ಮೇವು ಹಗರಣ: 16 ಮಂದಿ ಆರೋಪಿಗಳು, 3ರಿಂದ 4 ವರ್ಷ ಕಾರಾಗೃಹ ಶಿಕ್ಷೆ

Update: 2019-05-29 17:19 GMT

ರಾಂಚಿ, ಮೇ 29: ಮೇವು ಹಗರಣಕ್ಕೆ ಸಂಬಂಧಿಸಿ ವಿಶೇಷ ಸಿಬಿಐ ನ್ಯಾಯಾಲಯ ಬುಧವಾರ 16 ಮಂದಿಯನ್ನು ಆರೋಪಿಗಳು ಎಂದು ಪರಿಗಣಿಸಿದೆ ಹಾಗೂ ಅವರಿಗೆ ಮೂರರಿಂದ ನಾಲ್ಕು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

1990ರಲ್ಲಿ ಜಾರ್ಖಂಡ್‌ನ ಚೈಲ್‌ಬಾಸಾ ಟ್ರೆಸರಿಯಿಂದ 37 ಕೋಟಿ ರೂಪಾಯಿಯನ್ನು ಅಕ್ರಮವಾಗಿ ಪಡೆದ ಪ್ರಕರಣದಲ್ಲಿ 16 ಮಂದಿಯನ್ನು ಆರೋಪಿಗಳು ಎಂದು ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಎಸ್.ಎನ್. ಮಿಶ್ರಾ ಪರಿಗಣಿಸಿದ್ದಾರೆ. ಆರೋಪಿಗಳಿಗೆ 25 ಸಾವಿರದಿಂದ 7 ಲಕ್ಷದ ವರೆಗೆ ದಂಡ, 7 ಮಂದಿ ಆರೋಪಿಗಳಿಗೆ 5 ವರ್ಷ ಕಾರಾಗೃಹ ಶಿಕ್ಷೆ ಹಾಗೂ ಇತರ 5 ಮಂದಿ ಆರೋಪಿಗಳಿಗೆ 4 ವರ್ಷ ಕಾರಾಗೃಹ ಶಿಕ್ಷೆಯನ್ನು ಅವರು ವಿಧಿಸಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿ 2013ರಲ್ಲಿ ಆರ್‌ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಸಹಿತ 44 ಮಂದಿಯನ್ನು ವಿಶೇಷ ಸಿಬಿಐ ನ್ಯಾಯಾಲಯ ಆರೋಪಿಗಳು ಎಂದು ಗುರುತಿಸಿತ್ತು.

ಬಹುಕೋಟಿ ರೂಪಾಯಿಯ ಮೇವು ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸಿದ ಬಳಿಕ ಲಾಲು ಪ್ರಸಾದ್ ಅವರಿಗೆ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಜೈಲು ಶಿಕ್ಷೆಗೆ ಒಳಗಾದವರಲ್ಲಿ ಟ್ರೆಸರಿಯ ತಾಂತ್ರಿಕ ಸಹಾಯಕ ಲಾಲ್ ಮೋಹನ್ ಗೋಪೆ, ಮಾಜಿ ಅಕೌಂಟ್ ಅಸಿಸ್ಟೆಂಟ್ ಭಾರತ್ ನಾರಾಯಣ್ ದಾಸ್, ಮಾಜಿ ಅಸಿಸ್ಟೆಂಟ್ ಅಕೌಂಟೆಂಟ್ ಸಹದೇವ್ ಪ್ರಸಾದ್ ಮೊದಲಾದವರು ಒಳಗೊಂಡಿದ್ದಾರೆ. ಉಳಿದವರು ಪೂರೈಕೆದಾರರು ಎಂದು ಪ್ರತಿವಾದಿ ಪರ ವಕೀಲ ಸಂಜಯ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News