‘30 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಸಿಕ್ಕ ಬಹುಮಾನವಿದು’

Update: 2019-05-30 16:56 GMT

ಗುವಹಾಟಿ, ಮೇ 30: “ಮೂವತ್ತು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ದೊರೆತ ಬಹುಮಾನವಿದು''…  ಹೀಗೆಂದು ನೋವಿನಿಂದ ಹೇಳಿದವರು ಮುಹಮ್ಮದ್ ಸನಾವುಲ್ಲಾ.

ಐವತ್ತೆರಡು ವರ್ಷದ ಮುಹಮ್ಮದ್ ಅವರು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದವರು ಹಾಗೂ ಈಗ ಅಸ್ಸಾಂ ಪೊಲೀಸ್ ಇಲಾಖೆಯ ಗಡಿ ವಿಭಾಗದ ಡೆಪ್ಯುಟಿ ಇನ್‍ಸ್ಪೆಕ್ಟರ್ ಆಗಿದ್ದಾರೆ. ಆದರೆ ವಿಪರ್ಯಾಸವೆಂದರೆ ಅವರನ್ನು ಫಾರಿನರ್ಸ್ ಟ್ರಿಬ್ಯುನಲ್ `ವಿದೇಶಿ' ಎಂದು ಘೋಷಿಸಿದ್ದು ಅವರನ್ನೀಗ ಈ ಆದೇಶದ ಅನುಸಾರ ಅಸ್ಸಾಂನಲ್ಲಿನ ದಿಗ್ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದೆ. ಅವರನ್ನು ದಿಗ್ಬಂಧನ ಶಿಬಿರಕ್ಕೆ ಕಳುಹಿಸಿರುವುದನ್ನು ಅಸ್ಸಾಂನ ಹಿರಿಯ ಪೊಲೀಸ್ ಅಧಿಕಾರಿ ಮೌಸಮಿ ಕಲಿಟ ದೃಢ ಪಡಿಸಿದ್ದಾರೆ.

“ನಾವು ಕೇವಲ ಟ್ರಿಬ್ಯುನಲ್ ಆದೇಶವನ್ನು ಪಾಲಿಸುತ್ತಿದ್ದೇವೆ. ಆವರನ್ನೇಕೆ ವಿದೇಶಿ ಎಂದು ಘೋಷಿಸಲಾಯಿತೆಂಬುದು ನಮಗೆ ತಿಳಿದಿಲ್ಲ'' ಎಂದು ಅವರು ಹೇಳಿದ್ದಾರೆ.

ಇದರಲ್ಲೇನೋ ಪ್ರಮಾದವಿರಬೇಕೆಂದು ಮುಹಮ್ಮದ್ ಸನಾ ಅವರ ವಕೀಲ ಅಮನ್ ವದೂದ್ ಶಂಕಿಸಿದ್ದಾರೆ. ಆದೇಶದಲ್ಲಿ ತಮ್ಮ ಕಕ್ಷಿಗಾರರನ್ನು ಭಾರತಕ್ಕೆ 1971ರಲ್ಲಿ ಯಾವುದೇ ಕಾನೂನುಬದ್ಧ ದಾಖಲೆಯಿಲ್ಲದೆ ಪ್ರವೇಶಿಸಿದ ಕಾರ್ಮಿಕ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಬಳಿ 1935ರ ಅಸ್ಸಾಂ ಭೂ ದಾಖಲೆಗಳಿವೆ ಎಂದು ಮುಹಮ್ಮದ್ ಅವರ ಕುಟುಂಬ ಹೇಳಿದೆ. ಈ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ  ಪ್ರಶ್ನಿಸುವುದಾಗಿ ವಕೀಲರು ತಿಳಿಸಿದ್ದಾರೆ.

ಸದ್ಯ ಮುಹಮ್ಮದ್ ಅವರು  ಗೋಲ್ಪರ ಎಂಬಲ್ಲಿನ ಶಿಬಿರದಲ್ಲಿದ್ದು ತಾವು ತೀವ್ರವಾಗಿ ನೊಂದಿದ್ದಾಗಿ ಅವರು ಹೇಳಿದ್ದಾರೆ. ``ನಾನೊಬ್ಬ ಭಾರತೀಯ ಹಾಗೂ ಯಾವತ್ತೂ ಭಾರತೀಯನಾಗಿರುತ್ತೇನೆ'' ಎಂದು ಶಿಬಿರದೊಳಕ್ಕೆ ಸಾಗಿಸುವ ಮುನ್ನ ಅವರು ಮಾಧ್ಯಮವೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ಅಸ್ಸಾಂನಲ್ಲಿ ಈಗಾಗಲೇ ಕೋಲಾಹಲ ಸೃಷ್ಟಿಸಿದ್ದರೆ, ಬಿಜೆಪಿ ತಾನು ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲಾ ಅಕ್ರಮ ವಲಸಿಗರನ್ನೂ ಗುರುತಿಸಿ ಮುಸ್ಲಿಮೇತರರಿಗೆ ಇಲ್ಲಿನ ಪೌರತ್ವ ನೀಡಿ ಉಳಿದವರನ್ನು ಗಡೀಪಾರು ಮಾಡುವುದಾಗಿ ಹೇಳಿರುವುದು ಸಾಕಷ್ಟು  ಕಳವಳಕ್ಕೆ ಕಾರಣವಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News