ಗ್ರಾಪಂ ಚುನಾವಣೆಗೆ ಸನ್ನದ್ಧರಾಗಿ: ಆಸ್ಕರ್

Update: 2019-05-30 14:35 GMT

ಪಡುಬಿದ್ರಿ: ನಾವು ದೇಶದ ಬಗ್ಗೆ ಚಿಂತೆ ಮಾಡುವ ಬದಲು ನಮ್ಮ ಊರು, ನಮ್ಮ ಕ್ಷೇತ್ರ, ನಮ್ಮ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸ ಬೇಕಾಗಿದೆ.  ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅವುಗಳ ಇತ್ಯರ್ಥಕ್ಕೆ ಹೋರಾಟ ನಡೆಸಬೇಕಾಗಿದೆ. ಈ ಮೂಲಕ ಪಕ್ಷವನ್ನು ಬೆಳೆಸಲು ಸಾಧ್ಯ ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡೀಸ್ ಹೇಳಿದರು.

ಗುರುವಾರ ಎರ್ಮಾಳಿನ ರಾಜೀವ್ ಗಾಂಧಿ ಅಕಾಡೆಮಿ ಆಫ್ ಪೊಲಿಟಿಕಲ್ ಎಜುಕೇಶನ್ ನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭೆ ಮಾತನಾಡಿದರು. ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯ್ತಿ, ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ಈ ಬಗ್ಗೆ ಕಾರ್ಯ ಕರ್ತರು ಸನ್ನದ್ಧರಾಗಬೇಕು. ನಾವು ಜನರಿಗೆ ಇನ್ನಷ್ಟು ಹತ್ತಿರವಾಗಬೇಕು. ಒಂದು ಕಾಲದಲ್ಲಿ ಹೋರಾಟದ ಮೂಲಕ ಶಕ್ತಿಯುತವಾದ ಕಾಂಗ್ರೆಸ್ ಪಕ್ಷವು ಇಂದು ಹೋರಾಟದ ಮನೋಭಾವ ಇಲ್ಲದೆ ಕುಂಠಿತಗೊಂಡಿದೆ ಎಂದು ಖೇಧ  ವ್ಯಕ್ತಪಡಿಸಿದರು.

ಲೋಕಸಭೆಯಲ್ಲಿ ನಾವು ಹೀನಾಯ ಸೋಲನ್ನು ಕಂಡಿದ್ದೇವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿದೆ. ಸೋಲೇ ಗೆಲುವಿನ ಮೆಟ್ಟಿಲಾಗಬೇಕು. ಈ ನಿಟ್ಟಿನಲ್ಲಿ ಪಕ್ಷದ ನಾಯಕರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಬೇಕಾಗಿದೆ. 

ಎಐಸಿಸಿ ಉಡುಪಿ ಜಿಲ್ಲಾ ಉಸ್ತುವಾರಿ ವಿಷ್ಣುವರ್ಧನ್ ಮಾತನಾಡಿ, ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಜಿಲ್ಲೆಯ 6 ಬೂತ್‍ಗಳಲ್ಲಿ 100 ಹಾಗೂ 20 ಬುತ್‍ಗಳಲ್ಲಿ 300ರ ಗಡಿ ದಾಟಲಿಲ್ಲ. ಇದು ಬಹಳ ಬೇಸರ ಸಂಗತಿ. ಕಾರ್ಯಕರ್ತರೊಂದಿಗೆ ನಾಯಕರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಜಿಲ್ಲೆಯಲ್ಲಿ ಯೂತ್ ಕಾಂಗ್ರೆಸ್ ಹಾಗೂ ಎನ್‍ಎಸ್‍ಯುಐ ಅಷ್ಟೊಂದು ಬಲಿಷ್ಠವಾಗಲಿಲ್ಲ. ಈ ಬಗ್ಗೆ ಜಿಲ್ಲಾ ಸಮಿತಿ ಗಮನ ನೀಡಬೇಕಾಗಿದೆ ಎಂದು ನುಡಿದರು. 

ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ವಿನಯಕುಮಾರ್ ಸೊರಕೆ, ಗೋಪಾಲ ಭಂಡಾರಿ, ಯು.ಆರ್. ಸಭಾಪತಿ, ಎಂ.ಎ.ಗಫೂರ್, ನವೀನ್ ಡಿಸೋಜ, ನವೀನ್‍ಚಂದ್ರ ಜೆ. ಶೆಟ್ಟಿ, ಗೀತಾ ವಾಗ್ಲೆ, ರೋಶನ್, ಮುರಳೀ ಶೆಟ್ಟಿ, ಸರಳಾ ಕಾಂಚನ್ ಉಪಸ್ಥಿತರಿದ್ದರು. 

ಸಭೆಯಲ್ಲಿ ಚುನಾವಣೆಯ ಸೋಲಿನ ಬಗ್ಗೆ ಹಾಗೂ ಮುಂಬರುವ ದಿನಗಳಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಬಗ್ಗೆ ಚರ್ಚಿಸಲಾಯಿತು. ದಿನವಿಡೀ ನಡೆದ ಸಭೆಯಲ್ಲಿ ಬ್ಲಾಕ್ ಸಮಿತಿ, ಜಿಲ್ಲಾ ಸಮಿತಿಯ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು. 

ಅಧ್ಯಕ್ಷರಾಗಿ ಮುಂದುವರಿಯಲು ಮನವಿ: ರಾಹುಲ್ ಗಾಂಧಿಯವರು ರಾಷ್ಟಾಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಹಿಂಪಡೆದು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕು ಎಂದು ಒತ್ತಾಯಿಸಿ ಬೃಹತ್ ಗಾತ್ರದ ಬ್ಯಾನರ್‍ನಲ್ಲಿ ಜಿಲ್ಲಾ ಸಮಿತಿಯ ವತಿಯಿಂದ ಮುಖಂಡರು ಸಹಿ ಹಾಕಿ, ಮನವಿಯನ್ನು ಅವರಿಗೆ ಕಳುಹಿಸಿಕೊಡಲು ತೀರ್ಮಾಣಿಸಲಾಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