ತನಗಾಗಿ ಸುಜಾತ ಸಿಂಗ್ ರನ್ನು ಬದಲಾಯಿಸಿದ್ದ ಸುಷ್ಮಾ ಸ್ಥಾನಕ್ಕೇ ಬಂದರು ವಿದೇಶಾಂಗ ಸಚಿವ ಜೈಶಂಕರ್ !

Update: 2019-06-01 09:10 GMT

ಹೊಸದಿಲ್ಲಿ, ಜೂ.1: ಜನವರಿ 28, 2015. ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಿಂದಿನ ದಿನವಷ್ಟೇ ವಾಷಿಂಗ್ಟನ್ ಗೆ ಮರಳಿದ್ದರು. ಸ್ವಲ್ಪ ಆರಾಮವಾಗಿದ್ದ ವಿದೇಶಾಂಗ ಇಲಾಖೆ ಅಧಿಕಾರಿಗಳಿಗೆ ತಮಗೊಂದು ಶಾಕ್ ಕಾದಿದೆ ಎಂಬ ಊಹೆಯೂ ಇರಲಿಲ್ಲ. 

ಸಂಜೆ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರನ್ನು ಕರೆದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪ್ರಧಾನಿ ಮೋದಿ ಅವರು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ಎಸ್.ಜೈಶಂಕರ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲು ಬಯಸಿದ್ದಾರೆ. ನೀವು ಅದಕ್ಕಾಗಿ ಹುದ್ದೆ ಬಿಡಬೇಕು ಎಂದು ಸೂಚಿಸಿದರು. ಇನ್ನು ಎಂಟೇ ತಿಂಗಳಲ್ಲಿ ನಿವೃತ್ತಿಯಾಗಬೇಕಿದ್ದ ಸುಜಾತಾ ಸಿಂಗ್ ಅದೇ ರಾತ್ರಿ ರಾಜೀನಾಮೆ ಕೊಟ್ಟರು. ಒಬಾಮ ಭೇಟಿಗಾಗಿ ಭಾರತಕ್ಕೆ ಬಂದಿದ್ದ ಜೈಶಂಕರ್ ಮರುದಿನ ಬೆಳಗ್ಗೆ ಹೊಸ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. 

ಅದಾಗಿ ನಾಲ್ಕು ವರ್ಷ ನಾಲ್ಕು ತಿಂಗಳುಗಳು ಕಳೆದಿವೆ. ತಮಗಾಗಿ ಸುಜಾತಾರಿಂದ ರಾಜೀನಾಮೆ ಪಡೆದ ಸುಷ್ಮಾ ಸ್ವರಾಜ್ ಅವರ ಸ್ಥಾನವನ್ನೇ ಈಗ ಜೈಶಂಕರ್ ತುಂಬಿದ್ದಾರೆ. ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಪ್ರಧಾನಿ ಮೋದಿ ತಮ್ಮ ಮೊದಲ ಅವಧಿಯ ಸರಕಾರದಲ್ಲಿ ವಿದೇಶಾಂಗ ಸಚಿವೆಯಾಗಿ ಭಾರೀ ಹೆಸರು ಮಾಡಿದ್ದ ಸುಷ್ಮಾ ಅವರನ್ನು ಮುಂದುವರಿಸದೆ ರಾಜಕಾರಣಿಯೂ ಅಲ್ಲದ, ಸಂಸತ್ ಸದಸ್ಯರೂ ಅಲ್ಲದ ಜೈಶಂಕರ್ ಅವರನ್ನು ವಿದೇಶಾಂಗ ಸಚಿವರಾಗಿ ನೇಮಕ ಮಾಡಿದ್ದಾರೆ. ಅವಧಿ ಮುಗಿಯುವ ಮುನ್ನವೇ ಸುಜಾತಾ ಸಿಂಗ್ ವಿದೇಶಾಂಗ ಕಾರ್ಯದರ್ಶಿ ಹುದ್ದೆ ತ್ಯಜಿಸಲು ಕಾರಣರಾಗಿದ್ದ ಜೈಶಂಕರ್ ಈಗ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ಸ್ಥಾನಕ್ಕೆ ಬಂದಿದ್ದಾರೆ. 

ವಿದೇಶಾಂಗ ಸಚಿವರಾಗಿ ನೇಮಕವಾದ ವೃತ್ತಿ ರಾಜತಾಂತ್ರಿಕರಲ್ಲಿ ಜೈಶಂಕರ್ ಎರಡನೆಯವರು. ಈ ಹಿಂದೆ ವಿದೇಶಾಂಗ ಸೇವೆ ಅಧಿಕಾರಿಯಾಗಿದ್ದ  ನಟ್ವರ್ ಸಿಂಗ್ ಕಾಂಗ್ರೆಸ್ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದರು. ಜೈಶಂಕರ್ ಅವರ ತಂದೆ ಕೃಷ್ಣಸ್ವಾಮಿ ಸುಬ್ರಮಣ್ಯನ್ ಐಎಎಸ್ ಅಧಿಕಾರಿಯಾಗಿ ಕೇಂದ್ರ ಸರಕಾರದ ಮಹತ್ವದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು ಹಾಗೂ ದೇಶದ ಸುರಕ್ಷತಾ ಹಾಗೂ ಅಣುಶಕ್ತಿ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಇವರ ಓರ್ವ ಸೋದರ ಸಂಜಯ್ ಖ್ಯಾತ ಇತಿಹಾಸಕಾರರಾದರೆ, ಇನ್ನೊಬ್ಬ ಸೋದರ ವಿಜಯ್ ಐಎಎಸ್ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. 

ಅಂದ ಹಾಗೆ ಜೈಶಂಕರ್ ಅವರು ಜವಾಹರ್ ಲಾಲ್ ನೆಹರೂ ವಿವಿಯ ಹಳೆ ವಿದ್ಯಾರ್ಥಿ. ಅಲ್ಲಿ ಅಂತರ್ ರಾಷ್ಟ್ರೀಯ ಸಂಬಂಧಗಳಲ್ಲಿ ಎಂಫಿಲ್ ಹಾಗೂ ಪಿಎಚ್ಡಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News