2020 ಮಾರ್ಚ್‌ನೊಳಗೆ 84 ವಿಮಾನ ನಿಲ್ದಾಣಗಳಲ್ಲಿ ದೇಹ ತಪಾಸಣೆ ಯಂತ್ರಗಳ ಸ್ಥಾಪನೆ: ಕೇಂದ್ರ ಸರಕಾರ

Update: 2019-06-02 17:08 GMT

ಹೊಸದಿಲ್ಲಿ,ಜೂ.2: ಮಾರ್ಚ್ 2020ರೊಳಗೆ ಹಾಲಿ ಇರುವ ಲೋಹಶೋಧಕ ದ್ವಾರಗಳು ಮತ್ತು ಕೈಯ್ಯಲ್ಲಿ ಹಿಡಿಯುವ ತಪಾಸಣೆ ಯಂತ್ರಗಳ ಬಳಕೆ ಹಾಗೂ ಪ್ರಯಾಣಿಕರ ಮೈದಡವಿ ತಪಾಸಣೆಯ ಬದಲು ಬಾಡಿ ಸ್ಕ್ಯಾನರ್‌ಗಳು ಅಥವಾ ದೇಹ ತಪಾಸಣೆ ಯಂತ್ರಗಳನ್ನು ಸ್ಥಾಪಿಸುವಂತೆ ಕೇಂದ್ರವು ದೇಶಾದ್ಯಂತದ 84 ವಿಮಾನ ನಿಲ್ದಾಣಗಳಿಗೆ ನಿರ್ದೇಶ ನೀಡಿದೆ.

ವಿಮಾನ ನಿಲ್ದಾಣಗಳಲ್ಲಿ ಈಗ ಬಳಸಲಾಗುತ್ತಿರುವ ಸಾಧನಗಳು ಅಲೋಹ ನಿರ್ಮಿತ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಪತ್ತೆ ಹಚ್ಚುವುದಿಲ್ಲ. ದೇಹ ತಪಾಸಣೆ ಯಂತ್ರಗಳ ಮೂಲಕ ಶರೀರದಲ್ಲಿ ಬಚ್ಚಿಡಲಾದ ಲೋಹ ಮತ್ತು ಅಲೋಹ ವಸ್ತುಗಳೆರಡನ್ನೂ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ನಾಗರಿಕ ವಾಯುಯಾನ ಭದ್ರತಾ ಘಟಕವು ಈ ವರ್ಷದ ಎಪ್ರಿಲ್‌ನಲ್ಲಿ ಎಲ್ಲ ವಿಮಾನ ನಿಲ್ದಾಣಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ. ದೇಹ ತಪಾಸಣೆ ಯಂತ್ರಗಳನ್ನು ಬಳಸುವಾಗ ಅನುಸರಿಸಬೇಕಾದ ಪ್ರಮಾಣಿತ ಕಾರ್ಯ ವಿಧಾನವನ್ನೂ ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ದೇಶದಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು 105 ವಿಮಾನ ನಿಲ್ದಾಣಗಳ ಪೈಕಿ ದಿಲ್ಲಿ,ಮುಂಬೈ,ಕೋಲ್ಕತಾ ಮತ್ತು ದಿಲ್ಲಿಗಳಂತಹ ಬೃಹತ್ ನಗರಗಳು ಸೇರಿದಂತೆ 28 ನಿಲ್ದಾಣಗಳನ್ನು ಅತಿಸೂಕ್ಷ್ಮ ಹಾಗೂ ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಂತಹ ಸಂಘರ್ಷ ಪೀಡಿತ ಪ್ರದೇಶಗಳಲ್ಲಿಯ 56 ವಿಮಾನ ನಿಲ್ದಾಣಗಳನ್ನು ಸೂಕ್ಷ್ಮ ಎಂದು ವರ್ಗೀಕರಿಸಲಾಗಿದೆ.

28 ಅತಿಸೂಕ್ಷ್ಮ ಮತ್ತು 56 ಸೂಕ್ಷ್ಮ ವಿಮಾನ ನಿಲ್ದಾಣಗಳು 2020 ಮಾರ್ಚ್‌ನೊಳಗೆ ದೇಹ ತಪಾಸಣೆ ಯಂತ್ರಗಳನ್ನು ಸ್ಥಾಪಿಸಬೇಕಿದೆ. ಉಳಿದ ನಿಲ್ದಾಣಗಳಿಗೆ ಇದಕ್ಕಾಗಿ 2021,ಮಾರ್ಚ್‌ವರೆಗೆ ಅವಕಾಶವಿದೆ.

ಈ ಯಂತ್ರಗಳು ಸಂಪೂರ್ಣ ಬಾಹ್ಯರೇಖೆ ಸಹಿತ ಪ್ರಯಾಣಿಕರ ದೇಹದ ಚಿತ್ರಗಳನ್ನು ಸೃಷ್ಟಿಸಬಹುದು ಎಂಬ ಖಾಸಗಿತನ ಕುರಿತು ಕಳವಳವನ್ನು ನಿವಾರಿಸಿರುವ ಸುತ್ತೋಲೆಯು,ಇವು ಚಿತ್ರಗಳನ್ನು ತೆಗೆಯುವುದಿಲ್ಲ,ಸಾರ್ವತ್ರಿಕ ಮನುಷ್ಯಾಕೃತಿಯನ್ನು ಸೃಷ್ಟಿಸುತ್ತವೆ ಮತ್ತು ಹಳದಿ ಬಣ್ಣದ ಚುಕ್ಕೆಯೊಂದು ಇನ್ನಷ್ಟು ಪರಿಶೀಲನೆ ಅಗತ್ಯವಿರಬಹುದಾದ ಬೆದರಿಕೆಯಿರುವ ಜಾಗವನ್ನು ಸೂಚಿಸುತ್ತದೆ ಎಂದು ವಿವರಿಸಿದೆ.

ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ದೇಹ ತಪಾಸಣೆ ಯಂತ್ರಗಳನ್ನು ಪ್ರವೇಶಿಸುವಾಗ ತಮ್ಮ ಜಾಕೆಟ್,ದಪ್ಪ ಉಡುಗೆ,ಶೂಗಳು,ಬೆಲ್ಟ್ ಮತ್ತು ಎಲ್ಲ ಲೋಹವಸ್ತುಗಳನ್ನು ಕಳಚಬೇಕಾಗುತ್ತದೆ. ಈ ಯಂತ್ರಗಳು ಮಿಲಿಮೀಟರ್ ತಂತ್ರಜ್ಞಾನವನ್ನು ಆಧರಿಸಿದ್ದು,ಗರ್ಭಿಣಿಯರು ಸೇರಿದಂತೆ ಎಲ್ಲ ಪ್ರಯಾಣಿಕರಿಗೆ ಸುರಕ್ಷಿತವಾಗಿವೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News