ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದಾರೇ?

Update: 2019-05-29 18:47 GMT

 ಮಲ್ಲಿಕಾರ್ಜುನ ಖರ್ಗೆ ಅವರು ಭಾರತೀಯ ರಾಜಕಾರಣದ ಹಿರಿಯ ಮುತ್ಸದ್ದಿ. ಅವರು 1972ರಿಂದ 2008ರವರೆಗೆ ಸತತವಾಗಿ ಒಂಬತ್ತು ಸಲ ವಿಧಾನಸಭೆಯ ಚುನಾವಣೆಯಲ್ಲಿ ಗೆದ್ದು ಕರ್ನಾಟಕದ ವಿಧಾನಸಭೆಯಲ್ಲಿ ಕಲಬುರಗಿಯನ್ನು ಪ್ರತಿನಿಧಿಸಿದ್ದಾರೆ. 2009 ಮತ್ತು 2014ರ ಲೋಕಸಭಾ ಚುನಾವಣೆಗಳಲ್ಲಿ ಗೆದ್ದು ಹತ್ತು ವರ್ಷಗಳ ಕಾಲ ಸಂಸತ್ ಸದಸ್ಯರಾಗಿದ್ದ ಖರ್ಗೆ ಅವರು 2014ರಿಂದ ಇಲ್ಲಿಯವರೆಗೆ ಐದು ವರ್ಷಗಳ ಕಾಲ ಅಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿದ್ದರು. ಅದರಿಂದಾಗಿ, ಅವರು ಒಟ್ಟು ವಿರೋಧಪಕ್ಷಗಳ ಸಂಸದೀಯ ಪಕ್ಷಗಳ ಅನಧಿಕೃತ ನಾಯಕರಾಗಿದ್ದರು ಎಂದು ಕೂಡ ಹೇಳಬಹುದಾಗಿದೆ.
ಕಳೆದ ನಾಲ್ಕು ದಶಕಗಳಲ್ಲಿ ಅವರು ಬೇರೆಬೇರೆ ಅವಧಿಗಳಲ್ಲಿ ಕರ್ನಾಟಕ ಸರಕಾರದಲ್ಲಿ ಮಂತ್ರಿಯಾಗಿ ದ್ದವರು: ಪ್ರಾಥಮಿಕ ಶಿಕ್ಷಣ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ, ಸಹಕಾರ ಸಂಸ್ಥೆಗಳು, ಮಧ್ಯಮ ಮತ್ತು ಬೃಹತ್ ಉದ್ದಿಮೆಗಳು, ಗೃಹ, ಸಾರಿಗೆ ಮತ್ತು ಜಲಸಂಪನ್ಮೂಲ-ಹೀಗೆ ಹಲವು ಖಾತೆಗಳನ್ನು ನಡೆಸಿದವರು; ಕೇಂದ್ರದಲ್ಲಿ ರೈಲ್ವೆ ಮತ್ತು ಕಾರ್ಮಿಕ ಖಾತೆಯ ಸಚಿವರಾಗಿದ್ದವರು; ದೇವರಾಜ ಅರಸು ಸರಕಾರದಲ್ಲಿ ಆಕ್ಟ್ರಾಯ್ ರದ್ದತಿ ಸಮಿತಿಯ ಅಧ್ಯಕ್ಷರಾಗಿ, ಬಳಿಕ ರಾಜ್ಯದ ಚರ್ಮೋದ್ಯೋಗ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದವರು; ಕರ್ನಾಟಕದ ವಿಧಾನಸಭೆಯಲ್ಲಿ ಎರಡು ಬಾರಿ ವಿರೋಧಪಕ್ಷಗಳ ನಾಯಕರಾಗಿದ್ದವರು. ಇದೆಲ್ಲವಲ್ಲದೆ, ತಮ್ಮ ರಾಜಕೀಯ ಜೀವನದ ಆರಂಭದಲ್ಲಿ ಕಾರ್ಮಿಕರ ನಾಯಕರಾಗಿ ಅವರ ಹಕ್ಕುಗಳಿಗಾಗಿ ಹೆರಾಡಿದವರು; ವಕೀಲರಾಗಿದ್ದವರು.
