ಸೋಷಿಯಲ್ ಮೀಡಿಯಾ ಸ್ಟಾರ್ ನೂತನ ಕೇಂದ್ರ ಸಚಿವ ಸಾರಂಗಿಯ ಇನ್ನೊಂದು ಮುಖ ಇಲ್ಲಿದೆ

Update: 2019-05-31 10:31 GMT

ಹೊಸದಿಲ್ಲಿ: ಗುರುವಾರ ನರೇಂದ್ರ ಮೋದಿ ಸರಕಾರದ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೃಶಕಾಯದ ವ್ಯಕ್ತಿಯೊಬ್ಬರು ಪ್ರಮಾಣವಚನ ಸ್ವೀಕರಿಸಿದಾಗ ಸಭಿಕರಿಂದ ಭಾರೀ ಕರತಾಡನ ವ್ಯಕ್ತವಾಗಿತ್ತು. ಈ ವ್ಯಕ್ತಿಯ ಹೆಸರೇ ಪ್ರತಾಪ್ ಚಂದ್ರ ಸಾರಂಗಿ. ಒಡಿಶಾದವರಾಗಿರುವ ಇವರು ತೀರಾ ಇತ್ತೀಚಿಗಿನವರೆಗೂ ತಮ್ಮ ರಾಜ್ಯದ ಹೊರಗಿನವರಿಗೆ ಅಷ್ಟೊಂದೇನೂ ಪರಿಚಿತರಲ್ಲದೇ ಇದ್ದರೂ ಕಳೆದ ವಾರ ಸೋಶಿಯಲ್ ಮೀಡಿಯಾ ಸೆನ್ಸೇಶನ್ ಆಗಿ ಬಿಟ್ಟಿದ್ದರು.

ಸರಳ ಉಡುಗೆ ತೊಡುಗೆಯ ಈ ವ್ಯಕ್ತಿ ಬಿದಿರಿನಿಂದ ನಿರ್ಮಿಸಲಾಗಿರುವ ತಮ್ಮ ಗುಡಿಸಲಿನಿಂದ ಹೊರ ಬಂದು ಪ್ರಮಾಣವಚನ ಸ್ವೀಕಾರಗೈಯ್ಯಲು ಹೊರಡುತ್ತಿರುವ ಫೋಟೋ ಒಂದು ಅವರಿಗೆ ದೇಶಾದ್ಯಂತ ಮನ್ನಣೆ ದೊರಕಿಸಿ ಕೊಟ್ಟಿತ್ತು. ಅಷ್ಟಕ್ಕೂ ಇಂತಹ ಕಥೆಗಳೇ ಭಾರತೀಯರ ಮನ ತಟ್ಟಲು ಸಫಲವಾಗುತ್ತವೆ ಎಂಬುದು ಸುಳ್ಳಲ್ಲ.

ಸಾರಂಗಿ ಅವರು ಇತ್ತೀಚೆಗೆ ಗಳಿಸಿದ ಜನಪ್ರಿಯತೆ ಒಂದೆಡೆಯಾದರೆ ಅವರ ಹಿನ್ನೆಲೆ ಒಂದು ವಿಧದಲ್ಲಿ ಆತಂಕಕ್ಕೂ ಕಾರಣವಾಗುತ್ತದೆ.

ಆಸ್ಟ್ರೇಲಿಯಾದ ಕ್ರೈಸ್ತ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತವರ ಇಬ್ಬರು ಮಕ್ಕಳನ್ನು 1999ರಲ್ಲಿ ಸಂಘ ಪರಿವಾರದ ಒಂದು ಉದ್ರಿಕ್ತ ಗುಂಪು ಹತ್ಯೆಗೈದ ಸಂದರ್ಭ ಇವರು ತೀವ್ರಗಾಮಿ ಹಿಂದುತ್ವ ಸಂಘಟನೆ ಬಜರಂಗ ದಳದ ನಾಯಕರಾಗಿದ್ದರು.

ಈ ಘಟನೆಗೆ ಕ್ರೈಸ್ತ ಸಮುದಾಯ ಬಜರಂಗದಳವನ್ನು ದೂಷಿಸಿದ್ದರೂ ಅಧಿಕೃತ ತನಿಖೆಯೊಂದು ನಡೆದು ಈ ಘಟನೆಗೆ ಯಾವುದೇ ಒಂದು ಗುಂಪು ಕಾರಣ ಎಂಬುದಕ್ಕೆ ಯಾವುದೇ ಪುರಾವೆ ಕಂಡು ಬಂದಿರಲಿಲ್ಲ.

ದೀರ್ಘ ವಿಚಾರಣೆಯ ನಂತರ ಬಜರಂಗದಳ ಜತೆ ನಂಟು ಹೊಂದಿರುವ ದಾರಾ ಸಿಂಗ್ ಹಾಗೂ 12 ಮಂದಿ ಇತರರನ್ನು 2003ರಲ್ಲಿ ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿತ್ತು. ಆದರೆ ಒಡಿಶಾದ ಹೈಕೋರ್ಟ್ ಅವರ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಎರಡು ವರ್ಷಗಳ ನಂತರ ಇಳಿಸಿತ್ತು. ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟ ಇತರ 11 ಮಂದಿಯನ್ನೂ  ನ್ಯಾಯಾಲಯ ಸಾಕ್ಷ್ಯಗಳ ಕೊರತೆಯ ನೆಪದಲ್ಲಿ ಬಿಡುಗಡೆಗೊಳಿಸಲು ಆದೇಶಿಸಿತ್ತು.

