×
Ad

ಸತತ 6 ಗಂಟೆ ಪಬ್‌ಜಿ ಆಡಿದ 16 ವರ್ಷದ ಬಾಲಕ ಹೃದಯಾಘಾತದಿಂದ ಸಾವು

Update: 2019-05-31 13:51 IST

ಭೋಪಾಲ್, ಮೇ 31: ಜನಪ್ರಿಯ ಮೊಬೈಲ್ ಗೇಮ್ ಪಬ್‌ಜಿಯನ್ನು ಸತತ ಆರು ಗಂಟೆ ಆಡಿದ 16 ವರ್ಷದ ಬಾಲಕನೊಬ್ಬ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಮಧ್ಯ ಪ್ರದೇಶದ ನೀಮುಚ್ ಗ್ರಾಮದಿಂದ ವರದಿಯಾಗಿದೆ. 

ಮೃತ ಬಾಲಕನನ್ನು ಫುರ್ಖಾನ್ ಖುರೇಶಿ ಎಂದು ಗುರುತಿಸಲಾಗಿದೆ. ಆತ 12ನೇ ತರಗತಿ ವಿದ್ಯಾರ್ಥಿಯಾಗಿದ್ದ. ‘‘ಊಟವಾದ ನಂತರ ಆತ ಈ ಆಟ ಆಡಲು ಆರಂಭಿಸಿದ್ದ ಹಾಗೂ ಈ ಆಟ ಆರು ಗಂಟೆಗಳಿಗೂ ಹೆಚ್ಚು ಕಾಲ ಮುಂದುವರಿದಿತ್ತು. ಆತ ಕುಸಿದು ಬೀಳುವ ಮುನ್ನ ತೀರಾ ಆಕ್ರೋಶಗೊಂಡಂತಿದ್ದು ಹಾಗೂ ಇತರ ಆಟಗಾರರ ವಿರುದ್ಧ ಚೀರಾಡುತ್ತಿದ್ದ’’ ಎಂದು ಆತನ ತಂದೆ ಹಾರೂನ್ ರಶೀದ್ ಖುರೇಶಿ ಹೇಳಿದ್ದಾರೆ.

ಬಾಲಕ ಆಟವಾಡುತ್ತಿದ್ದಾಗ ಆತನ ಪಕ್ಕದಲ್ಲಿಯೇ ಕುಳಿತಿದ್ದ ಆತನ ಸೋದರಿ ಫಿಝಾ ಖುರೇಶಿ ಘಟನೆಯ ಬಗ್ಗೆ ವಿವರಿಸುತ್ತಾ ‘‘ಆತ ತನ್ನ ಕೆಲ ಸ್ನೇಹಿತರೊಡನೆ ಆಟವಾಡುತ್ತಿದ್ದ. ಒಮ್ಮೆಗೇ ‘‘ಸ್ಫೋಟಿಸಿ, ಸ್ಫೋಟಿಸಿ’ ಎಂದು ಬೊಬ್ಬೆ ಹೊಡೆದು ತನ್ನ ಇಯರ್ ಫೋನ್ ಕಿತ್ತೆಸೆದು ‘ನಾನು ನಿಮ್ಮ ಜತೆ ಆಟವಾಡುವುದಿಲ್ಲ, ನಿಮ್ಮಿಂದಾಗಿ ಸೋತೆ’’ಎಂದು ಕೂಗಲು ಆರಂಭಿಸಿದ್ದ’’ ಎಂದು ಹೇಳಿದ್ದಾಳೆ.

ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದರು. ಈ ಘಟನೆ ಮೇ 28ರಂದು ನಡೆದಿತ್ತು.

ಫುರ್ಖಾನ್ ಸೋದರ ಮುಹಮ್ಮದ್ ಹಾಶಿಂ ಕೂಡ ಈ ಗೇಮ್ ಅನ್ನು ಈ ಹಿಂದೆ ಸತತ 18 ಗಂಟೆ ಆಡಿದ್ದಿದೆ. ಇನ್ನು ಮುಂದೆ ಆಡುವುದಿಲ್ಲ, ಗೇಮ್ ಅನ್ನು ಮೊಬೈಲ್ ಫೋನಿನಿಂದ ಡಿಲೀಟ್ ಮಾಡಿದ್ದೇನೆ ಎಂದು ಆತ ಹೇಳುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News