ಹೀಗೆ ಸಾರ್ವಜನಿಕ ಜೀವನ ಮತ್ತು ಆಡಳಿತದ ಅಪಾರ ಅನುಭವವಿರುವ ಖರ್ಗೆ ಅವರಮೇಲೆ ಒಮ್ಮೆಯೂ ಭ್ರಷ್ಟಾಚಾರದ ಆರೋಪ ಕೇಳಿಬಂದಿಲ್ಲ. ಮೇಲಾಗಿ, ಈ ಇಷ್ಟು ವರ್ಷಗಳಲ್ಲಿ ಅವರು ಎಲ್ಲಿಯೂ, ಯಾವತ್ತೂ ತೂಕತಪ್ಪಿಮಾತನಾಡಿದ್ದು ನನಗೆ ಗೊತ್ತಿಲ್ಲ. ಲೋಕಸಭೆಯಲ್ಲಿ ಐದು ವರ್ಷಗಳ ಕಾಲ ವಿರೋಧ ಪಕ್ಷಗಳ ಅನಧಿಕೃತ ನಾಯಕರಾಗಿ, ಬಿಜೆಪಿ, ಸಂಘಪರಿವಾರದ ಅತ್ಯಂತ ವಿಷಯುಕ್ತವಾದ ವಾದಗಳನ್ನು ಎದುರಿಸುತ್ತ, ಅವುಗಳಿಗೆ ಉತ್ತರಿಸುವಾಗಲೂ ಅವರು ತುಂಬ ಎಚ್ಚರಿಕೆಯಿಂದ, ತುಂಬ ಘನತೆಯಿಂದ ವರ್ತಿಸಿದರು, ಘನತೆಯ ಮಾತುಗಳನ್ನೇ ಆಡಿದರು ಅನ್ನುವುದು ಎಲ್ಲರೂ ಗಮನಿಸಿರುತ್ತಾರೆ. ಬಿಜೆಪಿ, ಸಂಘ ಪರಿವಾದವರು ಕೂಡ ತಾವು ಕಾಂಗ್ರೆಸ್‌ನ ಬೇರೆಯವರೊಂದಿಗೆ ವರ್ತಿಸಿದಂತೆ ಖರ್ಗೆಯವರೊಂದಿಗೆ ವರ್ತಿಸುವ ಧೈರ್ಯ ತೋರಲಿಲ್ಲ. ಘನವಾದ ಈ ಮನುಷ್ಯನೊಂದಿಗೆ ಅಂಥವರು ಕೂಡ ಘನವಾಗಿಯೇ ವರ್ತಿಸಬೇಕಾಯಿತು.
ಕಾಂಗ್ರೆಸ್ ಪಕ್ಷದ ಬೇರೆ ಎಷ್ಟೋ ಜನ ಪಕ್ಷದೊಳಗಿನ ತಮ್ಮ ಜಗಳಗಳನ್ನು ಬೀದಿಗೆ ತಂದು ರಂಪಾಟ ಮಾಡಿದಂತೆ, ಮರ್ಯಾದೆಗೆಟ್ಟು ವರ್ತಿಸಿದಂತೆ, ಅಧಿಕಾರದಮೇಲಿನ ದುರಾಸೆಯಿಂದ ಅವಕಾಶವಾದ ತೋರಿದಂತೆ ಖರ್ಗೆಯವರು ಯಾವತ್ತೂ ತೋರಿಲ್ಲ. ಸುಮಾರು ಐವತ್ತು ವರ್ಷಗಳ ಕಾಲ ತಮ್ಮ ಪಕ್ಷವು ತಮಗೆ ಕೊಟ್ಟ ಯಾವುದೇ ಮತ್ತು ಎಲ್ಲ ಜವಾಬ್ದಾರಿಯನ್ನು ತುಂಬ ನಿಸ್ಪೃಹ, ಶ್ರದ್ಧೆ ಮತ್ತು ಘನೆಯಿಂದ ಪೂರೈಸಿದ ನಾಯಕ ಇವರು.