ಪ್ರತಾಪ್ ಸಾರಂಗಿ ತಮಗೆ ಸಹಿತ ಹಲವರಿಗೆ ನೀಡಿದ್ದ ಸಂದರ್ಶನಗಳನ್ನು "ಇಡೀ ಭಾರತವನ್ನು ಮತಾಂತರಗೊಳಿಸುವ ಉದ್ದೇಶ ಹೊಂದಿರುವ ಕ್ರೈಸ್ತ ಮಿಷನರಿಗಳ ಕೆಟ್ಟ ಕಾರ್ಯತಂತ್ರಗಳಿಗೆ ತಾವು ವಿರುದ್ಧವಾಗಿರುವುದಾಗಿ ಹೇಳಿಕೊಂಡಿದ್ದರೆಂದು ಒಡಿಶಾ ಮೂಲದ ಪತ್ರಕರ್ತ ಸಂದೀಪ್ ಸಾಹು ಹೇಳಿದ್ದಾರೆ. ಸ್ಟೈನ್ಸ್ ಮೇಲಿನ ದಾಳಿ ವೇಳೆ ಅವರಿಬ್ಬರ ಮಕ್ಕಳ ಹತ್ಯೆಗಳನ್ನು ಸಾರಂಗಿ ಖಂಡಿಸಿದ್ದರೂ ಮತಾಂತರದ ವಿರುದ್ಧದ ತಮ್ಮ ನಿಲುವಿಗೆ ಅಂಟಿಕೊಂಡಿದ್ದರು ಎಂದು ಸಾಹು ವಿವರಿಸಿದ್ದಾರೆ.

2002ರಲ್ಲಿ ಬಜರಂಗದಳ ಸಹಿತ ಸಂಘ ಪರಿವಾರಗಳು ಒಡಿಶಾ ವಿಧಾನಸಭೆಯ ಮೇಳೆ ನಡೆದ ದಾಳಿಯ ನಂತರ ಗಲಭೆ, ಹಿಂಸೆ, ಹಲ್ಲೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯೆಸಗಿದ ಪ್ರಕರಣಗಳಲ್ಲಿ ಸಾರಂಗಿಯನ್ನು ಬಂಧಿಸಲಾಗಿತ್ತು.

ಆದರೆ ಅವರ ಈ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗದೆ ಅವರ ಸರಳ ಜೀವನಕ್ಕೇ ಹೆಚ್ಚು ಮಹತ್ವ ನೀಡಲಾಗಿತ್ತು.

"ಸಾರಂಗಿ ಅವರು ಪ್ರಚಾರದ ವೇಲೆ ಗ್ರಾಮಸ್ಥರನ್ನು ಭೇಟಿಯಾಗಲು ಹಳ್ಳಿ ಹಳ್ಳಿಗೆ ತೆರಳಲು ಸೈಕಲ್ ಬಳಸಿದ್ದರು. ರಾಜ್ಯ ರಾಜಧಾನಿ ಭುಬನೇಶ್ವರದಲ್ಲಿ  ವಿಧಾನಸಭಾ ಅಧಿವೇಶನಗಳಲ್ಲಿ ಭಾಗಿಯಾಗಲು ಅವರು ನಡೆದುಕೊಂಡೇ ಅಥವಾ ಸೈಕಲ್ ತುಳಿದುಕೊಂಡು ಹೋಗುವುದನ್ನು ಅಥವಾ ರಸ್ತೆ ಬದಿ ರೆಸ್ಟೋರೆಂಟುಗಳಲ್ಲಿ  ಊಟ ಮಾಡುವುದನ್ನು ಇಲ್ಲವೇ ರೈಲ್ವೆ ಪ್ಲಾಟ್‍ಫಾರ್ಮ್ ನಲ್ಲಿ ರೈಲಿಗೆ ಕಾಯುವುದನ್ನು ಆಗಾಗ ಕಾಣಬಹುದು,'' ಎನ್ನುತ್ತಾರೆ ಸಾಹು.

ಇತ್ತೀಚೆಗೆ ಅವರು ಚುನಾವಣೆಯಲ್ಲಿ ತಮ್ಮ ಪ್ರಬಲ ಹಾಗೂ ಪ್ರಭಾವಿ ಎದುರಾಳಿಗಳನ್ನು ಸೋಲಿಸಿದಾಗ ಸಹಜವಾಗಿ ಡೇವಿಡ್-ಗೋಲಿಯಥ್ ಯುದ್ಧವಿದು ಎಂದು ಹೇಳಲಾಗಿತ್ತು.

ಅವರು ಗುರುವಾರ ಮೋದಿ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಅವರ ಸ್ವಕ್ಷೇತ್ರದ ಜನರು ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಿ ಸಂಭ್ರಮಿಸಿದ್ದರು. ಕೆಲ ಜನರು ಅವರ ಬಡ ಹಿನ್ನೆಲೆಯನ್ನು ಪರಿಗಣಿಸಿ ಅವರನ್ನು ಒಡಿಶಾದ ಮೋದಿ ಎಂದೂ ಬಣ್ಣಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಚಾನಕ್ಕಾಗಿ ಹೀರೋಗಳಾಗಿ ಬಿಡುತ್ತಾರೆ. ಅವರ ಜೀವನದ ಒಂದು ಘಟನೆ ಯಾ ಚಿತ್ರಣವನ್ನಷ್ಟೇ ಜನರು ನೋಡಿದ್ದರೂ ಅದು ವೈರಲ್ ಆಗಿ ಅವರು ರಾತ್ರಿ ಬೆಳಗಾಗುವುದರೊಳಗಾಗಿ ಜನಪ್ರಿಯತೆ ಪಡೆಯುತ್ತಾರೆಯೇ ಹೊರತು ಅವರ ನಿಜವಾದ ಹಿನ್ನೆಲೆಯೇನೆಂದು ತಿಳಿಯುವ ಗೋಜಿಗೆ ಹಲವರು ಹೋಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News