ವಾಯು ಪ್ರದೇಶದ ತಾತ್ಕಾಲಿಕ ನಿರ್ಬಂಧ ಹಿಂದೆ ತೆಗೆದ ಭಾರತೀಯ ವಾಯುಪಡೆ
ಹೊಸದಿಲ್ಲಿ, ಮೇ 31: ಫೆಬ್ರವರಿ 27ರಿಂದ ಜಾರಿಗೊಳಿಸಲಾದ ಭಾರತದ ವಾಯು ಪ್ರದೇಶದ ತಾತ್ಕಾಲಿಕ ನಿರ್ಬಂಧವನ್ನು ನೂತನವಾಗಿ ಅಸ್ತಿತ್ವಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ತೆಗೆದು ಹಾಕಿದೆ. ಭಾರತ ತನ್ನ ವಾಯು ನಿರ್ಬಂಧ ತೆಗೆದು ಹಾಕಿದರೆ, ಪಾಕಿಸ್ತಾನಕ್ಕೆ ದಿಲ್ಲಿ ಹಾಗೂ ಪಶ್ಚಿಮ ಭಾಗ ಸಹಿತ ದಕ್ಷಿಣ ಏಶ್ಯಾದ ವಿವಿಧ ಭಾಗಗಳ ನಡುವಿನ ಹಾರಾಟದ ಅಂತರ ಕಡಿಮೆಯಾಗಲಿದೆ.
ಭಾರತ ಫೆಬ್ರವರಿ 27ರಂದು ತನ್ನು ವಾಯು ಪ್ರದೇಶದಲ್ಲಿ ನಿರ್ಬಂಧ ವಿಧಿಸಿದ ಪರಿಣಾಮ ಈ ವಲಯದಲ್ಲಿ ವಿಮಾನ ದೂರ ದಾರಿಯ ಮೂಲಕ ಹಾರಾಟ ನಡೆಸುತ್ತಿತ್ತು. ಇದರಿಂದ ಹಾರಾಟಕ್ಕೆ 3 ಗಂಟೆ ಹೆಚ್ಚು ವ್ಯಯವಾಗುತ್ತಿತ್ತು. 2019 ಫೆಬ್ರವರಿ 29ರಂದು ಭಾರತೀಯ ವಾಯು ಪಡೆ ಭಾರತದ ವಾಯು ಪ್ರದೇಶದ ಎಲ್ಲಾ ವಾಯು ಮಾರ್ಗಗಳಲ್ಲಿ ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು. ಇದನ್ನು ಈಗ ತೆಗೆಯಲಾಗಿದೆ ಎಂದು ಭಾರತೀಯ ವಾಯು ಪಡೆ ಶುಕ್ರವಾರ ಸಂಜೆ ಟ್ವೀಟ್ ಮಾಡಿದೆ.
ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ತೆಗೆದುಕೊಂಡ ಅತಿ ದೊಡ್ಡ ಕ್ರಮ ಇದಾಗಿದೆ. ವಿದೇಶಿ ವಿಮಾನ ಯಾನ ಸಂಸ್ಥೆಗಳು ಇನ್ನು ವಿಶ್ವಸಂಸ್ಥೆಯ ವಾಯು ಯಾನ ಘಟಕ ಐಸಿಎಒ ಹಾಗೂ ಜಾಗತಿಕ ವಾಯು ಯಾನ ಒಕ್ಕೂಟ ಐಎಟಿಎ ಸಂಪರ್ಕಿಸಿ ವಾಯು ಪ್ರದೇಶ ನಿರ್ಬಂಧ ತೆಗೆಯಲು ಪಾಕಿಸ್ತಾನದ ಮೇಲೆ ಒತ್ತಡ ಹೇರುವಂತೆ ತಿಳಿಸಲು ಸಾಧ್ಯ ಎಂದು ಮೂಲಗಳು ತಿಳಿಸಿವೆ.