ನನ್ನನ್ನು ವಿಶೇಷವಾಗಿ ಕಲಕಿದ್ದು ಈಚೆಗೆ ಅವರು ನೀಡಿದ ಹೇಳಿಕೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯದಿದ್ದು, ಸಮ್ಮಿಶ್ರ ಸರಕಾರವು ರೂಪುಗೊಳ್ಳಬೇಕಾದ ಅನಿವಾರ್ಯತೆ ಎದುರಾದಾಗ, ಸಿದ್ಧರಾಮಯ್ಯನವರು, ‘‘ಹೈಕಮಾಂಡ್ ಸರಿಯೆಂದರೆ ದಲಿತ ನಾಯಕರು ಸಿಎಂ ಆಗಲು ನನ್ನ ಒಪ್ಪಿಗೆ ಇದೆ’’ ಎಂದಾಗ, ಖರ್ಗೆಯವರು ‘‘ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನೆಂದು, ನಿಷ್ಠಾವಂತ ಕಾರ್ಯಕರ್ತನೆಂದು ಪರಿಗಣಿಸಿ ಸಿಎಂ ಪದವಿ ಕೊಡಬೇಕು. ದಲಿತ ಸಿಎಂ ಕೋಟಾದಲ್ಲಿ ಕೊಡುವುದು ಬೇಡ. ದಲಿತ ಸಿಎಂ, ದಲಿತ ಸಿಎಂ ಎಂದೆಲ್ಲಾ ಹೇಳಿ ನನ್ನನ್ನು ಅವಮಾನಿಸಬೇಡಿ. ಸಂವಿಧಾನದಲ್ಲಿ ದಲಿತ ಸಿಎಂ, ಒಕ್ಕಲಿಗ ಸಿಎಂ, ಲಿಂಗಾಯತ ಸಿಎಂ, ಕುರುಬ ಸಿಎಂ ಎಂಬ ಪ್ರಸ್ತಾಪವಿಲ್ಲ. ಎಲ್ಲ ಜಾತಿಗಳ ನಾಯಕರೊಡನೆ ನಮ್ಮನ್ನೂ ಸರಿಸಮಾನವಾಗಿ ತೂಗಿ ಹಿರಿತನ, ಅನುಭವ, ಸಾಮರ್ಥ್ಯದ ಮೇಲೆ ಅವಕಾಶಗಳು ಸಿಗಬೇಕೇ ಹೊರತು ಜಾತಿ ಕೋಟಾದಡಿ ಅಲ್ಲ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ನಾನು ದಲಿತ ಎಂಬ ಕಾರಣಕ್ಕೆ ಸಿಎಂ ಪಟ್ಟ ಸಿಗುವುದಾದರೆ, ಅದು ನನಗೆ ಬೇಡ,’’ ಎಂಬರ್ಥದ ಮಾತಾಡಿದರು. ವೃತ್ತಿನಿರತ ರಾಜಕಾರಣದಲ್ಲಿ-ಅದೂ ಕಾಂಗ್ರೆಸ್‌ನಂಥ ಪಕ್ಷದಲ್ಲಿ-ಇಷ್ಟು ಘನತೆಯುಳ್ಳವರು ಕಂಡುಬರುವುದು ಅಪರೂಪಕ್ಕೆ ಮಾತ್ರ.
 ಇಂಥ ಮುತ್ಸದ್ದಿಯಾದ ಖರ್ಗೆಯವರು ಇಪ್ಪತ್ತು ವರ್ಷದ ಹಿಂದೆಯೇ ಕರ್ನಾಟಕದ ಮುಖ್ಯಮಂತ್ರಿ ಆಗಬೇಕಿತ್ತು. ಅಷ್ಟೇಕೆ, ಅವರು ಮೊದಲು ಹಲವು ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದು, 2014ರ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ, ಆ ಪಕ್ಷದ ವತಿಯಿಂದ ಪ್ರಧಾನಿ ಮಂತ್ರಿ ಹುದ್ದೆಯ ಅಭ್ಯರ್ಥಿಯಾಗಿ ಕಾಣಿಸಿಕೊಳ್ಳಬೇಕಿದ್ದವರು. ಆದರೆ, ಆ ಪಕ್ಷದ ಹಣೆಬರಹ: ಒಂದು ಕುಟುಂಬದ ಪಾರುಪತ್ಯ ಮತ್ತು ಮೇಲಾಟ ಹಾಗೂ ಲೆಕ್ಕವಿಲ್ಲದಷ್ಟು ಅವಕಾಶವಾದಿಗಳ ಕೂಟವಾಗಿರುವ ಆ ಪಕ್ಷದವರ ಎಣೆಯಿಲ್ಲದ ಸ್ವಾರ್ಥ, ಸಮೀಪದೃಷ್ಟಿ ಮತ್ತು ಮೂರ್ಖತನಗಳಿಂದಾಗಿ ಈಗ ಕೇಂದ್ರದಲ್ಲಿ ಮತ್ತೊಮ್ಮೆ ಆಗಬಾರದ್ದಾಗಿದೆ.
