ಜೋ-ವಿಲ್ಫ್ರೆಡ್,ಡೆಲ್ ಪೊಟ್ರೊ ದ್ವಿತೀಯ ಸುತ್ತಿಗೆ ಲಗ್ಗೆ

Update: 2019-05-29 06:30 GMT

ಪ್ಯಾರಿಸ್, ಮೇ 28: ಫ್ರಾನ್ಸ್‌ನ ಜೋ-ವಿಲ್ಫ್ರೆಡ್ ಸೋಂಗ ಹಾಗೂ ಅರ್ಜೆಂಟೀನದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಎರಡನೇ ಸುತ್ತು ತಲುಪಿದ್ದಾರೆ. ಸೋಂಗ ಸೋಮವಾರ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಪೀಟರ್ ಗೊಜೊವ್‌ಸ್ಕಿ ಅವರನ್ನು ನಾಲ್ಕು ಸೆಟ್‌ಗಳ ಅಂತರದಿಂದ ಮಣಿಸಿದರು.

ಮಂಡಿ ಸರ್ಜರಿಯಿಂದಾಗಿ ಕಳೆದ ವರ್ಷ ಏಳು ತಿಂಗಳ ಕಾಲ ಟೆನಿಸ್‌ನಿಂದ ದೂರ ಉಳಿದಿದ್ದ ಎಟಿಪಿ ರ್ಯಾಂಕಿಂಗ್‌ನಲ್ಲಿ 82ನೇ ಸ್ಥಾನಕ್ಕೆ ಕುಸಿದಿರುವ ಸೋಂಗ ಜರ್ಮನಿಯ ಪೀಟರ್‌ರನ್ನು 7-6(4), 6-1, 4-6,6-3 ಸೆಟ್‌ಗಳಿಂದ ಮಣಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಜಪಾನ್‌ನ ಕೀ ನಿಶಿಕೊರಿ ಅವರನ್ನು ಎದುರಿಸಲಿದ್ದಾರೆ.

ಶನಿವಾರ ಲಿಯೊನ್ ಪ್ರಶಸ್ತಿ ಜಯಿಸಿದ್ದ ಫಾರ್ಮ್‌ನಲ್ಲಿರುವ ಆಟಗಾರ ಬೆನೊಟ್ ಪೈರ್ ರೊಮಾನಿಯದ ಮಾರಿಯಸ್ ಕಾಪಿಲ್‌ರನ್ನು ನೇರ ಸೆಟ್‌ಗಳಿಂದ ಸೋಲಿಸಿದರು. ಮತ್ತೊಂದು ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ 8ನೇ ಶ್ರೇಯಾಂಕದ ಡೆಲ್ ಪೊಟ್ರೊ ಚಿಲಿಯ ನಿಕೊಲಸ್ ಜರ್ರಿ ಅವರನ್ನು 3-6, 6-2, 6-1, 6-4 ಸೆಟ್‌ಗಳಿಂದ ಸೋಲಿಸಿದರು.

ಮಾಜಿ ಯುಎಸ್ ಓಪನ್ ಚಾಂಪಿಯನ್ ಡೆಲ್ ಪೊಟ್ರೊ ಈ ತಿಂಗಳಾರಂಭದಲ್ಲಿ ಮಂಡಿನೋವಿನಿಂದ ಚೇತರಿಸಿಕೊಂಡು ಸಕ್ರಿಯ ಟೆನಿಸ್‌ಗೆ ಮರಳಿದ್ದರು.

ಡೆಲ್ ಪೊಟ್ರೊ ಕಳೆದ ಎರಡು ವರ್ಷಗಳಲ್ಲಿ ಕ್ಲೇ ಕೋರ್ಟ್‌ನಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. 2018ರಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಅವರು ರಫೆಲ್ ನಡಾಲ್‌ಗೆ ಸೋತಿದ್ದರು. ಅರ್ಜೆಂಟೀನ ಆಟಗಾರ ಎರಡನೇ ಸುತ್ತಿನಲ್ಲಿ ಜಪಾನ್‌ನ ಯೊಶಿಹಿಟೊ ನಿಶಿಯೊಕಾ ಅಥವಾ ಅಮೆರಿಕದ ಮಕೆಂಝಿ ಮೆಕ್‌ಡೊನಾಲ್ಡ್ ಸವಾಲು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News