ನಕಲಿ ಸೌದಿ ರಾಜಕುಮಾರನಿಗೆ 18 ವರ್ಷ ಜೈಲು !

Update: 2019-06-01 16:29 GMT

ಮಯಾಮಿ (ಅಮೆರಿಕ), ಜೂ. 1: ತಾನೋರ್ವ ಸೌದಿ ಅರೇಬಿಯದ ರಾಜಕುಮಾರ ಎಂಬುದಾಗಿ ಮೂರು ದಶಕಗಳ ಕಾಲ ಬಿಂಬಿಸಿಕೊಂಡು ಜನರಿಗೆ 8 ಮಿಲಿಯ ಡಾಲರ್ (ಸುಮಾರು 56 ಕೋಟಿ ರೂಪಾಯಿ) ಮೋಸ ಮಾಡಿದ ಅಮೆರಿಕದ ಫ್ಲೋರಿಡದ ವ್ಯಕ್ತಿಯೋರ್ವನಿಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ನಕಲಿ ರಾಜತಾಂತ್ರಿಕ ಪ್ರಮಾಣಪತ್ರಗಳು ಮತ್ತು ಅಂಗರಕ್ಷಕರ ತಂಡವೊಂದನ್ನು ಇಟ್ಟುಕೊಂಡು ಜನರನ್ನು ವಂಚಿಸಿದ 48 ವರ್ಷದ ಆ್ಯಂಟನಿ ಗಿಗ್ನಾಕ್, ವಿಲಾಸಿ ಸಾಮ್ರಾಜ್ಯವೊಂದನ್ನು ನಿರ್ಮಿಸಿದ್ದನು.

ತನ್ನನ್ನು ಖಾಲಿದ್ ಬಿನ್ ಅಲ್-ಸೌದ್ ಎಂಬುದಾಗಿ ಬಿಂಬಿಸಿಕೊಂಡು ಅವನು ಮಯಾಮಿಯ ವೈಭವೋಪೇತ ಫಿಶರ್ ಐಲ್ಯಾಂಡ್‌ನಲ್ಲಿನ ಅಪಾರ್ಟ್‌ಮೆಂಟ್ ಕಟ್ಟಡವೊಂದರಲ್ಲಿ ವಾಸಿಸುತ್ತಿದ್ದನು. ನಕಲಿ ರಾಜತಾಂತ್ರಿಕ ಪರವಾನಿಗೆಯ ನಂಬರ್ ಪ್ಲೇಟ್ ಹೊಂದಿದ ಫೆರಾರಿ ಕಾರು ಓಡಿಸುತ್ತಿದ್ದನು ಹಾಗೂ ಹೂಡಿಕೆದಾರರು ಮತ್ತು ಉಡುಗೊರೆ ನೀಡುವವರನ್ನು ಓಲೈಸುತ್ತಿದ್ದನು.

ಅವನ ಜೊತೆಯಲ್ಲಿ ನಕಲಿ ರಾಜತಾಂತ್ರಿಕ ಪ್ರಮಾಣಪತ್ರಗಳನ್ನು ಹಿಡಿದುಕೊಂಡ ಅಂಗರಕ್ಷಕರು ಇರುತ್ತಿದ್ದರು. ತನ್ನನ್ನು ರಾಜ ಶಿಷ್ಟಾಚಾರಕ್ಕೆ ಅನುಸಾರವಾಗಿ ನಡೆಸಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದನು ಹಾಗೂ ಈ ಗೌರವವನ್ನು ಸಂಭಾವ್ಯ ಹೂಡಿಕೆದಾರರಿಂದ ಉಡುಗೊರೆಗಳನ್ನು ಪಡೆದುಕೊಳ್ಳುವುದಕ್ಕಾಗಿ ಆತ ಬಳಸುತ್ತಿದ್ದನು.

ಅವನ ಅಪಾರ್ಟ್‌ಮೆಂಟ್‌ನ ಬಾಗಿಲಿನಲ್ಲಿ ‘ಸುಲ್ತಾನ್’ ಎಂಬುದಾಗಿ ಬರೆದಿತ್ತು. ಇದನ್ನೆಲ್ಲಾ ನಂಬಿ ಜನರು ಅವನ ಬ್ಯಾಂಕ್ ಖಾತೆಗಳಿಗೆ ಹಣ ಹಾಕುತ್ತಿದ್ದರು. ಅವನು ಆ ಹಣವನ್ನು ಹೂಡಿಕೆ ಮಾಡುತ್ತಾನೆ ಎಂಬುದಾಗಿ ಅವರು ನಂಬಿದ್ದರು. ಆದರೆ, ಗಿಗ್ನಾಕ್ ಮಾತ್ರ ಆ ಹಣವನ್ನು ವಿಧ ವಿಧದ ಬಟ್ಟೆಗಳು, ಯಾಚ್‌ಗಳು ಮತ್ತು ಖಾಸಗಿ ವಿಮಾನ ಸವಾರಿಗಳಿಗೆ ಬಳಸುತ್ತಿದ್ದನು.

ಹೇಗೆ ಸಿಕ್ಕಿಬಿದ್ದ?

ಒಮ್ಮೆ ಗಿಗ್ನಾಕ್ ಹಂದಿ ಮಾಂಸದಿಂದ ಮಾಡಿದ ತಿಂಡಿಗಳನ್ನು ಸಂತೋಷದಿಂದ ಮೆಲ್ಲುತ್ತಿರುವುದನ್ನು ರಿಯಲ್ ಎಸ್ಟೇಟ್ ಡೆವಲಪರ್ ಒಬ್ಬರು ನೋಡಿದ ಬಳಿಕ, ಅವನು ತನ್ನ ಸುತ್ತಲೂ ಕಟ್ಟಿಕೊಂಡಿದ್ದ ಸುಳ್ಳಿನ ಅರಮನೆ ಕುಸಿಯಿತು.

ಅವನನ್ನು ಬಂಧಿಸಲಾಯಿತು ಹಾಗೂ ಅವನ ವಿರುದ್ಧ ಇಲೆಕ್ಟ್ರಾನಿಕ್ ವಂಚನೆ ಮತ್ತು ಇನ್ನೊಬ್ಬರ ಗುರುತನ್ನು ಕದ್ದ ಆರೋಪಗಳು ಸೇರಿದಂತೆ 18 ಆರೋಪಗಳನ್ನು ಹೊರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News