ಕಾಂಗ್ರೆಸಿಗರಲ್ಲಿ ವಿವೇಕ ಅನ್ನುವುದೇನಾದರೂ ಇನ್ನೂ ಉಳಿದಿದ್ದರೆ, ಅವರು ಈಗ ತಡಮಾಡದೆ ಖರ್ಗೆ ಅವರನ್ನು ತಮ್ಮ ಪಕ್ಷದ ಅತ್ಯುನ್ನತ ಹುದ್ದೆಗೆ ತಂದುಕೊಳ್ಳಬೇಕು. ಅವರ ನೇತೃತ್ವ ಮತ್ತು ಮುತ್ಸದ್ದಿತನದ ಬೆಳಕಲ್ಲಿ ತಮ್ಮ ಪಕ್ಷವನ್ನು ಉಳಿಸಿಕೊಂಡು, ತಮ್ಮೆಲ್ಲ ರೋಗಗಳಿಗೆ ಇಲಾಜು ಮಾಡಿಸಿಕೊಳ್ಳುತ್ತ, ಆರೋಗ್ಯಯುತವಾದ ಪಕ್ಷವನ್ನು ಕಟ್ಟಿಕೊಂಡು, ಜನತೆಯು ಅವರಿಂದ ನಿರೀಕ್ಷಿಸುವ ಒಳಿತನ್ನು ನೀಡಬೇಕು. ಮೇಲೆಲ್ಲ ಹೇಳಿರುವ ಹಿರಿತನದ ಗುಣಗಳು, ಅನುಭವ ಹಾಗೂ ಸಾಧನೆಗಳ ಜೊತೆಗೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಲು ಖರ್ಗೆಯವರಿಗೆ ಮತ್ತೆರಡು ಅರ್ಹತೆಗಳಿವೆ: ಅವರಿಗೆ ಹಿಂದಿ ಚೆನ್ನಾಗಿ ಬರುತ್ತದೆ; ಮತ್ತು ಅವರು ದಿಲ್ಲಿಯ ರಾಜಕಾರಣವನ್ನು ಚೆನ್ನಾಗಿ ಬಲ್ಲವರು.
ಕಡೆಯದಾಗಿ, ನನ್ನ ಅಭಿಪ್ರಾಯದಲ್ಲಿ, ಮಲ್ಲಿಕಾರ್ಜುನ ಖರ್ಗೆ ಎಂಬ ಈ ಮರ್ಯಾದಾ ಪುರುಷ ಎಡವಿದ್ದು ಒಮ್ಮೆ ಮಾತ್ರ, ಮತ್ತು ಈಚೆಗೆ: ಹಲವು ರಾಜಕಾರಣಿಗಳಂತೆ ತಾವು ಕೂಡ ಸಲ್ಲದ ಪುತ್ರವ್ಯಾಮೋಹಕ್ಕೆ ಬಲಿಯಾಗಿ ತಮ್ಮ ಮಗ ಪ್ರಿಯಾಂಕ್ ಖರ್ಗೆ ಅವರನ್ನು ಶಾಸಕ ಮತ್ತು ರಾಜ್ಯ ಸರಕಾರದ ಒಬ್ಬ ಮಂತ್ರಿ ಮಾಡಿದಾಗ. ಈಗ, ನಮ್ಮಂಥವರು ಅವರಿಂದ ನಿರೀಕ್ಷಿಸುವ ನೇತೃತ್ವವನ್ನು ನೀಡುವ ಮುನ್ನ ಖರ್ಗೆಯವರು ಪ್ರಾಯಶ್ಚಿತ್ತ ಎಂಬಂತೆ ಒಂದು ಕೆಲಸ ಮಾಡಬೇಕು. ಪ್ರಿಯಾಂಕ್ ಖರ್ಗೆಯವರು ತಮ್ಮ ಹುದ್ದೆಗೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅವರು ಮಾಡಬೇಕು ಮತ್ತು ಪ್ರಿಯಾಂಕ್ ಅವರು ಕೂಡ ದೇಶಕ್ಕಾಗಿ, ತಮ್ಮ ಪಕ್ಷಕ್ಕಾಗಿ, ನಿಜವಾದ ಮುತ್ಸದ್ದಿಯಾದ ತಮ್ಮ ತಂದೆಗಾಗಿ ತಮ್ಮ ಸ್ವಪ್ರತಿಷ್ಠೆ ಮತ್ತು ಅಧಿಕಾರದ ಆಸೆಯನ್ನು ಬದಿಗಿಟ್ಟು ಆ ಪದವಿಗಳಿಗೆ ರಾಜೀನಾಮೆ ಕೊಡಬೇಕು. ಅದರಿಂದಾಗಿ ಆಗುವ ಉಪಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಯೋಗ್ಯತೆಯುಳ್ಳ ಮತ್ತೊಬ್ಬ ವ್ಯಕ್ತಿಯನ್ನು ಅಲ್ಲಿಂದ ಗೆಲ್ಲಿಸಿ ಈ ತಂದೆಮಕ್ಕಳಿಬ್ಬರೂ ಶಾಸನಸಭೆಗೆ ಕಳಿಸಬೇಕು. ಬಳಿಕ, ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಪಕ್ಷದ ಬೆಳಕಾಗಬೇಕು; ಜೊತೆಗೆ ದೇಶಕ್ಕೂ ಹಿರಿತನದ ಕೊಡುಗೆ ನೀಡಬೇಕು.
