರೆ ಅಂದಿನ ಮೋದಿಯವರ ಜೊತೆಗಿನ ನನ್ನ ಭೇಟಿಯ ನೆನಪು ಇನ್ನೂ ಹಸಿರಾಗಿ ಇದೆ. ಅದೇ ಅಂದಿನ ಮೋದಿಯವರು ಇಂದು ಬಿಜೆಪಿಯ ತ್ರಿವಿಕ್ರಮನಾಗಿ ಜಗದಗಲ ಖ್ಯಾತರಾಗಿ ನಿಂತಿದ್ದಾರೆ. ಭಾರತದ ವಿಪಕ್ಷಗಳು ರಾಷ್ಟ್ರ ರಾಜಕಾರಣದಲ್ಲಿ ವಾಮನನಂತಾಗಿವೆ. ಇದು ದೃಶ್ಯ ಮಾಧ್ಯಮ ಮಾಡಿರುವ ಪವಾಡ, ಜನರ ದೃಶ್ಯ ಮಿತ್ರತ್ವದ ಪರಿಣಾಮ.

ಕೊನೆಯದಾಗಿ, ವೈದಿಕರಲ್ಲಿ ಯಾವುದೇ ಧಾರ್ಮಿಕ ಸಮಾರಂಭದ ಭೋಜನದ ಬಳಿಕ ಅತಿಥಿಗಳ ಪರವಾಗಿ ಪುರೋಹಿತರು ಅಭ್ಯಾಗತನನ್ನು ಹರಸುವ, ಆತನಿಗೆ ಎಲ್ಲ ರಂಗಗಳಲ್ಲೂ ಎಲ್ಲ ರೀತಿಯಲ್ಲೂ ಶುಭವಾಗಲಿ, ಒಳಿತಾಗಲಿ ಎಂದು ಹಾರೈಸುವ, ಆಶೀರ್ವದಿಸುವ ಒಂದು ಸಂಪ್ರದಾಯವಿದೆ. ಅವರು ಹೇಳಿದ್ದಕ್ಕೆಲ್ಲ ಅಲ್ಲಿ ನೆರೆದಿರುವ ಇತರ ವೈದಿಕರು ಪ್ರತಿ ಹಾರೈಕೆಗೂ ‘ತಥಾಸ್ತು’ (ಹಾಗೆಯೇ ಆಗಲಿ) ಎಂದು ಧ್ವನಿ ಕೂಡಿಸುತ್ತಾರೆ. ಅಂತಹ ಒಂದು ಹಾರೈಕೆ ‘ಅಸ್ಯಶ್ರೀ ಯಜಮಾನಸ್ಯ ವೇದೋಕ್ತಮ್ ಆಯಷ್ಯಂ ಪರಿಪೂರ್ಣಮಸ್ತು’ ಎನ್ನುತ್ತದೆ. ‘ವೇದಗಳಲ್ಲಿ ಹೇಳಲ್ಪಟ್ಟಿರುವ ಆಯುಷ್ಯ ಅಂದರೆ ನೂರು ವರ್ಷ ಈ ಯಜಮಾನ, ಔತಣ ನೀಡಿದವ ಬಾಳಲಿ’ ಎಂದಾಗ ಎಲ್ಲರೂ ‘ತಥಾಸ್ತು’ ಎನ್ನುತ್ತಾರೆ. ಇಪ್ಪತ್ತೆರಡು ವರ್ಷಗಳ ಹಿಂದೆ ಅಂದಿನ ಮೋದಿಯವರ ಭೇಟಿಯನ್ನು ಜ್ಞಾಪಿಸಿಕೊಳ್ಳುತ್ತಾ ಇಂದಿನ ಭಾರತದ ‘ಯಜಮಾನ’ನಾಗಿ ದೇಶವನ್ನು ದ್ವಿತೀಯ ಬಾರಿಗೆ ಮುನ್ನಡೆಸಲಿರುವ ಪಧಾನಿ ನರೇಂದ್ರ ಮೋದಿಯವರಿಗೂ ‘ವೇದೋಕ್ತಮ್ ಆಯುಷ್ಯಂ ಪರಿಪೂರ್ಣಮಸ್ತು’ ಎಂದು ಹಾರೈಸುತ್ತೇನೆ. ‘ತಥಾಸ್ತು’ ಎಂದು ಹೇಳುವ ಸರದಿ ಸಮಸ್ತ ಭಾರತೀಯರದು. ಹಾಗೆಯೇ ಈ ದೇಶದ ಎಲ್ಲರಿಗೂ -ಎಲ್ಲ ಬಡವರಿಗೆ, ದಲಿತರಿಗೆ, ಅಲ್ಪ ಸಂಖ್ಯಾತರಿಗೆ, ಎಲ್ಲರಿಗೂ ವೇದದಲ್ಲಿ ಹೇಳಿರುವ ಪೂರ್ಣ ಆಯುಷ್ಯ ಬದುಕುವ ಅವಕಾಶ ದೊರಕಲಿ. ಋಗ್ವೇದ ಹೇಳುವ ‘ಕೇಳುತ್ತೇನೆ, ಕೇಳುತ್ತೇನೆ’ ಎಂಬ, ಪ್ರಶ್ನೆ ಕೇಳುವ ಸ್ವಾತಂತ್ರವೂ ಸದಾ ಉಳಿಯಲಿ. ಋಗ್ವೇದ ಉಲ್ಲೇಖಿಸುವ ಮಾತಿನ ಪರಮಾರ್ಥ ಕ್ರಿಯೆಯಲ್ಲಿ, ಅನುಷ್ಠಾನದಲ್ಲಿ ಕಾಣಿಸಲಿ. ಭವಿಷ್ಯದ ಭಾರತ ಕೇವಲ ಆಶ್ವಾಸನೆಗಳ, ಭರವಸೆಗಳ ಬಂಜರುಭೂಮಿಯಾಗದಿರಲಿ.

(bhaskarrao599@gmail.com)

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News