ಇಂದಿನಿಂದ ಕ್ರಿಕೆಟ್ ಜನಕರ ನಾಡಿನಲ್ಲಿ ವಿಶ್ವಕಪ್ ವೈಭವ

Update: 2019-05-29 19:10 GMT
ಬ್ರಿಟನ್ ರಾಣಿ ಎಲಿಝಬೆತ್ ಅವರೊಂದಿಗೆ ವಿರಾಟ್ ಕೊಹ್ಲಿ ಸಹಿತ ಹತ್ತು ಕ್ರಿಕೆಟ್ ತಂಡದ ನಾಯಕರುಗಳು

ಲಂಡನ್, ಮೇ 29: ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಬಹು ನಿರೀಕ್ಷಿತ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್‌ನಲ್ಲಿ ಗುರುವಾರ ಆರಂಭವಾಗಲಿದ್ದು, ಜು. 14ರ ತನಕ ವಿಶ್ವದ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ರಸದೌತಣ ಸಿಗಲಿದೆ.

ದಿ ಓವಲ್ ಮೈದಾನದಲ್ಲಿ ನಡೆಯುವ ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕವನ್ನು ಎದುರಿಸಲಿದೆ. 2015ರಲ್ಲಿ ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ಜಂಟಿ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿ ಮುಜುಗರ ಅನುಭವಿಸಿದ್ದ ಇಂಗ್ಲೆಂಡ್ ಈ ಬಾರಿಯ ವಿಶ್ವಕಪ್‌ಗೆ ಕಳೆದ ನಾಲ್ಕು ವರ್ಷಗಳಿಂದ ಯೋಜನೆ ರೂಪಿಸಿದೆ. ಕಳೆದ ವಿಶ್ವಕಪ್‌ನ ಹೀನಾಯ ಸೋಲಿನ ಬಳಿಕ ಇಂಗ್ಲೆಂಡ್ ತಂಡ ಇಯಾನ್ ಮೊರ್ಗನ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಪ್ರಸ್ತುತ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಈ ತಂಡ ಗರಿಷ್ಠ ಏಕದಿನ ಸ್ಕೋರ್ ಗಳಿಕೆಯಲ್ಲಿ ಎರಡು ಬಾರಿ ವಿಶ್ವ ದಾಖಲೆ ನಿರ್ಮಿಸಿತ್ತು. ಪ್ರಸ್ತುತ ಗರಿಷ್ಠ ಸ್ಕೋರ್ ದಾಖಲೆ(6ಕ್ಕೆ481) ಇಂಗ್ಲೆಂಡ್‌ನ ಹೆಸರಲ್ಲಿದೆ. ಕಳೆದ ವರ್ಷ ನಾಟಿಂಗ್‌ಹ್ಯಾಮ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 6ಕ್ಕೆ 481 ರನ್ ಗಳಿಸಿರುವ ಇಂಗ್ಲೆಂಡ್ ವಿಶ್ವಕಪ್‌ನಲ್ಲಿ ಏಕದಿನ ಇನಿಂಗ್ಸ್‌ನಲ್ಲಿ ಮೊದಲ ಬಾರಿ 500ಕ್ಕೂ ಅಧಿಕ ಸ್ಕೋರ್ ಗಳಿಸುವ ಭೀತಿ ಹುಟ್ಟಿಸಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಕಪ್ ಎತ್ತಬಲ್ಲ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ. ಬ್ಯಾಟಿಂಗ್ ಸರದಿ ಬಲಿಷ್ಠವಾಗಿದ್ದು,ಜೆೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಮೊರ್ಗನ್ ಹಾಗೂ ಜೋಸ್ ಬಟ್ಲರ್ ಪಂದ್ಯದ ಚಿತ್ರಣ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ‘‘ಇಂಗ್ಲೆಂಡ್ ತಂಡದಲ್ಲಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದ್ದು, ನಮ್ಮ ತಂಡದಲ್ಲಿ ವಿಶ್ವ ದರ್ಜೆಯ ಆಟಗಾರರಿದ್ದಾರೆ. ಎದುರಾಳಿಗಳು 370 ರನ್ ಗಳಿಸಿದರೂ ಅದನ್ನು ಚೇಸಿಂಗ್ ಮಾಡುವ ವಿಶ್ವಾಸ ನಮಗಿದೆ. ನಾವದನ್ನು ಮಾಡಿಯೇ ತೀರುತ್ತೇವೆ ಎಂಬ ನಂಬಿಕೆ ಹಾಗೂ ಆತ್ಮವಿಶ್ವಾಸ ತಂಡದ ಎಲ್ಲ ಆಟಗಾರರಲ್ಲಿದೆ’’ ಎಂದು ಇಂಗ್ಲೆಂಡ್‌ನ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಹೇಳಿದ್ದಾರೆ.

