×
Ad

ಮಸೀದಿ ಮೇಲೆ ಉಗ್ರದಾಳಿ: ಸಂತ್ರಸ್ತರಿಗೆ 49 ಲಕ್ಷ ರೂ. ನೀಡಿದ ‘ಮೊಟ್ಟೆ ಬಾಲಕ’

Update: 2019-05-29 23:01 IST

ಸಿಡ್ನಿ, ಮೇ 29: ಆಸ್ಟ್ರೇಲಿಯದ ಹದಿಹರಯದ ತರುಣನೊಬ್ಬ ವಿವಾದಾಸ್ಪದ ಬಲಪಂಥೀಯ ಸಂಸದರೊಬ್ಬರ ತಲೆಯ ಮೇಲೆ ಮೊಟ್ಟೆಯೊಂದನ್ನು ಎಸೆದಿದ್ದು ನಿಮಗೆ ನೆನಪಿರಬಹುದು. ಈಗ ಅದೇ ಯುವಕನು ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್ ನಗರದ ಎರಡು ಮಸೀದಿಗಳಲ್ಲಿ ನಡೆದ ಗುಂಡಿನ ದಾಳಿ ಸಂತ್ರಸ್ತರ ಕಲ್ಯಾಣಕ್ಕಾಗಿ 70,000 ಅಮೆರಿಕನ್ ಡಾಲರ್ (ಸುಮಾರು 49 ಲಕ್ಷ ರೂಪಾಯಿ) ದೇಣಿಗೆ ನೀಡಿ ಸುದ್ದಿಯಾಗಿದ್ದಾನೆ.

‘ಮುಸ್ಲಿಮ್ ಧರ್ಮಾಂಧ’ರನ್ನು ನ್ಯೂಝಿಲ್ಯಾಂಡ್‌ಗೆ ವಲಸೆ ಬರಲು ಬಿಟ್ಟಿರುವುದೇ ಮಾರ್ಚ್‌ನಲ್ಲಿ ಕ್ರೈಸ್ಟ್‌ಚರ್ಚ್‌ನ ಮಸೀದಿಗಳಲ್ಲಿ ನಡೆದ ದಾಳಿಗೆ ಕಾರಣ ಎಂಬ ವಿವಾದಾಸ್ಪದ ಹೇಳಿಕೆಯನ್ನು ಆಸ್ಟ್ರೇಲಿಯದ ಕಡು ಬಲಪಂಥೀಯ ಸಂಸದ ಫ್ರೇಸರ್ ಆ್ಯನಿಂಗ್ ನೀಡಿದ್ದರು. ಈ ಹೇಳಿಕೆಯಿಂದ ಆಕ್ರೋಶಗೊಂಡ 17 ವರ್ಷದ ವಿಲ್ ಕಾನಲಿ ಸುದ್ದಿಗೋಷ್ಠಿಯೊಂದರಲ್ಲಿ ಫ್ರೇಸರ್ ತಲೆಯ ಮೇಲೆ ಮೊಟ್ಟೆ ಎಸೆದು ಸುದ್ದಿಯಾಗಿದ್ದ.

ಘಟನೆಯ ಬಗ್ಗೆ ಪೊಲೀಸರು ಕಾನಲಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಅದೇ ವೇಳೆ, ಹದಿಹರೆಯದ ತರುಣನ ಪರವಾಗಿ ಜಾಗತಿಕ ಅಭಿಪ್ರಾಯ ರೂಪುಗೊಂಡಿತು. ಬಾಸ್ಕೆಟ್‌ಬಾಲ್ ತಾರೆ ಬೆನ್ ಸಿಮನ್ಸ್ ಕೂಡ ತರುಣನನ್ನು ಬೆಂಬಲಿಸಿದರು. ಹಾಗಾಗಿ, ಅವರ ಕಾನೂನು ಹೋರಾಟಕ್ಕಾಗಿ ದೇಣಿಗೆಗಳು ಬರಲಾರಂಭಿಸಿದವು.

ಈ ಘಟನೆಯ ಬಳಿಕ ಕಾನಲಿ ‘ಎಗ್ ಬಾಯ್’ (ಮೊಟ್ಟೆ ಬಾಲಕ) ಎಂದೇ ಪ್ರಸಿದ್ಧರಾದರು.

‘ಬಿಳಿಯರು ಶ್ರೇಷ್ಠರು’ ಎಂಬುದಾಗಿ ವಾದಿಸುವ ವರ್ಗವನ್ನು ಪ್ರತಿನಿಧಿಸುವ ಆಸ್ಟ್ರೇಲಿಯ ಪ್ರಜೆ ಬ್ರೆಂಟನ್ ಟ್ಯಾರಂಟ್ ಮಾರ್ಚ್ 15ರಂದು ಕ್ರೈಸ್ಟ್‌ಚರ್ಚ್ ನಗರದ ಎರಡು ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗೆ ನೆರೆದಿದ್ದ ಮುಸ್ಲಿಮರ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದನು. ಆ ದಾಳಿಗಳಲ್ಲಿ 51 ಮಂದಿ ಮೃತಪಟ್ಟಿದ್ದಾರೆ ಹಾಗೂ ಡಝನ್‌ಗಟ್ಟಳೆ ಮಂದಿ ಗಾಯಗೊಂಡಿದ್ದಾರೆ.

ನನಗೆ ಇನ್ನು ನ್ಯಾಯಾಲಯದ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲವಾದುದರಿಂದ ದೇಣಿಗೆ ರೂಪದಲ್ಲಿ ಬಂದಿರುವ 70,000 ಅಮೆರಿಕನ್ ಡಾಲರ್‌ನ್ನು ಕ್ರೈಸ್ಟ್‌ಚರ್ಚ್ ಹತ್ಯಾಕಾಂಡದ ಸಂತ್ರಸ್ತರ ಕಲ್ಯಾಣ ನಿಧಿಗೆ ಕೊಡುತ್ತೇನೆ ಎಂಬುದಾಗಿ ಕಾನಲಿ ಮಂಗಳವಾರ ಘೋಷಿಸಿದ್ದಾರೆ.

ನನ್ನ ಬಳಿ ಇಟ್ಟುಕೊಳ್ಳಲು ಅದು ನನ್ನ ಹಣವಲ್ಲ

‘‘ಹತ್ಯಾಕಾಂಡದ ಸಂತ್ರಸ್ತರಿಗೆ ಕೊಂಚ ನೆಮ್ಮದಿ ನೀಡುವುದಕ್ಕಾಗಿ ಎಲ್ಲ ಹಣವನ್ನು ನಾನು ಅವರಿಗೆ ದಾನ ಮಾಡಲು ನಿರ್ಧರಿಸಿದ್ದೇನೆ. ನನ್ನ ಬಳಿ ಇಟ್ಟುಕೊಳ್ಳಲು ಅದು ನನ್ನ ಹಣವಲ್ಲ’’ ಎಂಬುದಾಗಿ ಕಾನಲಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದಿದ್ದಾರೆ.

‘‘ದುರಂತದ ಬಲಿಪಶುಗಳಿಗೆ ಇದು ಕೊಂಚ ನೆಮ್ಮದಿ ತರಬಹುದು ಎಂಬುದಾಗಿ ನಾನು ಆಶಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News