ಕೇಂದ್ರ ಗೃಹ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಅಮಿತ್ ಶಾ

Update: 2019-06-01 17:08 GMT

ಹೊಸದಿಲ್ಲಿ, ಜೂ. 1: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶನಿವಾರ ಕೇಂದ್ರ ಗೃಹ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಗೃಹ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡಿರುವುದಕ್ಕೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

‘‘ಇಂದು ನಾನು ಭಾರತದ ಗೃಹ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನನ್ನ ಮೇಲೆ ನಂಬಿಕೆ ಇರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ದೇಶದ ಭದ್ರತೆ ಹಾಗೂ ಸಮೃದ್ಧಿಯ ಖಾತರಿ ನೀಡುವುದು ನರೇಂದ್ರ ಮೋದಿ ಸರಕಾರದ ಪ್ರಮುಖ ಗುರಿ. ಮೋದಿಜಿ ನಾಯಕತ್ವದ ಅಡಿಯಲ್ಲಿ ನಾನು ಉತ್ತಮವಾಗಿ ಕಾರ್ಯ ನಿರ್ವಹಿಸಲು ಪ್ರಯತ್ನಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ.

ಗೃಹ ಸಚಿವಾಲಯದ ನಾರ್ಥ್ ಬ್ಲಾಕ್‌ನ ಕಚೇರಿಯಲ್ಲಿ ಅಮಿತ್ ಶಾ ಅವರನ್ನು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗುಬಾ ಹಾಗೂ ಇತರ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು. ಗೃಹ ಖಾತೆಯ ಸಹಾಯಕ ಸಚಿವರಾಗಿ ಕೃಷ್ಣಾ ರೆಡ್ಡಿ ಹಾಗೂ ನಿತ್ಯಾನಂದ ರೈ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಕ್ಷಣಾ ಸಚಿವರಾಗಿ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಜವಾಬ್ದಾರಿ ವಹಿಸಿಕೊಂಡ ಬಳಿಕ ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್, ವಾಯು ಪಡೆ ವರಿಷ್ಠ ಬಿ.ಎಸ್. ಧನೋವಾ ಹಾಗೂ ನೂತನವಾಗಿ ನಿಯೋಜಿತರಾದ ನೌಕಾ ಪಡೆ ವರಿಷ್ಠ ಕರಂಬೀರ್ ಸಿಂಗ್‌ರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಸಹಾಯಕ ಸಚಿವ ಶ್ರೀಪಾದ್ ನಾಯಕ್, ರಕ್ಷಣಾ ಕಾರ್ಯದರ್ಶಿ ಸಂಜಯ್ ಮಿತ್ರಾ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News