ಹಾಗಾಗಬೇಕಾದರೆ, ನೆಹರೂ-ಗಾಂಧಿ ಕುಟುಂಬದವರು ರಾಜಕಾರಣವನ್ನು ಸಂಪೂರ್ಣವಾಗಿ ತೊರೆದು, ಸಾರ್ವಜನಿಕ ಜೀವನದಿಂದ ಸಂಪೂರ್ಣ ಮರೆಯಾಗಬೇಕು. ಜಗತ್ತಿನ ಅತಿ ಶಕ್ತಿಶಾಲಿ ರಾಷ್ಟಗಳಲ್ಲಿ ಒಂದಾಗಿದ್ದ ಸೋವಿಯತ್ ಒಕ್ಕೂಟದ ಅತ್ಯುನ್ನತ ಸ್ಥಾನವನ್ನು ಮಿಖಾಯಿಲ್ ಗೊರ್ಬಚೆವ್ ಅವರು ತಾವಾಗಿಯೆ ಬಿಟ್ಟುಕೊಟ್ಟು, ಮರೆಯಾದರು; ಲೋಕಕ್ಕೇ ಮಾದರಿಯಾಗಿದ್ದ (ಮತ್ತು ಈಗಲೂ ಆಗಿರುವ), ನಮಗೆ ಗಾಂಧೀಜಿ ಹೇಗೋ ಹಾಗೆ ತನ್ನ ದೇಶಕ್ಕೆ ತಂದೆಯಾಗಿದ್ದ, ದಿವಂಗತ ನೆಲ್ಸನ್ ಮಂಡೇಲಾ ಅವರು ವರ್ಣನೀತಿಮುಕ್ತ ದಕ್ಷಿಣ ಆಫ್ರಿಕಾದ ಮೊದಲ ಅಧ್ಯಕ್ಷರಾಗಿ ಐದು ವರ್ಷವಿದ್ದು, ತಮ್ಮ ದೇಶಕ್ಕೆ, ಲೋಕಕ್ಕೆ ಬೆಳಕು ತೋರಿ, ಬಳಿಕ ತಾವಾಗಿಯೇ ಎಲ್ಲವನ್ನೂ ಬಿಟ್ಟುಕೊಟ್ಟು ಹಳ್ಳಿಯಲ್ಲಿ ನೆಲೆಸಿದರು. ರಾಹುಲ್ ಗಾಂಧಿಯವರೊಂದಿಗೆ ಹೋಲಿಸಿ ನೋಡಿದರೆ, ಅಧಿಕಾರದ ಮೇಲ್ಮೆಯ ವಿಷಯದಲ್ಲಿ ಗೊರ್ಬಚೆವ್ ಅವರೊಂದು ದೊಡ್ಡಬೆಟ್ಟ; ಸುಗುಣ ಸಂಪನ್ನತೆ ಹಾಗೂ ಸಾತ್ತ್ವಿಕ ಸಾಧನೆಯಲ್ಲಿ ಮಂಡೇಲಾ ಅವರು ಗೌರಿಶಂಕರ ಪರ್ವತ. ಅಂಥವರ ಮುಂದೆ ರಾಹುಲ್ ಗಾಂಧಿ ಮತ್ತು ಆತನ ಕುಟುಂಬವು ಹುಲ್ಲುಕಡ್ಡಿಗೂ ಸಮನಲ್ಲ. ನೆಹರೂ-ಗಾಂಧಿ ಕುಟುಂಬ ಈಗ ಮರೆಯಾಗಲಿ. ಮಲ್ಲಿಕಾರ್ಜುನ ಖರ್ಗೆ ಅವರಂಥವರು ಈಗ ನಿಜಕ್ಕೂ ಮುಂಚೂಣಿಗೆ ಬರಲಿ. ಕಾಂಗ್ರೆಸಿಗರು ಈಗಲಾದರೂ ವಿವೇಕ ಮತ್ತು ಒಳ್ಳೆಯತನಗಳನ್ನು ತೋರಲಿ.
***
ಕೃಪೆ: nalmushrags@gmail.com

Writer - ರಘುನಂದನ

contributor

Editor - ರಘುನಂದನ

contributor

Similar News

ಜಗದಗಲ
ಜಗ ದಗಲ