ಮುಝಫರ್‌ನಗರ ದಂಗೆ ಪ್ರಕರಣ: 11 ಆರೋಪಿಗಳ ಖುಲಾಸೆ
ಮುಝಫರ್‌ನಗರ,ಮೇ 31: ಮುಝಫರ್‌ನಗರ ದಂಗೆಗಳ ಸಂದರ್ಭದಲ್ಲಿ ಇಲ್ಲಿಯ ಲಿಸಾಧ್ ಗ್ರಾಮದ ಮನೆಯೊಂದಕ್ಕೆ ಬೆಂಕಿ ಹಚ್ಚಿ,ಅಮೂಲ್ಯ ಸೊತ್ತುಗಳನ್ನು ದೋಚಿದ್ದ 11 ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಸಂಜೀವ ಕುಮಾರ್ ಅವರು ಸಾಕ್ಷಾಧಾರಗಳ ಕೊರತೆಯಿಂದ ಒಟ್ಟು 13 ಆರೋಪಿಗಳನ್ನು ಖುಲಾಸೆಗೊಳಿಸಿದ್ದು,ಈ ಪೈಕಿ ಇಬ್ಬರು ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಮೃತಪಟ್ಟಿದ್ದಾರೆ. ಇವರೆಲ್ಲರ ವಿರುದ್ಧ ಬೆಂಕಿ ಹಚ್ಚುವಿಕೆ ಮತ್ತು ಢಕಾಯಿತಿ ಆರೋಪಗಳನ್ನು ಹೊರಿಸಲಾಗಿತ್ತು,ಆದರೆ ಪ್ರಕರಣದಲ್ಲಿ ಮುಖ್ಯ ಸಾಕ್ಷಿಗಳೂ ಆಗಿದ್ದ ದೂರುದಾರ ಸುಲೇಮಾನ್ ಮತ್ತು ಅವರ ಮಕ್ಕಳು ಪ್ರತಿಕೂಲ ಸಾಕ್ಷ ನುಡಿದಿದ್ದರು.
2013,ಸೆಪ್ಟೆಂಬರ್‌ನಲ್ಲಿ ಮುಝಫರ್‌ನಗರದಲ್ಲಿ ಗುಂಪೊಂದು ಅವಮಾನಕಾರಿ ಘೋಷಣೆಗಳನ್ನು ಕೂಗುತ್ತ ತನ್ನ ಮನೆಗೆ ನುಗ್ಗಿ ದಾಂಧಲೆ ನಡೆಸಿತ್ತು ಹಾಗೂ ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಬಳಿಕ ಮನೆಗೆ ಬೆಂಕಿ ಹಚ್ಚಿತ್ತು ಎಂದು ಸುಲೈಮಾನ್ ತನ್ನ ದೂರಿನಲ್ಲಿ ಆರೋಪಿಸಿದ್ದರು. ಪ್ರಾಣಭಯದಿಂದ ನೆರೆಯ ಗ್ರಾಮಕ್ಕೆ ಪರಾರಿಯಾಗಿದ್ದ ಸುಲೈಮಾನ್ ಮತ್ತು ಅವರ ಕುಟುಂಬ ಸದಸ್ಯರು ಅಲ್ಲಿಯ ರಕ್ಷಣಾ ಶಿಬಿರದಲ್ಲಿ ಆಶ್ರಯ ಪಡೆದಿದ್ದರು.
ಈ ಸಂದರ್ಭ ಸುಮಾರು 60 ಜನರು ಕೊಲ್ಲಲ್ಪಟ್ಟಿದ್ದು,ಮುಝಫರ್‌ನಗರ ಮತ್ತು ಇತರ ಜಿಲ್ಲೆಗಳಲ್ಲಿ ಗ್ರಾಮಗಳ ಸುಮಾರು 40,000 ಜನರು ನಿರ್ವಸಿತರಾಗಿದ್ದರು. ವಿಶೇಷ ತನಿಖಾ ತಂಡವು ಬಳಿಕ 510 ಪ್ರಕರಣಗಳಲ್ಲಿ ತನಿಖೆ ನಡೆಸಿ 175 ಪ್ರಕರಣಗಳಲ್ಲಿ ಆರೋಪಪಟ್ಟಿಗಳನ್ನು ಸಲ್ಲಿಸಿತ್ತು. ಈ ವರ್ಷದ ಫೆಬ್ರುವರಿಯಲ್ಲಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರಕಾರವು 38 ಪ್ರಕರಣಗಳ ವಾಪಸಾತಿಗೆ ಅನುಮತಿ ನೀಡುವ ಮೂಲಕ ಕನಿಷ್ಠ 100 ಆರೋಪಿಳು ಖುಲಾಸೆಗೊಳ್ಳಲು ಅನುಕೂಲ ಕಲ್ಪಿಸಿತ್ತು.