 ರಶೀದ್‌ಗೆ ಪಂದ್ಯದ ಪ್ರಮುಖ ಘಟ್ಟದಲ್ಲಿ ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯವಿದ್ದು, ಇದು ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್‌ಗೆ ಅತ್ಯಂತ ಮುಖ್ಯವಾಗಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕ ತಂಡ ವಿಶ್ವಕಪ್‌ನಲ್ಲಿ ಸಾಕಷ್ಟು ನೋವು ಅನುಭವಿಸಿದೆ. ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ದ.ಆಫ್ರಿಕ ತಂಡ ಈ ಬಾರಿ ಕೂಡ ಒತ್ತಡದಲ್ಲಿದೆ. ಈ ಬಾರಿ ಫೇವರಿಟ್ ಪಟ್ಟಿಯಲ್ಲಿ ಸ್ಥಾನ ಪಡೆಯದ ಆಫ್ರಿಕ ತಂಡ ಬೌಲಿಂಗ್‌ನ್ನು ಹೆಚ್ಚು ನೆಚ್ಚಿಕೊಂಡಿದೆ. ಡೇಲ್ ಸ್ಟೇಯ್ನಿ, ಕಾಗಿಸೊ ರಬಾಡ ಹಾಗೂ ಲುಂಗಿ ಗಿಡಿಗೆ ಯಾವುದೇ ಬ್ಯಾಟಿಂಗ್ ಸರದಿ ಚಿಂದಿಗೈಯುವ ಸಾಮರ್ಥ್ಯವಿದೆ.

ಟೂರ್ನಮೆಂಟ್‌ನ ಆತಿಥ್ಯವಹಿಸಿರುವ ತಂಡಕ್ಕೆ ಒತ್ತಡವಿರುತ್ತದೆ ಎಂದು ಹೇಳಿರುವ ದಕ್ಷಿಣ ಆಫ್ರಿಕದ ಕೋಚ್ ಒಟ್ಟಿಸ್ ಗಿಬ್ಸನ್, ‘‘ನಾವು ಟೂರ್ನಿಯ ಮೊದಲ ಪಂದ್ಯದಲ್ಲಿ ನಂ.1 ತಂಡವನ್ನು ಎದುರಿಸುತ್ತಿದ್ದೇವೆ. ಇದು ನಮ್ಮ ಆರಂಭಕ್ಕೆ ಉತ್ತಮ ಮಾರ್ಗವಾಗಿದೆ. ಏಕೆಂದರೆ ನಮಗೆ ಈ ಪಂದ್ಯ ನಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ಹಾಗೂ ತಪ್ಪನ್ನು ತಿದ್ದುಕೊಳ್ಳಲು ಅವಕಾಶ ಒದಗಿಸಲಿದೆ ಎಂದು ಹೇಳಿದ್ದಾರೆ.

  ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ನಿವೃತ್ತಿಯಾದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕ ತಂಡವನ್ನು ಎಫ್‌ಡು ಪ್ಲೆಸಿಸ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಅಗ್ರ ಸರದಿಯಲ್ಲಿ ಪ್ರತಿಭಾವಂತ ಕ್ವಿಂಟನ್ ಡಿಕಾಕ್‌ರಿದ್ದಾರೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಪ್ರಮುಖ ವೇಗದ ಬೌಲರ್ ಡೇಲ್ ಸ್ಟೇಯ್ನಾ ಲಭ್ಯವಿರುವುದಿಲ್ಲ. ಅವರ ಬದಲಿಗೆ ಕ್ರಿಸ್ ಮೊರಿಸ್ ಅವಕಾಶ ಪಡೆಯಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ವಿಶ್ವ ಕ್ರಿಕೆಟ್‌ನ ಪ್ರಮುಖ ವೇಗದ ಬೌಲರ್ ಕಾಗಿಸೊ ರಬಾಡ ಲಭ್ಯವಿರಲಿದ್ದು ಅವರು ಬೆನ್ನು ನೋವಿನಿಂದ ಚೇತರಿಸಿಕೊಂಡು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News