ಬಿಜೆಪಿ-ಆರೆಸ್ಸೆಸ್ ವಿರುದ್ಧ ಹೇಳಿಕೆ: ನಟ ವಿನಾಯಕನ್ ರ ಜಾತಿನಿಂದನೆಗೈದ ಟ್ರೋಲ್ ಗಳು

Update: 2019-05-31 17:41 GMT

ತಿರುವನಂತಪುರ, ಮೇ 31: ಟಿ.ವಿ. ಸಂದರ್ಶನವೊಂದರಲ್ಲಿ ಕೇರಳದಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಬೆಳೆಯಲಾರದು ಎಂದು ಹೇಳಿಕೆ ನೀಡಿದ ಬಳಿಕ ನಟ ವಿನಾಯಕನ್ ಅವರನ್ನು ಗುರಿಯಾಗಿರಿಸಿ ಸಾಮಾಜಿಕ ಜಾಲ ತಾಣದಲ್ಲಿ ನಿಂದಿಸಲಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ವಾರಗಳ ಬಳಿಕ ನಟ ವಿನಾಯಕನ್ ಅವರು ಮಲೆಯಾಳಂ ಚಾನೆಲ್ ‘ಮೀಡಿಯಾ ಒನ್’ಗೆ ಸಂದರ್ಶನ ನೀಡಿದ್ದರು.

ಈ ಸಂದರ್ಭ ವಿನಾಯಕನ್, ‘‘ಅವರು (ಬಿಜೆಪಿ-ಆರ್‌ಎಸ್‌ಎಸ್) ಕೇರಳದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನಾವು ಬುದ್ಧಿವಂತ ಜನರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕೂಡ ನಾವು ಇದನ್ನು ನೋಡಿದ್ದೇವೆ.’’ ಎಂದಿದ್ದರು. ‘‘ನನ್ನ ವೃತ್ತಿ ನಟನೆ. ಪ್ರತಿಯೊಂದು ವಿಷಯದ ಬಗ್ಗೆ ಕೂಡ ನನ್ನದೇ ಆದ ರಾಜಕೀಯ ನಿಲುವಿದೆ. ಆದರೆ, ನಾನು ಬದುಕುವುದಕ್ಕಾಗಿ ರಾಜಕೀಯ ಮಾಡಲಾರೆ’’ ಎಂದು ಅವರು ಹೇಳಿದ್ದರು.

ಸಂದರ್ಶನ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿದ್ದಂತೆ ಬಿಜೆಪಿ ಪರ ಟ್ರೋಲ್ ಗಳು ತಮ್ಮ ಪೋಸ್ಟ್‌ನಲ್ಲಿ ವಿನಾಯಕನ್ ಅವರ ನಿಂದನೆ ಆರಂಭಿಸಿದ್ದರು. ಹಲವರು ನಟನ ವಿರುದ್ಧ ಜನಾಂಗೀಯ ಹಾಗೂ ಜಾತೀವಾದಿ ಹೇಳಿಕೆಗಳನ್ನು ನೀಡಿದ್ದರು. “ನೀವು ಕಮ್ಮಿ (ಕಮ್ಯೂನಿಸ್ಟರಿಗೆ ಬಳಸುವ ಪದ) ಎಂದು ನಮಗೆ ಗೊತ್ತಿರಲಿಲ್ಲ. ಇಂದಿನಿಂದ ನಾವು ನಿಮ್ಮ ಸಿನೆಮಾಗಳನ್ನು ನೋಡುವುದಿಲ್ಲ” ಎಂದು ಒಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. “ತೊಲಗು.....(ಜಾತೀವಾದಿ ನಿಂದನೆ), ಕೇರಳದ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೋ ಇಲ್ಲವೋ ಎಂದು ನಿರ್ಧರಿಸುವವನು ನೀನಲ್ಲ” ಎಂದು ಇನ್ನೊಂದು ಪೋಸ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News